News

ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವಕ್ಕೆ ತಯಾರಿ ಆರಂಭ


ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 50ನೇ ವರ್ಧಂತ್ಯುತ್ಸವ ಮತ್ತು 70 ನೇ ಜನ್ಮದಿನದ ಆಚರಣೆಗೆ ವಿಧ್ಯುಕ್ತ ತಯಾರಿ ಆರಂಭವಾಗಿದೆ. ಇದರ ಭಾಗವಾಗಿ ಎಪ್ರಿಲ್ 5 ರಂದು ಪೂಜ್ಯರನ್ನು ಭೇಟಿಯಾದ ಸ್ಥಳೀಯರು ಮತ್ತು ವಿವಿಧ ಗಣ್ಯರು, ಆಕ್ಟೋಬರ್ 24 ರಂದು ರಾಜ್ಯದ ವಿವಿದೆಡೆ ನಡೆಯಲಿರುವ ಆಚರಣೆಗಳ ಕುರಿತು ಅನುಮತಿ ಪಡೆದರು.

ಈ ವೇಳೆ, ಡಾ. ಹೆಗ್ಗಡೆಯವರ ಸಮ್ಮುಖದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಣಿಲ ಮೋಹನದಾಸ ಸ್ವಾಮೀಜಿ, ಈ ಆಚರಣೆ ಒಂದು ಚಾರಿತ್ರಿಕ ಕಾರ್ಯಕ್ರಮವಾಗಬೇಕು. ಹಳ್ಳಿಗಳಿಗೆ ಹೆಗ್ಗಡೆಯವರ ಕೊಡುಗೆ, ಚಟಗಳಿಂದ ಹೊರಬರಲು ಜನರಿಗೆ ನೀಡಿದ ಪ್ರೋತ್ಸಾಹ ಎಲ್ಲವೂ ಸೇರಿ ಇದು ಎಲ್ಲಾ ಭಕ್ತಾಭಿಮಾನಿಗಳ ಪಾಲ್ಗೊಳ್ಳುವಿಕೆಯಲ್ಲಿ ಮೂಡಿಬರಬೇಕು. ಈ 49 ವರ್ಷಗಳಲ್ಲಿ ಹೆಗ್ಗಡೆಯವರು ಅನುಭವಿಸಿದ ಏಳುಬೀಳು, ಧರ್ಮಸ್ಥಳ ಮಾದರಿಯಾಗಿ ರೂಪುಗೊಂಡ ಬಗೆ ಸೇರಿದಂತೆ ಇದೊಂದು ಭಾವನಾತ್ಮಕ ಪ್ರತಿಕ್ರಿಯೆಯಾಗಿರಬೇಕು. ರಾಜ್ಯದ ಮಠಾಧೀಶರು, ಸಂತಶ್ರೇಷ್ಠರು ಭಾಗವಹಿಸಬೇಕು. ಮೂರು ದಿನಗಳ ಕಾಲ ರಾಜ್ಯದ ಪ್ರಮುಖ ಶ್ರದ್ಧಾ ಕೇಂದ್ರಗಳಲ್ಲಿ ಹೆಗ್ಗಡೆಯವರಿಗಾಗಿ ಪ್ರಾರ್ಥನೆ ನಡೆಯಬೇಕು, ಎಂದರು.

ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಹೆಗ್ಗಡೆಯವರ ಧಾರ್ಮಿಕ, ಸಾಮಾಜಿಕ ಅಭಿವೃದ್ಧಿ ಕಾರ್ಯಗಳು ಒಂದು ಜಾಗತಿಕ ವಿಸ್ಮಯ. ಮುಂದಿನ ತಲೆಮಾರಿಗೆ ಮಾದರಿಯಾಗಿರುವ ಈ ಕೆಲಸಗಳು ಜನರಿಗೆ ತಿಳಿಯಬೇಕು, ಎಂದರು. ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಉಜಿರೆಯ ಪ್ರತಾಪ್ ಸಿಂಹ ನಾಯಕ್, ಉಜಿರೆಗೆ ಕ್ಷೇತ್ರದ ಕೊಡುಗೆ ಅಪಾರ. ಈ ಆಚರಣೆ ಒಂದು ಅಪೂರ್ವ ಕಾರ್ಯಕ್ರಮವಾಗಿ ಮೂಡಿಬರಲಿದೆ, ಎಂದರು.

ಡಾ. ಹೆಗ್ಗಡೆಯವರ ಸಹೋದರರರಾದ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮೋಹನ್ ಆಳ್ವ, ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಚಿನ್ನಪ್ಪ ಗೌಡ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪ್ರೊ. ಎಸ್ ಪ್ರಭಾಕರ್, ಡಾ. ಬಿ. ಯಶೋವರ್ಮ, ಎಸ್.ಕೆ.ಡಿ.ಆರ್.ಡಿ.ಪಿ ಕಾರ್ಯನಿರ್ವಾಹಕ ನಿರ್ದೆಶಕ ಡಾ. ಎಲ್. ಎಚ್. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ಧರು.