Communnity DevelopmentDharmasthalaNewsUncategorized

ಸುಜ್ಞಾನನಿಧಿ ಶಿಷ್ಯವೇತನ ದಶಮಾನೋತ್ಸವ ವರ್ಷ ೨೦೧೭-೧೮ರ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ರಾಜ್ಯದಾದ್ಯಂತ ಸಣ್ಣ ಕೃಷಿಕರ ಮತ್ತು ಮಹಿಳೆಯರ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಈ ಸಮುದಾಯದ ಆರ್ಥಿಕ ಸುಧಾರಣೆ, ಜೀವನಶೆಲಿಯ ಸುಧಾರಣೆ ಮತ್ತು ಪರಿಸರದಲ್ಲಿನ ಪರಿವರ್ತನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಪಾಲುದಾರ ಕುಟುಂಬಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ವಿವಿಧ ಕ್ಷೇತ್ರಗಳಲ್ಲಿರುವ ಸೇವೆಗಳನ್ನು ಪಡಕೊಳ್ಳಲು ನೆರವಿಗನಾಗಿ ಕೆಲಸ ಮಾಡುತ್ತಿದೆ. ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ಯೋಜನೆಯು ದೇಶದಲ್ಲಿಯೇ ಅದ್ವಿತೀಯವಾಗಿರುವ ಮಾದರಿಯನ್ನು ಸೃಷ್ಟಿಸಿದ್ದು, ಇದೀಗ ಕರ್ನಾಟಕ ರಾಜ್ಯದ ಸುಮಾರು ೩೮ ಲಕ್ಷ ಕುಟುಂಬಗಳನ್ನು ಬ್ಯಾಂಕುಗಳೊಂದಿಗೆ ಜೋಡಿಸಲು ಯಶಸ್ವಿಯಾಗಿದೆ.  ರಾಷ್ಟ್ರದ ೯ ಪ್ರಮುಖ ಬ್ಯಾಂಕುಗಳ ಪ್ರತಿನಿಧಿಯಾಗಿ ಯೋಜನೆಯು ಕೆಲಸ ಮಾಡುತ್ತಿದ್ದು, ತನ್ನ ವಿವಿಧ ಕೆಲಸಗಳಿಗೆ ದೊರೆಯುವ ಗೌರವ ಸಂಭಾವನೆಯಿಂದ ಯೋಜನೆಯ ಖರ್ಚುಗಳನ್ನು ನಿಭಾಯಿಸುವುದಲ್ಲದೇ ಮಿಗತೆಯನ್ನು ಮಾಡಿಕೊಂಡು ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ.

೨೦೦೭ರಲ್ಲಿ ಯೋಜನೆಯು ತನ್ನ ಬೆಳ್ಳಿಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಯೋಜನೆಯ ಪಾಲುದಾರ ಕುಟುಂಬಗಳ ಮಕ್ಕಳು ತಾಂತ್ರಿಕ ವಿದ್ಯಾಭ್ಯಾಸವನ್ನು ಹೊಂದಿ ಉತ್ತಮ ಬದುಕನ್ನು ಸಾಧಿಸಬೆಕೆಂಬ ಸದುದ್ದೇಶದಿಂದ ಆಯ್ದ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಆರಂಭಿಸಲಾಯಿತು. ದೀರ್ಘಾವಧಿ ಪ್ರಶಿಕ್ಷಣಗಳಾದ ವೆದ್ಯಕೀಯ, ಇಂಜಿನಿಯರಿಂಗ್ ಮುಂತಾದ ಕೋರ್ಸ್ ಗಳಿಗೆ ಮಾಸಿಕ ರೂ. ೧,೦೦೦/- ದಂತೆಯೂ, ಅಲ್ಪಾವಧಿ ಪ್ರಶಿಕ್ಷಣಗಳಾದ ಡಿಪ್ಲೋಮಾ, ನರ್ಸಿಂಗ್, ಡಿ.ಎಡ್. ಮುಂತಾದ ಕೋರ್ಸ್ ಗಳಿಗೆ ಮಾಸಿಕ ರೂ. ೪೦೦/- ರಂತೆಯೂ ಶಿಷ್ಯವೇತನವನ್ನು ಪೂಜ್ಯರು ಆ ಸಂದರ್ಭದಲ್ಲಿ ಘೋಷಿಸಿದರು.

ಇದೀಗ ಯೋಜನೆಯು ಜಾರಿಗೆ ತಂದಿರುವ ಸುಜ್ಞಾನನಿಧಿ ಶಿಷ್ಯವೇತನದ ದಶಮಾನೋತ್ಸವ ವರ್ಷ. ಈ ಹಿನ್ನೆಲೆಯಲ್ಲಿ ೨೦೧೭-೧೮ರ ಸಾಲಿಗೆ ಹತ್ತು ಸಹಸ್ರ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಾಸಿಕ ರೂ. ೪೦೦/-  ರಿಂದ ರೂ. ೧,೦೦೦/- ರವರೆಗೆ ರೂ. ೬.೫೦ ಕೋಟಿ ಸುಜ್ಞಾನನಿಧಿಯನ್ನು ಪೂಜ್ಯರು ಯೋಜನೆಯಿಂದ ಮಂಜೂರು ಮಾಡಿದ್ದು, ಕರ್ನಾಟಕ ರಾಜ್ಯದಾದ್ಯಂತ ಆಯ್ದ ಮಕ್ಕಳಿಗೆ ಈ ಸೌಲಭ್ಯವು ದೊರೆಯಲಿರುವುದು.  ಈ ವರ್ಷ ೪,೨೭೦ ಮಕ್ಕಳಿಗೆ ಇಂಜಿನಿಯರಿಂಗ್ ಪದವಿಗೆ, ೫೭೬ ಮಕ್ಕಳಿಗೆ ವೆದ್ಯಕೀಯ ಶಿಕ್ಷಣಕ್ಕಾಗಿ ಪ್ರತಿ ತಿಂಗಳು ರೂ. ೧,೦೦೦/- ದಂತೆ ಶಿಷ್ಯವೇತನವನ್ನು ಘೋಷಿಸಲಾಗಿದ್ದು, ಡಿಪ್ಲೋಮಾ ಮಾಡಲು ೪,೧೨೩ ಮಕ್ಕಳಿಗೆ ೧,೦೩೧ ಮಕ್ಕಳಿಗೆ ಮತ್ತಿತರ ಕೋರ್ಸ್ ಗಳಿಗಾಗಿ ಪ್ರತಿ ತಿಂಗಳೂ ರೂ. ೪೦೦/- ರಂತೆ ಶಿಷ್ಯವೇತನವನ್ನು ಬಿಡುಗಡೆ ಮಾಡಲಾಗುವುದು.

 ಈ ಶಿಷ್ಯವೇತನಗಳು ಕರ್ನಾಟಕ ರಾಜ್ಯದಾದ್ಯಂತ ೨,೩೮೭ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ನೆರವು ದೊರಕಿಸಲು ಸಹಾಯವಾಗಿದೆ.

ಕಳೆದ ಒಂದು ದಶಕದಲ್ಲಿ ೨೫,೨೧೦ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸುಜ್ಞಾನನಿಧಿ ಶಿಷ್ಯವೇತನವನ್ನು ಪಡೆದುಕೊಂಡು, ಇದುವರೆಗೆ ಈ ಕಾರ್ಯಕ್ರಮಕ್ಕೆ ಯೋಜನೆಯ ವತಿಯಿಂದ ರೂ. ೩೦.೦೦ ಕೋಟಿ ವಿನಿಯೋಗಿಸಲಾಗಿದೆ.

ಈ ಕಾರ್ಯಕ್ರಮದಿಂದ ಉನ್ನತ ವ್ಯಾಸಂಗದ ಬಗ್ಗೆ ಕಲ್ಪನೆಯನ್ನೇ ಮಾಡಿಕೊಳ್ಳದಿದ್ದ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ತಾಂತ್ರಿಕ ಶಿಕ್ಷಣವನ್ನು ಕೊಡಿಸುವಲ್ಲಿ ಜಾಗೃತರಾಗಿದ್ದಾರೆ ಮತ್ತು ಇದರ ಮಹತ್ವವನ್ನು ಅವರು ಅರಿತಿದ್ದಾರೆ.  ಸ್ವಯಂ ನಿರಕ್ಷರಕುಕ್ಷಿಗಳಾಗಿದ್ದರೂ ತಮ್ಮ ಮಕ್ಕಳು ತಾಂತ್ರಿಕ ಶಿಕ್ಷಣವನ್ನು ಹೊಂದಿ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಬೆಕೆಂಬ ಅಭಿಲಾಷೆ ಇವರಲ್ಲಿ ಮೂಡಿದೆ.  ಇದಕ್ಕಾಗಿ ಸುಜ್ಞಾನನಿಧಿ ಶಿಷ್ಯವೇತನದ ಜೊತೆಯಲ್ಲಿ ಯೋಜನೆಯಿಂದ ಪ್ರಗತಿನಿಧಿಯ ನೆರವನ್ನು ಪಡೆಯುವುದಲ್ಲದೇ ಸ್ವಯಂ ಉಳಿತಾಯ ಮಾಡಿ ಮಕ್ಕಳನ್ನು ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಪ್ರಶಿಕ್ಷಣಾರ್ಥಿಗಳನ್ನಾಗಿ ಮಾಡಿ ಕಳುಹಿಸುವ ಬಗ್ಗೆ ಎಲ್ಲ ಪೋಷಕರು ಜಾಗೃತರಾಗಿರುವಂತೆ ಆಗಿರುತ್ತದೆ.

ಸುಜ್ಞಾನನಿಧಿ ಶಿಷ್ಯವೇತನದ ದಶಮಾನೋತ್ಸವ ವಿತರಣಾ ಕಾರ್ಯಕ್ರಮವನ್ನು ಭಾರತದ ಖ್ಯಾತ ವಿಜ್ಞಾನಿ, ಭಾರತರತ್ನ ಡಾ| ಸಿ.ಎನ್.ಆರ್. ರಾವ್ ಇವರ ಸಮ್ಮುಖದಲ್ಲಿ ನೆರವೇರಿಸುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ವೆಜ್ಞಾನಿಕ ಶಿಕ್ಷಣದ ಬಗ್ಗೆ ಹೊಸ ಶಕೆಯೊಂದನ್ನು ಆರಂಭಿಸುವಂತಾಗಿದೆ.  ಈ ಸಂದರ್ಭ ಪ್ರೊ| ಸಿ.ಎನ್.ಆರ್. ರಾವ್ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾರ್ಗದರ್ಶನ ನೀಡಿದರು. ಸನ್ಮಾನ್ಯರಿಗೆ ಇದೇ ಸಂದರ್ಭ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ವತಿಯಿಂದ ಪ್ರೊ| ಸಿ.ಎನ್.ಆರ್. ರಾವ್ ರವರನ್ನು ಪೂಜ್ಯರು ಸನ್ಮಾನಿಸಿದರು.

 

2 thoughts on “ಸುಜ್ಞಾನನಿಧಿ ಶಿಷ್ಯವೇತನ ದಶಮಾನೋತ್ಸವ ವರ್ಷ ೨೦೧೭-೧೮ರ ವಿತರಣಾ ಕಾರ್ಯಕ್ರಮ

  1. Sir degree complete agiro student’s minimum persantage est irbeku….. 65% idru reject maadidare adhu first class thane… Namgu kodbodallva sir

Leave a Reply to Poornima Cancel reply

Your email address will not be published. Required fields are marked *