DharmasthalaNews

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೃಹತ್ ವನಸಂವರ್ಧನಾ ಅಭಿಯಾನ

ನಾಲ್ಕು ದಶಕಗಳಿಂದ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಜನಸಂಘಟನೆಯನ್ನು ಅಭಿವೃದ್ಧಿಪಡಿಸಿ, ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಅನುಷ್ಠಾನಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪೂಜ್ಯರ ಆಶಯದ ಕಾರ್ಯಕ್ರಮಗಳಲ್ಲಿ ಒಂದು.ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಪರಿಸರ, ಅರಣ್ಯೀಕರಣ, ಜಲಸಂವರ್ಧನೆ, ಸ್ವಚ್ಛತೆ ಮುಂತಾದ ಸಾಮಾಜಿಕ ಪರಿವರ್ತನಾ ಕಾರ್ಯಕ್ರಮಗಳಲ್ಲಿ ಹಲವಾರು ಹೊಸ ಹೊಳಹುಗಳನ್ನು ನೀಡುತ್ತಾ ಬಂದಿದ್ದಾರೆ.

ಪೂಜ್ಯರ ಆಶಯದಂತೆ ಯೋಜನೆಯ ಪ್ರಾರಂಭದಿಂದಲೂ ಸಾಮಾಜಿಕ ಅರಣ್ಯೀಕರಣ ಮತ್ತು ಜಲಸಂವರ್ಧನಾ ಕಾರ್ಯಕ್ರಮಗಳಿಗೆ ವಿಶೇಷ ಒತ್ತನ್ನು ನೀಡಲಾಗುತ್ತಿದೆ. ಎಲ್ಲೆಡೆಗಳಲ್ಲಿಯೂ ವನಸಂವರ್ಧನೆ ಆಗಬೇಕೆಂಬ ದೃಷ್ಟಿಕೋನದಿಂದ ವಿಶೇಷವಾಗಿ ದೇವಾಲಯಗಳ ಪರಿಸರದಲ್ಲಿ ದೇವರಕಾಡು, ಸರಕಾರಿ ಭೂಮಿಗಳಲ್ಲಿ ಪ್ರಗತಿವನ, ಶಾಲಾ ಪರಿಸರದಲ್ಲಿ ಶಾಲಾವನ, ಶಾಲಾ ಕೈತೋಟ, ಔಷಧಿ ವನ, ನವಗ್ರಹ ವನ, ರೈತರ ಭೂಮಿಯಲ್ಲಿ ಕೃಷಿಕಾಡು, ರಸ್ತೆಯ ಅಕ್ಕಪಕ್ಕದಲ್ಲಿ ಸಾಲು ಮರ ನಾಟಿ ಮುಂತಾದಅರಣ್ಯೀಕರಣ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡುತ್ತಾ ಬಂದಿದೆ. ಜೊತೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡಿ ಬರಗಾಲ ಪೀಡಿತ ಪ್ರದೇಶಗಳಲ್ಲಿ ಅರಣ್ಯ ಸಂಪತ್ತನ್ನು ಹೆಚ್ಚಿಸುವ ಪ್ರಯತ್ನಗಳಿಗೆ ಪೂಜ್ಯರು ಮಾರ್ಗದರ್ಶನ ನೀಡುತ್ತಿದ್ದಾರೆ. ಗಿಡಗಳನ್ನು ನಾಟಿ ಮಾಡಿದರೆ ಸಾಲದು, ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿಯೂ ಎಲ್ಲರೂ ಕೈಜೋಡಿಸಬೇಕೆಂದು ಪೂಜ್ಯರು ಅಭಿಪ್ರಾಯ ಪಡುತ್ತಾರೆ.  ಅದೇ ರೀತಿ ಜಲಾನಯನ ಕಾರ್ಯಕ್ರಮಗಳಲ್ಲಿ ಕೂಡಾ ಇಂಗುಗುಂಡಿ ರಚನೆ, ತಡೆಕಟ್ಟುಗಳು, ಬೋರ್‍ವೆಲ್ ಮರುಪೂರಣ, ಮುಂತಾದ ಕಾರ್ಯಕ್ರಮಗಳಿಗೂ ಪ್ರಾಶಸ್ತ್ಯ ನೀಡಲಾಗುತ್ತಿದೆ.  ಇತ್ತೀಚಿನ ವರ್ಷಗಳಲ್ಲಿ ಕೆರೆಗಳ ಪುನರ್‍ನಿರ್ಮಾಣದ ಕಾರ್ಯಕ್ರಮಗಳನ್ನು ರಾಜ್ಯದ ವಿವಿದೆಡೆಗಳಲ್ಲಿ ಪೂಜ್ಯರು ಕೈಗೆತ್ತಿಕೊಂಡಿರುತ್ತಾರೆ.ಈ ಎಲ್ಲ ಕಾರ್ಯಕ್ರಮಗಳು ಜನರ ಸಹಭಾಗಿತ್ವದಲ್ಲಿ ಆದಾಗ ಮಾತ್ರ ಸುಸ್ಥಿರವಾಗಬಹುದೆಂಬ ವಿಶ್ವಾಸ ಪೂಜ್ಯರದ್ದಾಗಿರುತ್ತದೆ.

ಇದೀಗ ಸಾಮಾಜಿಕ ಅರಣ್ಯವನ್ನು ವೃದ್ಧಿಸುವ ಉಪಾಯವಾಗಿ ಬೀಜದುಂಡೆಗಳನ್ನು ತಯಾರಿಸಿ ಬಿತ್ತುವ ಬೃಹತ್ ಅಭಿಯಾನವನ್ನು ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಪರಿಕಲ್ಪನೆಯ್ನಯೋಜನೆಯು ಈ ವರ್ಷ ವಿಶೇಷವಾಗಿ ಅನುಷ್ಠಾನಿಸುತ್ತಿದೆ. ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ರಾಜ್ಯದ ಸಾವಿರಾರು ಗ್ರಾಮಗಳಲ್ಲಿ ಪಾರಂಪರಿಕ ವೃಕ್ಷಗಳಾದ ಮಾವು, ಬೇವು, ಹುಣಸೆ, ನೇರಳೆ, ಪೇರಳೆ ಮುಂತಾದ ಹತ್ತು ಹಲವು ಬೀಜಗಳ ಉಂಡೆಗಳನ್ನು ತಯಾರಿಸಿ ಅರಣ್ಯದಲ್ಲಿ ಬಿತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಇದಕ್ಕಾಗಿ ರಾಜ್ಯದಾದ್ಯಂತ ಅರಿವನ್ನು ಮೂಡಿಸುವ ದೃಷ್ಟಿಯಿಂದ ಪೂಜ್ಯರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ 6,400 ಕಾರ್ಯಕ್ರಮಗಳ ಮುಖೇನ 29,00,000 ಬೀಜದುಂಡೆ, 2,00,000 ಸಸಿನಾಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 22.7.2017ರಂದು ಮುಂಜಾನೆ ಗಂಟೆ 10.00 ರಿಂದ 11.00ರೊಳಗೆ ರಾಜ್ಯದಾದ್ಯಂತ ಪರಿಸರ ಪ್ರೇಮಿಗಳು ಸಸಿನಾಟಿ, ಬೀಜದುಂಡೆ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ. ಅಂದು ಮುಂಜಾನೆ ಉಡುಪಿ ತಾಲೂಕಿನ ಮಾರ್ಪಳ್ಳಿ ಗ್ರಾಮದಲ್ಲಿ ಪೂಜ್ಯರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.  ಇದೇ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿ ದೇವರ ಕಾಡಿಗೆ ನಾಟಿ ಮಾಡುವುದರ ಮುಖೇನ ರಾಜ್ಯದ ಸನ್ಮಾನ್ಯ ಅರಣ್ಯ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ಚಾಲನೆ ನೀಡಲಿದ್ದಾರೆ.  ಅದೇ ರೀತಿ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮದಲ್ಲಿ ಸನ್ಮಾನ್ಯ ಕೃಷಿ ಸಚಿವರಾದ ಶ್ರೀ ಕೃಷ್ಣಬೈರೇಗೌಡರವರು ಬೀಜದುಂಡೆ ವಿತರಣೆ ಮತ್ತು ಸಸಿ ನಾಟಿ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಶ್ರೀ ವಸಂತ ಬಂಗೇರವರು ಶಾಲಾವನ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಕರಿಕಲನ್‍ರವರು ಭಾಗವಹಿಸಲಿರುವರು.

ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಎಲ್ಲ ಕಾರ್ಯಕ್ರಮಗಳಿಗೂ ಎಲ್ಲ ಅರಣ್ಯ ಪ್ರೇಮಿಗಳ ಸಹಕಾರವನ್ನು ಕೋರುತ್ತೇವೆ. 

(ಡಾ| ಎಲ್.ಎಚ್.ಮಂಜುನಾಥ್)

ಕಾರ್ಯನಿರ್ವಾಹಕ ನಿರ್ದೇಶಕರು

 

One thought on “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೃಹತ್ ವನಸಂವರ್ಧನಾ ಅಭಿಯಾನ

Leave a Reply to Basavaraju k Cancel reply

Your email address will not be published. Required fields are marked *