“ತಾಯಂದಿರು ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲಿ” ಶ್ರೀಮತಿ ಶ್ರದ್ಧಾ ಅಮಿತ್‍ರವರ ಸಲಹೆ

Posted on Posted in Dharmasthala, News

ಮಕ್ಕಳಿಗೆ ವಿದ್ಯೆಯ ಜೊತೆಗೆ ಪರಿಸರ ಕಾಳಜಿಯಂತಹ ಒಳ್ಳೆಯ ವಿಚಾರವನ್ನು ಹೇಳಿಕೊಡುವ ಪರಿಪಾಠವನ್ನು ಪ್ರತಿಯೊಬ್ಬ ತಾಯಂದಿರು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆರವರ ಪುತ್ರಿ ಶ್ರೀಮತಿ ಶ್ರದ್ಧಾ ಅಮಿತ್‍ರವರು ತಿಳಿಸಿದರು.

ಜಯದೇವ ವೀರಶೈವ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ (ರಿ), ನೆಲಮಂಗಲ ಮತ್ತು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಇವರ ವತಿಯಿಂದ ಆಯೋಜಿಸಿದ “ಸ್ವಚ್ಛ ಪರಿಸರದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ” ಅರಿವು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ನೀರಿಗಾಗಿ ಪರದಾಡುವ ಸನ್ನಿವೇಶ ಸಾಮನ್ಯವಾಗಿದೆ.ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಕಲುಷಿತ ನೀರು ಜಲ ಮೂಲ ಆವರಿಸಿದ್ದು ಎಲ್ಲೆಲ್ಲೂ ಅನಾರೋಗ್ಯಕರ ವಾತವರಣ ನಿರ್ಮಾಣವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪರಿಸರ ಸಮತೋಲನೆಯಲ್ಲಿ ಪಾತ್ರವಹಿಸುವ ನೆಲ-ಜಲ, ಅರಣ್ಯ ಪ್ರಾಣಿಪಕ್ಷಿ ಸಂಕುಲವೆಂಬ ಭವಿಷ್ಯ ಸಂಪತ್ತನ್ನು ಕಾಪಡಿಕೊಳ್ಳಬೇಕಾಗಿದೆ. ರಸ್ತೆಗಳು ಕಸದ ಬುಟ್ಟಿಗಳಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನೆಗಾಣಬೇಕು. ಮನೆಯಲ್ಲಿಯೇ ಹಸಿ ಹಾಗೂ ಒಣ ಕಸವಿಂಗಡಣೆ ಮಾಡಬೇಕು. ಕೆರೆ ನದಿಗಳ ಬಗ್ಗೆ ಕಾಳಜಿಯಿರಲಿ ಎಂದರು.

ಮಹಿಳೆಯರ ಶಕ್ತಿ ಹೆಚ್ಚಿಸಲು ಮಾತೃಶ್ರೀ ಹೇಮಾವತಿ ಹೆಗ್ಗಡೆರವರು ಅನುಷ್ಠಾನಗೊಳಿಸಿರುವ ಜ್ಞಾನವಿಕಾಸ ಯೋಜನೆ ಪ್ರಯೋಜನವನ್ನು ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಆಧುನಿಕ ಯುಗದಲ್ಲಿ ಜನಜೀವನ ಯಾಂತ್ರಿಕವಾಗುತ್ತಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಮಹಿಳೆ ಸಂಸಾರಕ್ಕೆ ಸೀಮಿತವಾಗುತ್ತಿರುವ ಸನ್ನಿವೇಶದಲ್ಲಿ ಜ್ಞಾನವಿಕಾಸ ಯೋಜನೆಯಡಿ ಕೌಶಲಾಧಾರಿತ ಸ್ವ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿ ಜೀವನಕ್ಕೆ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ ಸಹಾಕಾರ ನೀಡುತ್ತಿದೆ ಎಂದು ಚೆನ್ನನಾಯಕನಪಾಳ್ಯದ ಸಿರಿ ಜ್ಞಾನವಿಕಾಸ ಕೇಂದ್ರದ ಸದಸ್ಯೆ ಶ್ರೀಮತಿ ಶೋಭಾ ತಮ್ಮ ಅನುಭವ ಹಂಚಿಕೊಂಡರು.

ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಯೋಜನೆಯ ವತಿಯಿಂದ ಪರಿಸರ ಪ್ರೇಮಿ ಅಡುಗೆ ಒಲೆ, ಸೋಲಾರ್ ಲೈಟ್ ವಿತರಣೆ ಜೊತೆಗೆ ಉಚಿತವಾಗಿ ಗೇರು ಗಿಡಗಳನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಜ್ಞಾನವಿಕಾಸ ಹಾಗೂ ಸ್ವಸಹಾಯ ಸಂಘದ ಮಹಿಳೆಯರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲಮಂಗಲ ಪುರಸಭೆ ಅಧ್ಯಕ್ಷೆ ಸುಜಾತ ಪ್ರಕಾಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ವಿ.ರಾಮಸ್ವಾಮಿ, ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ಒಕ್ಕೂಟಗಳ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಉಪಸ್ಥಿತರಿದ್ದರು. ಜಿಲ್ಲಾ ನಿರ್ದೇಶಕರಾದ ವಸಂತ್ ಸಾಲ್ಯಾನ್ ಇವರು ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ಶ್ರೀಮತಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಮಮತಾ ವಂದಿಸಿದರು.