DharmasthalaUncategorized

About Dharmasthala – Part 2

art 2 photo

ಸರ್ವಧರ್ಮ ಸಮನ್ವಯ ಕೇಂದ್ರ

ಧರ್ಮಸ್ಥಳ ಸರ್ವಧರ್ಮ ಸಮನ್ವಯ – ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ಷೇತ್ರದ ಆಡಳಿತ ಜೈನ ಧರ್ಮಿರ್ಯರಾದ ಹೆಗ್ಗಡೆ ಮನೆತನದವರದ್ದು. ಕ್ಷೇತ್ರದ ಆರಾಧ್ಯದೈವ ಶ್ರೀ ಮಂಜುನಾಥ ಸ್ವಾಮಿ ಶೈವ ಶಿವ. ಶಿವನ ಆರಾಧನೆಗೆ ನೇಮಿಸಲ್ಪಡುವ ಅರ್ಚಕರು ವೈಷ್ಣವರು, ಹೀಗೆ ತ್ರಿವಳಿ-ಸಂಗಮ ಧರ್ಮಸ್ಥಳದ ವೈಶಿಷ್ಟ್ಯ.

ಸಮಾಜದ ವಿವಿಧ ವರ್ಗಗಳಿಂದ ಬಂದವರೆಲ್ಲರಿಗೂ ಇಲ್ಲಿ ಸ್ವಾಮಿ ಸೇವೆ ಮಾಡುವ, ಕಾರ್ಯಕರ್ತರಾಗುವ ಅವಕಾಶವುಂಟು. ಉದಾಹರಣೆಗೆ, ಧರ್ಮಸ್ಥಳದ ಧ್ವಜಸ್ತಂಭ ಏರಿಸುವ ಹಕ್ಕು ಪಡುಬಿದ್ರೆಯ ಮೀನುಗಾರರಿಗೆ ಮೀಸಲು.

ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತೀರ್ಥಕ್ಷೇತ್ರವೆಂದು ಕರೆಯುತ್ತಾರೆ. ಇಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ ಇದೆ. ಶಿವನ ಕಣ್ಣಿನಿಂದ ಆನಂದ ಭಾಷ್ಪವಾಗಿ ಹರಿದ ನಯನಧಾರ ಪವಿತ್ರ ನೇತ್ರಾವತಿ ನದಿ ಇದೆ. ನೇತ್ರಾವತಿಯಲ್ಲಿ ಜನರು ಮಿಂದು ತಮ್ಮ ಬಹಿರಂಗ ಶುದ್ಧಿಯನ್ನು ಮಾಡಿಕೊಳ್ಳುತ್ತಾರೆ. ಬಹಿರಂಗ ಶುದ್ಧಿಯನ್ನು ಮಾಡಿಕೊಂಡು ಅಂತರಂಗ ಶುದ್ಧಿಗಾಗಿ ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಇಲ್ಲಿಗೆ ಬಂದಾಗ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ತಮ್ಮ ಪ್ರಾರ್ಥನೆ, ಸೇವೆ, ಜಪ, ಧ್ಯಾನಗಳನ್ನು ಮಾಡಿ ಅಂತರಂಗ ಶುದ್ಧಿಯನ್ನು ಗಳಿಸಿಕೊಳ್ಳುತ್ತಾರೆ.

ಕ್ಷೇತ್ರದಲ್ಲಿ ಒಂದು ನಾಣ್ಣುಡಿ ಇದೆ. ‘ಮಾತುಬಿಡ ಮಂಜುನಾಥ’ ಎಂದು. ಅಂದರೆ ಸ್ವಾಮಿಯನ್ನು ನೆನೆಸಿಕೊಂಡು ಯಾವುದೇ ಮಾತನ್ನು ಆಡುವಾಗ, ಯೋಚನೆ ಮಾಡುವಾಗ, ವ್ಯವಹಾರವನ್ನು ಮಾಡುವಾಗ ಸಾಕಷ್ಟು ಚಿಂತಿಸಿ ಮಾಡಬೇಕು. ಮಾಡಿದ ಮೇಲೆ ಅದನ್ನು ಹಿಂದೆ ಪಡೆದುಕೊಳ್ಳುವಂತಿಲ್ಲ. ಹಾಗಾಗಿ ‘ನುಡಿದಂತೆ ನಡೆ’ ಎನ್ನುವುದೇ ಈ ಕ್ಷೇತ್ರದ ಒಂದು ವೈಶಿಷ್ಟ್ಯತೆ. ಇಲ್ಲಿ ಯಾರಾದರೂ ನಾವು ಸ್ವಾಮಿಗೆ ಹೇಳಿಕೊಂಡಿದ್ದೇವೆ. ಹಾಗೆಯೇ ನಡೆದುಕೊಳ್ಳುತ್ತೇವೆ ಎಂದು ಹೇಳಿಕೊಂಡು ಆ ಮಾತಿಗೆ ತಪ್ಪಿ ನಡೆದರೆ ಅವರಿಗೆ ಪರಿಣಾಮ ಖಾತ್ರಿ. ಹಾಗಾಗಿ ಇಲ್ಲಿ ವಾಕ್ದೋಷ, ಆಣೆ-ಪ್ರಮಾಣ ಇತ್ಯಾದಿಗಳ ತೀರ್ಮಾನ ಇದೆ. ಯಾರಾದರೂ ಇಲ್ಲಿಗೆ ಒಂದು ಮಾತನ್ನು ಹೇಳಿ ಅದಕ್ಕೆ ತಪ್ಪಿ ನಡೆದುಕೊಂಡರೆ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಈ ಬಗ್ಗೆ ಅರಿವಾದರೆ ಅವರು ಬಂದು ಕ್ಷೇತ್ರದಲ್ಲಿ ಹೇಳಿಕೊಂಡು ದೋಷವನ್ನು ಪರಿಹಾರ ಮಾಡಿಕೊಳ್ಳಬಹುದು. ಮಾನಸಿಕ ಹಾಗೂ ದೈಹಿಕ ಕಾಯಿಲೆಗಳಿಗೂ ಕೂಡ ಜನ ಇಲ್ಲಿ ತೀರ್ಥಸ್ನಾನ ಮಾಡಿಕೊಂಡು ಪೂಜೆಸಲ್ಲಿಸಿಕೊಂಡು ಪರಿಹಾರ ಪಡೆಯುತ್ತಾರೆ. ಕ್ಷೇತ್ರದಲ್ಲಿ ಈ ರೀತಿಯ ಹರಕೆಗಳನ್ನು ನೆರವೇರಿಸಲು ಬಂದಾಗ ಅವರು ಬಹಳ ಶುದ್ಧತೆಯಿಂದ ಇರಬೇಕು.

ಇಲ್ಲಿ ವಿಶೇಷವಾಗಿ ದೇವರ ದರ್ಶನ ಮಾಡಿದ ಮೇಲೆ ಅನ್ನಪ್ರಸಾದವನ್ನು ಸ್ವೀಕರಿಸಿಯೇ ಹೋಗಬೇಕು ಎನ್ನುವ ಒಂದು ವಾಡಿಕೆ ಇದೆ. ಹಾಗಾಗಿ ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ವಿಶೇಷವಾಗಿ ಊಟೋಪಚಾರದ ವ್ಯವಸ್ಥೆಯಿದೆ. ಯಾತ್ರೆ ಕೈಗೊಂಡು ಒಂದು ದಿನ ರಾತ್ರಿ ತಂಗಿದ್ದು ದೇವರ ದರ್ಶನ ಮಾಡಿಕೊಂಡು ಅನ್ನಪ್ರಸಾದ ಸ್ವೀಕರಿಸಿದರೆ ಕ್ಷೇತ್ರ ಯಾತ್ರೆ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ವಿಶೇಷವಾದದ್ದು. ಹಾಗಾಗಿ ಇಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಇದರ ಜೊತೆಗೆ ಇಲ್ಲಿನ ಹೆಗ್ಗಡೆಯವರ ಪೀಠದಿಂದ ಕೇಳಿಬರುವ ನುಡಿ ಅಥವಾ ಅಭಯದಾನವೂ ಬಹಳ ವಿಶೇಷ. ಇಲ್ಲಿಗೆ ಬರುವ ಭಕ್ತಾದಿಗಳು ಹೆಗ್ಗಡೆಯವರೊಂದಿಗೆ ತಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳುತ್ತಾರೆ. ಹೆಗ್ಗಡೆಯವರು ಧರ್ಮಪೀಠದಲ್ಲಿ ಕುಳಿತು ಪರಿಹಾರವನ್ನು ಸೂಚಿಸುತ್ತಾರೆ. ಕ್ಷೇತ್ರದಲ್ಲಿರುವಾಗ ಹೆಗ್ಗಡೆಯವರು ದಿನಕ್ಕೆ ಮೂರು ಬಾರಿ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ಪೀಠದಲ್ಲಿ ಕುಳಿತು ಶ್ರೀ ಸ್ವಾಮಿಯ ಸೇವೆ ಮಾಡುವುದಲ್ಲದೆ ತುಲಾಭಾರ ಸೇವೆಯನ್ನು ತಮ್ಮ ಸಮ್ಮುಖದಲ್ಲಿ ಮಾಡಿಸುತ್ತಾರೆ. ಹೆಗ್ಗಡೆಯವರು ದೇವಸ್ಥಾನದಲ್ಲಿ ತಮ್ಮ ಪೀಠದಲ್ಲಿ ಕುಳಿತು ಹೀಗೆ ಅಭಯದಾನವನ್ನು ನೀಡುವ ಪದ್ಧತಿ ಬಹಳ ವಿಶೇಷ.

ಧರ್ಮಸ್ಥಳದಲ್ಲಿ ನಡೆಯುವ ಎಲ್ಲ ಉತ್ಸವಗಳೂ ಕೂಡ ಬಹಳ ವಿಶೇಷವಾದವುಗಳೇ. ಶ್ರೀ ಮಂಜುನಾಥ ಸ್ವಾಮಿಗೆ ಕಾರ್ತಿಕ ಮಾಸದ ಲಕ್ಷದೀಪೋತ್ಸವ, ಮಕರ ಸಂಕ್ರಮಣ ಉತ್ಸವ, ಶಿವರಾತ್ರಿ, ವಿಷುಜಾತ್ರೆ ಮೇ ತಿಂಗಳಿನಲ್ಲಿ ನಡೆಯುವ ವರ್ಷದ ಕೊನೇ ಉತ್ಸವ. ಎಲ್ಲಾ ಉತ್ಸವಗಳು ಹೆಗ್ಗಡೆಯವರ ಉಪಸ್ಥಿತಿಯಲ್ಲೇ ನಡೆಯಬೇಕೆಂಬುದು ಇಲ್ಲಿನ ವೈಶಿಷ್ಟ್ಯ

Leave a Reply

Your email address will not be published. Required fields are marked *