News

ಸಂಪೂರ್ಣ ಸುರಕ್ಷಾ 2017-18 ಆರೋಗ್ಯ ವಿಮೆ ಲೋಕಾರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಯೋಜನೆಗೆ 2017-18 ನೇ ವರ್ಷಕ್ಕೆ ಸುಮಾರು 10 ಲಕ್ಷ ಜನ ಸದಸ್ಯರು ಪಾಲುದಾರರಾಗಿದ್ದಾರೆ. ಇವರಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವ ಸಲುವಾಗಿ ಸಾರ್ವಜನಿಕ ವಲಯದ 4 ವಿಮಾ ಕಂಪನಿಗಳಿಗೆ 40 ಕೋಟಿ ರೂಪಾಯಿ ಪ್ರೀಮಿಯಂ ಮೊತ್ತದ ಚೆಕ್ಗಳನ್ನು ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾರ್ಚ್ 31 ರಂದು ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಿದರು.

ಪಾಲುದಾರ ಸದಸ್ಯರು ಮತ್ತು ಅವರ ಮನೆಮಂದಿಯ ಆರೋಗ್ಯ ರಕ್ಷಣೆಯ ಸಲುವಾಗಿ ಹೆಗ್ಗಡೆಯವರು ಸುರಕ್ಷಾ ಆರೋಗ್ಯ ವಿಮಾ ಕಾರ್ಯಕ್ರಮ ಇದೀಗ 13 ವರ್ಷಗಳು ಸಂದಿರುತ್ತವೆ. ಪ್ರಸಕ್ತ ವರ್ಷ ಈ ವಿಮಾ ಕಾರ್ಯಕ್ರಮದಡಿಯಲ್ಲಿ 2.5 ಲಕ್ಷ ಸದಸ್ಯ ಕುಟುಂಬಗಳಿದ್ದು, ಈವರೆಗೆ 70,084 ಸದಸ್ಯರಿಗೆ 38 ಕೋಟಿ ರೂಪಾಯಿಗಳ ಸೌಲಭ್ಯ ನೀಡಲಾಗಿದೆ ಹಾಗೂ ಸುಮಾರು 8 ಕೋಟಿ ರೂಪಾಯಿಗಳ ಸೌಲಭ್ಯ ನೀಡಲಿದೆ.

ಅಧಿಕಾರಿಗಳ ಪ್ರಕಾರ ಮಾರ್ಚ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ ಸುಮಾರು 150ರಷ್ಟು ಪೂರ್ವಾನುಮತಿ ಕೊರಿಕೆಗಳು ಬಂದಿದ್ದು, ದಿನವೊಂದಕ್ಕೆ ಸರಾಸರಿ 100ಕ್ಕೂ ಹೆಚ್ಚು ಕೊರಿಕೆಗಳಿಗೆ ಅನುಮತಿ ನೀಡಲಾಗಿದೆ. ಹೊಸ ಕಂಪ್ಯೂಟರ್ ತಂತ್ರಾಂಶ ಅಳವಡಿಕೆ ಆಗಿದ್ದು ಚಾಲನೆಯಲ್ಲಿದೆ. ಹೀಗಾಗಿ ಹೆಚ್ಚುವರಿಯಾಗಿ ಸುಮಾರು 8 ಜನ ಕಛೇರಿ ಸಿಬ್ಬಂದಿಗಳು ಮತ್ತು ಇಬ್ಬರು ವೈದ್ಯಾಧಿಕಾರಿಗಳು ಸಿಗಲಿದ್ದಾರೆ. ಉಪ್ಪಿನಂಗಡಿಯ ಧನ್ವಂತರಿ ಆಸ್ಪತ್ರೆಯೂ ಸೇರಿದಂತೆ 9 ಜಿಲ್ಲೆಗಳ ಒಟ್ಟು 136 ಆಸ್ಪತ್ರೆಗಳನ್ನು ಸುರಕ್ಷಾ ಜಾಲಕ್ಕೆ ಸೇರ್ಪಡೆಗೊಳಿಸಲಾಗಿದೆ.

ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೆಶಕ ಡಾ. ಎಲ್. ಹೆಚ್ ಮಂಜುನಾಥ್, ಹಣಕಾಸು ನಿರ್ದೆಶಕ ಶಾಂತರಾಮ್ ಪೈ, ವಿಮಾ ಕಂಪನಿಯ ಹಿರಿಯ ಅಧಿಕಾರಿಗಳಾದ ಶ್ರೀ. ಪಿ ಸಿ ಹೋಟ, ಸುರೇಶ್ ಬಲರಾಂ, ಶೋಭ ರಾಜಗಿರಿ, ಪ್ರತಿಭಾ ಶೆಟ್ಟಿ, ಪುಂಡಲಿಕ ನಾಯಕ್, ವಿ. ಪಿ ನಾಯಕ್, ಶೇಷಪ್ಪ ನಾಯ್ಕ್ ಮತ್ತು ಸಂಪೂರ್ಣ ಸುರಕ್ಷಾ ನಿರ್ದೆಶಕ ಅಬ್ರಹಾಂ ಎಂ. ಕೆ, ಯೋಜನಾಧಿಕಾರಿಗಳಾದ ಶಿವಪ್ರಸಾದ್. ಕೆ ಹಾಗೂ ಪದ್ಮಯ್ಯ ಸಿ. ಹೆಚ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.