Agriculturesuccess storyWomen Empowerment

ಹೈನುಗಾರಿಕೆ: ಸ್ಮಶಾನವೂ ಸೈ, ನಗರಕ್ಕೂ ಜೈ

ಧಾರವಾಡದ ಮಹಾಂತನಗರದ ಶಿವಕ್ಕ ಕಟ್ಟೂರಮಠರವರ ಮನೆ ಇರೋದು ಸ್ಮಶಾನದ ಆವರಣದಲ್ಲಿ. ಕುಟುಂಬದ ಇತರರು ಮಾಡುವುದು ಶವದಹನದ ಕಾಯಕವನ್ನೇ. ಸ್ಮಶಾನ ಎಂದರೆ ಭೂತ, ಪ್ರೇತಗಳು ಓಡಾಡುವ ಜಾಗ ಎಂದು ಬೆಚ್ಚಿ ಬೀಳುವವರೇ ಹೆಚ್ಚು, ಇಂತದ್ದರಲ್ಲಿ ಶಿವಕ್ಕ ಸ್ಮಶಾನದಲ್ಲಿಯೇ ಮನೆ ಮಾಡಿಕೊಂಡದ್ದು ಅಲ್ಲದೆ, ಹೈನುಗಾರಿಕೆಯನ್ನೂ ನಡೆಸಿದ್ದಾರೆ!

ಶಿವಕ್ಕರ ಯಶೋಗಾಥೆ ಆರಂಭವಾಗಿದ್ದು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಬರುವ ಮಂಜುನಾಥ ಸ್ವ-ಸಹಾಯ ಸಂಘವನ್ನು ಸೇರಿದ ನಂತರ. ಸಂಘದ ಕ್ರಿಯಾಶೀಲ ಸದಸ್ಯರಾಗಿರುವ ಶಿವಕ್ಕ ಕಟ್ಟೂರಮಠರವರು, ಸ್ಮಶಾನದ ಆವರಣ ಗೋಡೆಗೆ ತಾಗಿ ಜಾನುವಾರು ಕೊಟ್ಟಿಗೆಯನ್ನು ಸರಳ ಮಾದರಿಯಲ್ಲಿ ಗಾಳಿ ಬೆಳಕು ಓಡಾಡುವಂತೆ ರಚಿಸಿಕೊಂಡಿದ್ದಾರೆ. ಹತ್ತಕ್ಕೂ ಅಧಿಕ ಮಿಶ್ರ ತಳಿ ಜಾನುವಾರುಗಳನ್ನು ಸಾಕುವ ಮೂಲಕ ದಿನಕ್ಕೆ 150 ಲೀಟರ್‍ಗೂ ಅಧಿಕ ಪ್ರಮಾಣದ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ.

ಹೈನುಗಾರಿಕೆಯಿಂದ ಇವರು ಗಳಿಸುವ ಸರಾಸರಿ ಅದಾಯ ಸುಮಾರು ರೂ. 4,500. ಎಲ್ಲಾ ನಿರ್ವಹಣಾ ವೆಚ್ಚ ಕಳೆದು ಪ್ರತಿದಿನ ಇವರು ಗಳಿಸುತ್ತಿರುವ ನಿವ್ವಳ ಆದಾಯ ರೂ.1,000, ಇದು ಇವರ ಯಶಸ್ಸಿಗೆ ಹಿಡಿದ ಕೈಗನ್ನಡಿ. ಸ್ಮಶಾನದ ಒಳಗೇ ಹುಲ್ಲು ಬೆಳೆಸಿರುವುದು ನಿರ್ವಹಣಾ ವೆಚ್ಚ ಕಡಿಮೆಯಾಗಲು ಪ್ರಮುಖ ಕಾರಣ. ಹೈನುಗಾರಿಕೆಯ ಅಭಿವೃದ್ಧಿಗೆ ತಾನು ಸದಸ್ಯತ್ವ ಹೊಂದಿದ ಮಂಜುನಾಥ ಸ್ವ-ಸಹಾಯ ಸಂಘದಿಂದ ಅಗತ್ಯ ಪ್ರಮಾಣದ ಸದಸ್ಯತ್ವ ಪಡೆದು ಸಧ್ವಿನಿಯೋಗಪಡಿಸಿಕೊಂಡಿದ್ದಾರೆ. ಜೊತೆಗೆ ಬಾಲ್ಯದಿಂದಲೇ ಹೈನುಗಾರಿಕೆಯ ಕುರಿತು ಸಂಪಾದಿಸಿದ್ದ ಜ್ಞಾನ ಇವರನ್ನು ಯಶಸ್ಸಿನತ್ತ ಕೈಹಿಡಿದು ನಡೆಸಿದೆ.

ನಗರದಲ್ಲಿ ಹೈನೋದ್ಯಮ

ಬೈಲಹೊಂಗಲದ ವಿದ್ಯಾನಗರದ ನಿವಾಸಿ ಸರಳ ಬೂದಿಹಾಳ ಅವರಿಗೆ ಹೈನುಗಾರಿಕೆಯ ಬಗ್ಗೆ ಆಸಕ್ತಿಯೇನೋ ಇತ್ತು. ಆದರೆ ನಗರದಲ್ಲಿದ್ದುಕೊಂಡು ಹೈನುಗಾರಿಕೆ ಮಾಡುವುದು ದೊಡ್ಡ ಸವಾಲಾಗಿತ್ತು. ಆದರೆ ಧೃತಿಗೆಡದೆ, ತರಬೇತಿ ಪಡೆದು ಹೆಚ್ಚಿನ ಮಾಹಿತಿ ಕಲೆಹಾಕಿ ಹೈನೋದ್ಯಮ ಆರಂಭಿಸುವ ಮೂಲಕ ನಗರದ ಮಂದಿ ಬೆರಗಾಗುವಂತೆ ಮಾಡಿದ್ದಾರೆ.

ಸರಳ ಬೂದಿಹಾಳ ತಮ್ಮ ಕನಸಿಗೆ ಏಣಿ ಇಡಲಾರಂಭಿಸಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪರ್ಕಕ್ಕೆ ಬಂದ ನಂತರ. ಯೋಜನೆಯ ಮಾಹಿತಿ ಪಡೆದು ಸಿದ್ದಿವಿನಾಯಕ ಸಂಘ ಸೇರಿಕೊಂಡ ಇವರು, ಗ್ರಾಮಾಭಿವೃದ್ಧಿ ಯೋಜನೆಯ ತಾಂತ್ರಿಕ ವಿಭಾಗದ ಮೂಲಕ ತರಬೇತಿ ಪಡೆದುಕೊಂಡರು. ವ್ಯವಸ್ಥಿತವಾದ ಹೈನುಗಾರಿಕೆಯನ್ನು ಕೈಗೊಳ್ಳುವ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಅಧ್ಯಯನದ ಮೂಲಕ ಸಂಗ್ರಹಿಸಿದರು. ದೊರೆತ ಮಾಹಿತಿ ವ್ಯರ್ಥವಾಗದಂತೆ ಹೈನುಗಾರಿಕೆಯನ್ನು ಆರಂಭಿಸಿಯೇ ಬಿಟ್ಟರು.

ಇವರು ತಾವು ಸದಸ್ಯತ್ವ ಹೊಂದಿದ ಸಂಘಗಳಿಂದ ವಿವಿಧ ಹಂತಗಳಲ್ಲಿ ಎರಡು ಲಕ್ಷ ರೂಪಾಯಿಗೂ ಅಧಿಕ ಪ್ರಗತಿನಿಧಿ ಪಡೆದುಕೊಂಡು ಸ್ವ-ಉದ್ಯೋಗದಲ್ಲಿ ಯಶಸ್ಸು ಸಾಧಿಸಿದ್ದಾರೆ. ಪ್ರಸ್ತುತ ಇವರು ಒಂಭತ್ತು ಮುರಾ ಜಾತಿಯ ಎಮ್ಮೆಗಳ ಮಾಲಕಿ. ಮುಂಜಾನೆಯಿಂದ ಇರುಳವರೆಗೂ ಎಮ್ಮೆಗಳ ಆರೈಕೆಯಲ್ಲಿ ನಿರತರಾಗಿರುವ ಇವರು, ಜೀವನದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಪ್ರತಿನಿತ್ಯ 45 ರಿಂದ 60 ಲೀಟರ್ ಹಾಲು ಹಿಂಡಿ ಗುಣಮಟ್ಟವನ್ನು ಕಾಯ್ದುಕೊಂಡು, ಲೀಟರ್‍ಗೆ ನಲ್ವತ್ತು ರೂಪಾಯಿಯಂತೆ ಸ್ಥಳೀಯ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಗುಣಮಟ್ಟದ ಖಾತ್ರಿಯಿಂದಾಗಿ, ಮಾರುಕಟ್ಟೆಯ ವಿಚಾರದಲ್ಲೂ ಇವರಿಗೆ ಯಾವುದೇ ಸವಾಲುಗಳು ಎದುರಾಗಿಲ್ಲ ಎನ್ನುವುದು ಉಲ್ಲೇಖನೀಯ. ಇವರು ಸರಾಸರಿ ದಿನದ ಆದಾಯ ರೂ. 2000 ಕ್ಕೆ ಕಡಿಮೆಯಿಲ್ಲದಂತೆ ನೋಡಿಕೊಳ್ಳುತ್ತಾರೆ. ಎಲ್ಲಾ ಖರ್ಚುವೆಚ್ಚಗಳನ್ನು ಬಿಟ್ಟು ತಿಂಗಳಿಗೆ ಇಪ್ಪತ್ತು ಸಾವಿರ ಲಾಭ ಗಳಿಸುತ್ತಾರೆ. ಇತರ ಸ್ವ-ಸಹಾಯ ಸಂಘಗಳ ಸದಸ್ಯರೂ ಇವರ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಘಟನೆಯ ಮೂಲಕ ಆರ್ಥಿಕ ಸಬಲೀಕರಣ ಸಾಧ್ಯ ಎಂಬುದಕ್ಕೆ ಇವರೊಂದು ಉತ್ತಮ ಉದಾಹರಣೆ.