NewsTrainingWomen Empowerment

ಮಹಿಳಾ ಜ್ಞಾನ ವಿಕಾಸ ತರಬೇತಿ ಸಂಸ್ಥೆಯ ಲೋಕಾರ್ಪಣೆ

ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸಲು ಸಹಕಾರಿ ಸಂಘ-ಸಂಸ್ಥೆಗಳು ಮುಖ್ಯವಾಗಿವೆ ಎಂದು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು. ಇಲ್ಲಿನ ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಕೇಂದ್ರದ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರಕ್ಕೂ ಪೂರ್ವದಲ್ಲಿ ಅನೇಕ ಅಭಿವೃದ್ಧಿಗಳು ಕಂಡಿವೆ. ಆದರೆ ಗ್ರಾಮೀಣ ಜನರ ಸಬಲೀಕರಣಕ್ಕೆ ಬ್ರಿಟಿಷರ ಕಾಲದಲ್ಲಿ ಅವಕಾಶ ಸಿಗಲಿಲ್ಲ. ಇದೀಗ ತಕ್ಕ ಮಟ್ಟಿನ ಬದಲಾವಣೆ ಕಾಣಲಾಗುತ್ತಿದೆ. ಆದಾಗ್ಯೂ ಇನ್ನೂ ಹೆಚ್ಚಿನ ಬದಲಾವಣೆ ಆಗಬೇಕಿದೆ ಎಂದರು. ಬಡ ಜನರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಅವುಗಳ ಕುರಿತು ಜನರಲ್ಲಿ ತಿಳಿವಳಿಕೆ ನೀಡುವುದಲ್ಲೇ, ಎಲ್ಲ ಯೋಜನೆಗಳು ಜನರಿಗೆ ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ನಮ್ಮ ಸಂಘ ಸೂಕ್ತ ಕಾರ್ಯ ನಿರ್ವಹಿಸುತ್ತಿದೆ ಎಂದರು.ದೇಶದ ಎಲ್ಲ ಸ್ತರದ ಜನರು ಸಬಲೀಕರಣಗೊಳ್ಳಲಿ ಎಂಬುದು ಸಂಘದ ಉದ್ದೇಶವಾಗಿದೆ. ಮಹಿಳೆಯರಿಗೆ ಯೋಜನೆಗಳನ್ನು ನೀಡಿದರೆ ಅವುಗಳ ಸದ್ಬಳಕೆಯಾಗುತ್ತದೆ ಎಂಬ ಭರವಸೆ ನಮ್ಮಲಿದೆ. ಇದೇ ಕಾರಣಕ್ಕಾಗಿ ಮಹಿಳೆಯರಿಗೆ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ಕೇಂದ್ರದಲ್ಲಿ ದೊರೆಯುವ ತರಬೇತಿ ಲಾಭ ಪಡೆಯಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಮಾತನಾಡಿ, ಸಮಾಜ ಮತ್ತು ದೇಶ ಆರ್ಥಿಕ, ಆಧ್ಯಾತ್ಮಿಕವಾಗಿ ಮುನ್ನಡೆ ಸಾಧಿಸಲು ಡಾ. ಹೆಗ್ಗಡೆ ಅವರು ಸದಾ ಶ್ರಮಿಸುತ್ತಿದ್ದಾರೆ. ಗ್ರಾಮಾಭಿವೃದ್ಧಿ ಸಂಘದಿಂದ ಜನರಿಗೆ ಆರ್ಥಿಕ ಸಹಾಯ ಮಾತ್ರವಲ್ಲದೇ ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಏಕಪಕ್ಷೀಯ ಕೆಲಸ ಅಸಾಧ್ಯ. ಇಂತಹ ಸಂಘ-ಸಂಸ್ಥೆಗಳ ಸಹಾಯದಿಂದ ಯೋಜನೆಗಳನ್ನು ನಿಜವಾದ ಬಡ ಜನರಿಗೆ ತಲುಪಿಸಲು ಸಾಧ್ಯವಾಗಿದೆ. ಹೀಗಾಗಿ ಜನರು ಸಂಘದ ಸಹಾಯವನ್ನು ಸದ್ಬಳಕೆಯಾಗಲಿ ಎಂದರು.

ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 90 ಸಾವಿರ ಚದರ ಅಡಿ ಜಾಗದಲ್ಲಿ ಅಂದಾಜು 11 ಕೋಟಿ ರೂ. ವಚ್ಚದಲ್ಲಿ ಸುಸಜ್ಜಿತ ಕಟ್ಟ ನಿರ್ಮಿಸಲಾಗಿದೆ. ಸದಸ್ಯ ವಿವಿಧ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘದ ಕಚೇರಿಗಳನ್ನು ಶೀಘ್ರದಲ್ಲಿ ಈ ಕಟ್ಟಡದಲ್ಲಿ ಸ್ಥಳಾಂತರಿಸಲಾಗುವುದು. ಇನ್ನು ಸಂಘದ ಎಲ್ಲ ವ್ಯವಹಾರಗಳು 2020ರ ಹೊತ್ತಿಗೆ ಡಿಜಿಟಲೈಸ್ ಆಗಲಿವೆ ಎಂದರು.

ಜೆಎಸ್‍ಎಸ್ ಸಂಸ್ಥೆ ಕಾರ್ಯದರ್ಶಿ ಪ್ರೊ . ನ. ವಜ್ರಕುಮಾರ, ಎ.ಐ. ನಡಕಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಟ್ಟಡ ಕಾಮಗಾರಿಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಐಡಿಬಿಐ ಆರ್ಥಿಕ ನೆರವಿನೊಂದಿಗೆ ಸ್ವ ಉದ್ಯೋಗಿಗಳಿಗೆ ಆಟೋ ರಿಕ್ಷಾ, ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು. ಸಂಸ್ಥೆಯ ಜೀವಂಧರಕುಮಾರ, ಡಿ. ಸುರೇಂದ್ರಕುಮಾರ, ಕೆವಿಜಿ ಬ್ಯಾಂಕ್ ಅಧ್ಯಕ್ಷ ಆರ್. ರವೀಂದ್ರನ್, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಐಡಿಬಿಐ ಬ್ಯಾಂಕ್ ಡಿಜಿಎಂ ಪಿಚ್ಚಯ್ಯ, ಎಸ್‍ಬಿಐ ಬ್ಯಾಂಕ್ ಡಿಜಿಎಂ ಇಂದ್ರನೀಲಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ, ಯೋಜನೆಯ ಎಲ್ಲಾ ಪ್ರಾದೇಶಿಕ ವಿಭಾಗಗಳ ಪ್ರಾದೇಶಿಕ ನಿರ್ದೇಶಕರು, ಧಾರವಾಡ ಪ್ರಾಧೇಶಿಕ ವ್ಯಾಪ್ತಿಯ ಎಲ್ಲಾ ಜಿಲ್ಲಾನಿರ್ದೇಕರು, ಧಾರವಾಡ ಜಿಲ್ಲೆ ಹಾಗೂ ಪ್ರಾದೇಶಿಕ ಕಛೇರಿಯ ಎಲ್ಲಾ ಯೋಜನಾಧಿಕಾರಿಗಳು, ತರಬೆತಿ ಸಂಸ್ಥೆಯ ಎಲ್ಲ ಸಿಬ್ಬಂದಿಗಳು ಹಾಗೂ ಸೇವಾಪ್ರತಿನಿಧಿಗಳು, ಸ್ವ ಸಹಾಯ ಸಂಘಗಳ ಸದಸ್ಯರು, ಇತರರು ಇದ್ದರು.ಪ್ರಾದೇಶಿಕ ನಿರ್ದೇಶಕ ಎನ್. ಜಯಶಂಕರ ಶರ್ಮಾ ಸ್ವಾಗತಿಸಿದರು. ಪ್ರಾಂಶುಪಾಲೆ ವಿಶಾಲ ಅಕ್ಕಿ ವಂದಿಸಿದರು.

ದಿನೇಶ್. ಎಂ.
ನಿರ್ದೇಶಕರು ಧಾರವಾಡ ಜಿಲ್ಲೆ

Leave a Reply

Your email address will not be published. Required fields are marked *