ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಕಾರ್ಯಕರ್ತರಲ್ಲಿ ಸಕಾರಾತ್ಮಕ ಚಿಂತನೆ, ಸಮಾಜಮುಖಿ ವಿಚಾರಗಳು ಇರಬೇಕಾದುದು ಅತ್ಯವಶ್ಯ. ನಕಾರಾತ್ಮಕ ಚಿಂತನೆಯಿರುವ ವ್ಯಕ್ತಿ ಅಭಿವೃದ್ಧಿಗೆ ನ್ಯಾಯಯುತವಾದ ಕೊಡುಗೆ ನೀಡಲು ಸಾಧ್ಯವಿಲ್ಲ, ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಹೇಮಾವತಿ ಹೆಗ್ಗಡೆ ಅಭಿಪ್ರಾಯಪಟ್ಟರು.
ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯ ‘ಈಶಾವಾಸ್ಯಂ’ ಸಭಾ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಜಿಲ್ಲೆಯ ಮೇಲ್ವಿಚಾರಕ ವರ್ಗದ ಕಾರ್ಯಕರ್ತರ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮಾಭಿವೃದ್ಧಿ ಯೋಜನೆ ಕರ್ನಾಟಕ ರಾಜ್ಯದಲ್ಲಿ ಸ್ವ-ಸಹಾಯ ಸಂಘದ ಚಳುವಳಿಯನ್ನು ಪರಿಣಾಮಕಾರಿಯಾಗಿ ಹುಟ್ಟುಹಾಕುವ ಮೂಲಕ ಜನ ಸಾಮಾನ್ಯರು ಸಾಮಾಜಿಕ ಹಾಗು ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಗಣನೀಯ ಕೊಡುಗೆ ನೀಡಿದೆ, ಎಂದರು.
ಅತಿಯಾದ ಪ್ಲಾಸ್ಟಿಕ್ ಬಳಕೆ, ಮಾದಕ ವ್ಯಸನಗಳು, ನೀರಿನ ದುರ್ಬಳಕೆ, ಕಸದ ಅಸಮರ್ಪಕ ವಿಲೇವಾರಿ, ಪರಿಸರ ನಾಶ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವುದು ಸಾಮಾಜಿಕ ಕಳಕಳಿಯಿರುವ ಎಲ್ಲರ ಜವಾಬ್ದಾರಿ, ಎಂದು ಹೇಮಾವತಿ ಹೆಗ್ಗಡೆಯವರು ಹೇಳಿದರು. ಇದೇ ವೇಳೆ ಮಾತನಾಡಿದ ಶ್ರೀಮತಿ ಶ್ರಧ್ಧಾ ಅಮಿತ್, ಮಕ್ಕಳಿಗೆ ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲೇ ಗುಟ್ಕಾ, ಧೂಮಪಾನ ಮೊದಲಾದ ಹಾನಿಕಾರಕ ಅಭ್ಯಾಸಗಳಿಂದ ದೂರ ಉಳಿಯುವಂತೆ ಜಾಗೃತಿ ಮೂಡಿಸುವ ಅಗತ್ಯವಿದೆ, ಎಂದರು.
ಕಳೆದ ಆರ್ಥಿಕ ವರ್ಷದಲ್ಲಿ ಸಾಧನೆಗೈದ ಕಾರ್ಯಕರ್ತರನ್ನು ಇದೇ ಸಂಧರ್ಭದಲ್ಲಿ ಗುರುತಿಸಲಾಯಿತು. ಧಾರವಾಡ ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯಶಂಕರ್ ಶರ್ಮ, ಜಿಲ್ಲಾ ನಿರ್ದೇಶಕ ದಿನೇಶ್ ಎಂ ಉಪಸ್ಥಿತರಿದ್ದರು. ಹುಬ್ಬಳ್ಳಿ ತಾಲೂಕು ಯೋಜನಾಧಿಕಾರಿ ರೋಹಿತ್ ಕಾರ್ಯಕ್ರಮ ನಿರ್ವಹಿಸಿದರು.
ಸಕಾರಾತ್ಮಕ ಚಿಂತನೆ ಅಭಿವೃದ್ಧಿಗೆ ಪೂರಕ: ಹೇಮಾವತಿ ಹೆಗ್ಗಡೆ
