success storyUncategorizedWomen Empowerment

ಸಾಧಿಸುವ ಛಲವೊಂದಿದ್ದರೆ ಸಾಕು…

ಚಿಂತಿಸುತ್ತಾ ಕೂರಲು ಜಗದಾಂಬ ಅವರಿಗೆ ನೆಪಗಳು ಸಾಕಷ್ಟಿದ್ದವು. ಕುಟುಂಬ ನಿರ್ವಹಣೆಯೇ ಕಷ್ಟವಾಗಿದ್ದಾಗ ಅಂಗವೈಕಲ್ಯ ಬೆನ್ನು ಬಿಡದೆ ಕಾಡುತ್ತಿತ್ತು. ಆದರೆ ಮೂಲತಃ ಶಮಜೀವಿಯಾಗಿರುವ ಜಗದಾಂಬ ಸುಲಭಕ್ಕೆ ಕೈಬಿಡಲು ಸಿದ್ಧರಿರಲಿಲ್ಲ.

ಜಗದಾಂಬ ಅದಾಗಲೇ ಸ್ವ ಉದ್ಯೋಗದಲ್ಲಿ ಜೀವನ ಕಾಣಬೇಕು ಎಂದು ನಿರ್ಧರಿಸಿಯಾಗಿತ್ತು. ಒಂದು ಕಾಲು ಊನವಾಗಿದ್ದರೂ ಜ್ಞಾನವಿಕಾಸ ಕಾರ್ಯಕ್ರಮದಿಂದ ಪ್ರೇರೇಪಿತರಾಗಿ ಸ್ವತಃ ಟೈಲರಿಂಗ್ ಮಾಡುವ ಸಂಕಲ್ಪ ಮಾಡಿ ತರಬೇತಿ ಪಡೆದುಕೊಂಡಿದ್ದರು. ಮೊದಲ ಹಂತವಾಗಿ ರೂ 30,000 ಪ್ರಗತಿನಿಧಿ ಪಡೆದುಕೊಂಡು ಟೈಲರಿಂಗ್ ಮೆಷಿನ್ ಖರೀದಿಸಿದ್ದಾರೆ. ಪ್ರತಿದಿನ ಮೂರು ಬ್ಲೌಸ್ ಹೊಲಿಯುವ ಜಗದಾಂಬಗೆ, ಈಗ ವಾರದ ಕಂತು ಕಟ್ಟುವುದು ಮತ್ತು ಕುಟುಂಬ ನಿರ್ವಹಣೆ ಕಷ್ಟದ ಕೆಲಸವಾಗಿ ಉಳಿದಿಲ್ಲ.

ಅಂಗವೈಕಲ್ಯ ಇದ್ದರೇನಂತೆ?
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದ ರುಕ್ಮಿಣಿ ಹುಟ್ಟಿನಿಂದಲೇ ಅಂಗವಿಕಲೆ. ಆದರೆ ಛಲಬಿಡದ ಈಕೆ ಸಾಧಿಸಿ ಎಲ್ಲರಂತೆ ಜೀವನ ಸಾಗಿಸುತ್ತಿದ್ದಾಳೆ.

ಜೀವನ ಎಲ್ಲಾ ಅಂಗವಿಕಲ ಮಹಿಳೆಯರಂತೆ ರುಕ್ಮಿಣಿಗೂ ಮುಳ್ಳಿನ ಹಾದಿಯಾಗಿತ್ತು. ಫೆಬ್ರವರಿ 23, 2015 ರಂದು ದೀಕ್ಷಾ ಎಂಬ ಸ್ವ ಸಹಾಯ ಸಂಘದ ರಚನೆ ಮಾಡಿ ಪ್ರಬಂಧಕರ ಸ್ಥಾನವನ್ನು ವಹಿಸಿಕೊಂಡರು.
ಇದು ರುಕ್ಮಿಣಿ ತನ್ನ ಅಕ್ಕಪಕ್ಕದವರನ್ನೇ ಸೇರಿಸಿಕೊಂಡು ಕಟ್ಟಿದ ಪ್ರಥಮ ತಂಡವಾಗಿತ್ತು. 12 ಮಂದಿಯ ಈ ಸಂಘದಿಂದ ಮೊದಲ ಕಂತಾಗಿ ರೂ 10,000 ಪ್ರಗತಿನಿಧಿ ಪಡೆದು ಮನೆಗೆ ಶೌಚಾಲಯ ನಿರ್ಮಾಣ ಮಾಡಿದರು. ಈ ಮೊತ್ತವನ್ನು ಆರು ತಿಂಗಳಲ್ಲಿ ಮರುಪಾವತಿ ಮಾಡಿ ಅಂಗಡಿ ರಚನೆಗೆ ಮತ್ತೆ ರೂ 25,000 ಸಾಲ ಪಡೆದಿದ್ದಾರೆ. ದಿನಸಿ ವಸ್ತುಗಳು ಹಾಗೂ ಸಂಜೆ ವೇಳೆಗೆ ಬೋಂಡ ಬಜ್ಜಿ ಪೂರೈಸುವ ಈ ಅಂಗಡಿಯ ಮೂಲಕ ಅವರೀಗ ದಿನಕ್ಕೆ ರೂ 1000 ರಿಂದ ರೂ 1200 ಆದಾಯ ಪಡೆಯುತ್ತಿದ್ದಾರೆ.

ಮಕ್ಕಳಿಬ್ಬರಿಗೆ ಉತ್ತಮ ಶಿಕ್ಷಣ ಒದಗಿಸುವುದು ನಮ್ಮ ಉದ್ದೇಶ, ಎನ್ನುವ ರುಕ್ಮಿಣಿ, ಆಕೆಯ ಪತಿ ಹಾಗೂ ಕುಟುಂಬಸ್ಥರು ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

 

Leave a Reply

Your email address will not be published. Required fields are marked *