success storyWomen Empowerment

ಜ್ಞಾನವಿಕಾಸ ಕಾರ್ಯಕ್ರಮ ತಂದ ಧೈರ್ಯ

ಜ್ಞಾನವಿಕಾಸ ಸಾವಿರಾರು ಮಹಿಳೆಯರ ಬದುಕನ್ನೇ ಬದಲಿಸಿದೆ ಎನ್ನುವುದು ಹೊಸ ವಿಷಯವಲ್ಲ. ಅದು ಹೇಗೆ ಎಂದು ಕಾರಣ ಹುಡುಕುತ್ತಾ ಹೊರಟರೆ, ಕಾರ್ಯಕ್ರಮದ ಹಲವು ಮಗ್ಗುಲುಗಳ ಪರಿಚಯವಾಗುತ್ತದೆ. ಸಂಸಾರವಷ್ಟೇ ಸಾಕು ಎಂದು ತಮ್ಮಷ್ಟಕ್ಕೆ ತಾವಿದ್ದ ಹಲವು ಮಹಿಳೆಯರಿಕೆ ಆತ್ಮವಿಶ್ವಾಸ ತುಂಬಿದ ಈ ಕಾರ್ಯಕ್ರಮ ಅವರಿಂದ ಹಲವು ಸಾಧನೆಗಳನ್ನು ಮಾಡಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಂದೇನಹಳ್ಳಿಯ ಸ್ಫೂರ್ತಿ ಜ್ಞಾನವಿಕಾಸ ಕೇಂದ್ರದ ಸದಸ್ಯೆ ಗೀತಾರಿಗೆ ಎಲ್ಲರಂತೆ ಸ್ವಾವಲಂಬಿಯಾಗಬೇಕೆಂಬ ಕನಸಿತ್ತು. ಆದರೆ ಕನಸನ್ನು ನನಸು ಮಾಡಿಕೊಳ್ಳುವ ದಾರಿ ಮಾತ್ರ ಕಾಣಲಿಲ್ಲ. 2013ರಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಬಂದಾಗ ಸಂಘದ ಸದಸ್ಯೆಯಾದ ಗೀತಾ, ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶವನ್ನು ಅರಿತು ಅದರಿಂದ ಆಕರ್ಷಿತಗೊಂಡರು. ತಮ್ಮ ಊರಿನಲ್ಲಿ ಜ್ಞಾನವಿಕಾಸ ಕೇಂದ್ರವನ್ನು ಆರಂಭಿಸುವುದಾಗಿ ಊರಿನ ಸದಸ್ಯರನ್ನು ಪ್ರೇರೇಪಿಸಿದರು.

ಪ್ರತಿ ತಿಂಗಳು ಜ್ಞಾನವಿಕಾಸ ಕೇಂದ್ರದ ಸಭೆಯಲ್ಲಿ ಭಾಗವಹಿಸಿ, ಜನರೊಂದಿಗೆ ಮಾತನಾಡಲು ಧೈರ್ಯ ಬಂದಮೇಲೆ ತಮ್ಮ ಕನಸಿನ ಬಟ್ಟೆ ವ್ಯಾಪಾರವನ್ನು ಪ್ರಗತಿನಿಧಿಯ ಸಹಾಯದಿಂದ ಆರಂಭಿಸಿದರು. ಬೆಂಗಳೂರಿನಿಂದ ಬಟ್ಟೆ ತಂದು ತಮ್ಮ ವಾಕ್ಚಾತುರ್ಯದ ನೆರವಿನಿಂದ ಸ್ಥಳೀಯ ಮಹಿಳೆಯರಿಗೆ ಮಾರಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಇದರೊಂದಿಗೆ ಜ್ಞಾನವಿಕಾಸ ಗ್ರಂಥಾಲಯವನ್ನೂ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ತಮ್ಮ ವ್ಯಾಪಾರ ವೃದ್ಧಿಗೆ ಜ್ಞಾನವಿಕಾಸವೇ ಪ್ರೇರಣೆ ಎನ್ನುವುದು ಇವರ ಮಾತು.

ಉಪ್ಪಿನಕಾಯಿ ವ್ಯಾಪಾರದಿಂದ ಕುಟುಂಬ ನಿರ್ವಹಣೆ

ಮಹಿಳೆಯೊಬ್ಬರ ಕರ್ತೃತ್ವ ಶಕ್ತಿ ಮತ್ತು ಜ್ಞಾನವಿಕಾಸ ಒದಗಿಸುವ ಅವಕಾಶಗಳಿಗೆ ಇದು ಇನ್ನೊಂದು ಉದಾಹರಣೆ. ಗಂಡನಿಗೂ ಅನಾರೋಗ್ಯ ಭಾಧಿಸಿದ್ದರಿಂದ ಮೂವರು ಮಕ್ಕಳ ಸಂಸಾರವನ್ನು ನಿಭಾಯಿಸಬೇಕಾಗಿದ್ದ ಅನಿವಾರ್ಯ ಸ್ಥಿತಿಯಲ್ಲಿದ್ದವರು ಮಂಗಳೂರು ತಾಲೂಕಿನ ಸೋಮೇಶ್ವರ ವಲಯದಲ್ಲಿದ್ದ ಭವಾನಿ.

ಆದರೆ ಹೇಗಾದರು ಬದುಕಬಲ್ಲೆ ಎಂಬ ಆತ್ಮವಿಶ್ವಾಸ ಅವರನ್ನು ಬಿಟ್ಟಿರಲಿಲ್ಲ. ಶ್ರೀ ಚಂದನ ಸ್ವ ಸಹಾಯ ಸಂಘದ ಸದಸ್ಯೆಯಾದ ಭವಾನಿಯವರು ಕಾಳಿಕಾಂಬ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾಗಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿ ಉಳಿತಾಯ ಕಟ್ಟುವುದರ ಜೊತೆಗೆ ಸಾಲ ತೆಗೆದು ಮರುಪಾವತಿಯ ದಾರಿ ಯಾವುದು ಎಂಬ ಚಿಂತೆ ಅವರನ್ನು ಕಾಡಿತ್ತು. ಇದೇ ವೇಳೆ ಕೆ.ಪಿ.ಟಿ ಅಥವಾ ಕರ್ನಾಟಕ ಪಾಲಿಟೆಕ್ನಿಕ್ ವತಿಯಿಂದ ಉಪ್ಪಿನಕಾಯಿ ತಯಾರಿಸುವ ತರಬೇತಿ ಪಡೆದುಕೊಂಡರು.

ಮೊದಲ ಹಂತದಲ್ಲಿ ರೂ. 3,000 ಆಂತರಿಕ ಸಾಲ ಪಡೆದು ಚಿಕ್ಕ ಡಬ್ಬದಲ್ಲಿ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಲು ಆರಂಭಿಸಿ ಸಧ್ಯ ತಿಂಗಳಿಗೆ ರೂ. 20,000 ದಷ್ಟು ಸಂಪಾದನೆ ಮಾಡುತ್ತಿದ್ದಾರೆ. ಇದು ಮನೆಯ ಖರ್ಚಿನ ಜೊತೆಗೆ ಮಕ್ಕಳ ಶಿಕ್ಷಣಕ್ಕೂ ಸಾಕಾಗುತ್ತಿದೆ. “ಬಾಡಿಗೆ ಮನೆಯಲ್ಲಿ ವಾಸವಾಗಿರುವ ನನಗೆ ತಿಂಗಳ ಬಾಡಿಗೆ ಕೊಟ್ಟು ಖರ್ಚು ನಿಭಾಯಿಸಲು ಸಾಧ್ಯವಾಗಿದೆ. ಅಲ್ಲದೆ 10 ವರ್ಷಗಳಲ್ಲಿ ಸ್ವ-ಸಹಾಯ ಸಂಘದಲ್ಲಿ ರೂ. 6,00,000 ದಷ್ಟು ಪ್ರಗತಿನಿಧಿ ಪಡೆದು ಆರ್ಥಿಕವಾಗಿ ಸುಸ್ಥಿತಿಗೆ ಬಂದಿದ್ದೇನೆ,” ಎನ್ನುತ್ತಾರೆ ಭವಾನಿ.