News

ರಾಂಪುರದಲ್ಲಿ ವಿಶ್ವ ತಂಬಾಕು ದಿನಾಚರಣೆ

 

ವಿಶ್ವ ಆರೋಗ್ಯ ಇಲಾಖೆಯ ಪ್ರಕಾರ ತಂಬಾಕಿನ ಚಟಕ್ಕೆ ಪ್ರತಿ ವರ್ಷ 6 ಮಿಲಿಯನ್ ಜನರು ಬಲಿಯಾಗುತ್ತಿದ್ದಾರೆ. ಅದರಲ್ಲಿಯೂ ಧೂಮಾಪಾನಕ್ಕೆ ಒಗ್ಗಿಕೊಂಡ ಶೇ. 90 ರಷ್ಟು ಜನ ಒಂದಿಲ್ಲೊಂದು ಖಾಯಿಲೆಗೆ ತುತ್ತಾಗುತ್ತಾರೆ. ಇದನ್ನೆಲ್ಲಾ ಮೆಲುಕು ಹಾಕುವ ಸಮಯ ಬಂದಿದ್ದು ನಂಜನಗೂಡಿನ ಹುಲ್ಲಹಳ್ಳಿ ವಲಯದ ರಾಂಪುರ ಕಾರ್ಯಕ್ಷೇತ್ರದಲ್ಲಿ ನಡೆದ ವಿಶ್ವ ತಂಬಾಕು ದಿನಾಚರಣೆಯಲ್ಲಿ.

ಶ್ರೀ ಭಾಗೀರಥಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರ ಸಹಯೋಗದಲ್ಲಿ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ ಆಯೋಜಿಸಿತ್ತು.

ತಂಬಾಕು ಏಕೆ ಬೇಡ?

ತಂಬಾಕಿನ ವಸ್ತುಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಸಂಬಂಧಿತ ಖಾಯಿಲೆಗಳು ಹತ್ತಿರವಾಗುತ್ತವೆ. ಧೂಮಪಾನ, ಮದ್ಯಪಾನ, ಬೀಡಿ, ಸಿಗರೇಟ್ ಮುಂತಾದವುಗಳನ್ನು ಸೇವಿಸಲು ಆರಂಭಿಸಿದ ಒಂದೇ ವರ್ಷದಲ್ಲಿ ಹೃದಯ ಸಂಬಂಧಿತ ಖಾಯಿಲೆ ಅಂಟಿಕೊಳ್ಳುವ ಸಾಧ್ಯತೆಯಿದೆ. ಐದು ವರ್ಷಗಳ ನಂತರ ಕ್ಯಾನ್ಸರ್‍ನಂತಹ ಭಯಂಕರ ಖಾಯಿಲೆಯಿಂದ ಜನರು ಬಳಲುತ್ತಾರೆ.

ಧೂಮಪಾನಿಗಳು ಅವರು ಮಾತ್ರ ಚಟಕ್ಕೆ ಬಲಿಯಾಗುವುದಲ್ಲದೆ, ಅವರ ಕುಟುಂಬ, ಸ್ನೇಹಿತರ ಆರೋಗ್ಯವನ್ನೂ ಆಪೋಷನ ತೆಗೆದುಕೊಳ್ಳುತ್ತಾರೆ. ಧೂಮಪಾನದಿಂದ ಹಣದ ತಾಪತ್ರಯ ಹೆಚ್ಚಾಗಿ ಸಂಸಾರದ ಸಂಕಷ್ಟ ಹೆಚ್ಚಾಗುತ್ತದೆ. ಜಾಗೃತರು ಸರ್ಕಾರ ತಂಬಾಕನ್ನು ನಿಷೇಧಿಸಲಿ ಎಂದು ಕಾಯುವ ಬದಲು ತಾವೇ ಅದರಿಂದ ದೂರ ಸರಿಯುತ್ತಾರೆ.

ತಂಬಾಕು ಸೇವನೆಯಿಂದ ವಿಶ್ವದಲ್ಲಿ ಪ್ರತಿ 8 ಸೆಕೆಂಡಿಗೆ ಒಬ್ಬ ಮೃತನಾಗುತ್ತಾನೆ. ಅದಕ್ಕಾಗಿಯೇ ಮೇ 31 ರಂದು ತಂಬಾಕು ವಿರೋಧಿ ದಿನ ಆಚರಿಸಲಾಗುತ್ತದೆ. ಇಷ್ಟಾದರೂ ತಂಬಾಕು ಸೇವನೆ ತಹಬದಿಗೆ ಬಂದಿಲ್ಲ. ಇದಕ್ಕೂ ಹೆಚ್ಚಾಗಿ ತಂಬಾಕು ಉತ್ಪಾದನೆಯಲ್ಲೂ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ ಹಾಗೂ ತಂಬಾಕು ವ್ಯಸನಿಗಳನ್ನು ಹೊಂದಿರುವ 2ನೆ ಅತೀ ದೊಡ್ಡ ದೇಶವಾಗಿದೆ. ಇನ್ನು ತಂಬಾಕು ರಫ್ತಿನಲ್ಲಿ ಭಾರತಕ್ಕೆ 5ನೇ ಸ್ಥಾನ.

ಭಾರತ ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ನಿಯಂತ್ರಣ ಒಪ್ಪಂದದಂತೆ 2020 ರ ಒಳಗಾಗಿ ಶೇ.80 ರಷ್ಟು ತಂಬಾಕು ಬೆಳೆ ಕಡಿತಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಹಲವೆಡೆ ರೈತರು ಆಮಿಷಗಳಿಗೆ ಬಲಿಯಾಗಿ ತಂಬಾಕು ಬೆಳೆಯುತ್ತಿದ್ದಾರೆ. ಆದರೆ ರೈತರು ತಂಬಾಕು ಬೆಳೆದರೆ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ. ಫಲವತ್ತತೆ ಕುಸಿದಂತೆ ಬೆಳೆಯ ಗುಣಮಟ್ಟ ಕ್ಷೀಣಿಸುತ್ತದೆ.

ರೈತರು, ಜನರ ಸಹಕಾರವಿದ್ದರೆ ಮಾತ್ರ ಸರ್ಕಾರದ ತಂಬಾಕು ವಿರೋಧಿ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಭೂತಾಯಿ ಅಮೃತವನ್ನು ಬಿತ್ತಿದರೆ ಅಮೃತವನ್ನು ಕೊಡುತ್ತಾಳೆ, ವಿಷವನ್ನು ಬಿತ್ತಿದರೆ ವಿಷವನ್ನೇ ಕೊಡುತ್ತಾಳೆ. ವಿಷಬೀಜವನ್ನು ಬಿತ್ತಿ ಸಂಸಾರಗಳ ಕಷ್ಟಗಳಿಗೆ ಕಾರಣೀಭೂತರಾಗುವುದು ಬೇಡ, ಜೊತೆಗೆ ನಮ್ಮ ಸಂಸಾರದ ಆರೋಗ್ಯವನ್ನೂ ಕಾಪಾಡೋಣ, ಎಂಬ ಸಂಪನ್ಮೂಲ ವ್ಯಕ್ತಿಗಳ ಮಾತು ಭಾಗವಹಿಸಿದವರ ಕಣ್ಣು ತೆರೆಸಿದಂತಿತ್ತು.