ಬರಕ್ಕೆ ಬೆರಗಾಗಿ ಕೃಷಿ ಕೈ ಬಿಟ್ಟವರ ಸಂಖ್ಯೆ ಅಧಿಕವಿದೆ. ಮಳೆಯ ಕಣ್ಣು ಮುಚ್ಚಾಲೆ, ಬರದ ತೀರ್ವತೆ, ಸಿಗುವ ಕನಿಷ್ಠ ದರದ ಬಗ್ಗೆ ಬೇಸರ, ಪ್ರಾಣಿ ಪಕ್ಷಿಗಳ ಹಾವಳಿ ಪರಿಣಾಮದ ಕೃಷಿ ನಷ್ಠ, ಕೃಷಿ ಪರಿಕರಗಳ ದರ ಏರಿಕೆ ಹೀಗೆ ಹಿರಿದಾಗುತ್ತಾ ಸಾಗುತ್ತದೆ ವಿಮುಖತೆಗೆ ಇರುವ ಕಾರಣಗಳ ಪಟ್ಟಿ. ಅನ್ನ ಒದಗಿಸುವ ಕೃಷಿ ಕಾಯಕ ಬಿಟ್ಟು ನಗರಗಳಿಗೆ ವಲಸೆ ಹೋಗುವ, ಹಳ್ಳಿಗಳಲ್ಲಿಯೇ ಸಣ್ಣ ಪುಟ್ಟ ವ್ಯಾಪಾರ, ಕೂಲಿ ಮತ್ತಿತರ ಉದ್ಯೋಗದಲ್ಲಿ ತೊಡಗಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಅನೇಕರ ದರ್ಶನವಾಗುತ್ತಿರುತ್ತದೆ. ಸ್ವಂತದ್ದೇ ಆದ ಕೃಷಿ ಭೂವಿದಿದ್ದರೂ ಅದು ಖಾಲಿ ಪಾಳು ಬಿದ್ದು ಬೀಕೋ ಎನ್ನುತ್ತಿರುತ್ತದೆ.
ಇಲ್ಲೋರ್ವ ಮಹಿಳೆಯಿದ್ದಾರೆ. ನಷ್ಟವೆಂದು ಕೃಷಿ ತೊರೆದು ಪತಿ ನಗರ ಸೇರಿದಾಗ ತಮ್ಮ ಭೂಮಿಯನ್ನು ಖಾಲಿ ಬಿಡಲೊಲ್ಲದೇ ಸಿರಿಧಾನ್ಯ ಬೆಳೆದು ಗೆದ್ದಿದ್ದಾರೆ. ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮದ ಹನುಮವ್ವಾ ಮಾಗೊಂಡಪ್ಪ ಕರಡಿಗುಡ್ಡ ಇವರೇ ಆ ಸಾಧಕ ಮಹಿಳೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವರ ಸಜ್ಜೆ ಕೃಷಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿದೆ.
ಸಜ್ಜೆ ಬಿತ್ತಿ ಗೆದ್ದರು:
ಮನೆಯೆದುರಿಗಿರುವ ಒಂದು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ಸಜ್ಜೆ ಕೃಷಿ ಮಾಡಿದ್ದರು. ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದರು. ಎರಡು ಕಿಲೋಗ್ರಾಂ ಸಜ್ಜೆಯ ಬೀಜ ತಂದು ಬಿತ್ತಿದ್ದರು. ಒಂದೆಕರೆ ಭೂಮಿಗೆ ಸಾಲುಗಳಲ್ಲಿ ತೆಳುವಾಗಿ ಬೀಜ ಬಿತ್ತಿಸಿದ್ದರು. ಆಗಾಗ ಬಿದ್ದ ಸಣ್ಣ ಮಳೆಯಿಂದ ವಾರದಲ್ಲಿಯೇ ಚಿಗುರೊಡೆದು ಗಿಡಗಳು ಮೇಲೇಳತೊಡಗಿದವು. ಸಣ್ಣದಾಗಿ ಸುರಿದ ಒಂದೆರಡು ಮಳೆಯಲ್ಲಿಯೇ ಹುಲುಸಾಗಿ ಬೆಳೆದ ಸಜ್ಜೆ ಗಿಡಗಳು ಕೊಯ್ಲಿಗೆ ಸಜ್ಜಾಗಿ ನಿಂತಿದ್ದವು.
ಅಕ್ಟೋಬರ್ ಎರಡನೆಯ ವಾರ ಕೊಯ್ಲು ಮುಗಿಸಿದ್ದಾರೆ. ಒಂದು ಅಡಿಗಳಷ್ಟು ಉದ್ದವಾಗಿ ದಪ್ಪನಾಗಿ ಬೆಳೆದು ನಿಂತಿದ್ದ ಸಜ್ಜೆ ತೆನೆಗಳು ಇವರ ಹೊಲದಲ್ಲಿ ಬೆಳೆದು ನಿಂತಿದ್ದವು. ಸುತ್ತಮುತ್ತಲಿನವರ ಗಮನ ಸೆಳೆದಿದ್ದವು. ಹದಿನೈದು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ತಾನೇ ಸ್ವತಃ ಕೆಲಸಕ್ಕೆ ಇಳಿಯುತ್ತಿದ್ದುದು ಇವರ ವಿಶೇಷತೆ. ಕೂರಿಗೆ ಬಿತ್ತನೆ, ಕೊಯ್ಲಿನಂತಹ ಕಠಿಣ ಕೆಲಸದ ಹೊರತಾಗಿ ಉಳಿದ ಎಲ್ಲಾ ಕೆಲಸವನ್ನು ಇವರು ಮಾಡುತ್ತಾರೆ. ಕೃಷಿ ಜಮೀನು ಇದ್ದರೂ ಖಾಲಿ ಬಿಡುವ ಅನೇಕರ ಮದ್ಯೆ ಇವರ ಸಾಧನೆ ಅಚ್ಚರಿ ಮೂಡಿಸುತ್ತದೆ.