News

ವಿಶ್ವ ಪರಿಸರ ದಿನಾಚರಣೆ ಮತ್ತು ಬೀಜದುಂಡೆ ತಯಾರಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವಭಾರತಿ ಜ್ಞಾನವಿಕಾಸ ಕೇಂದ್ರ, ಒಕ್ಕೂಟ ಮತ್ತು ಸಿದ್ದಗಂಗಾ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ವಲಯದ ಕಲ್ಲೂರು ಕಾರ್ಯಕ್ಷೇತ್ರದಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆ ಮತ್ತು ಬೀಜದುಂಡೆ ತಯಾರಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಹರೀಶ್ ಆರ್. ಎಸ್, ಪರಿಸರ ರಕ್ಷಣೆಯೇ ನಮ್ಮ ಕರ್ತವ್ಯವೆಂದು ಹೇಳಿದರು. ನಮ್ಮ ಮನೆಯ ಆವರಣ, ಶಾಲೆಯ ಪರಿಸರ, ರಸ್ತೆ ಬದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ. ಶೌಚಾಲಯ ನಿರ್ಮಾಣ ಮತ್ತು ಬಳಕೆ ನಮ್ಮ ಆಧ್ಯ ಕರ್ತವ್ಯ, ಎಂದರು.

ಬೀಜದುಂಡೆ ತಯಾರಿಸುವ ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಪದಾಧಿಕಾರಿಗಳು, ಕೇಂದ್ರದ ಸದಸ್ಯರು, ಶಾಲಾ ಮಕ್ಕಳು, ಸ್ವ- ಸಹಾಯ ಸಂಘದ ಸದಸ್ಯರು, ಸ್ಥಳೀಯವಾಗಿ ದೊರೆಯುವ ಬೇವಿನ ಬೀಜ, ಮಾವು, ಹೊಂಗೆ, ನೇರಳೆಬೀಜಗಳ ಸುಮರು 1,000 ಬೀಜದುಂಡೆಗಳನ್ನು ತಯಾರಿಸಿದರು. ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲಾ ಮುಖ್ಯೋಪಧ್ಯಾಯ ಶಶಿಧರ್, ಎಲ್ಲರೂ ಒಂದೊಂದು ಗಿಡ ಬೆಳೆಸಿದರೆ ಅದುವೇ ನಾವು ಪ್ರಕೃತಿಗೆ ನೀಡುವ ದೊಡ್ಡ ಕೊಡುಗೆ. ಹೀಗಾಗಿ ಈ ದಿನ ಸಸಿ ಬೆಳೆಸುವುದಾಗಿ ಪ್ರತಿಜ್ಞೆ ಮಾಡೋಣ, ಎಂದರು.

ವಲಯ ಮೇಲ್ವಿಚಾರಕ ಸಿದ್ದಗಂಗಯ್ಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರತಿಭಾ, ಸೇವಾಪ್ರತಿನಿಧಿ ಉಷಾ, ಒಕ್ಕೂಟದ ಅಧ್ಯಕ್ಷ ಸಿದ್ದಗಂಗಮ್ಮ, ಒಕ್ಕೂಟದ ಪದಾಧಿಕಾರಿಗಳು, ಸ್ವ-ಸಹಾಯ ಸಂಘ ಮತ್ತು ಜ್ಞಾನವಿಕಾಸ ಕೇಂದ್ರದ ಸದಸ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ಮಕ್ಕಳು ಭಾಗವಹಿಸಿದ್ದರು.

ಕೃಷ್ಣರಾಜಪೇಟೆಯಲ್ಲಿ ಪರಿಸರ ದಿನಾಚರಣೆ

ಕೃಷ್ಣರಾಜಪೇಟೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷ್ಣರಾಜಪೇಟೆ ವಲಯದ, ವನಮಹೋತ್ಸವ ಮತ್ತು ಪರಿಸರ ದಿನಾಚರಣೆ- 2017- 18 ನ್ನು ಕೃಷ್ಣರಾಜಪೇಟೆಯ ಸರಕಾರಿ ಮಹಿಳಾ ಕಾಲೇಜು ಮತ್ತು ಪ್ರೌಢಶಾಲಾ ಆವರಣದಲ್ಲಿ ಜೂನ್ 5 ರಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಆರ್. ಪೇಟೆ ಸರಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕ ಪುಳುಗರಯ್ಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಜವರೇಗೌಡ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು. ಪ್ಲಾಸ್ಟಿಕ್‍ನ ಅಪಾಯಗಳನ್ನು ವಿವರಿಸಿ ಅದರ ಬಳಕೆಯನ್ನು ಕಡಿಮೆಗೊಳಿಸುವಂತೆ ಸಲಹೆ ನೀಡಲಾಯಿತು. ಅರಣ್ಯ, ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆದಿದ್ದು ವಿಶೇಷ. ಕಾರ್ಯಕ್ರಮದಿಂದ ಸ್ವ-ಸಹಾಯ ಸಂಘದ ಸದಸ್ಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಪರಿಸರ ರಕ್ಷಣೆಯ ಬಗ್ಗೆ ಜವಾಬ್ದಾರಿ ಮೂಡಿದೆ.