AgricultureDharmasthalaNews

ಹಲವರ ಮೌನಕ್ರಾಂತಿಯಿಂದ ಸಿರಿಧಾನ್ಯಗಳಿಗೆ ಬೆಲೆ: ಹೇಮಾವತಿ ಹೆಗ್ಗಡೆ

(Photo Credits: Sandeep Dev)
(Photo Credits: Sandeep Dev)

ಫಾಸ್ಟ್ ಫುಡ್ ಯುಗದಲ್ಲಿ ಸಿರಿಧಾನ್ಯಗಳಿಗೆ ಬೆಲೆ ಬಂದಿದೆ. ತಮ್ಮ ಮಕ್ಕಳಿಗೆ ನಾರಿನಾಂಶ, ಖನಿಜಾಂಶಯುಕ್ತ ಸಿರಿಧಾನ್ಯಗಳನ್ನು ಕೊಡಬೇಕು ಎಂಬ ತಿಳುವಳಿಕೆ ತಾಯಂದಿರಿಗೆ ಬಂದಿದೆ. ಅನೇಕ ಸರ್ಕಾರೇತರ ಸಂಸ್ಥೆಗಳ ಹಲವು ವರ್ಷಗಳ ಶ್ರಮ, ಅನೇಕರ ಮೌನ ಕ್ರಾಂತಿಯಿಂದಾಗಿ ಇದು ಸಾಧ್ಯವಾಗಿದೆ, ಎಂದು ಧರ್ಮಸ್ಥಳದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆ ಹೇಳಿದ್ದಾರೆ.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೊಗ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಸಹಕಾರದೊಂದಿಗೆ ಬೆಳ್ತಂಗಡಿಯ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ಸಿರಿ ಧಾನ್ಯಗಳ ಆಹಾರ ಮೇಳ, ಪ್ರದರ್ಶನ ಮತ್ತು ಮಾರಾಟವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಹೇಮಾವತಿ ಹೆಗ್ಗಡೆ, ಈವರೆಗೆ ಬಡವರ ಆಹಾರವಾಗಿದ್ದ ಸಿರಿಧಾನ್ಯಕ್ಕೆ ಬೆಲೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಮೇಳವೆಂಬ ಮಾಹಿತಿ ಕಣಜ

ಕರಾವಳಿ ಪ್ರದೇಶದಲ್ಲಿ ತೀರಾ ಅಪರೂಪವಾಗಿರುವ ಸಿರಿ ಧಾನ್ಯಗಳ ಬಗ್ಗೆ ಬಂದವರಿಗೆ ಮಾಹಿತಿ ನೀಡಲು ಸಕಲ ಏರ್ಪಾಡು ಮಾಡಲಾಗಿತ್ತು. ನವಣೆ, ಸಾವೆ, ಊದಲು, ಹಾರಕ, ಕೊರಲೆ, ಬರಗು ಮತ್ತು ರಾಗಿಯನ್ನು ಆಕರ್ಷಕ ಪ್ಯಾಕ್‍ಗಳಲ್ಲಿ ಮಾರಾಟಕ್ಕಿಡಲಾಗಿತ್ತು. ಧಾನ್ಯಗಳ ಬಗ್ಗೆ ಮಾಹಿತಿ ನೀಡಲು, ಪ್ರತಿ ಧಾನ್ಯದ ಮಾಹಿತಿಯನ್ನು ಬ್ಯಾನರ್‍ಳಲ್ಲಿ ವಿವರಿಸಲಾಗಿತ್ತು. ಸಿರಿ ಗ್ರಾಮೋದ್ಯೋಗ ಸಂಸ್ಥೆ, ಗ್ರಾಮಾಭಿವೃದ್ಧಿ ಸಂಸ್ಥೆ, ದೇಸೀ ಉತ್ಥಾನ ಅಸೋಸಿಯೇಟ್ಸ್ ಹಾಗೂ ಆರ್ಯ ಸ್ಲೋ ಫುಡ್ ಪ್ರೊಡಕ್ಟ್ಸ್, ಸಿರಿಧಾನ್ಯದ ಉತ್ಪನ್ನಗಳು ಹಾಗೂ ಪುಸ್ತಕ ಪ್ರದರ್ಶನ ಆಯೋಜಿಸಿದ್ದವು. ಸಿರಿಧಾನ್ಯಗಳಲ್ಲೇ ರಚಿಸಿದ ರಂಗೋಲಿ ಗಮನ ಸೆಳೆಯಿತು.

ಕಳೆದುಹೋಗುತ್ತಿರುವ ವೈವಿಧ್ಯತೆ

ಭಾರತದ ಆಹಾರ ಧಾನ್ಯಗಳಲ್ಲಿ ಅದ್ಭುತ ವೈವಿಧ್ಯತೆಯಿದೆ. ಮೂರು ಹೊತ್ತಿಗೆ ಬೇರೆ ಬೇರೆ ರೀತಿಯ ಸಿರಿಧಾನ್ಯಗಳನ್ನು ಆಹಾರವಾಗಿ ಬಳಸಬಹುದು. ಬರೀ ನವಣೆಯಲ್ಲೇ 7 ರಿಂದ 8 ಬಗೆಯಿದೆ. ಆದರೆ ಹಸಿರು ಕ್ರಾಂತಿಯ ನಂತರ, ಸರ್ಕಾರವೇ ಬಿತ್ತನೆ ಬೀಜ, ಕೀಟನಾಶಕ ಒದಗಿಸಲು ಆರಂಭಿಸಿದ ಬಳಿಕ ಈ ವೈವಿಧ್ಯತೆ ಕಳೆದುಹೋಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯವರಿಗಂತೂ ಧಾನ್ಯಗಳ ಪರಿಚಯವೇ ಇಲ್ಲದಂತಾಗಿದೆ.

ಚಕ್ರವರ್ತಿ ಟಿಪ್ಪು ಸುಲ್ತಾನ್ ನವಣೆ ಸೇವಿಸುತ್ತಿದ್ದ ಮಂಡ್ಯ ಭಾಗದ ಯುವಕರನ್ನು ತನ್ನ ರಾಜ್ಯದ ರಕ್ಷಣೆಗೆ ನೇಮಿಸಿದ್ದ ಎಂದು ಇತಿಹಾಸ ಹೇಳುತ್ತದೆ. ಕಾಳಿದಾಸರ ಕಾಲದಲ್ಲೂ ಸಿರಿಧಾನ್ಯಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇಂತಹ ಅಮೂಲ್ಯ ಧಾನ್ಯಗಳು ಬರಗಾಲವನ್ನೇ ಕಾಣುತ್ತಿರುವ ಉತ್ತರ ಕರ್ನಾಟಕ ಭಾಗಕ್ಕೆ ಉಪಯೋಗಿಯಾಗಬಲ್ಲವು. “ನಾವು ನಮ್ಮಲ್ಲಿರುವ ಒಳ್ಳೆಯ ಅಂಶಗಳನ್ನು ಮರೆಯುವುದು ಬೇಡ,” ಎಂದು ಅವರು ಎಚ್ಚರಿಸಿದರು.

ಸಂಪನ್ಮೂಲ ವ್ಯಕ್ತಿ ಭದ್ರಾವತಿಯ ಈಶ್ವರನ್ ಪಿ. ತೀರ್ಥ ಭಾರತದಲ್ಲಿ ಸಿರಿಧಾನ್ಯಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಗವಾನ್ ಶ್ರೀರಾಮನು ತನ್ನ ಪ್ರಜೆಗಳಿಗೆ ರಾಗಿ ಅತ್ಯಂತ ಶ್ರೇಷ್ಠ ಧಾನ್ಯ ಹಾಗೂ ಅದನ್ನೇ ಸೇವಿಸುವಂತೆ ಆಜ್ಞಾಪಿಸಿದ್ದ. ವಿಜ್ಞಾನಿಗಳು ಸಿರಿಧಾನ್ಯಗಳೇ ಭಾರತೀಯರ ಮೂಲ ಆಹಾರ ಎಂದು ಅಂದಾಜಿಸುತ್ತಾರೆ. ಚೀನಾ, ಜಪಾನ್, ನೇಪಾಳ ಮೊದಲಾದ ದೇಶಗಳಲ್ಲೂ 4,000 ವರ್ಷಗಳ ಹಿಂದೆಯೇ ಸಿರಿಧಾನ್ಯಗಳು ಇದ್ದ ದಾಖಲೆಗಳು ಸಿಗುತ್ತವೆ, ಎಂದರು.

ಆಹಾ…ವಿಶಿಷ್ಠ ಭಕ್ಷ್ಯಗಳಿವು…

ಸಿರಿಧಾನ್ಯ ಪಾಕ ಪಂಡಿತ ಈಶ್ವರನ್ ಪಿ. ತೀರ್ಥ ನೇತೃತ್ವದ ತಂಡ ಸಿರಿಧಾನ್ಯಗಳು ಆರೋಗ್ಯಕ್ಕೆ ಮಾತ್ರವಲ್ಲ, ನಾಲಗೆಗೂ ಹಿತವಾಗಬಲ್ಲವು ಎಂದು ಸಾಬೀತುಪಡಿಸುವಲ್ಲಿ ಮೊದಲ ದಿನವೇ ಯಶಸ್ವಿಯಾದರು. ಸಿರಿಧಾನ್ಯ ಅರಳಿಟ್ಟು ಪಾನಕದಿಂದ ಹಿಡಿದು ನವಣೆಯ ಮೂರು ತರಹದ ಇಡ್ಲಿಗಳು, ವೆಜಿಟೇಬಲ್ ಪೊಂಗಲ್, ಸಜ್ಜೆ ಬರ್ಫಿ, ನವಣೆ ಬರ್ಫಿ, ಬರಗು ಬರ್ಫಿ, ಬರಗು ಎಳ್ಳಿನ ಉಂಡೆ, ಹಾರಕ ಪಾಯಸ ಹೀಗೆ ಹಲವು ಸಿರಿಧಾನ್ಯ ಭಕ್ಷ್ಯಗಳು ಬಂದವರನ್ನು ಸ್ವಾಗತಿಸಿದವು. ಮೂರು ದಿನದಲ್ಲಿ 38 ಬಗೆಯ ಖಾದ್ಯಗಳನ್ನು ತಯಾರಿಸಲು ಈ ತಂಡ ತಯಾರಾಗಿದೆ.

20,000 ರೈತರಿಂದ ಸಿರಿಧಾನ್ಯ ಬೆಳೆ

ಈ ಮೊದಲು ಮಾತನಾಡಿದ ಸಿರಿ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್, ರೈತರಿಗೆ ಸಿರಿಧಾನ್ಯ ಬೆಳೆಯುವ ಬಗ್ಗೆ ಮಾಹಿತಿ- ಮಾರ್ಗದರ್ಶನ, ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಹೀಗಾದರೆ ಆರೋಗ್ಯವೃದ್ಧಿ, ಉತ್ತಮ ಮಾರುಕಟ್ಟೆ ಒದಗಣೆ ಸಾಧ್ಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ನಿರ್ದೇಶಕ ಮನೋಜ್ ಮಿನೇಜಸ್, ಈ ಬಾರಿ ಪ್ರಯೋಗಾತ್ಮಕವಾಗಿ 20,000 ರೈತರು ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯಲಿದ್ದಾರೆ, ಎಂದು ತಿಳಿಸಿದರು.