success story

ಬದುಕಿನ ಅಂದ ಹೆಚ್ಚಿಸಿದ ಬ್ಯೂಟೀಪಾರ್ಲರ್

ಇದೊಂದು ಬದುಕಿನಲ್ಲಿ ನಿರಾಶರಾಗಿ ಕೈಚೆಲ್ಲುವ ಮಹಿಳೆಯರಿಗೆ ಮಾದರಿಯಾಗಬಲ್ಲ ಕಥೆ. ಮನೆಯಾತ ಕಷ್ಟದಲ್ಲಿ ಬಿದ್ದಾಗ ತಾನೂ ಕಂಗಾಲಾಗುವ ಬದಲು ಜಾಣ್ಮೆಯಿಂದ ಹಣ ಸಂಪಾದಿಸಿ ಸಂಸಾರಕ್ಕೆ ಆಧಾರವಾಗಬಹುದು ಎಂಬುದಕ್ಕೊಂದು ಉದಾಹರಣೆ ಈ ಶಾರದಾಮಣಿ.

ಕೊಪ್ಪಳದ ಚಿಕ್ಕನಾಯಕನಹಳ್ಳಿ ತಾಲೂಕಿನ ಜೋಗಿಹಳ್ಳಿ ಕಾರ್ಯಕ್ಷೇತ್ರದ ‘ಶ್ರೀಮಾತಾ’ ಸಂಘದ ಸದಸ್ಯರಾಗಿರುವ ಶಾರದಾಮಣಿಯವರ ಮನೆಯ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಗಂಡನ ದುಡಿಮೆಯಿಂದಲೇ ಜೀವನ ಸಾಗಿಸುವುದು ಮತ್ತು ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳುಹಿಸುವುದು ಕಷ್ಟದ ಕೆಲಸವಾಗಿತ್ತು. ಈ ಸಂಧರ್ಭದಲ್ಲಿ ಅವರ ನೆರವಿಗೆ ಬಂದಿದ್ದು ರುಡ್ಸೆಟ್ ಸಂಸ್ಥೆಯ ತರಬೇತಿ ಕಾರ್ಯಕ್ರಮ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದಿಂದ ಮಾಹಿತಿ ಪಡೆದುಕೊಂಡು ರುಡ್ಸೆಟ್ ಸಂಸ್ಥೆಯಿಂದ ಬ್ಯೂಟಿ ಪಾರ್ಲರ್ ತರಬೇತಿ ಪಡೆದುಕೊಂಡ ಶಾರದಾಮಣಿ, ಮೊದಲು ರೂ. 5000 ಸಾಲ ಪಡೆದುಕೊಂಡು ಸಣ್ಣ ಮಟ್ಟದಲ್ಲಿ ಪಾರ್ಲರ್ ಆರಂಭಿಸಿದರು. ಮುಂದಿನ ಹಂತದಲ್ಲಿ ಸೀರೆಗೆ ಕುಚ್ಚು ಕಟ್ಟುವುದು, ಹೊಲಿಗೆ ಕಲಿತು ರೂ. 1 ಲಕ್ಷ ಪ್ರಗತಿನಿಧಿ ಪಡೆದುಕೊಂಡು ಬಟ್ಟೆ ವ್ಯಾಪಾರ ಆರಂಭಿಸಿದರು.

ಮೈಮುರಿದು ದುಡಿಯುವ ಶಾರದಾಮಣಿ ಅದರಂತೆ ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ. ಇವರು ಪಾರ್ಲರ್ನಿಂದ ದಿನಕ್ಕೆ ರೂ. 300, ಸೀರೆ ಕುಚ್ಚು ಕಟ್ಟುವುದರಿಂದ ರೂ. 250, ಬಟ್ಟೆ ವ್ಯಾಪಾರದಿಂದ ರೂ. 750, ಹೀಗೆ ದಿನವೊಂದಕ್ಕೆ ರೂ 1,300 ರಂತೆ ಆದಾಯ ಪಡೆಯುತ್ತಿದ್ದಾರೆ. ತಮ್ಮ ಈ ನೆಮ್ಮದಿಯ ಜೀವನಕ್ಕೆ ಜ್ಞಾನವಿಕಾಸ ಕಾರ್ಯಕ್ರಮವೇ ಕಾರಣ ಎಂದು ಹೇಳಲು ಅವರು ಮರೆಯುವುದಿಲ್ಲ.