Agriculturesuccess story

ಸಮೃದ್ದ ಹಾರಕ ಕೃಷಿ

“ಹಾರಕ ತಿಂದೋರು ಹಾರಾರ್ತ ಹೋದ್ರು ಎನ್ನುವ ಮಾತಿದೆ. ತೆವಳುವ ವ್ಯಕ್ತಿಯನ್ನು ಹಾರಕ ಹಾರುವಂತೆ ಮಾಡಬಲ್ಲದು ಎನ್ನುತ್ತಾರೆ ಹಿರಿಯರು. ನಮ್ಮನೆಯಲ್ಲಿ ಹಾರಕದಕ್ಕಿಯ ಊಟ ವಾರಕ್ಕೆರಡು ಭಾರಿಯಾದರೂ ಇರಲೇ ಬೇಕು. ಹಾರಕದ ರುಚಿ ನಮ್ಮ ತಂದೆಯವರು ಹತ್ತಿಸಿದ್ದು. ಎಷ್ಟೇ ದೈಹಿಕ ಶ್ರಮ ಪಟ್ಟರೂ ದಿನವಿಡೀ ಉತ್ಸಾಹದಿಂದ ಇರಲು ಹಾರಕವೇ ಮದ್ದು” ಎನ್ನುತ್ತಾ ಸೊಂಪಾಗಿ ಬೆಳೆದು ನಿಂತಿದ್ದ ಹಾರಕದ ಬೆಳೆಯನ್ನು ತೋರಿಸಿ ಸಂತಸದ ನಗು ತುಂಬಿಕೊಂಡರು ವಿರೂಪಾಕ್ಷಪ್ಪ ಹಿರೇಮಠ.

ಕೊಪ್ಪಳ ತಾಲೂಕಿನ ಕುಕನಪಳ್ಳಿ ಗ್ರಾಮದ ವಿರೂಪಾಕ್ಷಯ್ಯ ಹಿರೇಮಠರದು ಹದಿನಾರು ಎಕರೆ ಜಮೀನು. ಹತ್ತು ಎಕರೆ ಮೆಕ್ಕೆ ಜೋಳ, ಅರ್ಧ ಎಕರೆ ಶೇಂಗಾ, ಒಂದು ಎಕರೆ ಮೆಣಸು, ಅರ್ಧ ಎಕರೆ ಜಾನುವಾರುಗಳಿಗೆ ಮೇವಿನ ಹುಲ್ಲು, ಎರಡು ಎಕರೆ ತರಕಾರಿ ಕೃಷಿ ಮಾಡುತ್ತಾರೆ. ಇದೇ ಮೊದಲ ಬಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಲ್ಲಿ ಒಂದುವರೆ ಎಕರೆ ಹಾರಕ ಸಿರಿಧಾನ್ಯ ಕೃಷಿ ಮಾಡಿ ಉತ್ತಮ ಆದಾಯ ಪಡೆದಿದ್ದಾರೆ.

ಹಾರಕದ ಮಹಿಮೆ:

ಯೋಜನೆಯ ಮಾರ್ಗದರ್ಶನದಲ್ಲಿ ಜೂನ್ ಎರಡನೆಯ ವಾರದಲ್ಲಿ ಬೀಜ ಬಿತ್ತಿದ್ದರು. ಹದಗೊಳಿಸಿದ ಭೂಮಿಯಲ್ಲಿ ಮೂರು ತಾಳಿನ ಕೂರಿಗೆಯಿಂದ ಬಿತ್ತನೆ. ಸಾಲಿನ ನಡುವೆ ಒಂದು ಅಡಿ ಎರಡು ಇಂಚು ಅಂತರ ಕಾಯ್ದುಕೊಂಡಿದ್ದಾರೆ. ಬಿತ್ತನೆ ಮಾಡಿದ ಇಪ್ಪತ್ತನೆಯ ದಿನಕ್ಕೆ ಎರಡು ಇಂಚಿನಷ್ಟು ಗಿಡ ಬೆಳೆದಿತ್ತು. ಸಾಲಿನ ಮದ್ಯೆ ಸಣ್ಣ ಕುಂಟೆ ಓಡಿಸಿದ್ದಾರೆ. ಮೂವತ್ತನೆಯ ದಿನಕ್ಕೆ ಐವತ್ತು ಕಿಲೋ ಗ್ರಾಂ ಡಿ.ಏ.ಪಿ, ಐವತ್ತು ಕೆಜಿ 10-26 ರಸಗೊಬ್ಬರ ಹಾಕುತ್ತಾರೆ. ಪುನಃ ತೊಂಭತ್ತನೆಯ ದಿನಕ್ಕೆ ಹೊಡೆ ಹೊಡೆಯುವ ಸಮಯಕ್ಕೆ ಒಂದು ಕ್ವಿಂಟಾಲ್ ಯೂರಿಯಾ ಉಗ್ಗಿದ್ದಾರೆ.

ನವೆಂಬರ್ ಎರಡನೆಯ ವಾರದಲ್ಲಿ ಕಟಾವು ಮುಗಿಸಿದ್ದಾರೆ. ಒಂದುವರೆ ಎಕರೆಯಿಂದ ಹತ್ತು ಕ್ವಿಂಟಾಲ್ ಇಳುವರಿ ಸಿಕ್ಕಿದೆ. ಹಾರಕ ಕೃಷಿಗೆ ವಿನಿಯೋಗಿಸಿದ ಮೊತ್ತ ಐದು ಸಾವಿರ ರೂಪಾಯಿ ಮಾತ್ರ. ಕ್ವಿಂಟಾಲ್ ಹಾರಕಕ್ಕೆ 5,000- ರೂಪಾಯಿ ದರವಿದೆ. ಇದೊಂದು ಲಾಭದ ಬೆಳೆ ಎನ್ನುವುದು ಇವರ ಮಾತು.

Leave a Reply

Your email address will not be published. Required fields are marked *