AgricultureNewsTraining

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಹೈನುಗಾರಿಕೆ/ಮಿನಿಡೈರಿ’ ತರಬೇತಿ

ಮೈಸೂರು ಡಿಸೆಂಬರ್ 27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವಾರು ತರಬೇತಿಗಳನ್ನು ನಿರುದ್ಯೋಗಿ ಯುವಕ ಯುವತಿಯರಿಗೆ ಹಮ್ಮಿಕೊಳ್ಳಲಾಗಿದ್ದು ತತ್ಸಂಬಂಧ ದಿನಾಂಕ:26.12.2017 ರಿಂದ 30.12.2017 ರವರೆಗೆ ‘ಹೈನುಗಾರಿಕೆ/ಮಿನಿಡೈರಿ’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹೈನುಗಾರಿಕೆ/ಮಿನಿಡೈರಿ ತರಬೇತಿಯ ದ್ವಿತೀಯ ತಂಡವನ್ನು ಕೆ.ಎಂ.ಎಫ್ ತರಬೇತಿ ಕೇಂದ್ರ ಮೈಸೂರು ಇದರ ಉಪ ನಿರ್ದೇಶಕರಾದ ಡಾ. ಶಿವಶಂಕರ್ ಇವರು ಉದ್ಘಾಟಿಸಿ ಸುಸ್ಥಿರ ಜೀವನ ನಿರ್ವಹಣೆಗಾಗಿ ಸರಕಾರೀ ಅಥವ ಇನ್ಯಾವುದೇ ಉದ್ಯೋಗಕ್ಕಾಗಿ ಕಾಯುತ್ತಾ ದಿನ ಕಳೆಯುವ ಬದಲು ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ನಡೆಸುವ ನಿರ್ಧಾರವನ್ನು ಮಾಡಬೇಕು. ಜೀವನೋಪಾಯ ಚಟುವಟಿಕೆಗಳ ಪೈಕಿ ಹೈನುಗಾರಿಕೆಗೆ ವಿಫುಲವಾದ ಅವಕಾಶಗಳಿದ್ದು, ಇದನ್ನು ಸಾಂಪ್ರದಾಯಿಕ ಪದ್ದತಿಯಲ್ಲಿ ನಿರ್ವಹಿಸುವ ಬದಲು ಇತ್ತೀಚಿನ ತಂತ್ರಜ್ಞಾನ ವ್ಯವಸ್ಥೆಗೆ ಅನುಗುಣವಾಗಿ ಲಾಭದಾಯಕ ಹೈನುಗಾರಿಕೆ ಉದ್ಯಮವನ್ನಾಗಿ ಮಾಡಿದಲ್ಲಿ ಮಾತ್ರ ಉತ್ತಮ ಆದಾಯವನ್ನು ಗಳಿಸಲು ಸಾಧ್ಯ ಎಂದು ತಿಳಿಸಿದರು. ಹಸುಗಳ ಆಯ್ಕೆ, ಕೊಟ್ಟಿಗೆ ರಚನೆ, ಆಹಾರ ನೀಡುವ ಕ್ರಮಗಳು, ವರ್ಷದಲ್ಲಿ ಕರುಗಳು ಗರ್ಭಧರಿಸಿ ಮತ್ತೆ ಅವುಗಳಿಂದ ಲಾಭ ಪಡೆಯುವ ವಿಧಾನಗಳು, ಹಸುಗಳಿಗೆ ತಗುಲುವ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸುವ ಚುಚ್ಚು ಮದ್ದುಗಳನ್ನು ಯಾವ ಯಾವ ಕಾಲದಲ್ಲಿ ಹಾಕಿಸಿದರೆ ರೋಗ ಬಾಧೆಯನ್ನು ಸುಲಭವಾಗಿ ತಡೆಗಟ್ಟಬಹುದು ಎಂದು ತಿಳಿಸಿದರು.

ತರಬೇತಿ ಕೇಂದ್ರದ ಪ್ರಾಶುಪಾಲರಾದ ಶ್ರೀಯುತ ಸಂತೋಷ್ ರಾವ್.ಪಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 2017-18 ನೇ ಆರ್ಥಿಕ ವರ್ಷವನ್ನು ‘ಸ್ವ-ಉದ್ಯೋಗ ವರ್ಷ’ವೆಂದು ಅಚರಿಸಲಾಗುತ್ತಿದ್ದು, ಅದರ ಅಂಗವಾಗಿ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸುತ್ತಾ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಯ ಸಮಗ್ರ ರೂಪುರೇಷೆಯ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಕೆ.ಎಂ.ಎಫ್‍ನ ಹಿರಿಯ ಉಪ ನಿರ್ದೇಶಕರಾದ ಶ್ರೀಯುತ ಸಿ.ಕೆ.ದೇವರಾಜು, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಗುಂಪು ಪರಿವೀಕ್ಷಣಾ ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ಕೇಶವ ದೇವಾಂಗ, ಉಪನ್ಯಾಸಕರಾದ ಶ್ರೀ ಶಿವಕುಮಾರ್.ಆರ್ ಉಪಸ್ಥಿತರಿದ್ದರು.

5 ದಿನಗಳ ಈ ತರಬೇತಿಯಲ್ಲಿ ಚಾಮರಾಜನಗರ, ಕೋಲಾರ, ಬೆಂ.ಗ್ರಾಮಾಂತರ, ಮಂಡ್ಯ, ಮೈಸೂರು ಜಿಲ್ಲೆಗಳ ವಿವಿಧ ತಾಲೂಕುಗಳ ಒಟ್ಟು 36 ಮಂದಿ ಭಾಗವಹಿಸುತ್ತಿದ್ದು, ಮಾಹಿತಿ, ಪ್ರಾಯೋಗಿಕ ಕಲಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳು ಮತ್ತು ಕ್ಷೇತ್ರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ.

Leave a Reply

Your email address will not be published. Required fields are marked *