Agriculturesuccess storyWomen Empowerment

ಕೈಹಿಡಿದ ಬುದ್ಧಿವಂತಿಕೆಯ ಕೃಷಿ

“ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬ ಮಾತು ಸತ್ಯವೆಂದು ಸಾಭೀತಾಗುತ್ತಲೇ ಇದೆ. ಅದರಲ್ಲೂ ಹಳ್ಳಿಗಳ ಆಗರವಾಗಿರುವ ನಮ್ಮ ದೇಶದ 68% ದಿಂದ 70% ಜನರ ಆರ್ಥಿಕ ಬೆನ್ನೆಲುಬು ಕೃಷಿ. ಆದರೂ ಹೆಚ್ಚುತ್ತಿರುವ ಕಚ್ಚುವೆಚ್ಚಗಳಿಂದಾಗಿ ಆಧುನಿಕ ಯುಗದಲ್ಲಿ ಕೃಷಿಯನ್ನು ಆಯ್ದುಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಇಬ್ಬರು ಮಕ್ಕಳ ವಿದ್ಯಾಭ್ಯಾಸದೊಂದಿಗೆ ಗಂಡನ ಮನೆಯಲ್ಲಿ ದೊರೆತ 10 ಗುಂಟೆ ಜಮೀನನ್ನು ನಿರ್ವಹಿಸಿದ ಕೆಂಚಮ್ಮ ಬಾರಂಗಿಯವರ ಸಾಹಸಗಾಥೆ ಇಲ್ಲಿದೆ.

ಮೊದಮೊದಲು ಇವರೂ ಕಾಲೆಕೆರೆ ಜಮೀನಿನಲ್ಲಿ ಏನು ಮಾಡಲು ಸಾಧ್ಯ ಎಂದು ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಲು ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಇವರು ತಮ್ಮ ಮನೋಭಾವ ಬದಲಿಸಿಕೊಂಡಿದ್ದಾರೆ. ತಾವೂ ಯಾಕೆ ಸಣ್ಣ ಜಮೀನಿನಲ್ಲಿ ಕೃಷಿ ಆರಂಭಿಸಬಾರದು ಎಂದು, ಕಾಲು ಎಕರೆ ಭೂಮಿಯಲ್ಲೇ ಟೊಮೆಟೋ, ಬದನೆ, ಮೆಣಸು, ಕೃಷಿ ಮಾಡಿ ಲಾಭ ಗಳಿಸಿದರು. 2012-13 ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವಿನಿಂದ ಗುಲಾಬಿ ಬೆಳೆದಿದ್ದಾರೆ, ಮುಳ್ಳು ಹೈಬ್ರೀಡ್ ಹಾಗೂ ಬಟನ್ಸ್ ತಳಿಯ ಗುಲಾಬಿ ಗಿಡ ನಾಟಿ ಮಾಡಿದ್ದಾರೆ.

ವೈಜ್ಞಾನಿಕ ಕೃಷಿ:

ಗುಲಾಬಿ ಗಿಡಗಳ ನಾಟಿಗೆ ಮುಂಚಿತವಾಗಿ ಭೂಮಿಯನ್ನು ಉಳುಮೆ ಮಾಡಿ ಗೊಬ್ಬರ ಹಾಕಿದ್ದಾರೆ. ಗಿಡದಿಂದ ಗಿಡಕ್ಕೆ ಆರು ಅಡಿ, ಸಾಲಿನಿಂದ ಸಾಲಿಗೆ ಏಳು ಅಡಿ ಅಂತರದಲ್ಲಿ ಗಿಡ ನಾಟಿ ಮಾಡಿದ್ದಾರೆ. ನಾಟಿ ಮಾಡುವ ಗುಣಿಯ ಕೆಳಭಾಗದಲ್ಲಿ ಮರಳು, ಕೊಟ್ಟಿಗೆ ಗೊಬ್ಬರ ಹಾಗೂ ಮೇಲ್ಮಣ್ಣನ್ನು ಪದರ ಪದರಾಗಿ ತುಂಬಿ ನೀರು ಹಾಕಿ ಒಂದು ವಾರ ಬಿಸಿಲಿಗೆ ಬಿಟ್ಟಿದ್ದಾರೆ. ನಂತರ ಗುಣಿಯ ಮಧ್ಯ ಭಾಗದಲ್ಲಿ ಮಣ್ಣು ತೆಗೆದು, ಗುಲಾಬಿ ಗಿಡವನ್ನು ನಾಟಿ ಮಾಡಿದ್ದಾರೆ. ನಂತರ ತೆಗೆದ ಮಣ್ಣನ್ನು ಮತ್ತೆ ಬುಡಕ್ಕೆ ಅದುಮಿ ವಾರಕ್ಕೊಮ್ಮೆ ನೀರು ಹಾಯಿಸಿದ್ದಾರೆ.

ನಾಟಿ ಮಾಡಿದ ಎರಡು ತಿಂಗಳ ನಂತರ ರಾಸಾಯನಿಕ ಗೊಬ್ಬರವನ್ನು ಪ್ರತಿ ಗಿಡಕ್ಕೆ ಒಂದು ಚಮಚದಂತೆ ಹದಿನೈದು ದಿನಕ್ಕೊಮ್ಮೆ ಮೂರು ಬಾರಿ ಹಾಕಿದ್ದು ನಾಲ್ಕು ತಿಂಗಳ ನಂತರ ಡಿ, ಏ, ಪಿ ಗೊಬ್ಬರವನ್ನು ಪ್ರತೀ ಗಿಡಕ್ಕೆ 50 ಗ್ರಾಂ ನೀಡಿದ್ದಾರೆ. ಎಂಟು ತಿಂಗಳ ನಂತರ ಪ್ರತಿಯೊಂದು ಗಿಡಕ್ಕೆ 200 ಗ್ರಾಂ ನಂತೆ ರಸಗೊಬ್ಬರ ವಿತರಿಸಿದ್ದಾರೆ. ಪ್ರತಿ ಬಾರಿ ಗೊಬ್ಬರ ನೀಡುವಾಗಲೂ ಕಾಂಪೋಸ್ಟ್ ಬಳಸಿದ್ದಾರೆ. ಅತ್ಯಂತ ವೈಜ್ಞಾನಿಕವಾದ ಈ ಪೋಷಣೆಯಿಂದಾಗಿ ಗಿಡಗಳು ಹುಲುಸಾಗಿ ಬೆಳೆದು ಇಳುವರಿ ನೀಡುತ್ತಿವೆ. ಗಿಡದ ಬೆಳವಣಿಗೆ ದೃಷ್ಟಿಯಿಂದ ಐದು ತಿಂಗಳ ವರೆಗೆ ಮೊಗ್ಗನ್ನು ಚಿವುಟಿ ಹಾಕಿದ್ದಾರೆ. ಐದು ತಿಂಗಳ ನಂತರದಲ್ಲಿ ಹೂವನ್ನು ಕಟಾವು ಮಾಡಲು ಆರಂಭಿಸಿದ್ದಾರೆ.

ಸಮ್ಮಿಶ್ರ ಕೃಷಿ- ನಿಯಮಿತ ಆದಾಯ

ಪ್ರತಿ ಗಿಡದಿಂದ ದಿನಕ್ಕೆ ಸರಾಸರಿ 6 ರಿಂದ 8 ಹೂವು ಸಿಗುತ್ತಿದೆ. ಒಂದು ಹೂವಿಗೆ ಒಂದೂವರೆ ರೂಪಾಯಿ ಸಿಗುತ್ತದೆ. ಬಟನ್ಸ್ ತಳಿಯ ಗುಲಾಬಿಯಿಂದ ಎರಡು ದಿನಕ್ಕೊಮ್ಮೆ ಒಂದು ಕಿಲೋ ಗ್ರಾಂ ಹೂವು ಕೊಯ್ಲಿಗೆ ಸಿಗುತ್ತಿದೆ. ಒಂದು ಕಿಲೋ ಗ್ರಾಂ ಹೂವು ನೂರು ರೂಪಾಯಿಗೆ ವ್ಯಾಪಾರವಾಗುತ್ತಿದೆ. “ಹೆಚ್ಚಾಗಿ ಹೂವನ್ನು ಹರಿಹರ ಮಾರುಕಟ್ಟೆ ತಲುಪಿಸುತ್ತೇನೆ. ಹಬ್ಬದ ಸಂದರ್ಭಗಳಲ್ಲಿ ಮನೆಗೆ ಬಂದು ಹೂವು ಒಯ್ಯುವವರೂ ಇದ್ದಾರೆ. ಮನೆಯಲ್ಲಿಯೇ ಹೂವು ಮಾರಿದರೆ ಒಂದು ಹೂವಿಗೆ ಎರಡು ರೂಪಾಯಿ ಸಿಗುತ್ತದೆ. ಹೂವಿನ ಕೃಷಿಯಿಂದಲೇ ಅಂದಾಜು ರೂ. 6000 ಆದಾಯ ಪಡೆಯುತ್ತಿದ್ದೇನೆ,” ಎನ್ನುತ್ತಾರೆ.

ಕೆಂಚಮ್ಮ ಗುಲಾಬಿ ಗಿಡಗಳ ನಡುವೆ ಹಾಗೂ ಸುತ್ತಮುತ್ತಲು ಇರುವ ಅಲ್ಪ ಜಾಗದಲ್ಲೇ ತರಕಾರಿ ಕೃಷಿ ಮಾಡುತ್ತಿದ್ದಾರೆ. ಚವಳಿ, ಬೆಂಡೆ, ಹಾಗಲ, ಟೊಮೆಟೋ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜಮೀನು ಸುತ್ತ ನಾಟಿ ಮಾಡಿರುವ ನುಗ್ಗೆ ಗಿಡಗಳು ಇಳುವರಿ ನೀಡುತ್ತಿದ್ದು ಒಂದಷ್ಟು ಗಳಿಕೆಗೆ ಮಾರ್ಗವಾಗಿವೆ. ವಾರಕ್ಕೆ ಎರಡು ಸಲ ಸಂತೆಗೆ ಹೋಗಿ ಪರ್ಯಾಯ ಆದಾಯಕ್ಕೆ ಯೋಜಿಸಿ ಹೆಚ್ಚು ಹಣ ಗಳಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃಷಿಯೇತರ ಚಟುವಟಿಕೆ:

ಕೃಷಿಗೆ ಪೂರಕವಾದ ಹೈನುಗಾರಿಕೆ, ಸಾವಯವಗೊಬ್ಬರ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಇವರ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಹೆಚ್ಚಿದ ಆದಾಯ ಕುಟುಂಬದಲ್ಲಿ ಆರ್ಥಿಕ ಅಭಿವೃದ್ಧಿಯೊಂದಿಗೆ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು.

ಮಹಿಳೆಯರ ಪ್ರಗತಿಬಂಧು ತಂಡದ ಸದಸ್ಯೆಯಾಗಿ ಕೆಂಚಮ್ಮ ಧೈರ್ಯ ಹಾಗೂ ಆತ್ಮವಿಶ್ವಾಸ ಗಳಿಸಿಕೊಂಡಿದ್ದಾರೆ. ಮಿಶ್ರ ಕೃಷಿಯೊಂದಿಗೆ ನಿಯಮಿತ ಆದಾಯದಿಂದ ಕುಟುಂಬದಲ್ಲಿ ನೆಮ್ಮದಿ. ನಿಯಮಿತ ಸಾಲದ ಕಂತು ಮತ್ತು ಸ್ವ-ಸಹಾಯ ಸಂಘದ ಉಳಿತಾಯದೊಂದಿಗೆ ಮಕ್ಕಳ ಮುಂದಿನ ಶಿಕ್ಷಣಕ್ಕಾಗಿ ಪಿಗ್ಮಿಯಲ್ಲಿ ಹಣ ತೊಡಗಿಸಿ ಇಡುತ್ತಿದ್ದಾರೆ. ಇವರ ಪತಿಯೂ ದಿನಗೂಲಿ ತ್ಯಜಿಸಿ ಇವರೊಂದಿಗೆ ಕೃಷಿಯಲ್ಲಿ ಸಹಕರಿಸುತ್ತಿದ್ದಾರೆ. ಕೂಲಿ ಆಳುಗಳ ಮೇಲೆ ಅವಲಂಭಿತವಾಗದೆ, ಶ್ರಮವಿನಿಮಯದಲ್ಲಿ ಸದಸ್ಯರ ಸಹಕಾರ ಪಡೆಯುತ್ತಿದ್ದಾರೆ. ಸಮುದಾಯ ಸಂಘಟನೆಯ ಕಾರ್ಯಕ್ರಮಗಳು, ಕೆಂಚಮ್ಮರಲ್ಲಿ ನಾಯಕತ್ವ ಗುಣ ಬೆಳೆಸಿವೆ.

“ನಾವು ಇನ್ನೊಬ್ರ ಕಡೆ ದುಡಿಯಾಕ ಹೋಗ್ತಿದ್ವಿ. ಆದರೆ ಎಷ್ಟು ದುಡಿದರೂ ನಮಗೆ ನಮ್ಮ ಈ ಕೃಷಿ ತೊಡಗಿಸಿಕೊಂಡೀವಲ್ಲ, ಇಷ್ಟು ಸಂತೋಷ ಸಿಗ್ತಿರಲಿಲ್ಲ. ಅಲ್ಲಿ ಇದಕ್ಕಿಂತ ಹೆಚ್ಚು ದುಡ್ಡು ಗಳಿಸಿರಬಹ್ದು, ಆದರೆ ನಿಜವಾದ ಸಂತೋಷ ದೊರಕಿರುವುದು ನಮ್ಮ ಈ ಗುಲಾಬಿ ಮತ್ತು ಕಾಯಿಪಲ್ಲೆ ತೋಟದಾಗ ಅಡ್ಡಾಡಿದಾದ” ಎಂದು ಮನದುಂಬಿ ಹೇಳುತ್ತಾರೆ ಬಾರಂಗಿ ದಂಪತಿಗಳು.