AgricultureCommunnity DevelopmentNews

ಮೊಳಕೆಯೊಡೆದು ಗಿಡಗಳಾಗಿವೆ ಲಕ್ಷಾಂತರ ಬೀಜದುಂಡೆಗಳು.

ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಈ ವರ್ಷ ಬಹಳ ವಿಶೇಷವಾಗಿ ಆಚರಿಸಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಆಶಯದಂತೆ ಬೀಜದುಂಡೆಗಳನ್ನು ತಯಾರಿಸಿ ಬಿತ್ತುವ ಮೂಲಕ ಬೀಜದುಂಡೆ ಅಭಿಯಾನವನ್ನೇ ಧಾರವಾಡ ಪ್ರಾದೇಶಿಕ ವ್ಯಾಪ್ತಿಯಾದ್ಯಂತ ನಡೆಸಲಾಗಿತ್ತು. ಪರಿಣಾಮವಾಗಿ ಪರಿಸರ ಆಸಕ್ತರು, ಅದ್ಯಯನಕಾರರು, ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ, ವಿವಿಧ ಸಂಘ ಸಂಸ್ಥೆಗಳು, ಶೈಕ್ಷಣಿಕ ಹಾಗೂ ಧಾರ್ಮಿಕ ಸಂಸ್ಥೆಗಳು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಈ ಕಾರ್ಯಕ್ರಮವನ್ನು ಮಾದರಿಯಾಗಿ ಸ್ವೀಕರಿಸಿ ತಾವೂ ಸಹ ಸೀಡ್ ಬಾಲ್‍ಗಳನ್ನು ತಯಾರಿಸಿ ಪ್ರಕೃತಿಯ ಮಡಿಲಿಗೆ ಸೇರಿಸಿ ತಮ್ಮ ಪರಿಸರ ಪ್ರೇಮ ವ್ಯಕ್ತಪಡಿಸಿವೆ.

ಧಾರವಾಡ ಪ್ರಾದೇಶಿಕ ವ್ಯಾಪ್ತಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ‘ಬೀಜದುಂಡೆಯನ್ನು ತಯಾರಿಸಿ ಸೂಕ್ತ ಸ್ಥಳಗಳಲ್ಲಿ ಹಾಕುವುದರಿಂದ ಕಡಿಮೆ ಖರ್ಚಿನಲ್ಲಿ ಗಿಡಗಳನ್ನು ಬೆಳೆಸಿದಂತಾಗುತ್ತದೆ. ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಿದಂತಾಗುತ್ತದೆ’ ಎಂದು ಕರೆ ನೀಡಿದ ಹಿನ್ನೆಲೆಯಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಹದಿನೈದು ಲಕ್ಷಕ್ಕೂ ಅಧಿಕ ಬೀಜದುಂಡೆಗಳನ್ನು ತಯಾರಿಸಿ ಅರಣ್ಯ ಪ್ರದೇಶ, ಗುಡ್ಡಗಾಡು ಪ್ರದೇಶ, ಜನ ಜಾನುವಾರು ಓಡಾಡಿ ನಾಶ ಮಾಡದ ಜಾಗಗಳು, ಕುರುಚಲು ಪೊದೆಗಳು, ಮುಳ್ಳು ಕಂಟಿಗಳಿರುವ ಜಾಗ, ದಿನ್ನೆಗಳಲ್ಲಿ ಬೀಜದುಂಡೆಗಳನ್ನು ಇಟ್ಟು ಬರಲಾಗಿತ್ತು.

ಕಹಿಬೇವು, ಹೊಂಗೆ, ಸೀಮೆ ಹುಣಸೆ, ಹುಣಸೆ, ನೇರಳೆ, ಗೇರು, ಮಾವು, ಕಾಡು ಬಾದಾಮಿ ಮುಂತಾದ ಬೀಜಗಳನ್ನು ಉಂಡೆಯೊಳಗೆ ಸೇರಿಸಿ ಆಯಾ ಪ್ರದೇಶದ ಮಣ್ಣನ್ನೇ ಉಂಡೆ ತಯಾರಿಗೆ ಬಳಸಲಾಗಿತ್ತು. 66% ಮಣ್ಣು, 33% ಸಗಣಿಯನ್ನು ಬಳಸಿ ಉಂಡೆ ಒಡೆಯದ ರೀತಿ ಕಾಪಾಡಿಕೊಳ್ಳಲು ಸ್ವಲ್ಪ ಜೇಡಿಮಣ್ಣು ಬಳಸಿ ಉಂಡೆ ಸಿದ್ದಪಡಿಸಲಾಗಿತ್ತು. ತಯಾರಿಸಿದ ಉಂಡೆಗಳನ್ನು ನೆರಳಿನಲ್ಲಿ ಒಣಗಿಸಿ ಜೂನ್ ಆರಂಭದಲ್ಲಿ ಮಳೆ ಬಿದ್ದು ಭೂಮಿ ನೀರಿನ ತೇವದಿಂದ ತೋಯ್ದಾಗ ಆಯ್ದ ಆಯಕಟ್ಟಿನ ಸ್ಥಳಗಳಲ್ಲಿ ಬೀಜದುಂಡೆಗಳನ್ನು ಇಟ್ಟು ಬರಲಾಗಿತ್ತು. ಇದೀಗ ಬೀಜದುಂಡೆಗಳಲ್ಲಿನ ಬೀಜಗಳು ಮಳೆಯಲ್ಲಿ ನೆನೆದು ಬೇರು ಬೆಳೆಸಿಕೊಂಡಿವೆ. ಉಂಡೆಯೊಳಗಿನ ಸಾರವನ್ನೇ ಹೀರಿಕೊಂಡು ಗಿಡಗಳಾಗಿ ಎಲೆ ಚಿಗುರಿಸಿ ಮೇಲೇಳುತ್ತಿವೆ. ಗುಡ್ಡಗಳಲ್ಲಿ, ಬದುಗಳಲ್ಲಿ ಗಿಡಗಳು ಚಿಗುರಿರುವುದು ದೂರದಿಂದಲೇ ಕಂಡುಬರುತ್ತಿವೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಗುಡ್ಡವನ್ನೇರಿ ಉಂಡೆಗಳನ್ನು ಬಿತ್ತಿದ್ದ ಸ್ವಸಹಾಯ ಸಂಘದ ಮಹಿಳೆಯರು, ಗ್ರಾಮಸ್ಥರಲ್ಲಿ ಅಚ್ಚರಿ ಮನೆಮಾಡಿದೆ. ಖರ್ಚಿಲ್ಲದೇ ಸಾವಿರಾರು ಗುಡ್ಡಗಳಲ್ಲಿ ಲಕ್ಷಾಂತರ ಗಿಡಗಳ ಹಸಿರು ಹೊದಿಕೆ ಮಾಡಿದಂತಾಗಿದೆ.

“ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಬಿತ್ತಿದ ಪ್ರತೀ ಉಂಡೆಗಳು ಮೊಳಕೆಯೊಡೆದಿವೆ. ಕೆಲವು ಗಿಡಗಳಾಗಿ ನಾಲ್ಕಾರು ಎಲೆಗಳನ್ನು ಅರಳಿಸಿ ನಿಂತಿವೆ. ಪ್ರತೀ ಜಿಲ್ಲೆಗಳಲ್ಲಿ ಸ್ಥಳೀಯವಾಗಿಯೇ ಲಭ್ಯವಾಗುವ, ಕಡಿಮೆ ನೀರಿನಲ್ಲಿಯೂ ಬೆಳೆಯಬಹುದಾದ, ದೀರ್ಘಕಾಲ ಜೀವಂತವಾಗಿರಬಲ್ಲ ಸಾಮಥ್ರ್ಯ ಹೊಂದಿರುವ ಬೀಜಗಳನ್ನೇ ಆಯ್ದುಕೊಳ್ಳಲಾಗಿತ್ತು. ಪ್ರಾಣಿಗಳು ತಿನ್ನಲು ಅಪೇಕ್ಷೆ ಪಡದ ಅರಣ್ಯ ಗಿಡಗಳ ಬೀಜಗಳು, ಹಣ್ಣಿನ ಗಿಡಗಳು, ಜೈವಿಕ ಇಂಧನ ಮೂಲಗಳ ಗಿಡಗಳ ಬೀಜಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಪರಿಸರಕ್ಕೆ ಮಾರಿಯಾದ ಅಕೇಶಿಯಾ, ನೀಲಗಿರಿಯಂತಹ ಬೀಜಗಳನ್ನು ಬಳಸದಂತೆ ಸದಸ್ಯರಿಗೆ ತಾಕೀತು ಮಾಡಲಾಗಿತ್ತು. ದೊಡ್ಡ ಗಾತ್ರದ ಬೀಜಗಳಿದ್ದಲ್ಲಿ ಒಂದು ಉಂಡೆಗೆ ಒಂದು ಬೀಜ ಹಾಗೂ ಸಣ್ಣ ಗಾತ್ರದ ಬೀಜಗಳಾದಲ್ಲಿ ಎರಡು ಬೀಜಗಳನ್ನು ಉಂಡೆಯೊಳಗೆ ಸೇರಿಸಲಾಗಿತ್ತು. ಇದರಿಂದಾಗಿ ಒಂದು ಬೀಜ ಮೊಳಕೆಯೊಡೆಯದಿದ್ದರೂ ಇನ್ನೊಂದು ಬೀಜ ಚಿಗುರೊಡೆದು ಗಿಡಗಳಾಗಿವೆ’ ಎನ್ನುತ್ತಾ ಬೀಜದುಂಡೆಗಳ ತಯಾರಿಕೆಯಲ್ಲಿನ ಶ್ರಮದ ಹಿನ್ನೆಲೆಯನ್ನು ವಿವರಿಸಿದರು ಪ್ರಾದೇಶಿಕ ನಿರ್ದೇಶಕರಾದ ಜಯಶಂಕರ್ ಶರ್ಮಾ.

ಬೀಜದುಂಡೆಗಳನ್ನು ಇಟ್ಟಿರುವ ಕಡೆಗಳಲ್ಲೆಲ್ಲಾ ಗಿಡಗಳು ಆಳಕ್ಕೆ ಬೇರಿಳಿಸಿಕೊಂಡು ಅಚ್ಚ ಹಸುರಾಗಿ ಎದ್ದೇಳುತ್ತಿವೆ. ಇದರಿಂದಾಗಿ ಕಡಿಮೆ ಖರ್ಚಿನಲ್ಲಿ ಅರಣ್ಯ ಗಿಡಗಳ ನಾಟಿಯ ಉದ್ದೇಶ ಸಾಕಾರಗೊಂಡಂತಾಗಿದೆ. ಬೀಜ ಪ್ರಸರಣದಲ್ಲಿ, ಉತ್ತಮ ವಾತಾವರಣ ಸೃಷ್ಠಿಯಲ್ಲಿ ಸ್ವ ಸಹಾಯ ಸಂಘದ ಸಹಸ್ರಾರು ಸದಸ್ಯರು ತಮ್ಮದೇ ಆದ ಪ್ರಾಮಾಣಿಕ ಕೊಡುಗೆ ನೀಡಿದಂತಾಗಿದೆ.

Leave a Reply

Your email address will not be published. Required fields are marked *