Agriculturesuccess story

ತಂತ್ರಜ್ಞಾನ ಆಧಾರಿತ ಹೈನುಗಾರಿಕೆ ಒಂದು ಮಾದರಿ

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಶ್ರೀರಾಂಪುರ ಕಾಲೋನಿಯ 23 ವರ್ಷದ ವಯಸ್ಸಿನ ಸಾಗರ್ ಎಂಬಾತ ಆಧುನಿಕ ಪದ್ದತಿಯಲ್ಲಿ ಹೈನುಗಾರಿಕೆಯನ್ನು ನಡೆಸಿ ಸೈ ಎನಿಸಿಕೊಂಡಾತ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚುಂಚನಕಟ್ಟೆ ವಲಯದ ಶ್ರೀರಾಂಪುರ ಕಾಲೋನಿಯಲ್ಲಿ “ಜೋಡಿ ಎತ್ತು ಪ್ರಗತಿ ಬಂಧು” ತಂಡಕ್ಕೆ ಸೇರಿಕೊಂಡು ಹೈನುಗಾರಿಕೆಯನ್ನು ಆದಾಯೋತ್ಪನ್ನ ಚಟುವಟಿಕೆಯಾಗಿ ಆಯ್ಕೆ ಮಾಡಿಕೊಂಡು ಯಶಸ್ಸನ್ನು ಸಾಧಿಸಿದಾತ. ಇವರ ಪ್ರಗತಿ ಬಂಧು ತಂಡದಲ್ಲಿ ಒಟ್ಟು 5 ಮಂದಿ ಸದಸ್ಯರಿದ್ದು ತಮ್ಮ ಕೃಷಿ ಜಮೀನಿನ ಕೆಲಸ ಕಾರ್ಯಗಳನ್ನು ಕೃಷಿ ಕಾರ್ಮಿಕರ ಸಮಸ್ಯೆಯಿಂದ ಹೊರಬರಲು ಹಾಗೂ ಕೃಷಿಯಲ್ಲಿ ಯಶಸ್ಸನ್ನು ಗಳಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಯೋಜಿತ ಪ್ರಗತಿ ಬಂಧು
ತಂಡವನ್ನು ರಚಿಸಿಕೊಂಡು ಮಾದರಿ ಎನಿಸಿದ ಯುವಕ.

ತಂದೆ ಶ್ರೀಯುತ ನಟರಾಜ್‍ರವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದೊಂದಿಗೆ ಹೈನುಗಾರಿಕೆಯನ್ನು ಪ್ರಾರಂಭಿಸಿ ಅದರಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇದನ್ನು ಒಂದು
ಲಾಭದಾಯಕ ಉದ್ಯಮವನ್ನಾಗಿ ಪ್ರಾರಂಭಿಸುವ ನಿರ್ಧಾರ ಮಾಡಿರುತ್ತಾರೆ. ITI ವಿದ್ಯಾಭ್ಯಾಸ ಮಾಡಿರುವ ಸಾಗರ್, ಇವರ ಕುಟುಂಬದಲ್ಲಿ ಒಟ್ಟು 6 ಮಂದಿ ಸದಸ್ಯರಿದ್ದು ಇತರ ಸಂಸ್ಥೆಗಳಲ್ಲಿ ಉದ್ಯೋಗವನ್ನು ಅರಸುವ ಬದಲಾಗಿ, ಸ್ವ ಉದ್ಯೋಗವನ್ನು ನೆಚ್ಚಿಕೊಂಡಿದ್ದಾರೆ. ಕುಟುಂಬದ ವೃತ್ತಿ ವ್ಯವಸಾಯವೇ ಆಗಿದ್ದೂ ತಂದೆಯ ಸಹಕಾರದೊಂದಿಗೆ ತಮ್ಮ ಜಮೀನಿನಲ್ಲಿ ತೆಂಗು, ಬಾಳೆ, ಬೀನ್ಸ್ ಹಾಗೂ ಭತ್ತವನ್ನು ಬೆಳೆದು ಇತರ ರೈತರಿಗೆ ಮಾದರಿ ರೈತ ಎಂದೆನಿಸಿಕೊಂಡಿದ್ದಾರೆ. ಉಪಕಸುಬಾಗಿ ಹೈನುಗಾರಿಕೆಯನ್ನು ಆಯ್ಕೆ ಮಾಡಿಕೊಂಡಿದ್ದು ಒಟ್ಟು ಏಳು ಊಈ ತಳಿಯ ಹಸುಗಳನ್ನು ಸಾಕುತ್ತಿದ್ದು ತಲಾ ಒಂದು ಹಸುವಿನ ದರ ಅಂದಾಜು ರೂ.70,000/- ಆಗಿರುತ್ತದೆ. ಸುಮಾರು ರೂ. 4,00,000/- ವೆಚ್ಚದಲ್ಲಿ ಆಧುನಿಕ ಮಾದರಿಯ ಕೊಟ್ಟಿಗೆಯನ್ನು ರಚಿಸಿ ಉತ್ತಮ ಗಾಳಿ, ಬೆಳಕು ಹಾಗೂ ನೀರಿನ ಸೌಲಭ್ಯವಿರುವಂತೆ ರಚಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ತಲಾ 50-50 ಲೀಟರ್ ಹಾಲಿನ ಉತ್ಪಾದನೆಯಾಗುತ್ತಿದೆ. ಹೈನುಗಾರಿಕೆಯ ಸಂಪೂರ್ಣ ನಿರ್ವಹಣೆಯನ್ನು ಸಾಗರ್ ಮತ್ತು ಅವರ ತಂದೆ ನಟರಾಜ್‍ರವರೇ ನಿರ್ವಹಿಸುತ್ತಿದ್ದು ಯಾವುದೇ ಕೂಲಿಯಾಳುಗಳ ಬಳಕೆ ಮಾಡುತ್ತಿಲ್ಲ. ಹಸುಗಳಿಗೆ ಆಹಾರವಾಗಿ Q-04 ತಳಿಯ ಹಸಿರು ಹುಲ್ಲನ್ನು ಹಾಗೂ ಒಣ ಹುಲ್ಲನ್ನು ನೀಡಲಾಗುತ್ತಿದೆ. ಇವುಗಳ ಒಟ್ಟು ಆಹಾರದ ವೆಚ್ಚ ದಿನವೊಂದಕ್ಕೆ ರೂ. 1,000/- ವರೆಗೆ ಆಗುತ್ತಿದೆ. ಸದ್ರಿ ಮಾರುಕಟ್ಟೆಯಲ್ಲಿ ಹಾಲಿನ ದರ ಲೀಟರ್ ವೊಂದಕ್ಕೆ ರೂ. 19/- ರಂತೆ ದೊರೆಯುತ್ತಿರುವುದರಿಂದ ದಿನವೊಂದಕ್ಕೆ ಒಟ್ಟು ರೂ. 2,000/- ದಷ್ಟು ಗಳಿಸುತ್ತಿದ್ದಾರೆ. ರೂ. 1,000/- ಆಹಾರ ಮತ್ತು ನಿರ್ವಹಣಾ ವೆಚ್ಚ ಮತ್ತು ರೂ. 200/- ತನ್ನ ಸ್ವಂತ ಕೂಲಿ ವೆಚ್ಚವನ್ನು ಕಳೆದು ಸುಮಾರು ರೂ. 800/- ರಷ್ಟು ದಿನವೊಂದರ ಆದಾಯವನ್ನು ಗಳಿಸುತ್ತಿದ್ದಾರೆ. ಇದರ ಜೊತೆಗೆ ಮಾರುಕಟ್ಟೆಯಲ್ಲಿ ದೊರೆಯುವ ಪಶು ಆಹಾರವನ್ನು ಕಾಲ ಕಾಲಕ್ಕೆ ನಿಗದಿತವಾಗಿ ನೀಡಲಾಗುತ್ತಿದೆ. ಹಸುಗಳಿಗೆ ಗರ್ಭಧಾರಣೆಯನ್ನು ಪಶು ವೈದ್ಯರ ಮೂಲಕ ಕೃತಕವಾಗಿ ಮಾಡಿಸಲಾಗುತ್ತಿದೆ. ಈಗಾಗಲೇ ಒಂದು ಗಂಡು ಆಕಳನ್ನು ಸಾಕುತ್ತಿದ್ದು ಮುಂದಿನ ದಿನಗಳಲ್ಲಿ ಸ್ವಾಭಾವಿಕ ಗರ್ಭಧಾರಣೆ ಮಾಡಿಸುವ ಚಿಂತನೆಯಲ್ಲಿದ್ದಾರೆ.

ಹಾಲನ್ನು ಕರೆಯಲು ಎರಡೂ ಹೊತ್ತು ಯಂತ್ರಗಳನ್ನು ಬಳಸಲಾಗುತ್ತಿದ್ದು, ಒಂದು ಹಸುವಿನ ಹಾಲನ್ನು ಕರೆಯಲು ಕೇವಲ 7 ನಿಮಿಷ ಅವಧಿ ಸಾಕಗುತ್ತದೆ ಎಂದು ಖುಷಿಯಿಂದ ಸಾಗರ್
ಹೇಳುತ್ತಾರೆ. ಹಾಲುಕರೆಯುವ ಯಂತ್ರದ ಬೆಲೆ ಒಂದಕ್ಕೆ ಅಂದಾಜು ರೂ.40,000/- ಇದ್ದು ಇದಕ್ಕಾಗಿ ವಿದ್ಯುತ್ ಸಂಪರ್ಕವನ್ನು ಬಳಸಲಾಗುತ್ತಿದೆ. ವಿದ್ಯುತ್ ವ್ಯತ್ಯಯವಾದ ಸಂದರ್ಭದಲ್ಲಿ ಸೀಮೆಎಣ್ಣೆಯ ಪಂಪ್ ಮೂಲಕ ಸದ್ರಿ ಹಾಲು ಕರೆಯುವ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಎಂಬಂತೆ ಸ್ವಂತ ಬಂಡವಾಳ, ಯೋಜನೆಯ ಹಣಕಾಸಿನ ಸೌಲಭ್ಯ ಮತ್ತು ಬ್ಯಾಂಕ್ ಸಾಲದ ಮೂಲಕ ಹೈನುಗಾರಿಕೆಯನ್ನು ನಡೆಸಿ ಇದನ್ನೂ ಲಾಭದಾಯಕವಾಗಿ ಮಾಡಲು ಸಾಧ್ಯವೆಂದು ತೋರಿಸಿದ್ದಾರೆ. ಇಂದಿನ ಯುವಕರು ಉನ್ನತ ವಿದ್ಯಾಭ್ಯಾಸವನ್ನು ಮಾಡಿ ಕಡಿಮೆ ಸಂಬಳಕ್ಕೆ ಇತರರ ಲೆಕ್ಕವನ್ನು ವರ್ಷ ಪೂರ್ತಿ ಬರೆಯುವ ಉದ್ಯೋಗಕ್ಕೆ ಹೋಗುವ ಬದಲಾಗಿ ಸ್ವಾವಲಂಬಿಯಾಗಿ ಸ್ವ-ಉದ್ಯೋಗವನ್ನು ಮಾಡಿ ತನ್ನ ಲೆಕ್ಕಾಚಾರವನ್ನು ತಾನೇ ಬರೆಯುವಂತೆ ಮಾಡುವಲ್ಲಿ ಹಾಗೂ ಇಂದಿನ ಯುವಕರು ಉದ್ಯೋಗವರಸುತ್ತಾ ಮಹಾನಗರಗಳ ಪಾಲಾಗುವುದನ್ನು ತಡೆದು ಸ್ವ ಉದ್ಯೋಗದಲ್ಲಿ ಯಶಸ್ಸು ಸಾಧಿಸುವಂತೆ ಮಾಡುವಲ್ಲಿ ತಂದೆ ನಟರಾಜ್‍ರವರ ದೃಢ ನಿರ್ಧಾರ ಹಾಗೂ ಪ್ರೋತ್ಸಾಹ ಅತ್ಯಂತ ಶ್ಲಾಘನೀಯವಾಗಿದೆ.

Leave a Reply

Your email address will not be published. Required fields are marked *