ಯೋಗದಲ್ಲಿ ಕಳೆದ 25 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಸಕ್ರಿಯವಾಗಿರುವ ಧರ್ಮಸ್ಥಳ ಈಗ ಮಹಾ ಯೋಗ ಹಬ್ಬಕ್ಕೆ ಸಾಕ್ಷಿಯಾಗಲಿದೆ. ಶ್ರೀ ಕ್ಷೇತ್ರದಲ್ಲಿ ನವೆಂಬರ್ 21 ರಿಂದ 24 ರವರೆಗೆ ಅಂತಾರಾಷ್ಟ್ರೀಯ ಯೋಗ ಹಬ್ಬ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಗಳ ನೇತೃತ್ವದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಬುಧವಾರ ನಡೆದ ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿಗಳು, ಈ ಉತ್ಸವ ಅಂತಾರಾಷ್ಟ್ರೀಯ ಯೋಗ ಪಟುಗಳು ಹಾಗೂ ನಮ್ಮ ದೇಶದ ಯೋಗ ಸಾಧಕರ ಸಂಗಮಕ್ಕೆ ಸಾಕ್ಷಿಯಾಗಲಿದೆ. ಇದು ಭಾರತದ ಯೋಗ ಸಂದೇಶವನ್ನು ವಿಶ್ವಕ್ಕೆ ಸಾರಲಿದೆ ಎಂದರು.
ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಯೋಗ ದಿನದ ಸಂದೇಶ ನೀಡಿದ ಧರ್ಮಾಧಿಕಾರಿಗಳು, ಆರೋಗ್ಯವನ್ನು ಆನ್ಲೈನ್ನಲ್ಲಿ ಖರೀದಿಸಲು ಸಾಧ್ಯವಿಲ್ಲ. ದೇಹ, ಮನಸ್ಸನ್ನು ಆರೋಗ್ಯವಾಗಿಡುವ ಜೊತೆಗೆ ಆಧ್ಯಾತ್ಮಿಕತೆಯ ಕಡೆಗೂ ನಮ್ಮ ಗಮನವಿರಬೇಕು. ಇಂದ್ರಿಯಗಳ ಮೇಲಿನ ನಿಯಂತ್ರಣವಿದ್ದರಷ್ಟೆ ಇದನ್ನು ಸಾಧಿಸಲು ಸಾಧ್ಯ. ಯೋಗವನ್ನೇ ಬಳಸಿ ದೇಶವನ್ನು ಮಧುಮೇಹ ಮುಕ್ತ, ರಕ್ತದೊತ್ತಡ ಮುಕ್ತ ಮಾಡಲು ಕೇಂದ್ರ ಸರಕಾರ ಹೊರಟಿರುವುದು ಸಂತಸದ ವಿಷಯ, ಎಂದರು. “ಶ್ರೀ ಕ್ಷೇತ್ರದಲ್ಲಿ 25 ವರ್ಷಗಳ ಹಿಂದಯೇ ಯೋಗಾಭ್ಯಾಸ ಆರಂಭಿಸಲಾಗಿತ್ತು. ಆಗಲೇ 2500 ಅಧ್ಯಾಪಕರಿಗೆ ಯೋಗ ತರಬೇತಿ ನೀಡಲಾಗಿತ್ತು. ಕೇಂದ್ರ ಸರ್ಕಾರದ ಬೆಂಬಲದಿಂದ ನಮ್ಮ ಯೋಜನೆಗಳನ್ನು ವಿಸ್ತರಿಸಲು ಸಾಧ್ಯವಾಗಿದೆ,” ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್, ಕೆಲಸ ಮತ್ತು ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಯೋಗ ನೆರವಾಗುತ್ತದೆ ಎಂದರು. ನಿರಂತರ ಯೋಗ ಮಾನಸಿಕ, ದೈಹಿಕ ಆರೋಗ್ಯಕ್ಕೆ ಅಗತ್ಯ. ಶ್ರೀ ಕ್ಷೇತ್ರ ಯೋಗವನ್ನು ಪ್ರತಿ ಹಳ್ಳಿಗಳಿಗೆ, ಪ್ರತಿ ಮನೆಗಳಿಗೆ ತಲುಪಿಸಲು ಕಾರ್ಯಕ್ರಮ ರೂಪಿಸುತ್ತಿರುವುದು ಸಂತೋಷದ ವಿಚಾರ, ಎಂದರು.
ಅತಿಥಿಯಾಗಿ ಭಾಗವಹಿಸಿದ ಕೆನರಾ ಬ್ಯಾಂಕ್ ಮುಖ್ಯ ಕಛೇರಿ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ರವೀಂದ್ರ ಭಂಡಾರಿ, ಶ್ರೀ ಕ್ಷೇತ್ರ ಯೋಗಕ್ಕೆ ನೀಡುತ್ತಿರುವ ಪ್ರೋತ್ಸಾಹ, ಅದರಲ್ಲೂ ಮಕ್ಕಳಲ್ಲಿ ಯೋಗದ ಬಗ್ಗೆ ಮೂಡಿಸುವ ಉತ್ಸಾಹ ಶ್ಲಾಘನೀಯ ಎಂದರು.
ರಾಜೀವ್ ಗಾಂಧೀ ಆರೋಗ್ಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಬಿ. ವಸಂತ್ ಶೆಟ್ಟಿ, ಧರ್ಮಾಧಿಕಾರಿಗಳ ಸಮಾಜಕಾರ್ಯವನ್ನು ಶ್ಲಾಘಿಸಿದರು. ಅದರಲ್ಲೂ ವಿಶೇಷವಾಗಿ ಅವರು ಡಾ. ಹೆಗ್ಗಡೆ, ಆರೋಗ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಪ್ರಶಂಸಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ಪ್ರಾಂತೀಯ ನಿರ್ದೇಶಕ ಅರುಣ್ ಪೂಜಾರ್, ಪ್ರತಿಯೊಬ್ಬನ ವ್ಯಕ್ತಿತ್ವ ರೂಪಿಸುವುದೇ ಎನ್ಎಸ್ಎಸ್ನ ಆಧ್ಯತೆ. ಇಂದಿನ ಯುವಕರು ಬೇರೆ ದೇಶಗೆಳೆಡೆಗೆ ನೋಡದೆ ತಾವೇ ಮೌಲ್ಯಯುತ, ಅರೋಗ್ಯಕರ ಜೀವನ ರೂಪಿಸಿಕೊಳ್ಳಬೇಕು. ಆರೋಗ್ಯಕರ ಜೀವನದಿಂದಷ್ಟೇ, ಆರೋಗ್ಯಕರ ದೇಶ ನಿರ್ಮಿಸಲು ಸಾಧ್ಯ. ಯೋಗ ಇದಕ್ಕೊಂದು ಅತ್ಯಂತ ಸರಳ ಸಾಧನ, ಎಂದರು.
ಒಂದು ಗಂಟೆ ಯೋಗಾಭ್ಯಾಸ. . .
ಇದಕ್ಕೂ ಮೊದಲು ಸುಮಾರು ಒಂದು ಗಂಟೆ ಕಾಲ ನಡೆದ ಯೋಗಾಭ್ಯಾಸದಲ್ಲಿ ಮಕ್ಕಳು, ಮುದುಕರು ಎನ್ನದೆ ಸಾವಿರಾರು ಯೋಗಾಭ್ಯಾಸಿಗಳು ಪಾಲ್ಗೊಂಡರು. ಸಡಿಲ ಚಾಲನಾ ಕ್ರಿಯೆಗಳು, ನಿಂತು, ಕುಳಿತು ಹಾಗೂ ಹೊಟ್ಟೆಯ ಮೇಲೆ ಮಲಗಿ ಮಾಡುವ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು. ನಾಲ್ಕು ಬಗೆಯ ಪ್ರಾಣಾಯಾಮದ ನಂತರ ಶಾಂತಿಮಂತ್ರದೊಂದಿಗೆ ಯೋಗ ಪ್ರದರ್ಶನ ಮುಗಿಸಲಾಯಿತು. ಪಾಲ್ಗೊಂಡವರ ಬಿಳಿ ಬಣ್ಣದ ಟೀ ಶರ್ಟ್, ಸಭಾಭವನದ ಸುತ್ತಲೂ ಇರಿಸಲಾಗಿದ್ದ ಯೋಗದ ವಿವಿಧ ಭಂಗಿಗಳ ಚಾರ್ಟ್ಗಳು ಗಮನ ಸೆಳೆದವು. ಇದೇ ವೇಳೆ ರಾಜ್ಯದ ವಿವಿದೆಡೆ ಶಾಲಾ ಕಾಲೇಜುಗಳಲ್ಲಿ ಯೋಗಾಭ್ಯಾಸ ನಡೆಸಲಾಯಿತು. ಇದರೊಂದಿಗೆ 5 ಜಿಲ್ಲೆಗಳ 10 ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ನಿರ್ದೇಶನದಂತೆ ಒಂದು ತಿಂಗಳ ಕಾಲ ನಡೆದ ಯೋಗ ಕ್ಯಾಂಪ್ಗೆ ತೆರೆ ಬಿತ್ತು.
ಶಾಂತಿವನ ಟ್ರಸ್ಟ್ನ ಟ್ರಸ್ಟಿ ಹೇಮಾವತಿ ಹೆಗ್ಗಡೆ, ಶ್ರೀ ಧ. ಮಂ. ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ.ಬಿ. ಯಶೋವರ್ಮ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್, ಎಸ್.ಡಿ.ಎಂ.ಸಿ.ಎನ್.ವೈ. ಎಸ್ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸಮಾರಂಭದಲ್ಲಿ ಭಾಗವಹಿಸಿದ್ದರು.