DharmasthalaNews

ಯೋಜನೆಯಿಂದ ಕೊಕ್ಕಡದಲ್ಲಿ ವಿಶ್ವ ಪರಿಸರ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾಮಧೇನು ಗೋಶಾಲೆ ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಕೊಕ್ಕಡ ವಲಯ ಇವರ ಸಹಯೋಗದಲ್ಲಿ ‘ವಿಶ್ವ ಪರಿಸರ ದಿನಾಚರಣೆ- 2017’ ನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಹಳ್ಳಿಂಗೇರಿಯ ಕಾಮಧೇನು ಗೋಶಾಲೆಯಲ್ಲಿ ಜೂನ್ 5 ರಂದು ಆಚರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಗಿಡ ನಾಟಿ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಮಧೇನು ಗೋಶಾಲೆಯ ಎಂಟು ಎಕರೆ ಪ್ರದೇಶದಲ್ಲಿ ಕಾಡು ಬೆಳೆಸಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಪರಿಸರ ದಿನವನ್ನು ಕಳೆದ ಎರಡು ವರ್ಷಗಳಿಂದ ಆಚರಿಸಲಾಗುತ್ತಿದೆ.
ತಮ್ಮ ಉದ್ಘಾಟನಾ ಭಾಷಣದಲ್ಲಿ ಡಾ. ಎಲ್.ಎಚ್. ಮಂಜುನಾಥ್, ಪ್ರಕೃತಿಯ ಬಳಕೆಯಲ್ಲಿ ಮಾನವನ ಸ್ವಾರ್ಥ ಭಾವನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಮನುಷ್ಯ ತನ್ನಂತೆಯೇ ಪ್ರಾಣಿ, ಪಕ್ಷಿಗಳೂ ಈ ನಿಸರ್ಗದ ಭಾಗ, ಅವುಗಳಿದ್ದರೆ ಮಾತ್ರ ತಾನು ಬದುಕಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

“ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ. ಪೂಜ್ಯ ಹೆಗ್ಗಡೆಯವರು ಕಳೆದ 20 ವರ್ಷಗಳಿಂದ ಅನೇಕ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ಇದರ ಫಲವಾಗಿ ಹಲವು ಕಡೆ ಸಾಲು ಮರ, ದೇವರ ಕಾಡು, ಔಷಧಿವನ, ನಾಗಬನ ಮೊದಲಾದವುಗಳನ್ನು ನೋಡಬಹುದಾಗಿದೆ. ಇಂದಿನ ದಿನಗಳಲ್ಲಿ ವನ ಸಂವರ್ಧನೆಯ ಅನಿವಾರ್ಯತೆ ಇದೆ,” ಎಂದರು.

2017-18ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 25,000 ಗಿಡಗಳನ್ನು ವಿತರಣೆ ಮಾಡಲಾಗುವುದು. ಇದರ ಸಂಪೂರ್ಣ ವೆಚ್ಚವನ್ನು ಯೋಜನೆಯೇ ಭರಿಸಲಿದೆ. ಎಲ್ಲಾ ಸದಸ್ಯರು ಇದರ ಪ್ರಯೋಜನ ಪಡೆಯುವಂತೆ ಕಾರ್ಯನಿರ್ವಾಹಕ ನಿರ್ದೇಶಕರು ಮನವಿ ಮಾಡಿಕೊಂಡರು. ಇದರೊಂದಿಗೆ ಗೋಶಾಲೆಯ ಅರಣ್ಯಗಿಡ, ಹಸಿರು ಹುಲ್ಲು, ಗೋ ಅರ್ಕ, ಗೋ ಪಿನಾಯಿಲ್, ಎರೆಗೊಬ್ಬರಗಳ ಪ್ರಯೋಜನ ಪಡೆಯುವಂತೆ ಕೇಳಿಕೊಂಡರು. ಕಾರ್ಯಕ್ರಮದಲ್ಲಿ ಭಾಗವಹಿಸಿದ 250 ಸದಸ್ಯರಿದೆ 350 ವಿವಿಧ ತಳಿಯ ಅರಣ್ಯ ಸಸಿಗಳನ್ನು ವಿತರಿಸಲಾಯಿತು.

ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಜೆ. ಸೆಬಾಸ್ಟಿನ್ ಕೃಷಿಕರು ಗಿಡ ನಾಟಿ ಮಾಡಿ ಅದಕ್ಕೆ ಕಾಳುಮೆಣಸು ಬಳ್ಳಿಗಳನ್ನು ನೆಡುವುದರಿಂದ 3 ವರ್ಷದಲ್ಲಿ ಕೃಷಿ ಮಾಡಿ ಉತ್ತಮ ಲಾಭ ಪಡೆಯಬಹುದು. ಈ ನಿಟ್ಟಿನಲ್ಲಿ ಸರ್ಕಾರವೂ ಹಿಂದುಳಿದ ವರ್ಗದವರಿಗೆ ಎಲ್.ಪಿ.ಜಿ ವಿತರಣೆ ಮಾಡುತ್ತಿದೆ, ಎಂದರು.
ಕೊಕ್ಕಡ ಪಶುಚಿಕಿತ್ಸಾಲಯದ ವೈದ್ಯ ಡಾ. ಟಿ.ಸಿ. ಮಂಜ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ಲಕ್ಷೀನಾರಾಯಣ, ಅರಣ್ಯ ಸಂರಕ್ಷಕ ನಿಸಾರ್, ಗ್ರಾಮ ಪಂಚಾಯತ್ ಸದಸ್ಯರಾದ ಕುಶಾಲಪ್ಪ ಗೌಡ, ಇಬ್ರಾಹಿಂ, ಕರ್ನಾಟಕ ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಚೆನ್ನಪ್ಪಗೌಡ, ಗ್ರಾಮಾಭಿವೃದ್ಧಿ ಯೋಜನೆ ಕೃಷಿ ನಿರ್ದೇಶಕ ಮನೋಜ್ ಮಿನೇಜಸ್, ಯೋಜನಾಧಿಕಾರಿಗಳಾದ ಜಯಂತ್ ಶೆಟ್ಟಿ, ಸುಧೀರ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.