DharmasthalaNews

ಧರ್ಮಸ್ಥಳದಲ್ಲಿ ರಾಷ್ಟ್ರೀಯ ಸೇವಾ ಭಾರತಿ ಕಾರ್ಯಾಗಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರ ಅನುಕೂಲಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದರಿಂದಾಗಿ ಗ್ರಾಮೀಣಾಭಿವೃದ್ಧಿಯ ಜೊತೆಗೆ ಜನರಿಗೆ ತಮ್ಮ ಕನಸಿನ ಸುಂದರ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತಿವೆ, ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ನವದೆಹಲಿಯ ರಾಷ್ಟ್ರೀಯ ಸೇವಾ ಭಾರತಿ ಸಂಸ್ಥೆ ‘ವೈಭವ ಶ್ರೀ ಕಾರ್ಯಶಾಲಾ’ ಕಾರ್ಯಕ್ರಮದಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಮೇ 30 ರಿಂದ ಜೂನ್ 1 ರವರೆಗೆ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ರುಡ್‍ಸೆಟ್ ಸಂಸ್ಥೆಯ ಮೂಲಕ ಸ್ವ-ಉದ್ಯೋಗ ತರಬೇತಿ ನೀಡಿ ಲಕ್ಷಾಂತರ ಜನರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿದೆ ಎಂದ ಪೂಜ್ಯರು, ಕ್ಷೇತ್ರದ ಚತುರ್ದಾನ ಪರಂಪರೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಜನರೊಂದಿಗೆ ಕೆಲಸ ಮಾಡುವಾಗ ಅವರ ಕಷ್ಟ ಸುಖಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಿದರೆ ಮಾತ್ರ ಯಶಸ್ಸು ಸಾಧ್ಯ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಸಂಧರ್ಭದಲ್ಲೂ ಜನರ ಸುಸ್ಥಿರತೆಯ ಜೊತೆಗೆ ಕಾರ್ಯಕ್ರಮ ಸುಸ್ಥಿರವಾದರೆ ಮಾತ್ರ ಹೆಚ್ಚು ಜನರನ್ನು ತಲುಪಲು ಸಾಧ್ಯ, ಎಂದು ವಿವರಿಸಿದರು. ಸ್ವ-ಸಹಾಯ ಸಂಘಗಳ ಸಬಲೀಕರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಭಾರತಿ ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಗುರುಶರಣ್ ಪ್ರಸಾದ್, ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ರಾಕೇಶ್ ಜೈನ್, ರಾಷ್ಟ್ರೀಯ ಸಂಯೋಜಕ ಸುಂದರ್ ಲಕ್ಷ್ಮಣ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣಕಾಸು ನಿರ್ದೇಶಕ ಶಾಂತಾರಾಮ್ ಪೈ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳ ಸುಮಾರು 35 ರಾಷ್ಟ್ರೀಯ ಪ್ರಮುಖರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಕಾರ್ಯಾಗಾರದಲ್ಲಿ ಯೋಜನೆಯ ಸಾಮಾಜಿಕ, ಆರ್ಥಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು, ಸ್ವ-ಸಹಾಯ ಸಂಘಗಳು, ಪ್ರಗತಿಬಂಧು ತಂಡಗಳ ಮಾದರಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯನ್ನು ಅಧ್ಯಯನ ಮಾಡಿದರು. ರಾಷ್ಟ್ರೀಯ ಸೇವಾ ಭಾರತಿ ಸಂಸ್ಥೆ ವೈಭವಶ್ರೀ ಎಂಬ ಸ್ವ-ಸಹಾಯ ಸಂಘಗಳನ್ನು ರಚನೆ ಮಾಡುತ್ತಿದ್ದು, ಶ್ರೀ ಕ್ಷೇತ್ರವನ್ನು ಮಾದರಿಯಾಗಿ ತೆಗೆದುಕೊಳ್ಳುವುದಾಗಿ ಹೇಳಿದೆ.