Agriculturesuccess story

ಸಜ್ಜೆ ಬಿತ್ತಿ ಗೆದ್ದರು ನಾಗಪ್ಪ

ಆರು ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಬೆಳೆದುನಿಂತ ಸಜ್ಜೆ ಗಿಡಗಳು. ಒಂದು ಅಡಿಗಳಷ್ಟು ಉದ್ದದ ದಪ್ಪನೆಯ ತೆನೆ. ಒತ್ತೊತ್ತಾಗಿ ಮೆತ್ತಿಕೊಂಡಂತೆ ಕಣ್ಣ್ ಸೆಳೆಯುವ ಹದಗಾತ್ರದ ಪುಟ್ಟದಾದ ಕಾಳುಗಳು. ಎಲ್ಲಿ ನೋಡಿದರಲ್ಲಿ ಬೆಳ್ಳಗೆ ಕಣ್ ಸೆಳೆಯುವ ತೆನೆ ಸಮೃದ್ದತೆ. ಹಸಿರು ಮೈದಳೆದು ನಿಂತಿದ್ದ ಸಜ್ಜೆ ಗಿಡಗಳು. ‘ಒಂದೆರಡು ಬಾರಿ ಬಿದ್ದ ಮಳೆ ನೀರಿನ ಹನಿಗಳಿಂದಲೇ ಬೆಳೆದು ನಿಂತಿದ್ದವು. ಬಿತ್ತಿದ ನಂತರ ಹೆಚ್ಚಿನ ಗಮನವನ್ನೇ ನೀಡದ ಇವರಿಗೆ ಅಬ್ಬರಿಸಿ ಬೆಳೆದು ನಿಂತ ಸಜ್ಜೆ ಗಿಡಗಳು ಅಚ್ಚರಿಗೆ ತಳ್ಳಿತ್ತು. ಮುಖದಲ್ಲಿ ಮಂದಹಾಸದ ಕಳೆ ಸೃಷ್ಟಿಸಿತ್ತು. ಮಳೆಯ ಅಸ್ಥಿರತೆಯ ನಡುವೆಯೇ ಸಿರಿಧಾನ್ಯ ತಂದುಕೊಟ್ಟ ಗೆಲುವು ಸಹಜವಾಗಿಯೇ ಇವರನ್ನು ನಲಿಯುವಂತೆ ಮಾಡಿತ್ತು. ಕೃಷಿ ಒಲಿದು ಗಿಟ್ಟಿಸಿದ ಗೆಲುವು ಇವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತ್ತು. ನಾಗಪ್ಪ ಕೊತ್ಲಪ್ಪ ಬಾರಕೇರ್ ಇವರೇ ಸಜ್ಜೆ ಬಿತ್ತಿ ಗೆಲುವಿನ ನಗು ಬೀರಿದವರು. ಇವರು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ನೀಲಗುಂದ ಗ್ರಾಮದವರು.

ಒಂದು ಎಕರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾರ್ಗದರ್ಶನದಲ್ಲಿ ಸಜ್ಜೆ ಬೆಳೆದಿದ್ದರು. ಬಿತ್ತನೆಗಾಗಿ ಎಕರೆಗೆ ಒಂದುವರೆ ಕಿಲೋಗ್ರಾಂ ಬಿತ್ತನೆ ಬೀಜ ಬಳಸಿದ್ದರು. ಜೂನ್ ಕೊನೆಯ ವಾರ ಬಿತ್ತನೆ ಮಾಡಿದ್ದು ಬಿತ್ತನೆ ಪೂರ್ವ ಎಕರೆಗೆ ನಾಲ್ಕು ಟನ್ ಕೊಟ್ಟಿಗೆ ಗೊಬ್ಬರ ಸೇರಿಸಿ ಉಳುಮೆ ಮಾಡಿದ್ದರು. ಎರಡು ಬಾರಿ ಕುಂಟೆ ಹೊಡೆದುದನ್ನು ಬಿಟ್ಟರೆ ಬೇರೆ ನೀರ್ವಹಣೆಯ ಗೋಜಿಗೆ ಹೋಗಿರಲಿಲ್ಲ. ಆದಾಗ್ಯೂ ಬೆಳೆಗೆ ಯಾವುದೇ ರೋಗ ಬಾಧಿಸಿರಲಿಲ್ಲ. ಗಿಡಗಳು ಭರ್ತಿ ಫಸಲು ಹೊತ್ತು ನಿಂತಿದ್ದವು. ಒಂದು ಅಡಿಗಳಷ್ಟು ಉದ್ದವಾದ ದಪ್ಪನೆಯ ತೆನೆಗಳು ಎಲ್ಲೆಂದರಲ್ಲಿ ತೊನೆದಾಡುತ್ತಿದ್ದವು. ಅಕ್ಟೋಬರ್ ಮೊದಲ ವಾರದಲ್ಲಿ ಕಟಾವು ಮುಗಿಸಿದ್ದಾರೆ. 15 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ.

ಮಳೆಯಾಶ್ರಯವಾಗಿ ಕೃಷಿ ಮಾಡುತ್ತಿರುವ ಇವರಿಗೆ ಈ ಬಾರಿ ಸುರಿದ ಕಡಿಮೆ ಮಳೆ ಸಂಕಟಕ್ಕೆ ನೂಕಿತ್ತು. ಬೆಳೆ ಕೈ ಸಿಗುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿಯೇ ಸಜ್ಜೆ ಬಿತ್ತಿದ್ದರು. ಆದರೆ ಇವರ ಸಂಕಟವನ್ನು ಸಿರಿಧಾನ್ಯ ಸಜ್ಜೆ ಮರೆಸಿದೆ. ಅಲ್ಪ ನೀರನ್ನೇ ಹೀರಿಕೊಂಡು ಮುಖದಲ್ಲಿ ಮಂದಹಾಸ ಉಳಿಯುವಂತೆ ಮಾಡಿದೆ. ಮುಂದಿನ ವರ್ಷ ಪುನಃ ಸಿರಿಧಾನ್ಯ ಬೆಳೆಯುವ ಆಲೋಚನೆಯನ್ನು ಮನಸ್ಸಿನಲ್ಲಿ ಚಿಗುರಿಸಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿರಿಧಾನ್ಯ ಬೆಳೆಯಲು ನೀಡಿದ ಬೆಂಬಲವನ್ನು ನೆನೆಯುತ್ತಾರೆ.

Leave a Reply

Your email address will not be published. Required fields are marked *