Agriculturesuccess story

ಸಿಹಿಯಾದ ಸಿರಿಧಾನ್ಯ ಕೃಷಿ

ಸಿರಿಧಾನ್ಯವಾದ ನವಣೆ ಕೃಷಿ ಭವಣೆಯಿಲ್ಲದ್ದು. ಕನಿಷ್ಟ ಕಾಳಜಿ ತೋರ್ಪಡಿಸಿದರೂ ಸಾಕು ಫಲಿತಾಂಶ ಗರಿಷ್ಟ ಮಟ್ಟದ್ದಾಗಿರುತ್ತದೆ. ಇದು ಸತ್ಯವೇ ಎಂದು ಪರೀಕ್ಷಿಸಬೇಕಿದ್ದರೆ ನೀವು ಸಿದ್ದರೆಡ್ಡಿ ಇವರನ್ನು ಮಾತಿಗೆಳೆಯಬೇಕು. ತಾವು ಬೆಳೆದ ನವಣೆ ಅಬ್ಬರಿಸಿ ಬೆಳೆದ ಪರಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಊಟಕ್ಕೆ ಬಳಸಲೆಂದು ತಾವು ಸಂಗ್ರಹಿಸಿಟ್ಟಿರುವ ಒಂದು ಹಿಡಿ ನವಣೆ ಕಾಳುಗಳನ್ನು ನಮ್ಮ ಕೈಗಿಟ್ಟು ಸಂತಸದ ನಗು ಚೆಲ್ಲುತ್ತಾರೆ. ಕೊಪ್ಪಳ ತಾಲೂಕಿನ ಹಳವಂಡಿ ಗ್ರಾಮದವರಾದ ಇವರು ಇದೇ ಮೊದಲ ಬಾರಿಗೆ ಸಿರಿಧಾನ್ಯವಾದ ನವಣೆ ಬೆಳೆದಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವರಿಗೆ ಸಿರಿಧಾನ್ಯ ಕೃಷಿ ಪರಿಚಯಿಸಿತ್ತು. ಯೋಜನೆಯ ನಿರ್ದೇಶನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಇವರು ನವಣೆ ಕೃಷಿ ಕೈಗೊಂಡಿದ್ದರು. ಅವರ ಪಾಲಿಗೆ ಸಿರಿಧಾನ್ಯ ಸಿಹಿ ಧಾನ್ಯವಾಗಿ ಪರಿಣಮಿಸಿದೆ.

ನವಣೆ ನೀಗಿಸಿದ ಭವಣೆ:

ಕಳೆದ ವರ್ಷದ ಹಿಂಗಾರಿನಲ್ಲಿ ಜಾನುವಾರುಗಳ ಮೇವಿಗೆಂದು ಅಲ್ಲಲ್ಲಿ ನವಣೆ ಬೀಜಗಳನ್ನು ಬಿತ್ತಿದ್ದರು. ಯಾವುದೇ ಕಾಳಜಿ ತೋರ್ಪಡಿಸದಿದ್ದರೂ ಅವು ಅಬ್ಬರಿಸಿ ಎದ್ದು ತೆನೆ ತುಂಬಿಕೊಂಡು ನಿಂತಿದ್ದವು. ತೆನೆಯ ಗಾತ್ರ ಹಾಗೂ ಉದ್ದ ದೂರದಿಂದಲೇ ಕಣ್ ಸೆಳೆಯುವ ರೀತಿಯಲ್ಲಿತ್ತು. ‘ನಿಮ್ಮ ಜಮೀನಿನಲ್ಲಿ ನವಣೆಗೆ ಸ್ಥಾನ ಕೊಟ್ಟರೆ ಉತ್ತಮ ಇಳುವರಿ ಖಂಡಿತಾ ಸಾಧ್ಯವಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀಡಿದ ಸಲಹೆಯ ಕಾರಣದಿಂದ ನಾಲ್ಕು ಎಕರೆಗೆ ಊಬ ನವಣೆ ಬಿತ್ತಿದ್ದರು. ಅಗಸ್ಟ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಪೂರ್ವ ಭೂಮಿ ಸಿದ್ದತೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಎಕರೆಗೆ ಎರಡು ಲೋಡ್ ತಿಪ್ಪೆಗೊಬ್ಬರ ಸೇರಿಸಿ ಉಳುಮೆ ಮಾಡಿಸಿದ್ದಾರೆ. ಕೂರಿಗೆ ಸಹಾಯದಿಂದ ಬಿತ್ತನೆ. ಸಾಲಿನ ನಡುವೆ ಹದಿನಾರು ಇಂಚು ಅಂತರ. ಬಿತ್ತುವ ಸಮಯದಲ್ಲಿಯೇ ಎಕರೆಗೆ ಒಂದು ಕ್ವಿಂಟಾಲ್ ಡಿ.ಎ.ಪಿ ಬಳಕೆ ಮಾಡಿದ್ದಾರೆ. ಬಿತ್ತಿದ ವಾರದಲ್ಲಿ ಮೊಳಕೆಯೊಡೆದು ಸಸಿಗಳು ಎದ್ದೇಳಲು ಆರಂಭಿಸಿದ್ದವು. ಇಪ್ಪತ್ತನೆಯ ದಿನಕ್ಕೆ ಕುಂಟೆ ಹೊಡೆದು ಕಳೆ ನಿಯಂತ್ರಿಸಿದ್ದಾರೆ. ಕುಂಟೆಗೆ ನಿಲುಕದ ಗಿಡಗಳ ಮದ್ಯ ಬೆಳೆದಿರುವ ಕಳೆಗಳನ್ನು ಕೈಯಿಂದ ಕಿತ್ತು ತೆಗೆಯಿಸಿದ್ದಾರೆ. ನಲವತ್ತನೆಯ ದಿನಕ್ಕೆ ಎರಡನೆಯ ಬಾರಿ ಎಡೆಕುಂಟೆ ಪ್ರಯೋಗ. ಇದೇ ಸಂದರ್ಭ ಎಕರೆಗೆ ಐವತ್ತು ಕೆಜಿಯಂತೆ ಯೂರಿಯಾ ಉಗ್ಗಿದ್ದಾರೆ.

ನವಣೆಗೆ ಯಾವ ರೋಗವೂ ಬಾಧಿಸಿಲ್ಲ. ನವೆಂಬರ್ ಮೊದಲ ವಾರದಲ್ಲಿ ಕಟಾವು ಮುಗಿಸಿದ್ದಾರೆ. ಎಕರೆಗೆ ಆರು ಕ್ವಿಂಟಾಲ್ ಇಳುವರಿ ದೊರೆತಿದೆ. ಬೆಳೆದು ನಿಂತ ಗಿಡಗಳು ದಾರಿ ಹೋಕರ ಗಮನ ಸೆಳೆಯುತ್ತಿದ್ದವು. ನಾಲ್ಕು ಅಡಿಗಳಷ್ಟು ಎತ್ತರವಾಗಿ ಒತ್ತಾಗಿ ಬೆಳೆದ ಬೆಳೆ ನೋಡುಗರ ಹುಬ್ಬೇರಿಸುವಂತೆ ಮಾಡುತ್ತಿದ್ದವು.
ತಾವು ಬೆಳೆದ ನವಣೆ ಅಕ್ಕಿಯ ಖಾದ್ಯಗಳನ್ನು ವಾರದಲ್ಲಿ ಒಂದೆರಡು ಬಾರಿಯಾದರೂ ತಮ್ಮ ಊಟದ ಬಟ್ಟಲಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಈ ಬಾರಿಯ ಯಶಸ್ಸು ಇವರಿಗೆ ಹುಮ್ಮಸ್ಸು ಇಮ್ಮಡಿಗೊಳಿಸಿದೆ. ಮುಂದಿನ ಮುಂಗಾರಿನಲ್ಲಿ ಇನ್ನಷ್ಟು ಎಕರೆಗೆ ಸಿರಿಧಾನ್ಯದ ಹಸಿರು ಹೊದಿಸುವ ಚಿಂತನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *