AgricultureNewsTraining

ಕೃಷಿ ಸ್ವ-ಉದ್ಯೋಗ ವಿಚಾರಸಂಕಿರಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾವರ/ ಭಟ್ಕಳ ವಲಯದ ನೇತೃತ್ವದಲ್ಲಿ ಕೃಷಿಯಲ್ಲಿ ಯಂತ್ರಗಳ ಬಳಕೆ ಮತ್ತು ಇಲಾಖಾ ಸೌಲಭ್ಯಗಳ ಕುರಿತ ಕೃಷಿ ಸ್ವ-ಉದ್ಯೋಗ ವಿಚಾರಗೋಷ್ಠಿ ಉತ್ತರಕೊಪ್ಪದ ವಂದಲ್ಸ್ ವನವಾಸಿ ಕಲ್ಯಾಣದಲ್ಲಿ ಜೂನ್ 2 ರಂದು ನಡೆಯಿತು.

ಜಿಲ್ಲಾ ಪಂಚಾಯತ್ ಸದಸ್ಯೆ ನಾಗಮ್ಮ ಮಾಸ್ತಿಗೊಂಡ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗೇಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಎಮ್ ಎಸ್ ಈಶ್ವರ್, ರೈತರು ಹಣದ ಹಿಂದೆ ಹೋಗದೆ, ಸ್ವ-ಉದ್ಯೋಗ ಮಾಡುವ ಮೂಲಕ ಹಣವೇ ತಮ್ಮ ಹಿಂದೆ ಬರುವಂತೆ ಮಾಡಬೇಕು ಎಂದರು.

ಮಾದರಿ ರೈತ ಅನಿಲ್ ರಾಯಸ್, ಮಿಶ್ರ ಬೇಸಾಯ ಮಾಡುವ ಮೂಲಕ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಉಡುಪಿ ಪ್ರಾದೇಶಿಕ ವಿಭಾಗದ ಸಿಎಚ್‍ಎಸ್‍ಸಿ ಸಮನ್ವಯಾಧಿಕಾರಿ ಅಶೋಕ್ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯುವ ಕುರಿತು ಮಾಹಿತಿ ನೀಡಿದರು. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಮತ್ತು ಇಲಾಖಾ ಸೌಲಭ್ಯಗಳಾದ ಬೀಜೋಪಚಾರ ಹಾಗೂ ಕೀಟನಾಶಕಗಳ ಕುರಿತು ಕೃಷಿ ಸಹಾಯಕ ನಿರ್ದೇಶಕ ಜಿ.ಡಿ. ಮುರಗೋಡ್ ಉಪನ್ಯಾಸ ನೀಡಿದರು.

ರೈತರಿಗಾಗಿ ಫಸಲು ಭೀಮಾ ಯೋಜನೆ, ಬೆಳೆವಿಮೆ, ಶ್ರೀ ಪದ್ಧತಿ, ಎರೆ ಘಟಕದ ಬಗ್ಗೆ ಅವರು ವಿವರಿಸಿದರು. ಆಕಸ್ಮಿಕ ಅನಾಹುತ (ಹಾವು ಕಡಿದು, ಮರದಿಂದ ಬಿದ್ದು)ದಿಂದ ಮರಣ ಹೊಂದಿದರೆ, ಸರ್ಕಾರದ ಮಟ್ಟದಲ್ಲಿ ಕಮಿಟಿ ಇದ್ದು, ಅದರ ತೀರ್ಮಾನದ ಮೇರೆಗೆ 1 ಲಕ್ಷ ಪರಿಹಾರ ದೊರೆಯುವ ಬಗ್ಗೆ ಮಾಹಿತಿ ನೀಡಿದರು. ಸುಮಾರು 260 ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.