success storyUncategorized

ಮನಸ್ಸಿದ್ದರೆ ಮಾರ್ಗ ಎಂದರೆ ಇದೇನಾ. . .


ಉಡುಪಿ ತಾಲೂಕಿನ ಬಬಿತಾ ಸುರೇಶ್ ಅವರ ಸ್ಥಿತಿ ಬಹುಪಾಲು ಬಡ ಮಧ್ಯಮ ವರ್ಗದ ಹೆಂಗಸರ ಪರಿಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಬಾರ್  ಒಂದರಲ್ಲಿ ದುಡಿಯುತ್ತಿರುವ ಗಂಡ. ತನಗೋ ಟೈಲರಿಂಗ್ ನಲ್ಲಿ ಬರುವ ಆದಾಯವಷ್ಟೇ ಗತಿ. ಬೆಳೆಯುತ್ತಿರುವ ಮಕ್ಕಳ ಮುಂದಿನ ವಿಧ್ಯಾಭ್ಯಾಸ ಹೇಗೆ ಎಂಬ ಚಿಂತೆ ಅವರನ್ನೂ ಕಾಡದೇ ಬಿಡಲಿಲ್ಲ. ಆದರೆ ಕಷ್ಟಪಡುವವರ ಸಹಾಯಕ್ಕೆ ದೇವರು ಬರುತ್ತಾನೆ ಎಂಬ ಮಾತು ಅವರ ವಿಷಯದಲ್ಲೂ ನಿಜವಾಯಿತು.

ಬಬಿತಾ ಜೀವನದಲ್ಲಿ ಪವಾಡವೇನೂ ನಡೆಯಲಿಲ್ಲ. ಆಕೆ ಮೊದಲು ಮಾಡಿದ ಕೆಲಸವೇನೆಂದರೆ ಉಡುಪಿ ವಲಯದ ಉದ್ಯಾವರ ಕಾರ್ಯಕ್ಷೇತ್ರದ ಮಾತೃಶ್ರೀ ಜ್ಞಾನವಿಕಾಸ ಕೇಂದ್ರದ ಶ್ರಾವಣ ಸ್ವ-ಸಹಾಯ ಸಂಘದ ಸದಸ್ಯೆಯಾಗಿ ಸೇರಿದ್ದು. ಸಂಘದ ಸಹವಾಸದಿಂದ ಬಬಿತಾರ ಆತ್ಮವಿಶ್ವಾಸ ಇಮ್ಮಡಿಯಾಯಿತು. ಸಿದ್ಧಿ ವಿನಾಯಕ ದೇವಾಲಯದ ಬಳಿ ಸಣ್ಣ ವ್ಯಾಪಾರವೊಂದನ್ನು ಆರಂಭಿಸಿಯೇ ಬಿಟ್ಟರು. ಜ್ಞಾನ ವಿಕಾಸ ಕೇಂದ್ರದ ಮಾಹಿತಿ ಕಾರ್ಯಕ್ರಮ ಅವರ ಸಹಾಯಕ್ಕೆ ಬಂತು.

ಬಬಿತಾರ ಪತಿಯೂ ಈಗ ಅವರ ದಿನಸಿ ಅಂಗಡಿಯಲ್ಲೇ ದುಡಿಯಲಾರಂಭಿಸಿದ್ದರು. ಮೊದಲ ಹಂತದಲ್ಲಿ ಯೋಜನೆಯಿಂದ ರೂ. 15,000, ನಂತರ ರೂ. 60,000 ಹಾಗೂ ರೂ. 1 ಲಕ್ಷದವರೆಗೆ ಪ್ರಗತಿನಿಧಿ ಪಡೆದ ಈ ಜೋಡಿ ಅಂಗಡಿಗೆ ಮತ್ತಷ್ಟು ಬಂಡವಾಳ ಹಾಕಿತು. ಅಂಗಡಿಯ ಆಕರ್ಷಣೆ ಹೆಚ್ಚಿದಂತೆ, ಬರುವ ಗ್ರಾಹಕರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಯಿತು.

ಅಂಗಡಿ ದೇವಸ್ಥಾನದ ಬಳಿಯೇ ಇರುವುದರಿಂದ ಹೂವು, ಹಣ್ಣು, ದೀಪದ ಎಣ್ಣೆ ಕೊಳ್ಳುವ ಭಕ್ತರ ಸಂಖ್ಯೆ ದ್ವಿಗುಣವಾಯಿತು. ತರಕಾರಿ, ದಿನಸಿ ಸೇರಿದಂತೆ ಇತರ ವಸ್ತುಗಳೂ ಲಭ್ಯವಿದ್ದುದರಿಂದ ವ್ಯಾಪಾರ ತುಸು ಜೋರಾಗೇ ಸಾಗಿತ್ತು. ದಿನಕ್ಕೆ ರೂ 7,000 ದಿಂದ ರೂ. 8,000 ವರೆಗೆ ವ್ಯಾಪಾರ ಸಾಗಿತ್ತು. ಅಂಗಡಿ ಬಾಡಿಗೆ, ವಿದ್ಯುತ್ ಬಿಲ್ ಬಿಟ್ಟು ಇವರೀಗ ದಿನಕ್ಕೆ ರೂ.2,000 ದಿಂದ ರೂ. 3,000 ದವರೆಗೆ ಲಾಭ ದೊರೆಯುತ್ತದೆ.

ಹಿಂದೊಮ್ಮೆ ರೂಪಾಯಿಗೂ ಕಷ್ಟಪಡುದ್ದ ಈ ದಂಪತಿ ಇಂದು ಸುಖಜೀವನ ನಡೆಸುತ್ತಿದ್ದಾರೆ. ಯೋಜನೆಯಿಂದ ಪ್ರಗತಿನಿಧಿ ಪಡೆದು ಜಾಗ ಖರೀದಿಸಿ ಬಾವಿ ತೋಡಿಸಿ, ಸ್ವಗೃಹ ಸಾಲದಿಂದ ಮನೆ ನಿರ್ಮಿಸುತ್ತಿದ್ದಾರೆ. ಈಗಾಗಲೇ ಮನೆಯ ಕಾಮಗಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದೆ. ಇಷ್ಟಾದರೂ ಇವರು ವಾರದ ಸಾಲದ ಕಂತು ರೂ.5000 ವನ್ನು ತಪ್ಪದೆ ಕಟ್ಟುತ್ತಿದ್ದಾರೆ ಎಂದರೆ ಇವರ ಆರ್ಥಿಕ ಸ್ಥಿತಿ ಉತ್ತಮವಾಗಿರಲೇಬೇಕು ಅಲ್ಲವೇ…

ಇವರಿಷ್ಟೂ ಮಾಡಿದ್ದು ಸ್ವ-ಸಹಾಯ ಸಂಘದ ಸಹಾಯದಿಂದ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಾ, ಬೇರೆಲ್ಲಿಯೂ ಸಾಲ ಪಡೆಯದೇ, ಮನೆ ನಿರ್ಮಾಣ, ಅಂಗಡಿ ವ್ಯಾಪಾರ, ಮಕ್ಕಳ ಶಿಕ್ಷಣದಲ್ಲೂ ಯಶಸ್ವಿಯಾಗಿರುವ ಈ ದಂಪತಿ ಗ್ರಾಮಾಭಿವೃದ್ಧಿ ಯೋಜನೆಗೆ ಕೃತಜ್ಞತೆ ಸಲ್ಲಿಸುತ್ತಾರೆ

Leave a Reply

Your email address will not be published. Required fields are marked *