UncategorizedWomen Empowerment

ಮುಪ್ಪಿಗೆ ಜಾರಿದಾಗ…..

ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್

ಡಾಕ್ಟ್ರೇ ಇತ್ತೀಚೆಗೆ ನನಗೆ ಗಂಟು ನೋವು ಜಾಸ್ತಿಯಾಗಿದೆ, ಬೇಗ ಸುಸ್ತಾಗ್ತದೆ, ಕೆಲಸ ಮಾಡಲಿಕ್ಕೆ ಕಷ್ಟ ಆಗ್ತದೆ, ಕೋಪ ಬೇಗ ಬರ್ತದೆ ಎಂದು ಉಷಾ ಡಾಕ್ಟರ್ ಹತ್ತಿರ ಹೇಳ್ತಾಳೆ. ‘ಇನ್ನೂ ಎನೇನೆಲ್ಲಾ ಮಾಡ್ಬೇಕು, ಆದರೆ ನನ್ನ ದೇಹ ನನಗೆ ಬೆಂಬಲ ಕೊಡ್ತಾ ಇಲ್ಲ’ ಅಂತ ಅನ್ನಿಸಿತು ಉಷಾಳಿಗೆ. ಎಷ್ಠೇ ವಯಸ್ಸಾದರೂ ಮನಸ್ಸು ಮತ್ತು ಹ್ರದಯ ಉತ್ಸಾಹಿ ಯುವಕರಂತೆ ಇರಬೇಕು ಎಂಬ ಮಾತಿನಂತೆ ಸಾಧನೆ ಮಾಡೋದಕ್ಕೆ, ಕನಸುಗಳನ್ನು ಕಾಣೋದಕ್ಕೆ ಮನಸ್ಸು ಹಾತೊರೆಯುತ್ತಿದ್ದರೆ, ದೇಹ ಮಾತ್ರ ಉಷಾ ಹೇಳಿದಂತೆ ಕೇಳುತ್ತಿಲ್ಲ. ಯಾಕೆ ಹೀಗೆ ಎಂಬ ಚಿಂತೆ ಅವಳನ್ನು ಆವರಿಸಿತ್ತು. ಇದಕ್ಕಾಗಿ ಅವಳು ಡಾಕ್ಟರ್ ಹತ್ತಿರ ಬಂದಿದ್ದಳು. ಡಾಕ್ಟ್ರು ಎಷ್ಟು ವಯಸ್ಸು ಆಯ್ತಮ್ಮ ನಿಮಗೆ ಎಂದು ಕೇಳಿದಾಗ 49 ಆಯ್ತು ಡಾಕ್ಟ್ರೆ ಅಂತ ಹೇಳ್ತಾಳೆ. ಡಾಕ್ಟ್ರು ಪರೀಕ್ಷೆ ಮಾಡ್ತಾರೆ. ಬಿ.ಪಿ ಚೆಕ್ ಮಾಡ್ತಾರೆ, ರಕ್ತದ ಸ್ಯಾಂಪಲ್ ತೆಗೆದುಕೊಳ್ತಾರೆ. ಬಿ.ಪಿ ಸ್ವಲ್ಪ ಇದೆ, ಅಂತಹ ಖಾಯಿಲೆ ಎನಿಲ್ಲಾ, ನಿಮ್ಮ ವಯಸ್ಸಿಗೆ ಬರಬಹುದಾದ ತೊಂದರೆಗಳು ಅಷ್ಟೇ, ರಕ್ತ ಪರೀಕ್ಷೆಗೆ ಕಳುಹಿಸುತ್ತೇನೆ ವರದಿ ಬಂದ ನಂತರ ತಿಳಿಸುತ್ತೇನೆ, ಮೆಡಿಸಿನ್ ಅವಶ್ಯಕತೆ ಇಲ್ಲ ಆದರೂ ಬಿ.ಪಿಗಾಗಿ ಒಂದು ಮಾತ್ರೆ ಬರೆದು ಕೊಡ್ತೇನೆ, ಬೆಳಿಗ್ಗೆ ಮತ್ತು ರಾತ್ರಿ ಒಂದೊಂದು ತೆಗೆದುಕೊಳ್ಳಿ, ಸ್ವಲ್ಪ ವ್ಯಾಯಮ, ವಾಕಿಂಗ್ ಮಾಡಿ ಸರಿ ಹೋಗ್ತದೆ, ನೀವಿನ್ನು ಹೋಗಿ ಬನ್ನಿ ಎಂದು ಡಾಕ್ಟ್ರು ಹೇಳ್ತಾರೆ. ಉಷಾ ಆಯಿತು ಅಂತ ಮನೆಗೆ ಹೊರಡ್ತಾಳೆ.

ಅವಳಿಗೆ ದಾರಿಯುದ್ದಕ್ಕೂ ಮನದಲ್ಲಿ ಚಿಂತೆ, ‘ನನ್ನ ಮಗಳು ಓದುತ್ತಿದ್ದಾಳೆ, ಮಗನೂ ಕೆಲಸದಲ್ಲಿದ್ದಾನೆ, ಇನ್ನು ಅವರ ಮದುವೆ ಮಾಡಬೇಕು, ಮೊಮ್ಮಕ್ಕಳನ್ನು ಆಡಿಸಬೇಕು, ಈಗ್ಲೇ ಹೀಗೆ ಆಯಾಸ, ಸುಸ್ತು ಆದರೆ ಹೇಗೆ? ಮನೆಯಲ್ಲಿ ನಿತ್ಯದ ಕೆಲಸ ಇರ್ತದೆ, ಗಂಡ ಅಂಗಡಿಯಿಂದ ಬರುವಾಗ ಅಡುಗೆ, ಕೆಲಸ ಎಲ್ಲ ಆಗಿರಬೇಕು, ಇನ್ಯಾರು ಮಾಡ್ತಾರೆ, ನನಗೆ ಏನಾದರೂ ಆದರೆ ಏನು ಮಾಡುವುದು?’ ಮನೆಗೆ ಬಂದು ಸೋಫಾದಲ್ಲಿ ಉಸ್ಸೆಂದು ಕುಳಿತುಕೊಳ್ಳುತ್ತಾಳೆ. ‘ನನಗೆ ಇಷ್ಟು ವಯಸ್ಸು ಯಾವಾಗ ಆಯಿತು? ಹೇಗಾಯ್ತು? ಮೊದಲಿನ ಆ ಯೌವನ, ಆ ಶಕ್ತಿ, ಆ ಆರೋಗ್ಯ ನನ್ನಿಂದ ಕಳೆದು ಹೋಯಿತೆ?’ ಎಂದು ತನ್ನನ್ನು ಪ್ರಶ್ನಿಸಿ ಕೊಳ್ಳುತ್ತಾಳೆ.

ಈಗ ಅವಳಿಗೆ ತನ್ನ ಅಮ್ಮನ ನೆನಪಾಗುತ್ತದೆ. 3 ವರ್ಷದ ಹಿಂದೆ ತೀವ್ರ ಅನಾರೋಗ್ಯದಿಂದ ಅಮ್ಮ ತೀರಿ ಹೋಗಿದ್ದಾಳೆ. ತನ್ನ ಬಾಲ್ಯದಿಂದ ಹಿಡಿದು, ಕಾಲೇಜು ಓದುತ್ತಿದ್ದ ಸಮಯದವರೆಗೂ ಉಷಾ ಅಮ್ಮನನ್ನು ಗಮನಿಸುತ್ತಿದ್ದಳು. ‘ಒಟ್ಟಿಗೆ 7 ಮಂದಿ ಮಕ್ಕಳು. ಮೂರು ಗಂಡು ನಾಲ್ಕು ಹೆಣ್ಣು ಮಕ್ಕಳು. ಈ ಮಕ್ಕಳ ಪಾಲನೆ ಮಾಡಿಕೊಂಡು ಮನೆಯ ನಿರ್ವಹಣೆ ಮಾಡಿತ್ತಿದ್ದ ಅಮ್ಮ 40 ವಯಸ್ಸು ದಾಟಿದ ನಂತರ ಬಹಳ ಬೇಗ ಸಿಡಿಮಿಡಿಗೊಳ್ಳುತ್ತಿದ್ದಳು. ಹೆಣ್ಣು ಮಕ್ಕಳನ್ನು ಕರೆದು ಕೆಲಸ ಹೇಳುತ್ತಿದ್ದಳು. ಬಟ್ಟೆ, ಪಾತ್ರೆ ತೊಳೆಯುವುದು, ಕಸ ಗುಡಿಸಿ ಮನೆ ಒರಸುವುದು, ಬಟ್ಟೆ ಪಾತ್ರೆ ಜೋಡಿಸಿಡುವುದು ಇತ್ಯಾದಿ. ನಾವೆಲ್ಲ ಸಹೋದರಿಯರು ನೀನು ಮಾಡು, ನೀನು ಮಾಡು ಎಂದು ಪಾಲು ಮಾಡಿಕೊಂಡು ಕೋಪದಿಂದಲೇ ಕೆಲಸ ಮುಗಿಸುತ್ತಿದ್ದೆವು. ಮತ್ತೆ ಪ್ರತೀ ಬಾರಿಯೂ ಅಮ್ಮ ಹೇಳಿದರೆ ಮಾತ್ರ ಮಾಡುತ್ತಿದ್ದೆವು. ಇದಕ್ಕೂ ಅಮ್ಮ ಕೋಪಮಾಡಿಕೊಂಡು ಬೈಯುತ್ತಿದ್ದಳು. ನಂತರ ಒಬ್ಬಳೇ ಇರಲು ಇಷ್ಟ ಪಡುತ್ತಿದ್ದಳು, ಮನದೊಳಗೆ ಏನೋ ಆಲೋಚನೆ ಮಾಡುತ್ತಿದ್ದಳು, ನಮಗೆ ಗೊತ್ತಾಗದಿರುವಂತೆ ಕಣ್ಣೀರು ಹಾಕುತ್ತಿದ್ದಳು. ಆವಾಗ ಏನೊಂದೂ ತೋಚದೆ ನಾವು ಅವಳನ್ನು ಅವಳಷ್ಟಕ್ಕೇ ಬಿಡುತ್ತಿದ್ದೆವು. ಪಾಪ ಅವಳ ತುಮುಲ ನಮಗೆ ಅರ್ಥವಾಗಿರಲಿಲ್ಲ. ಮಗಳಂದಿರು ಮದುವೆಯಾಗಿ ಮನೆಯಿಂದ ಹೊರಡುವ ವೇಳೆಯಲ್ಲಿ ಅವಳ ಮುಖದಲ್ಲಿದ್ದ ವಿಚಿತ್ರವಾದ ನೋವು ನಮಗೆ ಎನೆಂದು ಆ ಸಂಧರ್ಭದಲ್ಲಿ ಅರ್ಥವಾಗಿರಲಿಲ್ಲ. ಬಹುಶ: ಆಕೆ ಮುಪ್ಪಿನ ಸಂಕಟದಲ್ಲಿದ್ದಳು’ ಎಂದು ಉಷಾಳಿಗೆ ಈಗ ಅರಿವಾಯಿತು.

ಪ್ರತಿಯೊಬ್ಬರಿಗೂ ಕೂಡಾ ಮುಪ್ಪಿನ ಸಂಕಟದ ಅರಿವಾಗುವುದು ‘ಮುಪ್ಪಿಗೆ ಜಾರಿದಾಗ’. ಆಲ್ಲಿಯ ತನಕ ಯಾವುದೋ ಒಂದು ಭ್ರಮೆಯ ಲೋಕದಲ್ಲಿ ಜೀವನ. ಸುಂದರವಾದ ಪ್ರಪಂಚ, ಗೆಳೆಯ ಗೆಳತಿಯರು, ಹೈಸ್ಕೂಲ್, ಕಾಲೇಜು ದಿನಗಳು ಕಳೆದಿದ್ದೇ ತಿಳಿಯುವುದಿಲ್ಲ, ನಂತರ ಉದ್ಯೋಗದ ಬೇಟೆ, ಜೀವನ ಸಂಗಾತಿ ಹುಡುಕಾಟ, ಮದುವೆ, ಗೃಹಸ್ಥ ಜೀವನ, ಮಕ್ಕಳು, ಮಕ್ಕಳ ಬೆಳವಣಿಗೆ ಹೀಗೆ ದಿನಗಳು ಜಾರಿ ಮುಪ್ಪಿಗೆ ದೊಪ್ಪನೆ ಹಾಕಿ ಬಿಡುತ್ತದೆ.

ವಯಸ್ಸು ಆಗುತ್ತಿದ್ದಂತೆ ಏನಾದರೂ ಮಾಡಬೇಕೆಂಬಾಸೆ ಆದರೆ ದೇಹ ಒಪ್ಪುವುದಿಲ್ಲ, ‘ನಿನಗೆ ವಯಸ್ಸಾಗಿದೆ’ ಎಂದು ನೆನಪಿಸುತ್ತದೆ. ಮಕ್ಕಳು ಯೌವನಾವಸ್ಥೆಯಲ್ಲಿ ಅವರ ಪ್ರಪಂಚದಲ್ಲಿ ಇರುವಾಗ ಹಿರಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಥೋ ಹೋಗಮ್ಮಾ ನೀನು ಹಿಂದಿನ ಕಾಲದವಳು, ನೀನು ಯಾವ ಕಾಲದಲ್ಲಿ ಇದ್ದಿಯಾ? ಎಂಬ ಪ್ರಶ್ನೆ ಬರುತ್ತದೆ. ಹೊಸ ಆಚಾರ, ವಿಚಾರ, ತಂತ್ರಗಾರಿಕೆ, ತಂತ್ರಜ್ನಾನ ಮಕ್ಕಳು ಕರಗತ ಮಾಡಿಕೊಂಡಿತರ್ಾರೆ. ತಮ್ಮ ಹಿರಿಯರಿಗೆ ಕಲಿಯಬೇಕೆಂದು ಕೇಳಿದ್ರೆ ಆಶ್ಚರ್ಯದಿಂದ ಕಣ್ಣರಳಿಸಿ ನೋಡ್ತಾರೆ ಮತ್ತು ಲೀಲಾಜಾಲವಾಗಿ ಮಾಡಿ ಅರ್ಥ ಆಗುವುದರೊಳಗೆ ಮಾಡಿ ಮುಗಿಸ್ತಾರೆ. ಇನ್ನೊಮ್ಮೆ ಕೇಳಿದ್ರೆ ಅಯ್ಯೋ ಎಷ್ಟು ಸಾರಿ ಹೇಳುವುದು ಅಂತಾರೆ.

ಇನ್ನು ಕೈ ಹಿಡಿದ ಪತಿರಾಯರು ಮನೆಯಿಂದ ಹೆಚ್ಚಾಗಿ ಹೊರಗಡೆ ಇರುವುದು, ತಮ್ಮ ಸ್ವಭಾವಕ್ಕೆ ಸರಿಹೊಂದುವ ಸ್ನೇಹಿತರೊಡಗೂಡಿ ಸುಖ ಕಷ್ಟ ಹಂಚಿಕೊಳ್ಳುವುದು ಮತ್ತು ಸಮಯ ಇದ್ದಾಗ ಪೇಪರ್ ಅಥವಾ ಟಿ.ವಿ ನೋಡಿದ್ರೆ, ಹೆಂಡತಿಯ ಮುಖ ದಿಟ್ಟಿಸಿ ನೋಡುವುದೇ ಕಡಿಮೆ. ಆಕೆಯ ಮನಸ್ಸನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆ ಇರುವುದೂ ಕಡಿಮೆ. ಉಷಾಳಿಗೂ ಆಗಿರುವುದು ಇಷ್ಟೇ. ಅವಳ ಆಲೋಚನಾ ಲಹರಿಗೆ ಬ್ರೇಕ್ ಹಾಕುವಂತೆ ಮನೆಯ ಕಾಲಿಂಗ್ ಬೆಲ್ ಸದ್ದು, ಪತಿ ಊಟಕ್ಕಾಗಿ ಮನೆಗೆ ಬಂದಿದ್ದಾರೆ. ಉಷಾ ತನ್ನ ವಿಷಯಗಳನ್ನು ತನ್ನ ಪತಿಯಲ್ಲಿ ಹೇಳುತ್ತಾಳೆ. ಪತಿಯು ಅವಳಿಗೆ ಸಮಾಧಾನ ಮಾಡಿ ಡಾಕ್ಟರ್ ಹತ್ತಿರ ತಾನೂ ಬರುವುದಾಗಿ ಹೇಳಿ, ಈ ಸಮಸ್ಯೆಗೆ ಸೂಕ್ತ ಪರಿಹಾರ ಕೈಗೊಳ್ಳುವ ಎಂದು ಹೇಳಿದಾಗ ಉಷಾ ಸಂತೋಷಪಡುತ್ತಾಳೆ. ಈ ಉಷಾಳ ಕಥೆ ಎಲ್ಲಾ ಮಹಿಳೆಯರ ಕಥೆ.

ಒಬ್ಬ ಹೆಣ್ಣುಮಗಳು ತನ್ನ ಜೀವನದಲ್ಲಿ 4 ಪ್ರಮುಖವಾದ ಘಟ್ಟಗಳನ್ನು ಸಾಗಬೇಕಾಗುತ್ತದೆ. ಬಾಲ್ಯ, ಹದಿಹರೆಯ (ಕಿಶೋರಾವಸ್ಥೆ), ಯೌವನ ಮತ್ತು ಮುಪ್ಪು ಇವೇ ಆ ಪ್ರಮುಖ ಘಟ್ಟಗಳು. ಪ್ರತೀ ಘಟ್ಟದಲ್ಲಿ ಸಾಗುವಾಗ ಅವಳ ದೇಹ ಮತ್ತು ಮನಸ್ಸುಗಳಲ್ಲಿ ಬಹಳ ಪರಿವರ್ತನೆಯಾಗುತ್ತದೆ. ಪ್ರತೀ ಹಂತದ ಪರಿವರ್ತನೆಯಲ್ಲಿ ಆಕೆ ಬಹಳ ನಾಜೂಕಾಗಿಯೂ ಇರುತ್ತಾಳೆ. 0-10 ವಯಸ್ಸನ್ನು ಬಾಲ್ಯಾವಸ್ಥೆ, 11-17 ವಯಸ್ಸನ್ನು ಕಿಶೋರಾವಸ್ಥೆ, 18-39 ವಯಸ್ಸನ್ನು ಯೌವನಾವಸ್ಥೆ ಮತ್ತು 40 ಕ್ಕಿಂತ ಮೇಲ್ಪಟ್ಟ ವಯಸ್ಸನ್ನು ಮುಪ್ಪು ಎಂದು ಗುರುತಿಸಬಹುದಾಗಿದೆ. ಹೀಗಾಗಿ 40 ವಯಸ್ಸಿನ ನಂತರ ಮಹಿಳೆಯರಿಗೆ ಮುಪ್ಪಿನ ಸಮಸ್ಯೆಗಳು ಪ್ರಾರಂಭ ಆಗುತ್ತದೆ. ಕೆಲವರಿಗೆ ಸ್ವಲ್ಪ ತಡವಾಗಿ ಅಂದರೆ 45, 50 ವಯಸ್ಸಿನ ನಂತರ ಈ ಸಮಸ್ಯೆ ಇರುತ್ತದೆ. ಹೆಚ್ಚಾಗಿ ಋತುಚಕ್ರ ನಿಲ್ಲುವ ಸಂದರ್ಭದಲ್ಲಿ ಏರು ಪೇರಾಗಿ, ದೇಹದಲ್ಲಿ ಹಾಮರ್ೊನು ವೈಪರೀತ್ಯದಿಂದಾಗಿ ಈ ಸಮಸ್ಯೆಯು ತೋರಿಬರುತ್ತದೆ. ಈ ಅವಧಿಯಲ್ಲಿ
ಸುಮಾರು 34 ರೀತಿಯ ವೈಪರೀತ್ಯಗಳಿಗೆ ಆಕೆ ಒಳಗಾಗುತ್ತಾಳೆ. ಅದೆಂದರೆ,

1. ದೇಹದಲ್ಲಿ ಉರಿ ಗುಳ್ಳೆಗಳು ಬೀಳುವುದು 13. ದೇಹದ ತೂಕ ಹೆಚ್ಚಾಗುವುದು 25. ಆಗಾಗ್ಗೆ ತಲೆನೋವು
2. ರಾತ್ರಿ ಮಲಗಿರುವಾಗ ಅತೀವ ಬೆವರುವುದು 14. ಸಂಯಮ ಇಲ್ಲದಿರುವುದು 26. ಮಂಡಿ ನೋವು
3. ಋತು ಚಕ್ರದಲ್ಲಿ ಏರುಪೇರು 15. ಹೊಟ್ಟೆ ಉಬ್ಬುವುದು 27. ನಾಲಗೆ ಉರಿ
4. ಲೈಂಗಿಕ ನಿರಾಸಕ್ತಿ 16. ಅಲಜರ್ಿ ಆಗುವುದು 28. ದೇಹದಲ್ಲಿ ಕರೆಂಟ್ ಶಾಕ್ ಹೊಡೆದಂತಹ ಅನುಭವ
5. ಭಾವನೆಗಳಲ್ಲಿ ವ್ಯತ್ಯಯ 17. ಉಗುರು ಒಡೆಯುವುದು 29. ಅಜೀರ್ಣ
6. ಜನನಾಂಗದಲ್ಲಿ ಉರಿ 18. ದೇಹದಿಂದ ದುನರ್ಾತ ಬರುವುದು 30. ಹಲ್ಲಿನ ಸಮಸ್ಯೆ
7. ಆಯಾಸ 19. ಹ್ರದಯ ಬಡಿತದಲ್ಲಿ ಏರು ಪೇರು 31. ಮಾಂಸ ಖಂಡಗಳಲ್ಲಿ ನೋವು
8. ಕೂದಲು ಉದುರುವಿಕೆ 20. ಖಿನ್ನತೆ 32. ಚರ್ಮದಲ್ಲಿ ತುರಿಕೆ
9. ನಿದ್ರೆ ಬಾರದಿರುವುದು 21. ಆತಂಕ 33. ಕೈ ಕಾಲುಗಳಲ್ಲಿ ಜುಮ್ಮೆನಿಸುವಿಕೆ
10. ಏಕಾಗ್ರತೆ ಇಲ್ಲದಿರುವುದು 22. ಮನದಲ್ಲಿ ಕಿರಿ ಕಿರಿ 34. ಎಲುಬುಗಳ ಕ್ಷೀಣತೆ
11. ನೆನಪಿನ ಶಕ್ತಿ ಕುಂಠಿತ 23. ತಲ್ಲಣಗೊಳ್ಳುವುದು
12. ತಲೆ ತಿರುಗುವಿಕೆ 24. ಸ್ತನ ನೋವು

ಈ ಸಂದರ್ಭದಲ್ಲಿ ಆಕೆ ಮಾನಸಿಕವಾಗಿ ದುರ್ಬಲಳಾಗಿರುತ್ತಾಳೆ. ಒಂಟಿತನ ಕಾಡುತ್ತದೆ. ತನಗೆ ಬಹುಶ: ದೊಡ್ಡ ಖಾಯಿಲೆ ಕಾದಿದೆ ಎಂಬ ಭ್ರಮೆಗೆ ಒಳಗಾಗುತ್ತಾಳೆ. ಇವೆಲ್ಲವೂ ಮಾನಸಿಕ ಖಿನ್ನತೆಗೆ ಕಾರಣವಾಗಿ, ವಿನಾ ಕಾರಣ ಸಂಶಯ, ಭಯ, ಕೋಪದ ಮೂಲಕ ಹೊರಬೀಳುತ್ತದೆ. ಅಲ್ಲದೆ, ಇದೇ ಅವಧಿಯಲ್ಲಿ ಕೆಲವೊಂದು ಕೌಟುಂಬಿಕ ಕಾರಣಗಳಿಂದಾಗಿ ಕೂಡಾ ಆಕೆ ಕುಗ್ಗುವ ಸಾದ್ಯತೆಗಳು ಹೆಚ್ಚು. ಇದರಲ್ಲಿ ಮುಖ್ಯವಾಗಿ, ಮಕ್ಕಳು ಹದಿ ಹರೆಯದ ಪ್ರಾಯದವರು ಆಗಿರುವಾಗ ಅವರ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗಿ ಕೆಲವೊಂದು ಬಾರಿ ಭಯ, ಸಂಶಯ ಆವರಿಸಿಕೊಳ್ಳುತ್ತದೆ. ತನ್ನ ನಿರೀಕ್ಷೆಯಂತೆ ಆಗದಿದ್ದರೆ ಅವಮಾನಕ್ಕೊಳಗಾಗಿ ಸಿಟ್ಟು ಬಹಳ ಬೇಗ ಬರುತ್ತದೆ. ತನ್ನ ಪತಿಯವರು ತಾನು ಹೇಳಿದ್ದನ್ನು ಈಡೇರಿಸದಿದ್ದರೆ ಟೆನ್ಶನ್ ಆಗುತ್ತದೆ. ಮತ್ತು ದೇಹದಲ್ಲಿ ಶಕ್ತಿ ಕಡಿಮೆಯಾಗಿರುವುದರಿಂದ ಮನೆಯ ಕೆಲಸಗಳು ತುಂಬ ಒತ್ತಡ ಆಗ್ತದೆ ಎಂಬ ಭಾವನೆ ಮನಸ್ಸಲ್ಲಿ ಬರುತ್ತದೆ. ತನ್ನ ಅಸಹನೆಯನ್ನು ಹೊರ ಹಾಕಲು ಪ್ರಯತ್ನ ಮಾಡುತ್ತಾಳೆ.
ಈ ಸಂದರ್ಭದಲ್ಲಿ ಆಕೆಗೆ ಬೇಕಾಗಿರುವುದು ಆರೈಕೆ, ಒಡನಾಟ ಮತ್ತು ಸ್ಪಂದಿಸುವಿಕೆ. ಆಕೆ ತೆಗೆದುಕೊಳ್ಳುವ ಆಹಾರದ ಬಗ್ಗೆ ಕಾಳಜಿ, ಆಕೆಯ ಬಗ್ಗೆ ಕಾಳಜಿ ವಹಿಸಿದರೆ ಈ ಮುಪ್ಪಿನ ಸಮಸ್ಯೆಯನ್ನು ಮೆಟ್ಟಿ ನಿಲ್ಲಬಹುದು. ಇದಕ್ಕಾಗಿ ಈ ಕೆಳಗಿನ ಮಾಡಬೇಕಾದ/ಮಾಡಬಾರದ ವಿಚಾರಗಳನ್ನು ಅನುಸರಿಸಬಹುದು:

ಮಾಡಬೇಕಾಗಿರುವುದು:

 • ವಯಸ್ಸಾಗಿರುವುದನ್ನು ಸ್ವೀಕರಿಸಬೇಕು. ಇನ್ನು ಉಳಿದ ಆಯುಷ್ಯದಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಯೋಚಿಸಬೇಕು.
 • ಪ್ರತಿ ದಿನ ಕನಿಷ್ಟ ಅರ್ಧ ಗಂಟೆ ಸರಳವಾದ ವ್ಯಾಯಮ, ಪ್ರಾಣಾಯಾಮ ಮಾಡಬೇಕು. ದೇಹಕ್ಕೆ ಆಗಾಗ್ಗೆ ಎಣ್ಣೆ ಮಸಾಜ್ ಮಾಡಿಕೊಳ್ಳುವುದು.
 • ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು. ನೀರನ್ನು ಗರಿಷ್ಟ ಪ್ರಮಾಣದಲ್ಲಿ ಸೇವಿಸುವುದು.
 • ಸಾದ್ಯವಾಗುವಂತಹ ಯಾವುದಾದರೂ ಚಟುವಟಿಕೆಯಲ್ಲಿ ನಿರತರಾಗಿರುವುದು ಬಹಳ ಅಗತ್ಯ. ಉತ್ತಮ ಹವ್ಯಾಸಗಳಿರಲಿ.
 • ಮಕ್ಕಳ ಬಗ್ಗೆ ಆತ್ಮವಿಶ್ವಾಸವನ್ನು ಇರಿಸಿ ಅವರ ಜೊತೆ ಗೆಳೆತನ ಸಾಧಿಸಬೇಕು. ತನ್ನ ನೋವನ್ನು ಮಕ್ಕಳ ಜೊತೆ ಹಂಚಿಕೊಳ್ಳುವಂತಿರಬೇಕು.
 • ದೇಹದಲ್ಲಿ ವೈಪರೀತ್ಯಗಳು ಬಂದಾಗ ತಕ್ಷಣದಲ್ಲಿ ವೈದ್ಯಾಧಿಕಾರಿಗಳನ್ನು ಭೇಟಿಯಾಗಿ ತಪಾಸಣೆ ನಡೆಸಬೇಕು.
 • ಸ್ನೇಹಿತೆಯರನ್ನು ಗಳಿಸಿಕೊಳ್ಳಬೇಕು. ಅವರ ಜೊತೆ ಪ್ರವಾಸ, ವಾರಕ್ಕೊಂದು ದಿನ ಸಂಜೆ ಹೊತ್ತು ಭೇಟಿ ಇಟ್ಟುಕೊಳ್ಳಬೇಕು.
 • ಅಧ್ಯಯನ ಶೀಲರಾಗಿರಬೇಕು.
 • ಧನಾತ್ಮಕವಾದ ಚಿಂತನೆಯನ್ನು ಬೆಳೆಸಿಕೊಳ್ಳಬೇಕು.
 • ಈ ಹಿಂದೆ ಆದಂತಹ ಕಹಿ ನೆನಪುಗಳನ್ನು ಮರೆಯಬೇಕು.
 • ವರ್ಷಕ್ಕೊಮ್ಮೆ ಕೌಟುಂಬಿಕ ಪ್ರವಾಸ ಹಮ್ಮಿಕೊಳ್ಳಬೇಕು.

ಮಾಡಬಾರದು:

 • ಅನಗತ್ಯ ಸಂಶಯಗಳು, ಶಂಕೆಗಳನ್ನು ಮಾಡಬಾರದು.

ಮಹಿಳೆಯರನ್ನು ಕಾಡುವ ಈ ಸಮಸ್ಯೆಯನ್ನು ರೋಗವೆಂದು ತಪ್ಪು ತಿಳಿಯುವುದಿದೆ. ಖಂಡಿತವಾಗಿಯೂ, ಇದು ರೋಗವಲ್ಲ. ಇದೊಂದು ಬದಲಾವಣೆಯ ಹಂತ. ಜೀವನದ ಒಂದು ಘಟ್ಟದಿಂದ ಇನ್ನೊಂದು ಘಟ್ಟಕ್ಕೆ ವಗರ್ಾವಣೆ ಅಷ್ಟೇ. ಆಕೆಯ ಕುಟುಂಬದವರು ಈ ವಿಚಾರದ ಬಗ್ಗೆ ಸರಿಯಾಗಿ ಅರಿತು ಈ ಅವಧಿಯಲ್ಲಿ ಅವಳಿಗೆ ಬೆಂಬಲ ನೀಡಿದರೆ, ಶೇ.75% ಸಮಸ್ಯೆಗಳು ಪರಿಹಾರವಾದಂತೆ !!

Leave a Reply

Your email address will not be published. Required fields are marked *