DharmasthalaUncategorized

About Dharmasthala – Part 5

art-5-photo

ಶ್ರೀ ಚಂದ್ರನಾಥ ಸ್ವಾಮಿ ಬಸದಿ

ಹಲವು ಧರ್ಮಗಳ ವಿಶಿಷ್ಟ ಸಂಗಮಸ್ಥಾನವಾಗಿರುವ ಧರ್ಮಸ್ಥಳವು ಧರ್ಮಸಾಮರಸ್ಯದ ನೆಲೆವೀಡಾಗಿದೆ.
ಶ್ರೀ ಮಂಜುನಾಥ ಸ್ವಾಮಿಯ ಆರಾಧನೆಗೆ ಸಂಬಂಧಪಟ್ಟ ಸಕಲ ಕಾರ್ಯಗಳೂ ಹೆಗ್ಗಡೆಯವರ ಅಧೀನದಲ್ಲಿ ಇರುವುದು ನಿಜವಾದರೂ ಅವರು ಪೆರ್ಗಡೆ ಮನೆತನದ ಜೈನ ಮತಧರ್ಮ ವನ್ನು ಉಳಿಸಿಕೊಂಡು ಬಂದಿದ್ದಾರೆ. ಆದುದರಿಂದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಜೊತೆಗೆ ಅನೇಕ ಶತಮಾನಗಳಿಂದ ಇಲ್ಲಿ ಒಂದು ಪವಿತ್ರವಾದ ಜೈನ ಬಸದಿ ಅಸ್ತಿತ್ವದಲ್ಲಿದೆ. ಶ್ರೀ ಹೆಗ್ಗಡೆ ಮನೆತನದ ಮೂಲ ಆರಾಧನೆಯ ಕೇಂದ್ರವಾದ ಈ ಬಸದಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿಯು ಪೂಜೆಗೊಳ್ಳುತ್ತಾರೆ. ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಪೂಜಾದಿಕಾರ್ಯಗಳಲ್ಲಿ ಭಾಗವಹಿಸುವಂತೆಯೇ ಹೆಗ್ಗಡೆಯವರು ಈ ಬಸದಿಯಲ್ಲಿ ನಡೆಯುವ ತ್ರಿಕಾಲ ಪೂಜೆಗಳಲ್ಲಿಯೂ ಭಾಗವಹಿಸುತ್ತಾರೆ.

ಪ್ರಾಚೀನವಾದ ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯನ್ನು ಇದೀಗ ಹಿಂದಿನ ಮೂಲಸ್ವರೂಪದಲ್ಲಿಯೇ ನವೀಕರಿಸಲಾಗಿದೆ. ಏಪ್ರಿಲ್ 2001ರಲ್ಲಿ 21ನೇ ಧರ್ಮಾಧಿಕಾರಿ ಗಳಾಗಿರುವ ಶ್ರೀ ವೀರೇಂದ್ರ ಹೆಗ್ಗಡೆಯವರು ಈ ಬಸದಿಯನ್ನು ನವೀಕರಿಸಿದ ಮೇಲೆ ಚಂದ್ರನಾಥ ಬಸದಿಯು ಧರ್ಮಸ್ಥಳದ ಅತ್ಯಂತ ಸುಂದರ ಮಂದಿರಗಳಲ್ಲಿ ಒಂದಾಗಿ ಶೋಭಿಸುತ್ತಿದೆ. ದಕ್ಷಿಣಭಾರತದ ಪವಿತ್ರ ದಿಗಂಬರ ಜೈನ ಮಂದಿರಗಳಲ್ಲಿ ಒಂದೆಂದು ಪ್ರಸಿದ್ಧಿ ಪಡೆದಿದೆ.

ಇಲ್ಲಿ ಅಷ್ಟಮತೀರ್ಥಂಕರನಾದ ಶ್ರೀ ಚಂದ್ರನಾಥ ಸ್ವಾಮಿಯು ನೆಲೆಗೊಂಡಿದ್ದಾನೆ. ಪದ್ಮಾವತಿ ಯಕ್ಷಿಗೂ ಅಲ್ಲೊಂದು ಸ್ಥಾನವಿದೆ. ಜೈನಾಗಮಾನುಸಾರಿಯಾದ ನಿತ್ಯಪೂಜಾವಿಧಿಗಳು ಅಲ್ಲಿ ಜೈನ ಅರ್ಚಕರಿಂದಲೇ ನೆರವೇರುತ್ತದೆ. ಶ್ರೀ ಸ್ವಾಮಿಯ ಈ ಸನ್ನಿಧಾನದಲ್ಲಿ ಅಷ್ಟಾಹ್ನಿಕವೇ ಮುಂತಾದ ವಿವಿಧ ಪರ್ವಗಳಲ್ಲಿ ವಿಶೇಷ ಪೂಜೆಗಳನ್ನು ಸ್ವೀಕರಿಸುವ ಅನೇಕ ಲೋಹ ಬಿಂಬಗಳಿವೆ. ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಚೈತ್ಯಾಲಯದಲ್ಲಿ ದೂರದ ಊರುಗಳಿಂದ ಪಾದಯಾತ್ರೆ ಮೂಲಕ ಆಗಮಿಸುವ ದಿಗಂಬರ ಮುನಿವರೇಣ್ಯರಿಗೆ ಆಹಾರ ಸ್ವೀಕಾರ ಹಾಗೂ ವಿಶ್ರಾಂತಿಗಾಗಿ ವಾಸ್ತವ್ಯ ಹೂಡಲು ಅನುವುಮಾಡಿಕೊಡಲಾಗುತ್ತದೆ.

ಶ್ರೀ ಬಾಹುಬಲಿ ಬೆಟ್ಟ

ಧರ್ಮಸ್ಥಳದ ರತ್ನಗಿರಿಯಲ್ಲಿರುವ ಶ್ರೀ ಬಾಹುಬಲಿಯ ಸನ್ನಿಧಿ ಇಲ್ಲಿಯ ಧಾರ್ಮಿಕ ಸಹಿಷ್ಣುತೆ ಹಾಗೂ ಏಕತೆಯ ಚೈತನ್ಯಕ್ಕೊಂದು ಸಾಕ್ಷಿಯಾಗಿದೆ. ಧರ್ಮಸ್ಥಳದ ಶುದ್ಧ ಸಾರವೆಂದರೆ ಇದೇ.

ತ್ಯಾಗ, ಆತ್ಮಸಂಯಮ, ಅಹಂಕಾರ ನಿಗ್ರಹ, ಶಾಂತಿ ಮತ್ತು ಅಹಿಂಸೆಗಳ ಪ್ರತೀಕವಾಗಿರುವ ಬಾಹುಬಲಿ ವಿಗ್ರಹವನ್ನು ಸ್ಥಾಪಿಸಬೇಕೆಂಬ ಸಂಕಲ್ಪ ಕೈಗೊಂಡವರು ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿ ಶ್ರೀ ರತ್ನವರ್ಮ ಹೆಗ್ಗಡೆಯವರು. ಇದಕ್ಕೆ ಪ್ರೇರಣೆ ಅವರ ಧರ್ಮಪತ್ನಿ ಶ್ರೀಮತಿ ರತ್ನಮ್ಮ. 1968ರಲ್ಲಿ ಶ್ರೀ ರತ್ನವರ್ಮ ಹೆಗ್ಗಡೆಯವರು ಕಾಲವಾದ ನಂತರ ಇದರ ಜವಾಬ್ದಾರಿಯನ್ನು ವಹಿಸಿಕೊಂಡವರು ಶ್ರೀ ವೀರೇಂದ್ರ ಹೆಗ್ಗಡೆಯವರು. ತಂದೆಯವರ ಸಂಕಲ್ಪವನ್ನು ಮುಂದುವರಿಸಿದ ಹೆಗ್ಗಡೆಯವರು ಕಾರ್ಕಳದಿಂದ ಈ ಬೃಹತ್ ಶಿಲೆಯನ್ನು ಧರ್ಮಸ್ಥಳಕ್ಕೆ ಸಾಗಿಸಿದ್ದೇ ಒಂದು ಸಾಹಸಗಾಥೆ. 1967ರಲ್ಲಿ ಸುಪ್ರಸಿದ್ಧ ಮೂರ್ತಿಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಶೆಣೈಯವರಿಂದ ಬಾಹುಬಲಿಯ ಏಕಶಿಲಾ ವಿಗ್ರಹದ ಕೆತ್ತನೆ ಕಾರ್ಯ ಪ್ರಾರಂಭವಾಯಿತು.

Leave a Reply

Your email address will not be published. Required fields are marked *