Communnity DevelopmentNews

ಜಲ ಸಂಪನ್ಮೂಲದ ಸದ್ಬಳಕೆ ಇಂದಿನ ಅಗತ್ಯ – ಡಾ| ಡಿ. ವೀರೇಂದ್ರ ಹೆಗ್ಗಡೆ

ಬೈಲಹೊಂಗಲ : ಕೆರೆಯ ಮಹತ್ವವನ್ನರಿತು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಆದ್ಯ ಕರ್ತವ್ಯ. ಕೆರೆ ಕಟ್ಟೆಗಳನ್ನು ದುರ್ಬಳಕೆ ಮಾಡದೆ ಪಾವಿತ್ರ್ಯತೆಯನ್ನು ಕಾಪಾಡಬೇಕು. ಕೆರೆ ಗ್ರಾಮಗಳ ಜೀವಾಳ ಹಿಂದಿನ ಕಾಲದಲ್ಲಿ ಕೆರೆಗಳನ್ನು ಶ್ರಮದಾನದ ಮೂಲಕ ರಕ್ಷಣೆ ಮಾಡುತ್ತಿದ್ದರು. ಕಾಲಕ್ರಮೇಣ ಕೆರೆಗಳ ಜವಾಬ್ದಾರಿ ಸರಕಾರದ್ದು ಎಂಬ ಭಾವನೆ ಜನರಲ್ಲಿ ಮೂಡಿತು. ತತ್ಪರಿಣಾಮವಾಗಿ ಗ್ರಾಮಗಳ ಜೀವಾಳವಾಗಿದ್ದ ಕೆರೆಗಳು ನಿರ್ಲಕ್ಷಿಸಲ್ಪಟ್ಟು ಅತಿಕ್ರಮಣಕ್ಕೊಳಗಾದವು. ನಾಗರಿಕತೆ ಬೆಳೆದಂತೆಲ್ಲಾ ನೀರಿನ ಅತಿ ಬಳಕೆಯಿಂದಾಗಿ ಜಲಾಭಾವ ಸೃಷ್ಠಿಯಾಯಿತು. ಈ ಎಲ್ಲಾ ಕಾರಣಗಳಿಗಾಗಿ ಜಲ ಮೂಲವನ್ನು ಸಂರಕ್ಷಿಸುವ ಜೊತೆಗೆ ಜೀವ ಜಲವನ್ನು ಎಚ್ಚರಿಕೆಯಿಂದ ಹಿತಮಿತವಾಗಿ ಬಳಕೆ ಮಾಡುವ ಪ್ರಜ್ಞಾವಂತಿಕೆ ಪ್ರತಿಯೊಬ್ಬರಲ್ಲೂ ಜಾಗೃತಿಗೊಳ್ಳಬೇಕು ಎಂಬುದಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದನ್ವಯ ಸಾರ್ವಜನಿಕ ಸಹಭಾಗಿತ್ವದಲ್ಲಿ ರೂ.22 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾದ ಬೈಲಹೊಂಗಲ ತಾಲೂಕಿನ ಅನಿಗೋಳ ಕೆರೆಯನ್ನು ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬೈಲಹೊಂಗಲ ಮೂರುಸಾವಿರ ಮಠದ ಮ.ನಿ.ಪ್ರ.ಸ್ವ. ನೀಲಕಂಠ ಮಹಾಸ್ವಾಮಿಗಳು ಮಾತನಾಡಿ ಸ್ಥಳೀಯ ಸಂಪನೂಗಳನ್ನು ಸಂರಕ್ಷಿಸಿ ಸದ್ಬಳಕೆ ಮಾಡುವ ಹೊಣೆಗಾರಿಕೆ ಗ್ರಾಮಸ್ಥರದ್ದು ಎಂಬ ತಿಳುವಳಿಕೆ ಎಲ್ಲರಲ್ಲೂ ಮೂಡಬೇಕಿದೆ ಎಂಬುದಾಗಿ ಅಭಿಪ್ರಾಯಪಟ್ಟರು. ಬೈಲಹೊಂಗಲ ಶಾಸಕ ಡಾ| ವಿಶ್ವನಾಥ ಪಾಟೀಲ್, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಮಾಜಿ ವಿದಾನ ಪರಿಶತ್ ಸದಸ್ಯ ಮಹಾಂತೇಶ ಕೌಜಲಗಿ ಸಂದರ್ಭೋಚಿತವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ ಪರಂಡಿ ಅಧ್ಯಕ್ಷತೆ ವಹಿಸಿದ್ದರು.

ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಸುರೇಶ ಮೊೈಲಿ ಸ್ವಾಗತಿಸಿ ಯೋಜನಾಧಿಕಾರಿ ನಾಗರಾಜ ನಾಯ್ಕ ವಂದಿಸಿದರು.

Leave a Reply

Your email address will not be published. Required fields are marked *