Agriculturesuccess story

ನವಣೆ ನೀಗಿಸಿತು ಬರದ ಭವಣೆ

ಈ ಬಾರಿಯ ಮುಂಗಾರು ಹಲವು ರೈತರನ್ನು ದಂಗಾಗಿಸಿತ್ತು. ಆರಂಭದಲ್ಲಿ ಹನಿಸಿದ ಒಂದೆರಡು ಮಳೆ ಹುಟ್ಟಿಸಿದ ನಿರೀಕ್ಷೆಯಿಂದ ಮುಂದಿನ ದಿನಗಳು ಆಶಾದಾಯಕವಾಗಿರಬಹುದು ಎಂದುಕೊಂಡು ಹಲವರು ಹಸನುಗೊಳಿಸಿದ ಭೂಮಿಯಲ್ಲಿ ಬೀಜ ಬಿತ್ತಿದ್ದರು. ಆದರೆ ಮಳೆ ಕೈ ಕೊಟ್ಟು ರೈತರಿಗೆ ಸರಿಯಾದ ಹೊಡೆತವನ್ನೇ ನೀಡಿತ್ತು. ಬಿತ್ತಿದ್ದ ಬೀಜ ಒಣಗಿ ಹೋಗಿತ್ತು. ಅಲ್ಲಲ್ಲಿ ಮೊಳೆತ ಗಿಡಗಳು ಬಿರು ಬಿಸಿಲಿನ ತಾಪಕ್ಕೆ ಮುದುಡಿದ್ದವು. ಕಾಯ್ದು ನೋಡಿ ಮಳೆ ಬಂದರಷ್ಟೇ ಬೀಜ ಬಿತ್ತಿದರಾಯ್ತು ಎಂದು ಭೂಮಿ ಖಾಲಿ ಬಿಟ್ಟವರೂ ನಿರಾಸೆಗೊಳ್ಳುವಂತಾಗಿತ್ತು. ಬೆಳೆ ಬಂದಷ್ಟು ಬರಲಿ ಎಂದು ತಡವಾಗಿ ಬಿತ್ತನೆ ಮಾಡಿ ಇಳುವರಿ ಸಿಗದೇ ಕೈ ಸುಟ್ಟುಕೊಂಡವರೂ ಅಲ್ಲಲ್ಲಿ ಹಲವರು ಕಂಡು ಬರುತ್ತಾರೆ. ಆದರೆ ಇಲ್ಲೋರ್ವ ರೈತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಿಂದ ಸಿರಿಧಾನ್ಯವಾದ ನವಣೆ ಬೆಳೆದು ಗೆದ್ದಿದ್ದಾರೆ. ಬಿದ್ದ ಕನಿಷ್ಠ ಮಳೆಯಲ್ಲಿಯೇ ಉತ್ತಮ ಇಳುವರಿ ಪಡೆದು ಬೀಗಿದ್ದಾರೆ.

ಭವಣೆ ನೀಗಿಸಿದ ಪರಿ:

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಾಪುರ ಗ್ರಾಮದ ಬಾಬು ಓಬಣ್ಣ ರೆಡ್ಡಿ ಈ ಬಾರಿ ಮಳೆ ಕೊರತೆಯಾದರೂ ಇತರ ರೈತರಂತೆ ಕಂಗಾಲಾಗಿರಲಿಲ್ಲ. ತಾಳ್ಮೆಯಿಂದಲೇ ವಾತಾವರಣ ವೈಪರೀತ್ಯದ ಆಗುಹೋಗುಗಳನ್ನು ಗಮನಿಸುತ್ತಿದ್ದರು. ಮಳೆ ಬೀಳುವ ಪ್ರಮಾಣ ಆಧಾರಿತವಾಗಿ ಸೂಕ್ತವಾಗಬಲ್ಲ ಬೀಜ ಬಿತ್ತಿದರಾಯ್ತು ಎಂದುಕೊಂಡಿದ್ದರು. ಮೂವತ್ತು ಎಕರೆ ಜಮೀನಿನ ಒಡೆಯರು ಇವರು. ಮೆಕ್ಕೆಜೋಳ, ಶೇಂಗಾ ಬೆಳೆಯುತ್ತಿದ್ದ ಭೂಮಿಯದು. ಈ ಬಾರಿಯೂ ಮೆಕ್ಕೆಜೋಳ ಬಿತ್ತಲೆಂದೇ ಪೂರ್ವ ಸಿದ್ದತೆಯಲ್ಲಿ ತೊಡಗಿದ್ದರು. ಮೇ ತಿಂಗಳ ವೇಳೆಗೆ ಪ್ಲೋ ಹೊಡೆಯಿಸಿ ಜೂನ್ ವೇಳೆಗೆ ಒಂದೆರಡು ಮಳೆಯಾದಾಗ ಕಲ್ಟಿವೇಟರ್ ಹೊಡೆದು ಬೀಜ ಬಿತ್ತಲೆಂದು ಭೂಮಿ ಹಸನುಗೊಳಿಸಿದ್ದರು. ಭೂಮಿ ಸಿದ್ದತೆಗಳು ಪೂರ್ತಿಗೊಂಡಿದ್ದಾಗ ಮಳೆರಾಯನ ಸುಳಿವಿರಲಿಲ್ಲ. ಬಿರು ಬಿಸಿಲು ಭೂಮಿಯಲ್ಲಿನ ತೇವವನ್ನು ಆರಿಸುವ ರೀತಿಯಲ್ಲಿ ಧಗಿಸುತ್ತಿತ್ತು. ಈ ವರ್ಷದ ಕೃಷಿ ಕೈ ತಪ್ಪಿದಂತೆಯೇ ಎಂದುಕೊಂಡು ಸುಮ್ಮನಾಗಿದ್ದರು. ‘ಚಳಿಯ ತೇವದಲ್ಲಿಯೇ ಸಿರಿಧಾನ್ಯ ಬೆಳೆದು ನಿಲ್ಲುತ್ತದೆ. ಉತ್ತಮ ಇಳುವರಿಯನ್ನೇ ನೀಡುತ್ತದೆ’. ಎಂದು ಧರ್ಮಸ್ಥಳ ಸಂಸ್ಥೆ ನೀಡಿದ ಅಭಯಕ್ಕೆ ಕಿವಿಕೊಟ್ಟು ಪ್ರಯತ್ನಿಸಿಯೇ ಬಿಡೋಣ ಎಂದು ಕಾರ್ಯ ಪ್ರವೃತ್ತರಾದರು.

ಬಿತ್ತನೆ ಹೇಗೆ?

ಮೂವತ್ತು ಎಕರೆಯಲ್ಲಿಯೂ ಸಿರಿಧಾನ್ಯ ನವಣೆಯನ್ನು ಬಿತ್ತುವ ದೃಢ ನಿರ್ಧಾರ ಕೈಗೊಂಡ ಇವರು ನವಣೆ ಬೀಜಗಳನ್ನು ಖರೀದಿಸಿ ತಂದರು. ಸ್ಥಳೀಯವಾಗಿ ‘ಮುಬ್ಬು ನವಣೆ’ ಎಂದು ಕರೆಯಲ್ಪಡುವ ಜವಾರಿ ತಳಿಯ ನವಣೆ ಬಿತ್ತನೆ ಮಾಡಿದ್ದಾರೆ. ಟ್ರಾಕ್ಟರ್ ಕೂರಿಗೆಯಿಂದ ಬಿತ್ತನೆ. ಸಾಲಿನ ನಡುವೆ ಅರ್ಧ ಅಡಿ ಅಂತರ. ಬಿತ್ತನೆ ನಂತರ ಮಳೆ ಸಂಪೂರ್ಣ ಕೈ ಕೊಟ್ಟಿತ್ತು. ಒಂದು ವಾರದ ನಂತರ ಒಂದುವರೆ ಗಂಟೆ ಸುರಿದ ಒಂದು ಮಳೆ ಆಸರೆಯಾಗಿ ಪರಿಣಮಿಸಿತ್ತು. ಸಣ್ಣದಾಗಿ ಗಿಡಗಳು ಮೇಲೇಳತೊಡಗಿದವು. ನಡು ನಡುವೆ ಒಂದೆರಡು ಸಣ್ಣ ಮಳೆಯಾಯಿತು. ಇಪ್ಪತ್ತನೆಯ ದಿನಕ್ಕೆ ಎಡೆಕುಂಟೆ ಹೊಡೆದು ಕಳೆ ನಿಯಂತ್ರಿಸಿದರು. ಯಾವುದೇ ರಸಗೊಬ್ಬರ ಬಳಸಲಿಲ್ಲ. ಕೊಟ್ಟಿಗೆ ಗೊಬ್ಬರವನ್ನು ಉಣಿಸಲಿಲ್ಲ. ಕೇವಲ ಭೂಮಿಯಲ್ಲಿನ ತೇವವನ್ನೇ ಹೀರಿಕೊಂಡು ನವಣೆ ಗಿಡಗಳು ಬೆಳೆಯತೊಡಗಿದವು.

ಒಮ್ಮೆ ಮಾತ್ರ ಸಾಲಿನಲ್ಲಿ ಎಡೆಕುಂಟೆ ಪ್ರಯೋಗ. ಕೈ ಕಸರತ್ತಿನ ಮೂಲಕ ಗಿಡಗಳ ಮದ್ಯೆ ಇರುವ ಕಳೆ ನಿಯಂತ್ರಣ. ಗಿಡಗಳು ಹುಲುಸಾಗಿ ಮೇಲೆದ್ದು ಮೂರು ಅಡಿಗಳಷ್ಟು ಎತ್ತರ ಬೆಳೆದು ತೆನೆ ಹೊತ್ತು ನಿಂತಿದ್ದವು. ನವೆಂಬರ್ ಎರಡನೆಯ ವಾರ ಕಟಾವು ಮುಗಿಸಿದ್ದಾರೆ. ಎಕರೆಗೆ ನಾಲ್ಕು ಕ್ವಿಂಟಾಲ್ ಇಳುವರಿ ಸಿಕ್ಕಿದೆ.
ರಸಗೊಬ್ಬರ ಸೋಕಿಸಿಲ್ಲ. ಕಾಂಪೋಸ್ಟ ಗೊಬ್ಬರ ಬಳಸಿಲ್ಲ. ಸುತ್ತಮುತ್ತಲಿನ ಜಮೀನುಗಳಲ್ಲಿ ಸೈನಿಕ ಹುಳುಗಳ ಬಾಧೆಯಿಂದ ಇಳುವರಿಯಲ್ಲಿ ಕುಸಿತ ಕಂಡುಬಂದಿದೆ. ಆದರೆ ಇವರ ಹೊಲದಲ್ಲಿನ ಬೆಳೆ ಹುಳುಗಳ ಬಾಧೆಗೆ ಒಳಗಾಗಿಲ್ಲ. ಮೂವತ್ತು ಎಕರೆಯ ಉಳುಮೆ ಹಾಗೂ ಬಿತ್ತನೆಗೆ 50,000 ರೂಪಾಯಿ ಖರ್ಚಾಗಿದೆ. ಎಕರೆಯಿಂದ ನಾಲ್ಕು ಕ್ವಿಂಟಾಲ್ ಇಳುವರಿ ದೊರೆತಂತಾಗಿದೆ. ಒಟ್ಟು 120 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಕ್ವಿಂಟಾಲ್ ನವಣೆಗೆ 1200 ರೂ ದರವಿದೆ. ನೀರಿನ ಕೊರತೆಯ ನಡುವೆಯೇ ವೆಚ್ಚ ಮಾಡಿದ ಮೊತ್ತ ಕಳೆದು ಹೆಚ್ಚಿನ ಲಾಭ ಪಡೆದು ಬೀಗಿದ್ದಾರೆ.

ಮಳೆಯ ಸುಳಿವಿಲ್ಲದಿದ್ದರೂ ಮಳೆ ಬರಬಹುದೆನ್ನುವ ಆಶಾವಾದದಿಂದ ವಾಣಿಜ್ಯ ಬೆಳೆಗಳನ್ನು ಬಿತ್ತಿ ನಷ್ಟ ಅನುಭವಿಸಿದ ಹಲವರ ನಡುವೆ ಸಿರಿಧಾನ್ಯ ನವಣೆಯ ಕೃಷಿ ಕೈಗೊಂಡು ಬರದ ಭವಣೆ ನೀಗಿಸಿಕೊಂಡ ಇವರ ಕೃಷಿ ಕ್ರಮ ಮಾದರಿಯೆನ್ನಿಸುತ್ತದೆ.

One thought on “ನವಣೆ ನೀಗಿಸಿತು ಬರದ ಭವಣೆ

Leave a Reply

Your email address will not be published. Required fields are marked *