Agriculturesuccess story

ಬರದಲ್ಲಿ ನೆರಳಾಯಿತು ನೇರಳೆ

ಗುಡ್ಡ, ಕಾಡುಗಳಲ್ಲಿ ಕಾಣ ಸಿಗುವ ನೇರಳೆ ಹಣ್ಣನ್ನು ಒಂದು ಬೆಳೆಯಾಗಿಯೂ ಬೆಳೆಯಬಹುದು ಎಂಬುದು ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆಯುರ್ವೇದ ಔಷಧಿಗಳ ತಯಾರಿಯಲ್ಲಿ, ಮುಖ್ಯವಾಗಿ ಮಧುಮೇಹವನ್ನು ಹತೋಟಿಗೆ ತರಲು ಬಳಕೆಯಾಗುವ ನೇರಳೆ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸರಿಯಾಗಿ ಮಳೆಯಾಗುತ್ತಿಲ್ಲ. ಹೀಗಾಗಿ ತೊಗರಿ, ಜೋಳ, ತರಕಾರಿಗಳನ್ನು ಬೆಳೆಯುತ್ತಿದ್ದ ಅನೇಕ ರೈತರುಗಳು ಕಡಿಮೆ ನೀರು ಬಳಸಿಕೊಂಡು ಉತ್ತಮ ಇಳುವರಿಯನ್ನು, ಕೈ ತುಂಬಾ ಆದಾಯವನ್ನು ನೀಡುವ ನೇರಳೆಯನ್ನು ಬೆಳೆಯುವತ್ತ ಮುಖ ಮಾಡಿದ್ದಾರೆ.

ಮುಳಬಾಗಿಲು ತಾಲೂಕಿನ ದುಗ್ಗಸಂದ್ರದ ದೇವರಾಜ ಶೆಟ್ಟಿಯವರು ಎರಡು ಎಕರೆ ಜಾಗವಿರುವ ಕೃಷಿಕರು. ಕಳೆದ ಮೂರು ವರ್ಷಗಳಿಂದ ಯೋಜನೆಯ ‘ಆಂಜನೇಯ’ ಪ್ರಗತಿಬಂಧು ಸಂಘದ ಸದಸ್ಯರು. ಸೇವಾಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹೊಸ ಆಲೋಚನೆಗಳು ನಾಲ್ಕು ವರ್ಷಗಳ ಹಿಂದೆ ನೇರಳೆ ಹಣ್ಣಿನ ಕೃಷಿಯನ್ನು ಕೈಗೊಳ್ಳಲು ಪ್ರೇರೇಪಿಸಿದವು.

ತಳಿಗಳು : ಕಸಿ ನೇರಳೆ, ಹೈಬ್ರೀಡ್, ಜಂಬು ನೇರಳೆ ಹೀಗೆ ಮೂರು ತಳಿಗಳಿವೆ. ಸೀಡ್‍ಲೆಸ್ ಹಣ್ಣಿನ ತಳಿಯೂ ಇತ್ತೀಚೆಗೆ ಚಾಲ್ತಿಗೆ ಬರುತ್ತಿದೆ. ದೇವರಾಜರು ಸಾಮಾನ್ಯ ಖರ್ಜೂರದಷ್ಟು ಗಾತ್ರ ಬೆಳೆಯುವ 40 ಕಸಿ ನೇರಳೆ ಗಿಡಗಳನ್ನು ಬೆಳೆಸಿದ್ದಾರೆ. ಸಸಿಗಳಿಗೆ ನರ್ಸರಿಯಲ್ಲಿ ಇನ್ನೂರರಿಂದ ನಾಲ್ನೂರು ರೂಪಾಯಿ ದರವಿದೆ.

ನಾಟಿ: ಜೂನ್ ತಿಂಗಳು ನಾಟಿಗೆ ಸೂಕ್ತ. ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ನಂತರ ಕೊಟ್ಟಿಗೆ ಗೊಬ್ಬರ ಹಾಗೂ ಮರಳುಮಿಶ್ರಿತ ಮಣ್ಣನ್ನು ಮಿಶ್ರಣ ಹಾಕಬೇಕು. ಗಿಡದಿಂದ ಗಿಡಕ್ಕೆ 25 ಅಡಿ ಅಂತರದಲ್ಲಿ 3 ಅಡಿ ಉದ್ದ ಮತ್ತು ಅಗಲವಿರುವ ಗುಣಿಯನ್ನು ತೆಗೆದು ನಾಟಿ ಮಾಡಬೇಕು. ಮರಳು ಮಿಶ್ರಿತ ಮಣ್ಣು ನೀರಿನ ತೇವಾಂಶವನ್ನು ನಾಲ್ಕೈದು ದಿನಗಳವರೆಗೆ ಹಿಡಿದಿಡುತ್ತದೆ.

ನೀರಾವರಿ : ಗಿಡವು ಅನೇಕ ದಿನಗಳವರೆಗೆ ನೀರು ಹಿಡಿದಿಡುವ ಸಾಮಥ್ರ್ಯ ಹೊಂದಿರುವುದರಿಂದ ಪ್ರತಿನಿತ್ಯ ನೀರುಣಿಸಬೇಕಾಗಿಲ್ಲ. ಇವರು ಕೃಷಿಹೊಂಡವನ್ನು ಮಾಡಿಕೊಂಡಿದ್ದು ಬೇಸಿಗೆಯಲ್ಲಿ ಗಿಡಗಳಿಗೆ ವಾರಕ್ಕೊಮ್ಮೆ ನೀರುಣಿಸುತ್ತಾರೆ. ಗಿಡಗಳಿಗೆ ಐದು ಲೀಟರ್‍ನ ಕ್ಯಾನ್‍ಗಳನ್ನು ಕಟ್ಟಿ, ಅವುಗಳಿಗೆ ನೀರು ತುಂಬಿಸಿ ಸಣ್ಣ ಪೈಪನ್ನು ಅಳವಡಿಸಿ ನಿಧಾನವಾಗಿ ಗಿಡದ ಬುಡಗಳಿಗೆ ಹನಿಹನಿಯಾಗಿ ನೀರು ಹರಿಯುವಂತೆ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

ನಿರ್ವಹಣೆ : ಇತರ ಬೆಳೆಗಳಿಗೆ ಹೋಲಿಸಿದರೆ ನಿರ್ವಹಣೆ ಸುಲಭ. ವರ್ಷದಲ್ಲೊಂದು ಬಾರಿ ಕೊಟ್ಟಿಗೆ ಗೊಬ್ಬರ ನೀಡಿದರೆ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ. ನಾಟಿ ಮಾಡಿದ ಮೂರು ವರ್ಷಗಳಲ್ಲಿ ಬೆಳೆ ಆರಂಭವಾಗುತ್ತದೆ. ಹೂವು ನೀಡಿದ ಮೂವತ್ತು ದಿನಗಳಲ್ಲಿ ಗೊಂಚಲಾಗಿ ಕಾಯಿಗಳು ಕಾಣಸಿಗುತ್ತವೆ. ಕೆಲವೇ ದಿನಗಳಲ್ಲಿ ಹಣ್ಣಾಗುತ್ತದೆ. ಜೀರುಂಡೆಗಳು ಮತ್ತು ಸಣ್ಣ ಗಾತ್ರದ ಕೀಟಗಳು ಬಹುಬೇಗನೆ ದಾಳಿ ಮಾಡುತ್ತವೆ. ಎಲೆ ಮತ್ತು ಹಣ್ಣನ್ನು ತಿನ್ನುತ್ತವೆ. ಹೂ ಬಿಡುವ ಸಮಯವಾದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ತಿಂಗಳಿಗೊಮ್ಮೆ ಔಷಧಿಯನ್ನು ಸಿಂಪಡಿಸಬೇಕು. ಇದರಿಂದ ಕೀಟಬಾಧೆ ಕಡಿಮೆಯಾಗುತ್ತದೆ.

ಇಳುವರಿ : ಜೂನ್ ಮತ್ತು ಜುಲೈ ತಿಂಗಳು ನೇರಳೆ ಹಣ್ಣಿಗೆ ಸುಗ್ಗಿ. ಸಾಮಾನ್ಯವಾಗಿ ಮೊದಲ ಫಸಲಿನಲ್ಲೆ ಒಂದು ಗಿಡದಿಂದ ಐವತ್ತು ಕೆ.ಜಿ.ಯವರೆಗೆ ಫಸಲನ್ನು ಪಡೆಯಬಹುದು. ದಿನ ಬಿಟ್ಟು ದಿನ ನೇರಳೆ ಕಟಾವಿಗೆ ಸಿಗುತ್ತದೆ. ಸುಮಾರು ಐದರಿಂದ ಆರು ದಿನಗಳವರೆಗೂ ನೇರಳೆ ಹಣ್ಣು ಕೊಳೆಯದಿರುವುದರಿಂದ ಹೊರ ಜಿಲ್ಲೆ, ರಾಜ್ಯಗಳಿಗೂ ಸಾಗಿಸಲು ಅನುಕೂಲಕರವಾಗಿದೆ. ಮರವು ನೂರು ವರ್ಷಕ್ಕಿಂತಲೂ ಅಧಿಕ ವರ್ಷಗಳ ಕಾಲ ಬದುಕುವುದರಿಂದ ವರ್ಷಂಪ್ರತಿ ಇಳುವರಿ ಕಟ್ಟಿಟ್ಟಬುತ್ತಿ.

ಮಾರುಕಟ್ಟೆ : ಬೆಂಗಳೂರು ಸಹಿತ ಮಹಾನಗರಗಳಲ್ಲಿ, ಪಟ್ಟಣಗಳಲ್ಲಿ ನೇರಳೆ ಹಣ್ಣಿಗೆ ಭಾರೀ ಬೇಡಿಕೆಯಿದೆ. ಪ್ರತಿ ಕೆ.ಜಿ.ಗೆ ಇನ್ನೂರು ರೂಪಾಯಿವರೆಗೆ ಧಾರಣೆಯಿದೆ. ಕೋಲಾರ ಜಿಲ್ಲೆಯ ರಾಮಸಂದ್ರ, ಮುಳಬಾಗಿಲು, ಆಂಧ್ರಪ್ರದೇಶದ ಕಡಪ, ನಲ್ಲೂರು ಮತ್ತು ವಿಜಯವಾಡದಿಂದ ವ್ಯಾಪಕ ಬೇಡಿಕೆಯಿದೆ.

Leave a Reply

Your email address will not be published. Required fields are marked *