NewsTraining

ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯ ನೂತನವಾಗಿ ನಿರ್ಮಿಸಲ್ಪಟ್ಟ ಕಟ್ಟಡವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿ.21.12.2017ರಂದು ಮುಂಜಾನೆ 10.30ಕ್ಕೆ ಉದ್ಘಾಟನೆಯ ಮೂಲಕ ಲೋಕಾರ್ಪಣೆಗೊಳಿಸಿದರು.

ಧಾರವಾಡ ಜಿಲ್ಲಾಧಿಕಾರಿಗಳು ಡಾ.ಎಸ್.ಬಿ.ಬೊಮ್ಮನಹಳ್ಳಿ, ಜೆ.ಎಸ್.ಎಸ್. ಸಂಸ್ಥೆಯ ಕಾರ್ಯದರ್ಶಿ ಡಾ.ನ.ವಜ್ರಕುಮಾರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಶ್ರೀ ಸುರೇಂದ್ರಕುಮಾರ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್. ಮಂಜುನಾಥ್, ಎಸ್.ಡಿ.ಎಮ್. ಸಂಸ್ಥೆಯ ಕಾರ್ಯದರ್ಶಿಗಳಾದ ಜೀವಂದರ್ ಕುಮಾರ, ರಾಷ್ಟ್ರೀಯ ಪುರಸ್ಕøತರು ಹಾಗೂ ಪ್ರಗತಿಪರ ರೈತರಾದ ಶ್ರೀ ಎ.ಐ. ನಡಕಟ್ಟಿನ್, ಕೆ.ವಿ.ಜಿ. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಆರ್. ರವೀಂದ್ರನ್, ಗಣ್ಯರಾದ ಶ್ರೀ ರಾಜಣ್ಣ ಕೊರವಿ, ಐ.ಡಿ.ಬಿ.ಐ. ಬ್ಯಾಂಕಿನ ಡಿ.ಜಿ.ಎಮ್. ಶ್ರೀ ಪಿಚ್ಛಯ್ಯ, ಎಸ್.ಬಿ.ಐ. ಬ್ಯಾಂಕಿನ ಡಿ.ಜಿ.ಎಮ್. ಶ್ರೀ ಇಂದ್ರನೀಲಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರುದ್ರೇಶಪ್ಪ, ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಯಶಂಕರ ಶರ್ಮಾ, ಧಾರವಾಡ ಜಿಲ್ಲೆಯ ನಿರ್ದೆಶಕರಾದ ಶ್ರೀ ದಿನೇಶ್ ಎಮ್., ಯೋಜನಾಧಿಕಾರಿಗಳು ಮತ್ತು ಸ್ಥಳೀಯ ಕಾರ್ಯಕರ್ತರು, ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

“ರೈತರು ತಮ್ಮ ಪ್ರಗತಿಯನ್ನು ತಾವೇ ಸಾಧಿಸಬೇಕು” – ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ.

ಸರ್ಕಾರದ ಪಂಚವಾರ್ಷಿಕ ಯೋಜನೆಯ ಪ್ರಾರಂಭದಿಂದಲೇ ಸಬಲೀಕರಣಕ್ಕೆ ಮಹತ್ವವನ್ನು ನೀಡಿ, ದೇಶದಲ್ಲಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಅಭೂತಪೂರ್ವ ಬದಲಾಣೆ ತಂದಿದ್ದು, ಇದರಂತೆ ನಮ್ಮ ಯೋಜನೆಯಿಂದಲೂ ಸಬಲೀಕರಣಕ್ಕೆ ಮಹತ್ವ ನೀಡಿ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ಸಬಲೀಕರಣ ಸಾಧಿಸುವುದು ಅಂತಾ ತಿಳಿಸಿದರು.

ಆದರೆ ಇಷ್ಟೇ ಸಾಲದು. ತನಗೆ ಬೇಕಾದದ್ದನ್ನು ಕೇಳಿ ಪಡೆಯುವುದು ಒಂದು ಸಬಲೀಕರಣ. ರೈತರು ತಮ್ಮ ಪ್ರಗತಿಯನ್ನು ತಾವೇ ಸಾಧಿಸಬೇಕು. ಈ ತರಬೇತಿ ಸಂಸ್ಥೆಯಲ್ಲಿ ಸುಮಾರು 7000 ಸಿಬ್ಬಂದಿಗಳಿಗೆ ತರಬೇತಿ ನಡೆಸಲು ಅನುಕೂಲವಾಗುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ಕಲ್ಪನೆಗಳನ್ನು ಸಾಕಾರಗೊಳಿಸುವುದಕ್ಕಾಗಿ ಈ ಕೇಂದ್ರ ದೊಡ್ಡ ಸೇವೆ ಮಾಡಲಿದೆ ಎಂದರು.

ವಸತಿ ಸಹಿತ ತರಬೇತಿಗೆ ಅನುಕೂಲತೆಗಳಿದೆ: ತರಬೇತಿ ಸಂಸ್ಥೆಯ ಕಟ್ಟಡ ಭವ್ಯವಾಗಿದ್ದು, ದೇಶದಲ್ಲಿ ಅಪರೂಪದ ವ್ಯವಸ್ಥೆಗಳನ್ನು ಹೊಂದಿರುವ ಸುಸಜ್ಜಿತ ಮಾದರಿ ಹೊಂದಿದೆ. ತರಬೇತಿ ಸಂಸ್ಥೆಯ ಕಟ್ಟಡದ ಪಕ್ಕದಲ್ಲಿಯೇ ಊಟದ ವ್ಯವಸ್ಥೆಗೆಂದು ಸುಂದರವಾದ ಕಟ್ಟಡವಿದೆ. ಧಾರವಾಡ ಜಿಲ್ಲೆಯ 3 ತಾಲ್ಲೂಕಿನ ಕಛೇರಿಗಳು, ಜಿಲ್ಲಾ ಕಛೇರಿ ಮತ್ತು ಪ್ರಾದೇಶಿಕ ಕಛೇರಿ ಒಳಗೊಂಡಿರುವ ಬೃಹತ್‍ಕಟ್ಟಡದ ಸಮುಚ್ಛಯ ನಿರ್ಮಾಣಗೊಂಡಿದೆ. ಒಟ್ಟು ಕಟ್ಟಡದ ವಿಸ್ತಾರ 93000 ಚ.ಅ. ಇದೆ. ಈ ಕಟ್ಟಡಗಳ ಸಮುಚ್ಛಯ ನಿರ್ಮಾಣಕ್ಕೆ ರೂ. 11 ಕೋಟಿ ವೆಚ್ಚವಾಗಿದೆ. ತರಬೇತಿ ಸಂಸ್ಥೆಯು ವಿಶೇಷ ಸೌಕರ್ಯಗಳನ್ನು ಹೊಂದಿದ್ದು, 3 ತರಗತಿ ಕೊಠಡಿ, 2 ಕೌಶಲ್ಯಾಭಿವೃದ್ಧಿ ತರಬೇತಿ ಕೊಠಡಿ, ಕಂಪ್ಯೂಟರ ತರಬೇತಿಗಾಗಿ ವಿಶೇಷ ಕಂಪ್ಯೂಟರ್ ಲ್ಯಾಬ್ ಮತ್ತು ಗ್ರಂಥಾಲಯವನ್ನು ಹೊಂದಿದೆ. ಒಟ್ಟಿಗೆ ಏಕಕಾಲದಲ್ಲಿ 250 ಜನ ತರಬೇತಿ ಪಡೆಯುವ ಅವಕಾಶ ಇದೆ. ಕಾರ್ಯಕ್ರಗಳಿಗೆ ಪೂರಕ ಸುಮಾರು 1000 ಜನ ಏಕಕಾಲದಲ್ಲಿ ಬೃಹತ್ ಸಭಾಭವನದಲ್ಲಿ ಭಾಗವಹಿಸುವ ಅವಕಾಶವಿದೆ. 30 ಜನ ಗಣ್ಯರ ವಾಸ್ತವ್ಯಕ್ಕೆ ವಿಶೇಷ ವಸತಿ ಗೃಹಗಳ ವ್ಯವಸ್ಥೆಯಿದೆ. ಈ ಎಲ್ಲ ವ್ಯವಸ್ಥೆಗೆ ಡಾ.ನ. ವಜ್ರಕುಮಾರ ನೇತೃತ್ವದಲ್ಲಿ ಅವರ ತಂಡದಿಂದ ಕೇವಲ 9 ತಿಂಗಳಲ್ಲಿ ಈ ಕಟ್ಟಡ ಕಾರ್ಯ ಪೂರ್ಣಗೊಂಡಿದೆ.

“ವೀರೇಂದ್ರ ಹೆಗ್ಗಡೆಯವರು ನಮ್ಮ ದೇಶದ ಹೆಮ್ಮೆಯ ಪುತ್ರರು” – ಡಾ.ಎಸ್.ಬಿ.ಬೊಮ್ಮನಹಳ್ಳಿ., ಜಿಲ್ಲಾಧಿಕಾರಿಗಳು, ಧಾರವಾಡ.

ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ.ಎಸ್.ಬಿ. ಬೊಮ್ಮನಹಳ್ಳಿಯವರು ಸ್ವ ಸಹಾಯ ಸಂಘದ ಸ್ವ ಉದ್ಯೋಗ ಸಾಧಕರ ಪುಸ್ತಕಗಳನ್ನು ಉದ್ಘಾಟಿಸಿ ಅತಿಥಿ ಭಾಷಣದಲ್ಲಿ ಮಾತನಾಡಿದರು.“ಈ ದೇಶ ಕಂಡ ಅತ್ತ್ಯುನ್ನತ ಮಹಾನ್ ವ್ಯಕ್ತಿಗಳಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಪೂಜ್ಯರು ಒಬ್ಬರು. ನಮ್ಮ ಸಮಾಜ ಹಾಗೂ ದೇಶಕ್ಕೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಂತ ಏಕಪಕ್ಷೀಯ ಕಾರ್ಯಕ್ರಮಗಳನ್ನು ಸರ್ಕಾರ ಮಾಡಲಾರದ್ದನ್ನು ಈ ಸಂಸ್ಥೆ ಮಾಡುತ್ತಿದೆ. ಜೊತೆಗೆ ಆಧ್ಯಾತ್ಮಿಕದಲ್ಲೂ ಶ್ರಮಿಸುತ್ತಿರುವರು. ನಮ್ಮ ದೇಶದ ಹೆಮ್ಮೆಯ ಪುತ್ರರು. ಧರ್ಮಸ್ಥಳ ಯೋಜನೆ ಜನರಿಗೆ ತಮ್ಮ ಜೀವನ ನೆಮ್ಮದಿಯಿಂದ ನಡೆಸಲು ಹೆಮ್ಮೆಯಿಂದ ಜೀವಿಸಲು ನೆರವು ನೀಡುತ್ತಿದೆ. ಬಹಳ ಜನರಿಗೆ ಆಶಾದಾಯಕವಾಗಿ ಪರಿಣಮಿಸಿದೆ. ಈ ತರಬೇತಿ ಸಂಸ್ಥೆಯ ಅನುಕೂಲವನ್ನು ಪ್ರತಿಯೊಬ್ಬ ಮಹಿಳೆಯರು, ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

“ಹಾಳು ಮಣ್ಣು ಮಳೆ ಆದರೆ ಭೂಮಿ ನೀರು ಇಂಗಲ್ಲ” – ರಾಷ್ಟ್ರ ಪುರಸ್ಕತರಾದ ಶ್ರೀ ಎ.ಐ.ನಡಕಟ್ಟಿನ, ನವಲಗುಂದ ಕೃಷಿಕರು.

ಮಣ್ಣಿನ ಫಲವತ್ತತೆಯ ಕೊರತೆಯಾಗದಂತೆ ವಿವಿಧ ರೀತಿಯಲ್ಲಿ ಸಂಶೋಧನಾತ್ಮವಾಗಿ ಹಲವಾರು ಯಂತ್ರಗಳನ್ನು ಮಾರುಕಟ್ಟೆಗೆ ತರುವಲ್ಲಿ ನಿರಂತರ ಪ್ರಯತ್ನವನ್ನು ಮಾಡಿರುವೆನು. ಗೆಜ್ಜೆಶೇಂಗಾ ಕಿತ್ತು ಕಾಳು ಮಾಡುವ, ಕಬ್ಬು ಬಿತ್ತುವ ಯಂತ್ರ, ಹುಣಸೆ ಬೀಜತೆಗೆಯುವ ಹೀಗೆ ಹಲವಾರು ಸಂಶೋಧನಾತ್ಮಕ ಚಿಂತನೆಯೊಂದಿಗೆ ಜನರಿಗೆ ಸರಳವಾಗಿ ಹೆಚ್ಚು ಪ್ರಯೋಜನವಾಗುವ ನಿಟ್ಟಿನಲ್ಲಿ ಯಂತ್ರೋಪಕರಣಗಳನ್ನು ಭವಣೆಯಾಗಿ ನೀಡಿರುವ ಕುರಿತು ಹೆಮ್ಮೆಯಿಂದ ತಮ್ಮ ಅನುಭವವನ್ನು ಹಂಚಿಕೊಂಡರು.

“ಜನೇವರಿ 2017ಕ್ಕೆ ಭೂಮಿ ಪೂಜೆ ಮಾಡಿ, ಫೆಬ್ರವರಿ 2017ರಲ್ಲಿ ಕಟ್ಟಡ ಕೆಲಸ ಪ್ರಾರಂಭಿಸಿ, 9 ತಿಂಗಳ ಅವಧಿಯಲ್ಲಿ ಪೂರ್ಣಗೊಂಡಿದೆ.” – ಡಾ. ನ. ವಜ್ರಕುಮಾರ, ಮಾನ್ಯ ಕಾರ್ಯದರ್ಶಿಗಳು, ಜೆ.ಎಸ್.ಎಸ್. ಸಂಸ್ಥೆ, ಧಾರವಾಡ.

ಈ ಕಟ್ಟಡದ ಜವಾಬ್ದಾರಿಯನ್ನು ನೀನು ಮಾಡತ್ತೀಯ ಮಾಡು ಎನ್ನುವಂತೆ ನಮ್ಮ ಮೂಲಕ ಡಾ. ವೀರೇಂದ್ರ ಹೆಗ್ಗಡೆಯವರು ಮಾಡುವ ಅವಕಾಶ ಒದಗಿಸಿ ಕೊಟ್ಟಿರುವರು. ಜನೇವರಿ 2017 ರಂದು ಭೂಮಿ ಪೂಜೆ ಮಾಡುವ ಸಂದರ್ಭದಲ್ಲಿಯೇ ಮತ್ತು 7 ಗುಂಟೆಯ ಜಾಗೆ ಖರೀದಿಸುವ ಮುಖೇನ ಒಳ್ಳೆಯ ಶುಭ ಸಂದೇಶ ದೊರೆತಿತು. ಅದೇ ದಿನವೇ ಬೋರ್ ಕೂಡಾ 3.5’ ಇಂಚು ನೀರು ಬಿದ್ದಿತು. ಎಂದು ಕಟ್ಟಡದ ಪ್ರಾರಂಭದಿಂದಲೇ ಶುಭ ಸಂದೇಶವನ್ನು ಹೇಳುವ ಮುಖೇನ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.

“ಸ್ವ ಉದ್ಯೋಗ ಕೈಗೊಳ್ಳಲು ಕೈಯಲ್ಲಿ ಹಣವಿದ್ದರೆ ಸಾಲದು, ಮನಸ್ಸು ಸಿದ್ಧ ಮಾಡಿಕೊಳ್ಳಬೇಕು” – ಡಾ.ಎಲ್.ಎಚ್.ಮಂಜುನಾಥ್, ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಿಭಾಗ, ಧರ್ಮಸ್ಥಳ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಎಚ್. ಮಂಜುನಾಥ್‍ರವರು ಮಾತನಾಡಿ ಧಾರವಾಡ ಜಿಲ್ಲೆಯಲ್ಲಿ ಸಾವಿರಾರು ಮಂದಿ ಗ್ರಾಮಾಭಿವೃದ್ಧಿ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಬಾಳನ್ನು ಬದಲಾಯಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ 1 ಲಕ್ಷ ಮಂದಿ ಸ್ವ ಉದ್ಯೋಗವನ್ನು ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯೊಂದರಲ್ಲಿ ಸುಮಾರು 25 ಸಾವಿರ ಜನರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವ ಉದ್ಯೋಗ ಮಾಡಲು ಕೈಯಲ್ಲಿ ಹಣವಿದ್ದರೆ ಸಾಲದು ಅದಕ್ಕಾಗಿ ಮನಸ್ಸು ಸಿದ್ಧ ಮಾಡಿಕೊಳ್ಳಬೇಕು. ನಾವು ಮಾಡುವ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಧಾರವಾಡದಲ್ಲಿ ಈಗಾಗಲೇ ರುಡ್‍ಸೆಟ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಮತ್ತಷ್ಟು ಶಕ್ತಿ ತುಂಬಲು ಪೂಜ್ಯರು ಮಹಿಳಾ ಜ್ಞಾನವಿಕಾಶ ತರಬೇತಿ ಸಂಸ್ಥೆ ಆರಂಭಿಸಿದ್ದಾರೆ. ಮುಖ್ಯವಾಗಿ ಮಹಿಳೆಯರಿಗೆ ಕೌಟುಂಬಿಕ ಸಾಮರಸ್ಯ, ಮಕ್ಕಳ ಶಿಕ್ಷಣ, ಆರೋಗ್ಯ-ನೈರ್ಮಲ್ಯ, ಪೌಷ್ಠಿಕ ಆಹಾರ, ಕಾನೂನು, ಸ್ವ ಉದ್ಯೋಗ ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

2009ರಲ್ಲಿ ಆರಂಭವಾದ ಈ ಕೇಂದ್ರ ನಾಡಿನ ಹೆಮ್ಮೆಯ ಕೇಂದ್ರವಾಗಿ ಬೆಳೆದು ಬಂದಿದೆ. ನಮ್ಮ ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಮಿಸಲ್ಪಟ್ಟ ಅನೇಕ ಕಟ್ಟಡಗಳಲ್ಲಿ ಅತ್ಯಂತ ಸುಸಜ್ಜಿತ ಕಟ್ಟಡ ಇದಾಗಿದೆ. ಡಾ. ನ. ವಜ್ರಕುಮಾರ ಇವರ ಮಾರ್ಗದರ್ಶನದಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಅಕ್ಟೋಬರ್ 29 ರಂದು ಪೂಜ್ಯರ ಭೇಟಿಗಾಗಿ ಆಗಮಿಸಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿಯವರು “ನಗದು ರಹಿತ ವ್ಯವಹಾರ ಮಾಡಲು ನೆರವಾಗಲು ಶ್ರಮಿಸಿದ ಸಂಸ್ಥೆಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂಚೂಣಿಯಲ್ಲಿದೆ.” ಎಂದಿದ್ದಾರೆ.

ಕರ್ನಾಟಕದಲ್ಲಿ 40 ಲಕ್ಷ ಯೋಜನೆಯ ಸ್ವ ಸಹಾಯ ಸಂಘದ ಸದಸ್ಯರಿದ್ದಾರೆ. ಇವುಗಳಲ್ಲಿ ಇನ್ನೂ 20 ಲಕ್ಷ ಸದಸ್ಯರ ಜನಧನ್ ಖಾತೆ ತೆರೆಯಲಾಗಿದೆ. ಜೂನ 2018 ರೊಳಗಾಗಿ ಎಲ್ಲ ಖಾತೆಗಳನ್ನು ತೆರೆಯುವಲ್ಲಿ ಯೋಜೆನೆ ಇದೆ. 2020ರ ವೇಳೆಗೆ ಇವೆರೆಲ್ಲರಿಗೂ ಬ್ಯಾಂಕ ಖಾತೆ ಮೂಲಕ ಸಂಪೂರ್ಣ ನಗದುರಹಿತ ವ್ಯವಹಾರ ಮಾಡಲು ಅನುಕೂಲ ಕಲ್ಪಿಸಲಾಗುವುದು. ಪ್ರತಿ ಗ್ರಾಮಗಳಲ್ಲಿ ಬ್ಯಾಂಕ ಪ್ರತಿನಿಧಿಗಳನ್ನು ನೇಮಕ ಮಾಡಿ ದಿನದ 24 ಗಂಟೆಯೂ ಹಣಕಾಸು ಸೌಲಭ್ಯ ಸದಸ್ಯರಿಗೆ ಸಿಗುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದರು.

ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೂ ಪೂರ್ವ ಯೋಜನೆಯ ಸಮುಚ್ಛ ಕಟ್ಟಡದ ಪ್ರಾರಂಭದಿಂದಲೇ 1 ಜನ ಸ್ವಾಗತ ಕನ್ಯೆಯರು 30 ಪೂರ್ಣಕುಂಭದೊಂದಿಗೆ, 200 ಒಂದೇ ಸಮವಸ್ತ್ರಧಾರಿಗಳೊಂದಿಗೆ, 12 ಜನರಂತೆ ಎರಡು ಬದಿಯಲ್ಲಿ ಒಟ್ಟು 24 ಜನರು ಪಾಲ್ಗೊಂಡು ಶಾಂತರೀತಿಯಿಂದ ಶಿಸ್ತುಬದ್ಧವಾಗಿ ನೆರವೇರಿಸಿದರು.

ತರಬೇತಿ ಸಂಸ್ಥೆ, ಅಡುಗೆ ಕೋಣೆ, ಅತಿಥಿ ಗೃಹದ ಚಾಲನೆ: ಪೂಜ್ಯರು ಮತ್ತು ಎಲ್ಲ ಗಣ್ಯರು ದೀಪ ಬೆಳಗಿಸುವ ಮುಖೇನ ಚಾಲನೆ ನೀಡಿದರು.
ಐ.ಡಿ.ಬಿ.ಐ. ಆರ್ಥಿಕ ನೆರವಿನೊಂದಿಗೆ ಅಟೋರಿಕ್ಷಾ ವಿತರಣೆ: ಸ್ವ ಸಹಾಯ ಸಂಘದವರ ಸ್ವ ಉದ್ಯೋಗಕ್ಕೆ ಪ್ರಗತಿನಿಧಿಯಿಂದ ಅಟೋರಿಕ್ಷಾ ಪಡೆದ ಹುಬ್ಬಳ್ಳಿ ಯೋಜನಾ ಕಚೇರಿಯ 25 ಮತ್ತು ಧಾರವಾಡ ಯೋಜನಾ ಕಛೇರಿಯ ಇಬರಬರಿಗೆ ಒಟ್ಟು 27 ಅಟೋ ಚಾಲಕರಿಗೆ ಪೂಜ್ಯರ ಅಮೃತ ಹಸ್ತದಿಂದ ಕೀ ಕೊಡುವ ಮುಖೇನ ಚಾಲನೆ ನೀಡಲಾಯಿತು.

ಸ್ವ ಉದ್ಯೋಗಕ್ಕೆ ಯಂತ್ರೋಪಕರಣಗಳ ವಿತರಣೆ: ರೂ.29000/- ಮೌಲ್ಯದ ಸೋಲಾರ ಝೇರಾಕ್ಸ್ ಯಂತ್ರವನ್ನು ಶ್ರೀಮತಿ ಸರೋಜನಿ ಮೊಸಳೇಕರ, ದೀಪಾ ಸ್ವ ಸಹಾಯ ಸಂಘ, ಸೈದಾಪುರ, ಧಾರವಾಡ ಇವರಿಗೂ ಹಾಗೂ ರೂ.69000/-ಸೋಲಾರ ರೊಟ್ಟಿ ಯಂತ್ರ ಖರೀದಿ ಶ್ರೀಮತಿ ಪಾರ್ವತಿ ಆಕಳವಾಡಿ, ಓಂಕಾರ ಸಂಘ, ಗವಳಿಗಲ್ಲಿ ಧಾರವಾಡದವರಿಗೂ ನೀಡಲಾಯಿತು. ಶ್ರೀ ನಡಕಟ್ಟಿನ ಕೂರ್ಗಿಯವರು ಸ್ವತಃ ಸಂಶೋಧನೆ ಮಾಡಿದಂತ ಬಿತ್ತನೆ ಕೂರ್ಗಿ ಮೊತ್ತ ರೂ.74000/- ಮೌಲ್ಯದ ಯಂತ್ರವನ್ನು ಪೂಜ್ಯರಿಂದ ಶ್ರೀಮತಿ ಪುಷ್ಪ ತಂದೆ ಪ್ರಭಪ್ಪ ಮಹಲಿಂಗಪ್ಪ ಮುಳಗುಂದ, ಧರ್ಮದೇವತೆ ಸಂಘ, ಭದ್ರಾಪುರ ಗ್ರಾಮ ನವಲಗುಂದ ಇವರಿಗೆ ವಿತರಿಸಲಾಯಿತು.

‘ಅರ್ಥಪೂರ್ಣ ಬದುಕಿಗೊಂದು ಆರ್ಥಿಕ ಸಂಕಲ್ಪ’ ಪುಸ್ತಕ ಬಿಡುಗಡೆ: ಸ್ವ ಉದ್ಯೋಗದಿ ಸಾರ್ಥಕ ಬದುಕಿನೊಂದಿಗೆ ಯಶಸ್ಸು ಪಡೆದುಕೊಂಡ 56 ಯಶೋಗಾತೆಗಳನ್ನು ಒಳಗೊಂಡ ಪುಸ್ತಕ ಬಿಡುಗಡೆಯನ್ನು ಜಿಲ್ಲಾಧಿಕಾರಿಗಳಾದ ಡಾ,ಎಸ್.ಬಿ. ಬೊಮ್ಮನಳ್ಳಿ ಇವರು ಬಿಡುಗಡೆ ಮಾಡಿದರು.
ಅಭಿನಂದನಾ ಕಾರ್ಯಕ್ರಮ: ಧಾರವಾಡ ಪ್ರಾದೇಶಿಕ ಕಛೇರಿ ವತಿಯಿಂದ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು, ಮಾನ್ಯ ಪ್ರಾದೇಶಿಕ ನಿರ್ದೇಶಕರು ಹಾಗೂ ಇತರೆ ಸಿಬ್ಬಂದಿಯವರಿಂದ ಮತ್ತು ತರಬೇತಿ ಸಂಸ್ಥೆಯ ಪರವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶಕರು, ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಯವರಿಂದಲೂ ಫಲ-ಪುಷ್ಪಗಳೊಂದಿಗೆ ಪೂಜ್ಯರಿಗೆ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.

ತರಬೇತಿ ಉದ್ಘಾಟನೆ: ಹೊಸತಾಗಿ ಆಯ್ಕೆ ಆದ ಕೃಷಿ ಮೇಲ್ವಿಚಾರಕರ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಯಡಿ ಫಲಾನುಭವಿಗಳಿಗೆ (ಜಂಟಿ ಭಾದ್ಯತಾ ಸಂಘಗಳ ಸದಸ್ಯರುಗಳಿಗೆ) ಒಟ್ಟು 46 ಜನ ಶಿಭಿರಾರ್ಥಿಗಳು ಪ್ರಥಮ ತಂಡದಲ್ಲಿ ಭಾಗವಹಿಸಿದ್ದರು. ಯೋಜನೆಯ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್. ಮಂಜುನಾಥ್ ದೀಪ ಬೆಳಗಿಸಿ ವಿಷಯ ಮಂಡನೆಯೊಂದಿಗೆ ಚಾಲನೆ ನೀಡಿದರು. ಜೊತೆಗೆ ಶಿಭಿರಾರ್ಥಿಗಳಿಗೆ ತರಬೇತಿ ಕಿಟ್ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಯಶಂಕರ ಶರ್ಮಾ, ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಶ್ರೀಮತಿ ಮಮತಾ ರಾವ್, ಕೃಷಿ ನಿದೇಶಕರಾದ ಶ್ರೀ ಮನೋಜ ಮಿನೇಜಸ್, ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಇವರು ಉಪಸ್ಥಿತರಿದ್ದರು.

ಮೆ| ಹೆಗ್ಗಡೆ ಮತ್ತು ಹೆಗ್ಗಡೆ ಆರ್ಕಿಟೆಕ್ಟ್ ಹುಬ್ಬಳ್ಳಿ ತಂಡದವರಿಗೆ ಸನ್ಮಾನ ಮಾಡಲಾಯಿತು.

ಗಣಹೋಮ: ಕಾರ್ಯಕ್ರಮದ ಮುನ್ನಾ ದಿನ ದಿ:20.12.2017ರಂದು ಊಟದ ಮನೆಯಲ್ಲಿ ಗಣಹೋಮವನ್ನು ಮಾಡಲಾಯಿತು. ಪೂಜೆಯನ್ನು ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ನಡೆಸಿಕೊಟ್ಟರು. ಜೆ.ಎಸ್.ಎಸ್. ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ನ.ವಜ್ರಕುಮಾರ, ಯೋಜನೆಯ ಎಲ್ಲ ಪ್ರಾದೇಶಿಕ ನಿರ್ದೇಶಕರುಗಳು, ಹಣಕಾಸು ವಿಭಾಗದ ನಿರ್ದೇಶಕರಾದ ಶ್ರೀ ಶಾಂತಾರಾಮ ಪೈ, ಮಾನವ ಸಂಪನ್ಮೂಲ ಅಭಿವೃದ್ಧಿ ನಿರ್ದೇಶಕರಾದ ಶ್ರೀಮತಿ ಮಮತಾ ರಾವ್, ಸಿರಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಮನೋರಮಾ ಭಟ್ ಭಾಗವಹಿಸಿದ್ದರು.

ಸದರಿ ಕಾರ್ಯಕ್ರಮದಲ್ಲಿ ಗಣ್ಯರು, ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು, ಯೋಜನೆಯ ಎಲ್ಲ ಭಾಗದ ಪ್ರಾದೇಶಿಕ ನಿರ್ದೇಶಕರು, ಜೆ.ಎಸ್.ಎಸ್. ಸಂಸ್ಥೆಯ ವiತ್ತು ಎಸ್.ಡಿ.ಎಮ್. ಸಂಸ್ಥೆಯ ಎಲ್ಲ ಸಿಬ್ಬಂದಿಗಳು, ಮೆ|| ಹೆಗಡೆ ಅ್ಯಂಡ್ ಹೆಗ್ಗಡೆ ಆರ್ಕಿಟೆಕ್ಟ್, ಹುಬ್ಬಳ್ಳಿ ಮತ್ತು ತಂಡದವರು ಸೇರಿ ಸುಮಾರು 650 ಜನ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ಈ ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ನಿರ್ದೇಶಕರಾದ ಶ್ರೀ ಜಯಶಂಕರ ಶರ್ಮಾ ಇವರು ನಡೆಸಿಕೊಟ್ಟರು. ಪ್ರಾರ್ಥನೆಯನ್ನು ಕು. ಜ್ಯೋತಿ ಪವಾರ ತಮ್ಮ ಸುಶ್ರಾವ್ಯದ ಮೂಲಕ ಹಾಡಿದರು. ಕೊನೆಯಲ್ಲಿ ವಂದಾನಾರ್ಪಣೆಯನ್ನು ಶ್ರೀಮತಿ ವಿಶಾಲ ಮಲ್ಲಾಪುರ, ತರಬೇತಿ ಸಂಸ್ಥೆಯ ಪ್ರಾಂಶುಪಾಲರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *