ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ ವಿವಾಹ ಸಂಭ್ರಮ. ಹೌದು. . . ಸಂಜೆ 6.50 ರ ಗೋಧೂಳಿ ಲಗ್ನದಲ್ಲಿ ನಡೆದ 46ನೇ ಉಚಿತ ಸಾಮೂಹಿಕ ವಿವಾಹದಲ್ಲಿ 102 ಜೋಡಿಗಳು ನವಜೀವನಕ್ಕೆ ಕಾಲಿಟ್ಟವು. ಇದರೊಂದಿಗೆ 1972 ರಲ್ಲಿ ಆರಂಭವಾದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈವರೆಗೆ 12,029 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಾಗಿದೆ.
ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಅಮೃತವರ್ಷಿಣಿ ಸಭಾಭವನದಲ್ಲಿ ಸಾವಿರಾರು ಜನರು ಆ ಘಳಿಗೆಗಾಗಿ ಕಾಯುತ್ತಿದ್ದರು. ವಿವಾಹ ಮಹೂರ್ತ ಬರುತ್ತಿದ್ದಂತೆ ವೇದಮಂತ್ರಗಳ ನಡುವೆ ನವಜೋಡಿಗಳು ಹಾರ ಬದಲಾಯಿಸಿಕೊಂಡರು. ಹೆಗ್ಗಡೆಯವರು ಆಶೀರ್ವದಿಸಿ ನೀಡಿದ ಮಂಗಳಸೂತ್ರವನ್ನು ವರ ವಧುವಿಗೆ ಕಟ್ಟುತ್ತಿದ್ದಂತೆ ಅಕ್ಷತೆ ಕಾಳಿನ ಮೂಲಕ ಆಶೀರ್ವಾದಗಳ ಸುರಿಮಳೆಯೇ ಬಂತು.
ನಂತರ ಆಶೀರ್ವದಿಸಿ ಮಾತನಾಡಿದ ಹೆಗ್ಗಡೆಯವರು, ಈಗ ಸಾಮೂಹಿಕ ವಿವಾಹ ಮದುವೆಯ ಖರ್ಚು ತಗ್ಗಿಸಿ ಸರಳವಾಗಿ ವಿವಾಹವಾಗುವ, ಗೃಹಸ್ಥನಾಗಿ ವ್ಯಕ್ತಿತ್ವವನ್ನು ಪೂರ್ಣಗೊಳಿಸುವ ಬಗೆ. ಈ ಬಾರಿ ಮಳೆ ಬಂದು ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸೋಣ ಎಂದರು. “ಎಲ್ಲರಿಗೂ ಒಂದೆರಡು ಮದುವೆ ಮಾಡುವ ಭಾಗ್ಯವಾದರೆ, ನನಗೆ ನೂರಕ್ಕೂ ಹೆಚ್ಚು ಮದುವೆ ಮಾಡುವ ಭಾಗ್ಯ. ಅನೇಕ ದಿನಗಳಿಂದ ನಮ್ಮ ಮನೆಯಲ್ಲಿ ಮನೆ ಮದುವೆಯ ಸಂಭ್ರಮ”, ಎಂದರು.
‘ಕ್ಷೇತ್ರದ ಶಕ್ತಿ ಅಪಾರ’
ತಮಗೂ ಕ್ಷೇತ್ರಕ್ಕೂ ಇರುವ ಗಾಢ ಸಂಬಂಧವನ್ನು ಬಣ್ಣಿಸಿದ ನಾಯಕನಟ ಯಶ್, ಜನರಿಗೆ ನೀರೊದಗಿಸುವ, ನೂರು ಕೆರೆಗಳ ಹೂಳೆತ್ತುವಂತಹ ಅನೇಕ ಪುಣ್ಯ ಕೆಲಸಗಳು ಕ್ಷೇತ್ರದಿಂದ ನಡೆಯುತ್ತಿವೆ. ಹೆಗ್ಗಡೆಯವರ ಪ್ರಭಾವ ಇಡೀ ರಾಜ್ಯದಲ್ಲಿ ಹರಡಿಕೊಂಡಿದೆ. ಅವರು ಯುವಕರಿಗೆ ಕೆರೆ ರಕ್ಷಿಸಲು, ಅರಣ್ಯ ಕಾಪಾಡಲು ಕರೆ ಕೊಡಬೇಕು. ಇದು ಯುವಕರಿಗೆ ಖಂಡಿತಾ ಪ್ರೇರಣೆಯಾಗುತ್ತದೆ. ಜನರು ಎಲ್ಲದಕ್ಕೂ ಸರ್ಕಾರವನ್ನು ಅವಲಂಭಿಸುವುದು ನಿಲ್ಲಬೇಕು ಎಂದರು.
ಅತಿಥಿಗಳಾಗಿದ್ದ ಸಿಐಡಿ ಡಿ.ಜಿ.ಪಿ ಕಿಶೋರ್‍ಚಂದ್ರ, ನಿಜಾರ್ಥದಲ್ಲಿ ಇದು ಸರಳವಾರೂ ಅದ್ಧೂರಿ ವಿವಾಹ. ಮನೆಯಲ್ಲೂ ಇಷ್ಟೊಂದು ಜನರ ಆಶೀರ್ವಾದ ಸಿಗಲು ಸಾಧ್ಯವಿಲ್ಲ. ಈ ವೈವಿಧ್ಯತೆ ಎಲ್ಲೂ ಸಿಗದು. ವಧು-ವರರು ಮಾತ್ರ ತಾವು ದೇವರ ಎದುರು ಕೊಟ್ಟ ವಚನವನ್ನು ಮರೆಯಬಾರದು, ಎಂದರು.
ಮೌನದಿಂದಲೇ ಮಾತಾದಾಗ. . .
ಈ ಬಾರಿಯ ಸಾಮೂಹಿಕ ವಿವಾಹದಲ್ಲಿ 12,000 ನೇ ಜೋಡಿಯಾಗುವ ಸುಯೋಗ ಒದಗಿ ಬಂದಿದ್ದು ಕಿರಣ್ ಹಾಗೂ ಶ್ರೀದೇವಿಗೆ. ವಿಶೇಷವೆಂದರೆ ದೂರದ ಸಂಬಂಧಿಕರಾಗಿರುವ ಇವರು ಮಾತನಾಡಲಾರರು. ಆದರೆ ಎರಡು ವರ್ಷಗಳ ಹಿಂದೆ ಕಟ್ಟಿಕೊಂಡಿದ್ದ ವಿವಾಹಬೇಕೆಂಬ ಕನಸು ಈ ರೀತಿ ನನಸಾಗಿದೆ. ಮೂಲತಃ ಬ್ರಹ್ಮಾವರದವರಾದ ಕಿರಣ್ ಕೂಲಿ ಮಾಡಿಕೊಂಡಿದ್ದರೆ, ಕಾರ್ಕಳದ ಬೋಳದ ಶ್ರೀದೇವಿ ಟೈಲರಿಂಗ್ ಕಲಿತಿದ್ದಾರೆ. ಈ ಬಾರಿಯ ಮದುವೆಯಲ್ಲಿ ಕೇರಳದ 6 ಜೋಡಿಗಳೂ ಇದ್ದಿದ್ದು ವಿಶೇಷ.
ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಶ್ರೀಮತಿ ಶ್ರಧ್ಧಾ ಅಮಿತ್, ಮಾಜಿ ಸಚಿವ ಕೆ. ಆಭಯ್‍ಚಂದ್ರ ಜೈನ್, ಕೊಲ್ಕತಾ- ಬಿರ್ಲಾ ಕಾರ್ಪೊರೇಷನ್ ಪ್ರತಿನಿಧಿ ಸಂದೀಪ್ ರಂಜನ್ ಭೋಸ್, ಶಾಸಕ ವಸಂತ ಬಂಗೇರ, ಮಾಜಿ ಎಸ್ಪಿ ದಿವಾಕರ್ ದಂಪತಿ ರಾಧಿಕಾ ಪಂಡಿತ್ ಮೊದಲಾದವರು ಹಾಜರಿದ್ದರು.
46ನೇ ಉಚಿತ ಸಾಮೂಹಿಕ ವಿವಾಹ ಸಂಪನ್ನ
