ಬಂಟ್ವಾಳ: ಪಂಚದುರ್ಗಾ ಗುಂಪಿನ ಸದಸ್ಯೆ ಪದ್ಮಾವತಿ 1996 ರಲ್ಲಿೆ ಮದುವೆಯಾಗಿ ಬಂದಿದ್ದು ಬಂಟ್ವಾಳ ತಾಲೂಕಿನ ಕಕ್ಯೆಪದವು ಗುಡ್ಡಗಾಡು ಪ್ರದೇಶದ ಹಳೆ ಮನೆಯೊಂದಕ್ಕೆ. ಕೂಲಿ ಮಾಡಿ ಮನೆಯ ಬಂಡಿ ದೂಡುತ್ತಿದ್ದ ಗಂಡ, ಬೆಳಕಿಗೆ ಚಿಮಣಿ ದೀಪದ ಆಸರೆ. ಆದರೀಗ ಪದ್ಮಾವತಿಯ ಮನೆಯಲ್ಲಿ ಎಲ್ಲೆಲ್ಲೂ ಮಲ್ಲಿಗೆಯ ಗಮಗಮ.
ಪದ್ಮಾವತಿಯವರ ಯಶೋಗಾತೆ ಆರಂಭವಾಗಿದ್ದು 2005 ರಲ್ಲಿ. ಮೊದಲು ಶ್ರೀ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ ಸದಸ್ಯೆಯಾದ ಇವರು, 2006ರಲ್ಲಿ ಭೂಮಿಕಾ ಎಂಬ ಹೆಸರಿನ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾದರು. ಮೊದಲ ಹಂತದಲ್ಲಿ ರೂ 10,000 ಸಾಲ ಪಡೆದು ಶೌಚಾಲಯ ರಚಿಸಿಕೊಂಡರೂ, ಬೀಡಿ ಉದ್ಯೋಗದಿಂದ ಬಂದ ಹಣ ಸಾಲ ಮರುಪಾವತಿಗೆ ಸಾಲದಾಯಿತು.
ಆಗ ಹೊಳೆದದ್ದೇ ಮಲ್ಲಿಗೆ ಕೃಷಿಯ ಆಲೋಚನೆ. ಮಲ್ಲಿಗೆ ಕೃಷಿಯ ಕುರಿತು ಹೆಚ್ಚೇನೂ ತಿಲಿದಿಲ್ಲದ ಪದ್ಮಾವತಿ ಆಗಿನ ಕೃಷಿ ಅಧಿಕಾರಿ ಗಂಗಾಧರ ಭಂಡಾರಿಯವರಿಂದ ಮಲ್ಲಿಗೆ ನಿರ್ವಹಣೆಯ ತರಬೇತಿ ಪಡೆದರು. ಮೊದಲ ಹಂತದಲ್ಲಿ ರೂ 5,000 ಖರ್ಚು ಮಾಡಿ 40 ಗಿಡ ನೆಟ್ಟರು. ಬೇರೆಯವರಿಂದ ವಿದ್ಯುತ್ ಪಡೆದು ಗಿಡಗಳಿಗೆ ನೀರು ಹಾಯಿಸಿದ ಇವರ ಶ್ರಮ ವ್ಯರ್ಥವಾಗಲಿಲ್ಲ. ಗಿಡಗಳು ಚೆನ್ನಾಗಿ ಬೆಳೆದು ಮೊಗ್ಗು ಬಿಡಲಾರಂಬಿಸಿದವು. ಮಲ್ಲಿಗೆ ಬೆಳೆಗಾರರಾಗಿ ಗ್ರಾಮದಲ್ಲಿ ಸೈ ಎನಿಸಿಕೊಂಡರು. ಒಂದೇ ವರ್ಷದಲ್ಲಿ ಮತ್ತೆ 40 ಗಿಡ ಹಾಕಿದರು. ಮೂರು ವರ್ಷದಲ್ಲಿ ಬೋರ್ವೆಲ್ ಕೊರೆಸಿದ ಪದ್ಮಾವತಿ, 80 ಗಿಡಗಳಿಂದ ದಿನಕ್ಕೆ ಸರಾಸರಿ 5 ಹಟ್ಟಿ ಹೂವು ಪಡೆಯುತ್ತಿದ್ದಾರೆ.
ಮಾದರಿ ಹೆಣ್ಣು
ಮಲ್ಲಿಗೆ ಕೃಷಿಯಿಂದಲೇ ಹೊಸ ಮನೆ ನಿರ್ಮಿಸಿಕೊಂಡು ವಿದ್ಯುತ್ ಅಳವಡಿಸಿಕೊಂಡಿರುವ ಪದ್ಮಾವತಿ ಇತರರಿಗೆ ಮಾದರಿಯಾಗಿದ್ದಾರೆ. ಅಕ್ಕಪಕ್ಕದ 10 ಮನೆಯವರೂ ಮಲ್ಲಿಗೆ ನಾಟಿ ಮಾಡಿದ್ದಾರೆ. ಅವರು ಬೆಳೆದ ಹೂವನ್ನೂ ತಾವೇ ಖರೀದಿಸುವ ಪದ್ಮಾವತಿ ಹೈನುಗಾರಿಕೆಯನ್ನೂ ಆರಂಭಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇವರ ಪತಿಯೂ ಕೂಲಿ ಕೆಲಸ ಬಿಟ್ಟು ತಾವೂ ಮಲ್ಲಿಗೆ ಕೃಷಿಯಲ್ಲಿ ಕೈ ಜೋಡಿಸಿದ್ದಾರೆ. ಹೂವಿನ ಗಿಡಕ್ಕೆ ಮಾಡಿದ ರೂ 5,000 ವೆಚ್ಚ ತಿಂಗಳಲ್ಲೇ ಕೈ ಸೇರಿದೆ. ಯೋಜನೆಗೆ ಸೇರುವ ಮೊದಲು ನನ್ನ ಆದಾಯ ತಿಂಗಳಿಗೆ ರೂ 1300 ಇತ್ತು. ಈಗ ಅದು ರೂ 8,000 ಕ್ಕೆ ಏರಿದೆ, ಎನ್ನುತ್ತಾರೆ ಪದ್ಮಾವತಿ.
ಇಷ್ಟಾದರೂ ಇವರ ಸಾಧನೆಯ ಹಸಿವು ಇಂಗಿಲ್ಲ. ಮತ್ತೆ ರೂ 2,00,000 ಸಾಲ ಪಡೆದು ಮನೆ ಸಮೀಪ 5 ಕೊಠಡಿಗಳಿರುವ ಬಿಲ್ಡಿಂಗ್ ನಿರ್ಮಿಸಿ ಅದನ್ನು ಬಾಡಿಗೆ ನೀಡಿ ಅಂಗಡಿಯೊಂದರಿಂದ ಮಾಸಿಕ ರೂ 1,000 ಆದಾಯ ಪಡೆಯುತ್ತಿದ್ದಾರೆ. ಮುಂದೆ ಹಟ್ಟಿ ರಚನೆ ಮಾಡಿಕೊಳ್ಳುವ ಯೋಜನೆಯೂ ಈಕೆಗಿದ.
ಮಕ್ಕಳಿಲ್ಲ ಎಂಬ ಕೊರಗು ಈಕೆಯನ್ನು ಸದಾ ಕಾಡುತ್ತಿತ್ತು. ಇದಕ್ಕಾಗಿ ಗಂಡನನ್ನು ತಾನೇ ಒಲಿಸಿ ಮರುಮದುವೆ ಮಾಡಿಸಿದ ಪದ್ಮಾವತಿ, ಈಗ ಮಗು, ಗಂಡ ಹಾಗೂ ತಂಗಿಯೊಂದಿಗೆ ಸುಖಜೀವನ ನಡೆಸುತ್ತಿದ್ದಾರೆ