News

ಗ್ರಾಮಾಭಿವೃದ್ಧಿ ಯೋಜನೆ ಜನಜೀವನದಲ್ಲಿ ಬದಲಾವಣೆ ತಂದಿದೆ

ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ವಸಂತ ಮಹಲ್ನಲ್ಲಿ ಯೋಜನಾಧಿಕಾರಿಗಳ ಮೂರು ದಿನದ ಕಾರ್ಯಾಗಾರದಲ್ಲಿ ಶುಕ್ರವಾರ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರೀ ಕ್ಷೇತ್ರದ ಪ್ರಮುಖ ಯೋಜನೆ. ವಿಶೇಷವೆಂದರೆ ಯೋಜನೆಯ ಯಾವುದೇ ಕಾರ್ಯಕ್ರಮಗಳು ಜನರನ್ನು ಅವಲಂಬಿತರನ್ನಾಗಿ ಮಾಡುವುದಿಲ್ಲ. ಫಲಾನುಭವಿಗಳು ಸ್ವಯಂ ಶಕ್ತಿಯಿಂದ ಜೀವನ ರೂಪಿಸಿಕೊಳ್ಳುವಂತೆ ಮಾಡುತ್ತವೆ. ಜನರ ಜೀವನದಲ್ಲಾಗುವ ಪ್ರಗತಿಯೇ ಕೃತಜ್ಞತೆಗೆ ಸಮಾನ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಧರ್ಮಸ್ಥಳದ ವಸಂತ ಮಹಲ್ನಲ್ಲಿ ಯೋಜನಾಧಿಕಾರಿಗಳ ಮೂರು ದಿನದ ಕಾರ್ಯಾಗಾರದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಹೆಗ್ಗಡೆಯವರು, ಶ್ರೀ ಕ್ಷೇತ್ರ ಯೋಜನೆಯ ಮೂಲಕ ಅಭಯದಾನ ನೀಡುತ್ತಿದೆ. ಜನರಿಗೆ ಯೋಜನೆಯ ಕಾರ್ಯಕ್ರಮಗಳಲ್ಲಿ ಅಪಾರ ವಿಶ್ವಾವಿರುವುದರಿಂದ, ಜನಜೀವನದಲ್ಲಿ ಬದಲಾವಣೆ ಸಾಧ್ಯವಾಗಿದೆ. ಇದನ್ನು ಮುಂದುವರಿಸೋಣ ಎಂದರು.

‘ಕೇವಲ ಸಾಲದ ವಿಷಯ ಬೇಡ’

ಇದೇ ವೇಳೆ ಹೆಗ್ಗಡೆಯವರು, ಯೋಜನೆಯ ಸೇವಾ ಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡಿದಾಗ ಕೇವಲ ಸಾಲ ಮರುಪಾವತಿಯ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ ಎಂದರು. ಊರಿನ ಶಾಲೆ, ಮಕ್ಕಳ ವಿದ್ಯಾಭ್ಯಾಸ, ಪರಿಸರ, ಜನರ ಆರೋಗ್ಯ, ಊರಿನ ಕೊರತೆಗಳೂ ಸೇರಿದಂತೆ ವೈಯುಕ್ತಿಕ ಕಷ್ಟ-ಸುಖ ವಿಚಾರಿಸಿಕೊಳ್ಳಬೇಕು, ಎಂದರು.

ಪ್ರಶಸ್ತಿ ಎನ್ನುವುದು ಯೋಜನೆಯ ಯಶಸ್ಸಿನ ಹಿಂದಿರುವ ಕಾರ್ಯಕರ್ತರ ಗುರುತಿಸುವಿಕೆಯಷ್ಟೇ. ಇದು ಲಕ್ಷಾಂತರ ಜನರಿಗೆ ಹಂಚಿ ಹೋಗಿದೆ. ಯೋಜನೆಯ ಕೆಲಸವನ್ನು ಹೆಗ್ಗಡೆಯವರು ಮಾಡಿದ್ದು ಎನ್ನಬೇಕಿಲ್ಲ. ‘ನಾವು’ ಮಾಡಿದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ, ಎಂದು ಕಾರ್ಯಕರ್ತರಿಗೆ ಸೂಚಿಸಿದರು.
ಶ್ರೀಮತಿ ಹೇಮಾವತಿ ಹೆಗ್ಗಡೆ, ಸುರೇಂದ್ರ ಕುಮಾರ್, ಶ್ರೀಮತಿ ಶ್ರದ್ಧಾ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ಧರು.