Agriculturesuccess story

ಹಸಿರ ಸಮೃದ್ಧಿಗೆ ಆಸರೆಯಾದ ನಿರುಪಯುಕ್ತ ನೀರು

‘ಆಗದು ಎಂದು ಕೈ ಕಟ್ಟಿ ಕುಳಿತರೆ ಆಗದ ಕೆಲಸವು ಮುಂದೆ‘ ಎನ್ನುವ ಮಾತು ನಿಜ. ಸತತ ಬರದಿಂದ ಕೃಷಿಕರು, ಜನ ಸಾಮಾನ್ಯರು ತತ್ತರಿಸುವ ದಿನಗಳು ಮುಂದುವರೆಯುತ್ತಲೆ ಇವೆ. ಇದರಿಂದ ಹೊರ ಬರಲು ಅನೇಕರು ಬೇರೆ ಬೇರೆ ಮಾರ್ಗಗಳೊಂದಿಗೆ ಸಾಗಿಹರು. ಕೆಲವರು ಉದ್ಯೋಗ ಆಯ್ಕೆ ಮಾಡಿಕೊಂಡರೆ, ಇನ್ನು ಕೆಲವರು ವಲಸೆ ಸಾಗಿಹರು. ಅವಕಾಶವಿರದವರು ಅಲ್ಲಿ ಇಲ್ಲಿ ಸಾಲ ಮಾಡಿಕೊಂಡು ಮತ್ತೆ ಮಳೆಗಾಗಿ ಕಾದಿಹರು. ಇದನ್ನು ಮೀರಿ ಇನ್ನು ಕೆಲವರು ಬೋರು, ಬಾವಿ ಇತರೆ ಮೂಲಗಳ ನೀರಿನಿಂದ ಅಲ್ಪ ಕೃಷಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿಹರು. ಅದರೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದಲ್ಲಿಯ ಮರಿಕುಂಬಿಮಠ ವಿಭಕ್ತ ಕುಟುಂಬ ‘ಕೂಡಿಬಾಳಿದರೆ ಸ್ವರ್ಗ ಸುಖ’ ಅನ್ನುವಂತೆ ಅವಿಭಕ್ತ ಕುಟುಂಬದವರಂತೆ ಇತರರಿಗೆ ಅನುಕರಣೀಯರಾಗಿಹರು.

ಈ ಕುಟುಂಬದವರಿಗೆ ಒಟ್ಟು 4 ಕೂರ್ಗಿ ಕೃಷಿ ಭೂಮಿ ಇದ್ದು, 3 ಜನ ಅಣ್ಣ ತಮ್ಮಂದಿರ ಕುಟುಂಬದ ಸದಸ್ಯರುಟ್ಟು ಸೇರಿ ನಿರ್ವಹಿಸುತ್ತಿದ್ದಾರೆ. ಊಟ ಮತ್ತು ವಾಸ್ತವ್ಯಕ್ಕೆ ಮಾತ್ರ ಕುಟುಂಬದ ಅಗತ್ಯಕ್ಕೆ ಪ್ರತ್ಯೇಕವಾಗಿದ್ದರೂ ಕೃಷಿ ಮತ್ತು ಇತರೆ ಉದ್ಯೋಗ ವ್ಯವಹಾರದಲ್ಲಿ ಒಟ್ಟಾಗಿ ತೊಡಗಿಸಿಕೊಂಡಿಹರು. ಉಳ್ಳಾಗಡ್ಡಿ, ಶೇಂಗಾ, ಹತ್ತಿ, ಗೋದಿ ಮತ್ತು ಕಡ್ಲಿ ಬೆಳೆಯನ್ನು ಬೆಳೆಯುತ್ತಿದ್ದು, ಬರದ ಬೇಗೆಯನ್ನು 2011 ರಿಂದಲೂ ಅನುಭವಿಸುತ್ತಿರುವರು. ಆದರೆ ಇದನ್ನೆ ಸಮಸ್ಯೆಯಾಗಿ ಬಿಡದೇ ಪರ್ಯಾಯ ಮಾರ್ಗವನ್ನು ಕೂಡಾ ಕಂಡು ಇತರರಿಗೆ ಆದರ್ಶರಾಗಿಹರು.

ಹಳ್ಳದ ಓಣಿಗೆ ಹೊಂದಿಕೊಂಡಿರುವ 16 ಎಕರೆ ಕೃಷಿ ಭೂಮಿಯು ಮರಕುಂಬಿಮಠ ಕುಟುಂಬದವರದು. ಇದೇ ಮಾರ್ಗದಿಂದ ಹರಿದು ಬರುತ್ತಿದ್ದ ತ್ಯಾಜ್ಯ ನೀರನ್ನು ಏಕೆ ಕೃಷಿಗೆ ಬಳಕೆ ಮಾಡಬಾರದು? ಎಂದು ಯೋಚಿಸಿದವರು ಶ್ರೀ ಜಗದೀಶ್ವಯ್ಯ ಮರಕುಂಬಿಮಠ ಮತ್ತು ಸಹೋದರರು. ಸೂಕ್ತ ಆಲೋಚನೆಯಿಂದ ಪ್ರಯತ್ನಕ್ಕೆ ಚಾಲನೆಯನ್ನು 2012ರಿಂದಲೇ ಪ್ರಾರಂಭಿಸಿದರು. ಸುಮಾರು 20 ಸಾವಿರ ಜನಸಂಖ್ಯೆ ಇರುವ ಈ ಗ್ರಾಮದ ಜನರ ಮಲಪ್ರಭ ನೀರನ್ನು ಬಳಸುತ್ತಿರುವರು. ಹೀಗೆ ಬಳಕೆಯ ನಂತರ ಬರುವ ಅನುಪಯುಕ್ತ ನೀರು ಮೂರು ದಾರಿಯಲ್ಲಿ ಹಾಯ್ದು ಹೋಗುತ್ತಿರುವುದು. ಒಂದು ಹರಿಜನ ಕೇರಿಗೆ ಹೋದರೆ, ಇನ್ನೊಂದಡೆ ಬಸವನ ದೇವರ ಓಣಿಗೆ ಹೋಗುತ್ತದೆ. ಮತ್ತು ಇನ್ನೊಂದು ಗದ್ದಿಮನಿ ಅಂದರೆ ಹಳ್ಳದ ಓಣಿಗೆ ನೀರು ಹರಿದುಕೊಂಡು ಹೋಗಿ ಮುಂದೆ 1 ಕಿ.ಮೀ ದೂರದಲ್ಲಿರುವ ಮೊರಬ ಗ್ರಾಮದ 40 ಎಕರೆ ವಿಸ್ತೀರ್ಣದ ಹಿರೆಕೆರೆಗೆ ನೀರು ಸೇರುತ್ತದೆ.

ಹೀಗೆ ಹಿರೆಕೆರೆಗೆ ಸೇರುವ ನೀರು ಮರಕುಂಬಿಮಠ ಇವರ ಹೊಲದಲ್ಲಿ ಹಾಯ್ದು ಹೋಗುವ ನೀರನ್ನು ಹಂತ ಹಂತವಾಗಿ ತಮ್ಮ ಹೊಲಕ್ಕೆ ಬೇರೆ ಬೇರೆ ಕೃಷಿಗೆ ಪಂಪಸೆಟ್ ಮೂಲಕ ಬಳಸಿಕೊಳ್ಳುತ್ತಿರುವುದು ವಿಶೇಷ. ಹೀಗಾಗಿ ಊರವರ ಎಲ್ಲ ಹೊಲದವರು ಬರದ ಛಾಯೆಯಲ್ಲಿ ಬಸವಳಿದಿದ್ದರೂ ಮರಕುಂಬಿಮಠ ಇವರು ಮಾತ್ರ ಹಸಿರ ಸಿರಿಯ ನೆಮ್ಮದಿಯನ್ನು ನಿರಂತರ ಅನುಭವಿಸುತ್ತಾ ಸಾಗಿಹರು. ಈ ನೀರನ್ನು ವಿದ್ಯುತ್ ಚಾಲಿತ ಪಂಪ್‍ಸೆಟ್ ಮೂಲಕ ವಿಧ್ಯುತ್ ಅಭಾವವಿದ್ದಾಗ, ಬ್ಯಾಟರಿ ಚಾಲಿತ ಮೋಟರ್ ಪಂಪ್‍ಸೆಟ್‍ದಿಂದಲೂ ಬಳಸಿ ಸಂಪೂರ್ಣ ಸದುಪಯೋಗ ಮಾಡಿಕೊಂಡಿಹರು. ಇವರು ಉಪಯೋಗಿಸುವದರ ಜೊತೆಗೆ ಮತ್ತೆ ಪಕ್ಕದ ಕೃಷಿಕರಿಗೂ ನೀರನ್ನು ತಡೆಗೋಡೆಯಿಂದ ಬಿಡುವಲ್ಲಿ ಮಾನವಿಯತೆಯನ್ನು ಮೆರೆದಿಹರು.

ಈ ಕುಟುಂಬದ 3 ಜನ ಓರೆಗಿತ್ತಿಯರಾದ ಶ್ರೀಮತಿ ಪಾರ್ವತಿ, ಶ್ರೀಮತಿ ಸರೋಜ ಮತ್ತು ಶ್ರೀಮತಿ ಮಹದೇವಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಕನ್ಯಾ ಸ್ವ ಸಹಾಯದ ಸಂಘದಲ್ಲಿದ್ದು, ಯೋಜನೆಯಿಂದ ಸಾಮಾಜಿಕ ಮತ್ತು ಆರ್ಥಿಕ ಸಹಾಯದೊಂದಿಗೆ ಸಂಪೂರ್ಣ ಬದಲಾವಣೆ ಆಗಿಹರು. ಅವಿಭಕ್ತ ಕುಟುಂಬದ ಹಾಗೆ ಆದರ್ಶತೆಯನ್ನು ನೋಡಬಹುದಾಗಿದ್ದು, ಹಬ್ಬ ಹರಿದಿನಗಳಲ್ಲಿ, ಸಂಸ್ಕøತಿ ಆಚರಣೆಗಳಲ್ಲಿ ಒಟ್ಟಿಗೆ ಕೂಡುತ್ತಾರೆ. ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಯಲ್ಲೂ ಈ ಓರೆಗಿತ್ತಿಯರು ಒಂದಾಗಿ ವಿದ್ಯುತ್ ಚಾಲಿತ ರೊಟ್ಟಿಯಂತ್ರದ ಸಹಾಯದೊಂದಿಗೆ ರೊಟ್ಟಿಯನ್ನು ತಯಾರಿಸಿ ಮಾರಾಟ ಮಾಡುತ್ತಿರುವರು.

ಸ್ವ ಸಹಾಯ ಸಂಘದ ಆರ್ಥಿಕ ಸಹಾಯವನ್ನು ಇಲ್ಲಿಯವರೆಗೂ ಕೃಷಿಗೆ ಬೇಕಾಗುವ ಪಂಪಸೆಟ್‍ಗೆ, ಕರೆಂಟು ಮೋಟರ್‍ಗೆ, ರೊಟ್ಟಿ ಮಿಷನ್ ಗಾಗಿ ಒಟ್ಟು ರೂ.1.20 ಲಕ್ಷವನ್ನು ಪಡೆದಿದ್ದು, ಒಂದು ವಾರದ ಕಂತು ಬಾಕಿ ಇರದಂತೆ ಪ್ರತಿ ಕಂತನ್ನು ತುಂಬುತ್ತಾ ಸಾಗಿಹರು. ರೊಟ್ಟಿ ಮಾರಾಟದಿಂದ ನಿರಂತರ ಆದಾಯವಿದ್ದು, ಕೃಷಿ ಹಾಗೂ ರೊಟ್ಟಿ ವ್ಯಾಪಾರದಿಂದ  ಒಟ್ಟುಗೂಡಿ ದಿನಕ್ಕೆ ರೂ.500/- ರಿಂದ ರೂ.1000/-ವರೆಗೆ ನಿರಂತರ ಆದಾಯವನ್ನು ಗಳಿಸುತ್ತಿಹರು. ಈ ನಿಟ್ಟಿನೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೂಡಾ ನೀಡಲು ಅವಕಾಶ ದೊರೆತಿರುವುದಕ್ಕೆ ಹೆಮ್ಮೆಯನ್ನು ವ್ಯಕ್ತ ಪಡಿಸುತ್ತಾರೆ. ‘ಕೃಷಿ ತೋ ನಾಸ್ತಿ ದುರ್ಬಿಕ್ಷಂ’ ಎನ್ನುವಂತೆ ಬಾಳಿ ಬದುಕಿ ಆದರ್ಶರಾಗಿರುವುದು ಹೆಮ್ಮೆಯೇ ಸರಿ.

One thought on “ಹಸಿರ ಸಮೃದ್ಧಿಗೆ ಆಸರೆಯಾದ ನಿರುಪಯುಕ್ತ ನೀರು

Leave a Reply

Your email address will not be published. Required fields are marked *