News

ಪರಿಸರ ರಕ್ಷಣೆಗೆ ಎಲ್ಲೆಡೆ ಜಾಗೃತಿ ಕಾರ್ಯಕ್ರಮ. . .

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂತರ್ಜಲ ರಕ್ಷಣೆಯ ಜೊತೆಗೆ ಈ ಬಾರಿ ಪರಿಸರ ರಕ್ಷಣೆಯತ್ತ ಗಮನ ಹರಿಸಿದೆ. ಇದಕ್ಕಾಗಿ ವನಮಹೋತ್ಸವವನ್ನು, ವಿಶ್ವ ಅರಣ್ಯ ದಿನದಿಂದ ಆರಂಭಿಸಿ (ಜೂನ್ 5) ಒಂದು ತಿಂಗಳ ಕಾಲ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಯೋಜನೆಯ ನೇತೃತ್ವದಲ್ಲಿ ರಾಜ್ಯದ ಹಲವು ತಾಲೂಕುಗಳಲ್ಲಿ ನಡೆದ ಕಾರ್ಯಕ್ರಮಗಳ ಕುರಿತ ವಿವರ ಇಲ್ಲಿದೆ.

ದಾಂಡೇಲಿಯಲ್ಲಿ ಜಾನಪದ ನೃತ್ಯ

ಹಳಿಯಾಳ ವಲಯದ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಪರಿಸರದ ಬಗ್ಗೆ ಮಾಹಿತಿ ಕಾರ್ಯಕ್ರಮ ಜೂನ್ 5 ರಂದು ನಡೆಯಿತು. ಸ್ಥಳೀಯರಾದ ಉಮೇಶ ಬೋಳಶೆಟ್ಟಿ, ಸಂತೋಷ ಕೆಂಚಪ್ಪನವರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪರಿಸರ ಸಂರಕ್ಷಣೆಯಲ್ಲಿ ಮರಗಳ ಪಾತ್ರದ ಕುರಿತು ಜನರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ಹಲಸು, ಬಾದಾಮಿ, ಸಂಪಿಗೆ ಜಾತಿಗೆ ಸೇರಿದ ಸುಮಾರು 100 ಗಿಡಗಳನ್ನು ವಿತರಿಸಲಾಯಿತು. ಹಳಿಯಾಳ ಪಟ್ಟಣ ಪಂಚಾಯತ್ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಭಾಗವಹಿಸಿದ್ದರು. ಪರಿಸರ ಶುಚಿತ್ವದ ಬಗ್ಗೆ ನಾಟಕ, ಹಾಡು ಹಾಗೂ ಜಾನಪದ ನೃತ್ಯ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.

ದಾಂಡೇಲಿ-ಇ ವಲಯದ ಡಿ.ಎಫ್.ಎ ಶಾಲೆಯಲ್ಲಿ ಜೂನ್ 15 ರಂದು ಪರಿಸರದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಕ ರಾಜು ವಡ್ಡರ್ ಪರಿಸರ ಸಂರಕ್ಷಣೆಯ ಜೊತೆಗೆ ಸ್ವಚ್ಛತೆ ಹಾಗೂ ಶೌಚಾಲಯದ ಬಗ್ಗೆ ಮಾಹಿತಿ ನೀಡಿದರು. ಡಿ.ಎಫ್.ಎ ಶಾಲೆಯ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 164 ಮಂದಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಾದಾಮಿಯ 50 ಗಿಡಗಳನ್ನು ವಿತರಿಸಿ, 5 ಗಿಡಗಳನ್ನು ನೆಡಲಾಯಿತು.

ದಾಂಡೇಲಿ-ಬಿ ವಲಯದ ಪರಿಜ್ಞಾನ ಶಾಲೆ, ದಾಂಡೇಲಿಯಲ್ಲಿ ಜೂನ್ 16 ರಂದು ಪರಿಸರದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಅರಣ್ಯ ಇಲಾಖೆಯ ಎನ್.ಎಲ್. ದೇಸಾಯಿ ಹಾಗೂ ನಗರಸಭೆ ಸದಸ್ಯ ಮೌಲಾಲಿ ಉಪಸ್ಥಿತರಿದ್ದರು. ಪರಿಜ್ಞಾನ ಶಾಲೆ ದಾಂಡೇಲಿಯ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ 152 ಮಂದಿ ಭಾಗವಹಿಸಿದ್ದರು. ಈ ವೇಳೆ ಬಾದಾಮಿಯ 50 ಗಿಡಗಳನ್ನು ವಿತರಿಸಿ, 2 ಗಿಡಗಳನ್ನು ನಾಟಿ ಮಾಡಲಾಯಿತು. ಪರಿಸರ ಗೀತೆ, ಪರಿಸರ ಸಂರಕ್ಷಣೆಯ ಬಗ್ಗೆ ಆಶುಭಾಷಣ ಕಾರ್ಯಕ್ರಮದ ವಿಶೇಷವಾಗಿತ್ತು.

ಶಿರಹಟ್ಟಿಯಲ್ಲಿ ಬೀಜದುಂಡೆ ವಿತರಣೆ

ಬೆಳ್ಳಟ್ಟಿ ಕಾರ್ಯಕ್ಷೇತ್ರದ ವತಿಯಿಂದ ಬೆಳ್ಳಟ್ಟಿ ಪ್ರಾಥಮಿಕ ಶಾಲೆಯಲ್ಲಿ ಜೂನ್ 13 ರಂದು ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಕ ಗಿರೀಶ ಕೋಡಬಾಳ, ಗಿಡ ನಾಟಿ ಮಾಡುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ ಮತ್ತು ವಾಯು ಮಾಲಿನ್ಯ ತಡೆಗಟ್ಟಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುಮಾರು 25 ಹೊಂಗೆ ಗಿಡಗಳನ್ನು ವಿತರಿಸಿ, ಸುಮಾರು 25 ಗಿಡಗಳನ್ನು ನಾಟಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಭಾಗವಹಿಸಿದ್ದರು.

ಸೂರಣಗಿ ವಲಯದ ಉಂಡೇನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಜೂನ್ 19 ರಂದು ನಡೆದ ಇನ್ನೊಂದು ಕಾರ್ಯಕ್ರಮದಲ್ಲಿ ಇನ್ನೊಂದು ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಶಿಕ್ಷಕಿ ಎನ್.ಜಿ. ಅಡ್ರಕಟ್ಟಿ ಭಾಗವಹಿಸಿ ಪರಿಸರ ರಕ್ಷಣೆಯಿಂದ ಮಾತ್ರ ಜೀವ ಸಂಕುಲ ಉಳಿಯಲು ಸಾಧ್ಯ. ಆದುದರಿಂದ ಗಿಡ ಬೆಳೆಸಿ ನಾಡು ಉಳಿಸಿ ಎಂಬ ಮಾಹಿತಿ ನೀಡಿದರು.

ಪ್ರಾಥಮಿಕ ಶಾಲೆಯ ಶಿಕ್ಷಕರ ಸಹಕಾರದಿಂದ ನಡೆದ ಕಾರ್ಯಕ್ರಮದಲ್ಲಿ 120 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಹೊಂಗೆ, ಗುಲ್‍ಮಾರ್, ಬೇವು ತಳಿಯ 50 ಸಸಿಗಳನ್ನೂ ವಿತರಿಸಲಾಯಿತು ಮತ್ತು ಅಷ್ಟೇ ಸಂಖ್ಯೆಯ ಸಸಿಗಳನ್ನು ನೆಡಲಾಯಿತು. ಹೊಂಗೆ ಬೀಜಗಳ ಸುಮಾರು 500 ಬೀಜದುಂಡೆಗಳನ್ನು ಇದೇ ವೇಳೆ ವಿತರಿಸಲಾಯಿತು.

ಬೆಳ್ಳಟ್ಟಿ ವಲಯದ ಬನ್ನಿಕೊಪ್ಪ ಪ್ರೌಢಶಾಲೆಯಲ್ಲಿ ಜೂನ್ 19 ರಂದು ನಡೆದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ಭಾಗವಹಿಸಿದ್ದರು. ಶಿಕ್ಷಕ ಎಸ್.ಎಸ್. ಪಾಟೀಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಪ್ರೌಢಶಾಲಾ ಶಿಕ್ಷಕರ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಂಗೆ, ಗುಲ್‍ಮಾರ್, ಬೇವು ತಳಿಯ 60 ಗಿಡಗಳನ್ನು ವಿತರಿಸಲಾಯಿತು.

ಸೂರಣಗಿ ವಲಯದ ಬಾಲೇಹೊಸೂರ ಪ್ರೌಢಶಾಲೆಯಲ್ಲಿ ಜೂನ್ 20 ರಂದು ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಕ ಎಲ್. ಹೆಚ್. ಮಠದ, ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ಒದಗಿಸಿದರು. ಪ್ರೌಢಶಾಲಾ ಶಿಕ್ಷಕರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 120 ಮಂದಿ ಭಾಗವಹಿಸಿದ್ದರು. ಹೊಂಗೆ, ಗುಲ್‍ಮೊಹರ್ ಹಾಗೂ ಬೇವಿನ 60 ಗಿಡಗಳನ್ನು ನೆಟ್ಟು, 60 ಗಿಡಗಳನ್ನು ವಿತರಿಸಲಾಯಿತು.

ಶ್ರೀರಂಗಪಟ್ಟಣದಲ್ಲಿ ಸಾಲುಮರದ ರೀತಿಯಲ್ಲಿ ನಾಟಿ:

ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ವಲಯದ ಚಿಕ್ಕಹಾರೋಹಳ್ಳಿ-ಮುತ್ತುರಾಯಸ್ವಾಮಿ ಬೆಟ್ಟದಲ್ಲಿ ಜೂನ್ 22 ರಂದು ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಜಿಲ್ಲಾ ನಿರ್ದೇಶಕ ಯೋಗೇಶ್ ಹಾಗೂ ಗ್ರಾಮ ಪಂಚಾಯತ್ ಸದಸ್ಯ ನಿಂಗೇಗೌಡ ಭಾಗವಹಿಸಿ ಅರಣ್ಯ ಗಿಡಗಳ ನಾಟಿ ಹಾಗೂ ಸಂರಕ್ಷಣೆಯಿಂದ ರೈತರು ಉತ್ತಮ ಜೀವನ ನಡೆಸಬಹುದು ಎಂದರು. ಚಿಕ್ಕ ಹಾರೋಹಳ್ಳಿಯ ಹಾಲು ಉತ್ಪಾದಕರ ಸಂಘದ ಜೊತೆಗೂಡಿ ನಡೆಸಿದ ಕಾರ್ಯಕ್ರಮದಲ್ಲಿ 85 ಕ್ಕೂ ಹೆಚ್ಚು ಮಂದಿ ಹಾಜರಿದ್ದರು. ಮಾವು, ಹಲಸು, ಹೊಂಗೆಯ ಸುಮಾರು ರೂ.6200 ಮೌಲ್ಯದ ಬೀಜದುಂಡೆಗಳನ್ನು ವಿತರಿಸಲಾಯಿತು.

ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ವಲಯದ ಚಿಕ್ಕಂಕನಹಳ್ಳಿಯಲ್ಲಿ ಜೂನ್ 16 ರಂದು ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಹಾಗೂ ಯೋಜನಾಧಿಕಾರಿ ಮಾಧವ ಭಾಗವಹಿಸಿದ್ದರು. ಚಿಕ್ಕಂಕನಹಳ್ಳಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ಭಾಗವಹಿಸಿದ್ದರು. ಹೊಂಗೆ, ಬೇವು, ಹಸವು, ಮಹಾನದಿ ಸೇರಿದಂತೆ ಸುಮಾರು 100 ಅರಣ್ಯ ಗಿಡಗಳನ್ನು, ಚಿಕ್ಕಂಕನಹಳ್ಳಿ- ಬನ್ನೂರು ರಸ್ತೆಯಲ್ಲಿ ಸಾಲುಮರದ ರೀತಿಯಲ್ಲಿ ನಾಟಿ ಮಾಡಲಾಯಿತು.

ಕೆ.ಶೆಟ್ಟಿಹಳ್ಳಿ ವಲಯದ ಕರಿಘಟ್ಟ ಶ್ರೀರಂಗಪಟ್ಟಣದಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲಾಯಿತು. ಪರಿಸರ ಪ್ರೇಮಿ ರಮೇಶ್, ಮಂಡ್ಯ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಚಂದ್ರಕಾಂತ ಹಾಗೂ ಕೆ. ಶೆಟ್ಟಿಹಳ್ಳಿ ಪಿ.ಡಿ.ಒ ಪಿ. ಶಿವಣ್ಣ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅರಣ್ಯ ಗಿಡಗಳ ನಾಟಿಯಿಂದ ಪರಿಸರದ ಉಷ್ಣಾಂಶವನ್ನು ಕಾಪಾಡಿಕೊಳ್ಳಬಹುದು ಎಂಬ ಸಂದೇಶ ಸಾರಲಾಯಿತು. ಸಾಮಾಜಿಕ ಅರಣ್ಯ ಇಲಾಖೆ, ಕೆ.ಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಹಾಗೂ ಪರಿಸರ ಪ್ರೇಮಿ ರಮೇಶ್ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ 75 ಜನರು ಪಾಲ್ಗೊಂಡಿದ್ದರು. ಮಹಾಗಣಿ, ಹಲಸು, ಹೊಂಗೆ, ನೇರಳೆ, ಕರಿಬೇವು ತಳಿಗಳ 100 ಕ್ಕೂ ಹೆಚ್ಚು ಗಿಡಗಳನ್ನು ಯಂತ್ರಗಳ ಮೂಲಕ ಗುಂಡಿ ತೆಗೆದು ನಾಟಿ ಮಾಡಲಾಯಿತು.

ಬಂಟ್ವಾಳದಲ್ಲಿ 350 ಸಸಿಗಳ ವಿತರಣೆ

ಬಂಟ್ವಾಳ ತಾಲೂಕಿನ ಕೊಳ್ನಾಡು- ಸಾಲೆತ್ತೂರು ವಲಯದ ವಿಷ್ಣುಮೂರ್ತಿ ಭಜನಾ ಮಂದಿರ ಕೊಳ್ನಾಡು ಕುಡಮುಗೇರುವಿನಲ್ಲಿ ಜೂನ್ 18 ರಂದು ಪರಿಸರ ಮಾಹಿತಿ/ ಗಿಡ ವಿತರಣೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಯೊಜನಾಧಿಕಾರಿ ಸುನೀತಾ ನಾಯಕ್, ಕೃಷಿ ಅಧಿಕಾರಿ ನಾರಾಯಣ ಕೆ. ಹಾಗೂ ಪದ್ಮನಾಭ ಶೆಟ್ಟಿ, ಗಿಡಗಳ ನಾಟಿ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಸಹಕಾರದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 350 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸಾಗುವಾನಿ, ಮಹಾನಿ, ತೇಗ, ಬೀಟೆ ಸೇರಿದಂತೆ ಸುಮಾರು 350 ಕ್ಕೂ ಗಿಡಗಳನ್ನು ನಾಟಿ ಮಾಡಿ, ಅಷ್ಟೇ ಪ್ರಮಾಣದ ಸಸಿಗಳನ್ನು ವಿತರಿಸಲಾಯಿತು.