Community HealthNews

ತಿ.ನರಸೀಪುರ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಉದ್ಘಾಟನಾ ಕಾರ್ಯಕ್ರಮ

ತಾಲೂಕು ಮಟ್ಟದ “ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ” ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನುಶ್ರೀಮತಿ ಸುಮಿಯ್ಯಬಾನು, ಸರ್ಕಾರಿ ಸಹಾಯಕ ಆಯೋಜಕಿ, ತಿ.ನರಸೀಪುರ ದಿನಾಂಕ:11.07.2017ರಂದು ಉದ್ಘಾಟಿಸಿದರು.

ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ತಂದೆ ತಾಯಿಯನ್ನು ಸಾಕಬೇಕಾದ ಮಕ್ಕಳು ಇತ್ತೀಚಿನ ದಿನಗಳಲ್ಲಿ ಆ ಮಕ್ಕಳನ್ನೇ ತಂದೆತಾಯಿಗಳು ನೋಡಿಕೊಳ್ಳುವಂತಹ ಪರಿಸ್ಥಿತಿ ಬಂದಿರುತ್ತದೆ. ಇತ್ತೀಚಿನ ದಿನದಲ್ಲಿ ವಿಪರೀತವಾಗಿ ಮದ್ಯಪಾನ, ಧೂಮಪಾನ, ಅಫೀಮು, ಡ್ರಗ್ಸ್ ಮುಂತಾದ ದುಶ್ಚಟಗಳಿಗೆ ಬಲಿಯಾಗುತ್ತಿರುವಂತಹ ಯುವ ಪೀಳಿಗೆ ಮುಂದಿನ ದಿನಗಳಲ್ಲಿ ಇದನ್ನು ಕಡಿಮೆಗೊಳಿಸಿದ್ದಲ್ಲಿ ಮಾತ್ರ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ವಿದ್ಯಾವಂತರಾಗಿರುವ ನಾವೇ ದುಶ್ಚಟಕ್ಕೆ ಬಲಿಯಾದಲ್ಲಿ ಅವಿದ್ಯಾವಂತರಿಗೂ ನಮಗೂ ಇರುವ ವ್ಯತ್ಯಾಸವೇನು? ಎಂದು ಕರೆಯನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಪ್ರಭುಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಮಾತನಾಡಿ, ಆರೋಗ್ಯದಲ್ಲಿ 02 ವಿಧ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ. ಶ್ರೀ ಕ್ಷೇ.ಧ.ಗ್ರಾ.ಯೋ ಜನರಿಗೆ ಸಾಲ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅದರಲ್ಲಿ ಮುಖ್ಯ ಕಾರ್ಯಕ್ರಮ ಸ್ವಾಸ್ಥ್ಯ ಸಂಕಲ್ಪವೂ ಒಂದು. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಕುಟುಂಬದಲ್ಲಿಯೂ ಒಬ್ಬನಾದರೂ ದುಶ್ಚಟಕ್ಕೆ ಬಲಿಯಾಗಿರುತ್ತಾನೆ. ಇದರಿಂದಾಗಿ ಇಡೀ ಕುಟುಂಬ ಬೀದಿಗೆ ಬರುವ ಪರಿಸ್ಥಿತಿ ಬರುತ್ತದೆ. 16 ರಿಂದ 25 ವರ್ಷದ ವಯಸ್ಸು ದುಶ್ಚಟಕ್ಕೆ ಬಲಿಯಾಗುವಂತಹ ವಯಸ್ಸು ಈ ಸಮಯದಲ್ಲಿ ನೀವು ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾದಶ್ರೀಮತಿ ಸುನೀತಾಪ್ರಭು, ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಪೂಜ್ಯ ವೀರೇಂದ್ರ ಹೆಗ್ಗೆಡೆಯವರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮ ಜನಜಾಗೃತಿ. ಇದರ ಮುಖೇನ ಸಮಾಜದಲ್ಲಿ ಮುಖ್ಯವಾಗಿ ದುರ್ಬಲ ವರ್ಗದಲ್ಲಿ ದುಶ್ಚಟದಿಂದ ಉಂಟಾಗುವ ಅನಾಹುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದಕ್ಕಾಗಿ ಸಮಾಜದ ಗಣ್ಯರ ಸಹಭಾಗಿತ್ವ ಉಳ್ಳ ರಾಜ್ಯಮಟ್ಟದ ಜನಜಾಗೃತಿ ವೇದಿಕೆಯನ್ನು ಸ್ಥಾಪಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ವ್ಯಸನ ಮುಕ್ತ ಬದುಕಿಗಾಗಿ ಸ್ವಾಸ್ಥ್ಯ ಸಂಕಲ್ಪ ಎಂಬ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇಂದಿನ ದಿನದಲ್ಲಿ ನಿಮ್ಮ ಕಾಲೇಜಿನಲ್ಲಿಯೂ ಕೂಡ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮುಂದಿನ ದಿನದಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಿಸಲು ನೀವೆಲ್ಲರೂ ಕೈಜೋಡಿಸಿ ಎಂದು ಶುಭ ಹಾರೈಸಿದರು.

ಶ್ರೀಯುತ ಮನೋಜ್ ಕುಮಾರ್, ವೃತ್ತ ನಿರೀಕ್ಷಕರು ತಿ.ನರಸೀಪುರ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಯಾವುದೇ ಒಂದು ಕೆಲಸ ಮಾಡುವ ಮೊದಲು 05 ನಿಮಿಷ ಯೋಚಿಸಿ ಮಾಡಿ ಒಳ್ಳೆಯದಾದರೆ ಮುಂದಿನವರಿಗೆ ಮಾರ್ಗದರ್ಶನ, ಕೆಟ್ಟದ್ದಾದರೆ ನಿಮಗೆ ಅದೊಂದು ಜೀವನದಲ್ಲಿ ಪಾಠ. ದುಶ್ಚಟಕ್ಕೆ ಬಲಿಯಾಗದೆ ನಿಮ್ಮ ಕುಟುಂಬವನ್ನು ನಿಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ:-  
ಶ್ರೀಮತಿ ನಾಗರತ್ನಮ್ಮ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿ.ನರಸೀಪುರ, ಮಾತನಾಡಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ನಡೆಸುವಂತಹ ಕಾರ್ಯಕ್ರಮಗಳು ಉತ್ತಮ ಕಾರ್ಯಕ್ರಮಗಳಾಗಿದ್ದು, ಸ್ವಾಸ್ಥ್ಯ ಸಂಕಲ್ಪದಂತಹ ಕಾರ್ಯಕ್ರಮ ನಮ್ಮ ಶಾಲೆಯ ಮಕ್ಕಳಿಗೆ ಈ ವಯಸ್ಸಿನಲ್ಲಿ ಬೇಕಾದಂತಹ ಕಾರ್ಯಕ್ರಮವಾಗಿದ್ದು, ಇಂತಹ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಮಾಡಿದಂತಹ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಗೆ ಧನ್ಯವಾದವನ್ನು ಅರ್ಪಿಸಿದರು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಸಂದೇಶ್ ಪೂಜಾರಿ, ಪರಮೇಶ್ವರಪ್ಪ, ಪ್ರೇಮಕುಮಾರಿ, ಮಾದಪ್ಪ ಹಾಗೂ 150 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *