Krishi UtsavNewsUncategorized

ಕೃಷಿಯ ರಂಗಿಗೆ ಕಾರ್ಲ ಬೆರಗು


ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ಯೋಜನಾ ಕಛೇರಿ ಮುದ್ರಾಡಿಯ ರುದ್ರಾಕ್ಷಿ ನಾರಾಯಣ ಶೆಟ್ಟಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಎರಡು ದಿನಗಳ ಕೃಷಿ ಉತ್ಸವವನ್ನು ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ- ಹೇಮಾವತಿ ಹೆಗ್ಗಡೆ ದಂಪತಿ ಫೆಬ್ರವರಿ 18 ರಂದು ಉದ್ಘಾಟಿಸಿದರು.
ಕೃಷಿ ಉತ್ಸವದಲ್ಲಿ ನಡೆದ ಐದು ವಿಚಾರಗೋಷ್ಠಿಗಳಲ್ಲಿ ಹೈನೋದ್ಯಮದಲ್ಲಿ ರೈತರ ಪಾತ್ರ ಮತ್ತು ಭವಿಷ್ಯದ ಹಸಿರು ಇಂಧನಗಳು, ಕೃಷಿ ಅಭಿವೃದ್ಧಿಯಲ್ಲಿ ಸರಕಾರಿ ಯೋಜನೆಗಳ ಪಾತ್ರ ಮತ್ತು ಭತ್ತ ಬೇಸಾಯದಲ್ಲಿ ಯಾಂತ್ರೀಕರಣ, ಮಿಶ್ರ ತೋಟಗಾರಿಕಾ ಬೆಳೆಗಳಲ್ಲಿ ಮಣ್ಣು, ನೀರಿನ ಸಂರಕ್ಷಣೆ, ಮತ್ತು ಕೀಟ ರೋಗ ನಿರ್ವಹಣೆ, ಆರ್ಥಿಕ ಅಭಿವೃದ್ಧಿ ಮತ್ತು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮತ್ತು ನಿರಂತರ ಆದಾಯಕ್ಕೆ ತರಕಾರಿ ಮತ್ತು ಮಲ್ಲಿಗೆ ಎಂಬ ವಿಷಯಗಳ ಕುರಿತು ಸಂವಾದ ನಡೆಸಲಾಯಿತು.

ಕೃಷಿ ಉತ್ಸವದ ಅಂಗವಾಗಿ ಸುಮಾರು 150 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಮೆಣಸಿನ ಮಂಟಪ, ಕಬ್ಬಿನ ಗಾಣ, ಹಳ್ಳಿ ಮನೆ, ಸಾಂಪ್ರದಾಯಿಕ ದನದ ಕೊಟ್ಟಿಗೆ, ತರಕಾರಿ ಮಂಟಪ, ಬಾಹುಬಲಿ ಮೂರ್ತಿ, ಧಾರ್ಮಿಕ ಶ್ರದ್ಧಾ ಕೇಂದ್ರ, ಅಡಿಕೆ ಮಂಟಪ, ತರಕಾರಿ ಗಣಪತಿ, ಸಮಗ್ರ ಕೃಷಿ, ನಾಗ ಮಂಡಲ, ನಂದಿನಿ ದನ, ಅಡಿಕೆ ಧ್ವಾರ, ಬಿದಿರು ಧ್ವಾರ, 25 ವಿವಿಧ ಕೃಷಿ ಪರಿಕರಗಳನ್ನು ಹೊತ್ತು ಸಾಗಿದ ರೈತರ ಮೆರವಣಿಗೆ, ಜಾನಪದ ಕಾರ್ಯಕ್ರಮಗಳು, ಯಕ್ಷಗಾನ, ಎರಡು ಕಲಾ ತಂಡಗಳಿಂದ ನಾಟಕ ಪ್ರದರ್ಶನ, ಐದು ಮಂದಿ ರೈತರ ಅಭಿನಂದನಾ ಕಾರ್ಯಕ್ರಮ ಇವೆಲ್ಲ ಕಾರ್ಯಕ್ರಮದ ಮೆರುಗು ಹೆಚ್ಚಿಸಿದವು.

ಕೃಷಿ ಉತ್ಸವದಲ್ಲಿ 50ಕ್ಕೂ ಹೆಚ್ಚು ಸಾಂಪ್ರದಾಯಿಕ ಕೃಷಿ ಪರಿಕರಗಳು, ಎತ್ತಿನಗಾಡಿ, ಕಂಬಳಕೋಣ, ಕುದುರೆ, ಯಂತ್ರೋಪಕರಣಗಳು ಮೆರವಣಿಗೆಯ ವಿಶೇಷವಾಗಿತ್ತು. ಜಾನುವಾರು ಪ್ರದರ್ಶನದಲ್ಲಿ 70 ಬೇರೆ ಬೇರೆ ತಳಿಯ ಜಾನುವಾರುಗಳು ವಿಶೇಷ ಆಕರ್ಷಣೆಯಾಗಿತ್ತು. ಜಾನುವಾರು ಪ್ರದರ್ಶನದ ಜೊತೆಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಸುಮಾರು 20,000 ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ 1997 ರಲ್ಲಿ ಆರಂಭವಾಯಿತು. ಇಲ್ಲಿರುವ 2956 ಸ್ವಸಹಾಯ ಸಂಘಗಳು ಮತ್ತು 1146 ಪ್ರಗತಿಬಂಧು ಸಂಘಗಳಲ್ಲಿ ಸುಮಾರು 38, 799 ಮಂದಿ ಸದಸ್ಯರಿದ್ದಾರೆ. ಸುಮಾರು 4052 ಮಂದಿ ಎ,ಬಿ ಶ್ರೇಣಿಯಲ್ಲಿದ್ದರೆ, 50 ಮಂದಿ ಸಿ, ಡಿ ಶ್ರೇಣಿ ಪಡೆದಿದ್ದಾರೆ.
ಹೆಬ್ರಿ ಅಜೆಕಾರು ಮುದ್ರಾಡಿ ಗೇರು ಫ್ಯಾಕ್ಟರಿ ಮುಖ್ಯಸ್ಥರು, ಬ್ಯಾಂಕ್ ಶಾಖೆಗಳು, ಹಾಲು ಉತ್ಪಾದಕರ ಸಹಕಾರಿ ಸಂಘ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಗಣ್ಯರ ಸಹಕಾರದಲ್ಲಿ ನಡೆದ ಕೃಷಿ ಉತ್ಸವದಲ್ಲಿ ಭತ್ತ ಬೇಸಾಯಕ್ಕೆ ಹೆಚ್ಚಿನ ಆಧ್ಯತೆ ನೀಡುವ ನಿರ್ಣಯ ಕೈಗೊಳ್ಳಲಾಯಿತು. ಹೈನೋದ್ಯಮದಲ್ಲಿ ರೈತರನ್ನು ತೊಡಗಿಸುವುದು, ಸರಕಾರಿ ಸೌಲಭ್ಯಗಳ ಸದ್ಭಳಕೆ, ಸಂಘಗಳನ್ನು ಉತ್ತಮ ದರ್ಜೆಗೇರಿಸುವುದು ಇವು ಕೆಲವು ಇತರ ನಿರ್ಣಯಗಳು.
ಎಸ್ಕೆಡಿಆರ್ಡಿಪಿ ಬೆಳುವಾಯಿ, ಹೊಸ್ಮಾರು, ಅಜೆಕಾರು, ಹಿರ್ಗಾನಗಳಲ್ಲಿಯೂ ಇತ್ತೀಚೆಗೆ ಯೋಜನೆ ಕೃಷಿ ಮೇಳಗಳನ್ನು ನಡೆಸಿ ಯಶಸ್ವಿಯಾಗಿತ್ತ್ತು. ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಗೋಪಾಲ ಭಂಡಾರಿ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಪೈ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *