ಬದುಕು ಗಟ್ಟಿಗೊಳಿಸಿದ ಇಟ್ಟಿಗೆ ವ್ಯಾಪಾರ

Posted on Posted in success story

ಬದುಕು ಗಟ್ಟಿಗೊಳಿಸಿದ ಇಟ್ಟಿಗೆ ವ್ಯಾಪಾರ….

ಬದುಕಿನಲ್ಲಿ ಸಾಧಿಸಬೇಕಾದರೆ ನಮ್ಮ ಕುಲಕಸುಬು ಬಿಡಬೇಕು ಅಂತೇನೂ ಇಲ್ಲ. ಮಾಡುವ ಕೆಲಸವನ್ನೇ ಬುದ್ದಿವಂತಿಗೆಯಿಂದ ಕಾಲಕ್ಕೆ ತಕ್ಕಂತೆ ಮಾಡಿದರೆ ಸಾಕು. ಖಾನಾಪುರ ತಾಲೂಕಿನ ನಿಟ್ಟೂರು ಗ್ರಾಮದ ಗೋಪಾಳ ಅನಂತ ಬರುಕರ ಮಾಡಿದ್ದೂ ಅದನ್ನೇ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೊರಯಾ ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರಾಗಿರುವ ಇವರ ಮೂಲ ಕಸುಬು ಇಟ್ಟಿಗೆ ತಯಾರಿಕೆಯನ್ನು ಬಿಡುವ ಯೋಚನೆಯನ್ನೇ ಕೈಬಿಟ್ಟು ಅದನ್ನು ವಿಸ್ತರಿಸಿದ್ದಾರೆ. ಗೋಪಾಳ ಅನಂತ ಬರುಕರ ಈವರೆಗೆ ಯೋಜನೆಯಿಂದ ಒಟ್ಟು ರೂ. 95,000 ಪ್ರಗತಿನಿಧಿ ಪಡೆದಿದ್ದಾರೆ. ಹಾಗಂತ ಇಷ್ಟೂ ನೆರವನ್ನೂ ಒಮ್ಮೆಗೇ ಪಡೆದುಕೊಳ್ಳಲಿಲ್ಲ.

ಹಂತ ಹಂತವಾಗಿ ಪ್ರಗತಿನಿಧಿ ಪಡೆದು ಉದ್ಯೋಗವನ್ನು ಅಭಿವೃದ್ಧಿಪಡಿಸುತ್ತಾ ಸಾಗಿ, ಈಗ ಒಂದು ಸೀಜನ್ನಲ್ಲಿ ಒಂದೂವರೆ ಲಕ್ಷದವರೆಗೆ ಇಟ್ಟಿಗೆ ಮಾರಾಟ ಮಾಡುವ ಹಂತ ತಲುಪಿದ್ದಾರೆ. ರಾತ್ರಿ 10.30ರ ವರೆಗೂ ಇಟ್ಟಿಗೆ ಕೆಲಸದಲ್ಲಿ ತೊಡಗಿಕೊಳ್ಳುವ ಇವರು, ಪೂರಕವಾಗಿ ಸಂಘದಿಂದ ಸೋಲಾರ್ ದೀಪವನ್ನು ಅಳವಡಿಸಿಕೊಂಡಿದ್ದಾರೆ.

ಮನೆಯಲ್ಲಿರುವ ಏಳು ಮಂದಿ ಸದಸ್ಯರ ಪೈಕಿ ಐದು ಮಂದಿ ಈಗ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಇಟ್ಟಿಗೆಗೆ ಭಾರೀ ಬೇಡಿಕೆಯಿರುವ ಕಾರಣ ಗೋಪಾಳ ಅನಂತ ಬರುಕರ, ದಿನಕ್ಕೆ ಸರಾಸರಿ ರೂ. 4000 ದವರೆಗೆ ಆದಾಯ ಗಳಿಸುತ್ತಿದ್ದಾರೆ.

ಮನಸ್ಸಿದ್ದರೆ ಮಾರ್ಗ…

ಹಿರೇಕೆರೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ರಾಘವೇಂದ್ರ ಸ್ವ-ಸಹಾಯ ಸಂಘದ ಸದಸ್ಯೆ ಸುಮಂಗಲಾ ವಸಂತ ವಾಲ್ಮೀಕಿ ಮನಸ್ಸೊಂದಿದ್ದರೆ ಮಾರ್ಗವಿದೆ ಎಂದು ನಂಬಿದವರು. 55 ವರ್ಷ ವಯಸ್ಸಾಗಿದ್ದರೂ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ವಯಸ್ಸಿನ ಹಂಗಿಲ್ಲ ಎಂದು ಸಾಧಿಸಿ ತೋರಿಸಿದವರು.

ಸುಮಂಗಲಾ ಅವರು ಆಸಕ್ತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಪಶುಸಂಗೋಪನೆ ಕುರಿತ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಮೊಲ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಇದಕ್ಕೆ ಬೇಕಾದ ಹೆಚ್ಚಿನ ತರಬೇತಿಯನ್ನು ಯೋಜನೆಯಿಂದ ಪಡೆದುಕೊಂಡರು. ತಮ್ಮ ಸಂಘದಿಂದ ಅಲ್ಪ ಪ್ರಮಾಣದ ಪ್ರಗತಿನಿಧಿ ಪಡೆದು ಮೊಲ ಸಾಕಾಣೆಗೆ ರೂ. 1,20,000 ಹಾಕಿದ್ದಾರೆ. ಮೊದಲ ಹಂತದಲ್ಲಿ 6 ಯುನಿಟ್ ಮೊಲ ಸಾಕಾಣಿಕೆ ಮಾಡಿದ್ದು ಉತ್ತಮ ನಿರ್ವಹಣೆ ಮಾಡಿದ್ದಾರೆ. ಮೂರು ತಿಂಗಳ ನಂತರ ಮೊಲ ಮಾರಾಟ ಮಾಡಿ ರೂ. 6,000 ಆದಾಯ ಗಳಿಸಿದ್ದಾರೆ.

ಸುಮಂಗಲಾ ಮುಂದಿನ ದಿನಗಳಿಗೆ ತಮ್ಮ ಯೋಜನೆ ಬದಲಿಸಿಕೊಂಡಿದ್ದಾರೆ. ಪ್ರತಿ 20 ದಿನಗಳಿಗೊಮ್ಮೆ ಮೊಲದ ಮರಿಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಮೊಲದ ಸಾಕಾಣೆಯನ್ನು ಸುಲಭವಾಗಿಸಬಹುದು. ಜೊತೆಗೆ ಆದಾಯದಲ್ಲೂ ಏರಿಕೆ ಕಾಣಬಹುದು, ಎಂಬುದು ಅವರ ಅಭಿಪ್ರಾಯ.