News

ಆಂದೋಲನ ಸ್ವರೂಪ ಪಡೆದ ಬೀಜದುಂಡೆ ತಯಾರಿ

ಜ್ಞಾನವಿಕಾಸ ಕಾರ್ಯಕ್ರಮದ ಆಧ್ಯಕ್ಷೆ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಎಪ್ರಿಲ್ ತಿಂಗಳಲ್ಲಿ ನಡೆದ ಧಾರವಾಡ ಜಿಲ್ಲಾ ಮೇಲ್ವಿಚಾರಕ ಮಟ್ಟದ ಸಭೆಯಲ್ಲಿ ಭಾಗವಹಿಸಿ, ಪರಿಸರ ಉಳಿಸಲು ಬೀಜದುಂಡೆ ಸಿದ್ಧಾಂತ ಪಾಲಿಸುವಂತೆ ತಿಳಿಸಿದ್ದರು. ಹಿಂದಿನ ವರ್ಷದ ಬೆಂಗಳೂರು ಪಾದೇಶಿಕ ವಿಭಾಗದಲ್ಲಿ ಬೀಜದುಂಡೆ ತಯಾರಿಸಿದ ಉದಾಹರಣೆಯನ್ನು ಉಲ್ಲೇಖಿಸಿ, ಈ ಜನೋಪಯೋಗಿ ಕಾರ್ಯವನ್ನು ಜನ ಸಹಭಾಗಿತ್ವದೊಂದಿಗೆ ಕೈಗೊಳ್ಳಲು ಕರೆನೀಡಿದ್ದರು.

ಮಾತೃಶ್ರೀಯವರ ಮಾತುಗಳನ್ನು ಆಸಕ್ತಿಯಿಂದ ಆಲಿಸಿದ ಕಾರ್ಯಕರ್ತರಲ್ಲಿ ಹೊಸ ಸಂಚಲನ ಉಂಟಾಯಿತು. ಧಾರವಾಡ ಜಿಲ್ಲೆಯಲ್ಲಿ 66,000 ಬೀಜದುಂಡೆ ತಯಾರಿಸುವ ಗುರಿಯೂ ಸೇರಿದಂತೆ ಆರು ಜಿಲ್ಲೆಗಳನ್ನೊಳಗೊಂಡ ಧಾರವಾಡ ಪ್ರಾದೇಶಿಕ ವಿಭಾಗದಲ್ಲಿ 3,64,000ಕ್ಕೂ ಅಧಿಕ ಬೀಜದುಂಡೆ ತಯಾರಿಸಿ ಬಿತ್ತನೆ ಮಾಡುವ ಗಟ್ಟಿ ತೀರ್ಮಾನ ಕೈಗೊಳ್ಳಲಾಯಿತು. ಹೇಮಾವತಿ ಹೆಗ್ಗಡೆಯವರ ಆಶಯವನ್ನು ಹೊತ್ತ ವಿವರವಾದ ಪತ್ರವೊಂದನ್ನು ನಿರ್ದೇಶಕರು ಹಾಗೂ ಯೋಜನಾಧಿಕಾರಿಗಳಿಗೆ ರವಾನಿಸಲಾಯಿತು. ದೂರವಾಣಿ ಮೂಲಕವೂ ಚರ್ಚಿಸಿ ವಿಚಾರವನ್ನು ಮನವರಿಕೆ ಮಾಡಿಕೊಡಲಾಯಿತು. ಮೇ ತಿಂಗಳ ಆರಂಭದಿಂದಲೇ ಸಂಘಗಳ ಸದಸ್ಯರಿಗೆ ಬೀಜದುಂಡೆ ತಯಾರಿಯ ವಿಧಾನದ ಬಗ್ಗೆ ಮಾಹಿತಿಯನ್ನು ಒದಗಿಸಲಾಯಿತು.

ಧಾರವಾಡ ಜಿಲ್ಲೆಯಲ್ಲಿ ಆರಂಭಗೊಂಡ ಬೀಜದುಂಡೆ ತಯಾರಿ ಕಾರ್ಯಕ್ರಮ ದಿನಕಳೆದಂತೆ ಇತರ ಜಿಲ್ಲೆಗಳಿಗೂ ಪಸರಿಸಿ ಆಂದೋಲನ ಸ್ವರೂಪ ಪಡೆಯಿತು. ನೋಡನೋಡುತ್ತಿದ್ದಂತೆಯೇ ಲಕ್ಷಾಂತರ ಬೀಜದುಂಡೆಗಳು ತಯಾರಾಗಿ ಗುರಿ ಮೀರಿದ ಸಾಧನೆಗೆ ಮುನ್ನುಡಿ ಬರೆಯಲಾಯಿತು. 3,64,000 ಗುರಿಯನ್ನೂ ಮೀರಿ ಸುಮಾರು 7,00,000 ಬೀಜದುಂಡೆಗಳನ್ನು ತಯಾರಿಸಲಾಯಿತು. ಹುಬ್ಬಳ್ಳಿ ತಾಲೂಕಿನ ಸುಳ್ಳದಲ್ಲಿ ಮೇ 30 ರಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್ ಮಂಜುನಾಥ್‍ರವರು ಬೀಜದುಂಡೆ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದು ಜೂನ್ ತಿಂಗಳ 5 ನೇ ತಾರೀಖಿನಿಂದ ಬೀಜದುಂಡೆಗಳನ್ನು ಆಯ್ದ ಸ್ಥಳಗಳಲ್ಲಿ ಬಿತ್ತುವ ಕೆಲಸ ನಡೆದಿದೆ.

ಕಾರ್ಯಕರ್ತರು, ಸ್ವ-ಸಹಾಯ ಸಂಘಗಳ ಸದಸ್ಯರು ಹಾಗೂ ಪರಿಸರ ಕಾಳಜಿ ಹೊಂದಿದ ಗಣ್ಯರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಉತ್ಸುಕತೆ ಪ್ರತಿ ಗ್ರಾಮಗಳಲ್ಲೂ ಇದೆ. ಅಧಿಕ ಜೀವಿತಾವಧಿ ಇರುವ ಹಾಗೂ ಕಡಿಮೆ ನೀರಿನ ಸನ್ನಿವೇಶಕೆ ಒಗ್ಗಿಕೊಳ್ಳುವ ಬೀಜಗಳಾದ ಕಹಿಬೇವು, ಗರುಡ, ಹೊಂಗೆ, ಮಾವು, ಹುಣಸೆ, ಮೊದಲಾದವುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ದೃಶ್ಯ ಹಾಗೂ ಪತ್ರಿಕಾ ಮಾಧ್ಯಮದವರು, ಮಠಾಧೀಶರು, ನಾಡಿನ ಗಣ್ಯರು ಪರಿಸರ ಕಾಳಜಿಯ ಈ ಕಾರ್ಯಕ್ಕೆಪೂರ್ಣ ಬೆಂಬಲ ನೀಡಿರುತ್ತಾರೆ. ಪ್ರಸ್ತಕ ಸಾಲಿನ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದ ಆಧಾರದಲ್ಲಿ ಮುಂದಿನ ವರ್ಷಗಳಲ್ಲೂ ಪರಿಸರ ಸಂರಕ್ಷಣೆಯ ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ಮುನ್ನಡೆಸಲಾಗುವುದು.