News

International Conference on Beliefs and Beyond at Bengaluru on March 8 and 9, 2018.

ಮಾರ್ಚ್ 8, 9 ರಂದು ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣಮಹೋತ್ಸವ ವರ್ಷದ ಅಂಗವಾಗಿ ಇದೇ ಮಾರ್ಚ್ 8, 9 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ಧಾರ್ಮಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಧರ್ಮಾಚರಣೆಯಲ್ಲಿರುವ ನಂಬಿಕೆಗಳು, ಕಟ್ಟುಕಟ್ಟಳೆಗಳು, ಆಚರಣೆಗಳು ಇವುಗಳನ್ನು ಕೇಂದ್ರ ಬಿಂದುವಾಗಿರಿಸಿಕೊಂಡು “ನಂಬಿಕೆ ಮತ್ತು ಅದರಾಚೆಗೆ” ಎಂಬ ಶೀರ್ಷಿಕೆಯಲ್ಲಿ ಜಗತ್ತಿನ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ವಿವಿಧ ನಂಬಿಕೆಗಳ ಪ್ರತಿಪಾದನೆ ಮತ್ತು ವಿಮರ್ಶೆಯನ್ನು ನಡೆಸುವ ಉದ್ದೇಶದಿಂದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಳದ ವತಿಯಿಂದ ಭಾರತೀಯ ವಿದ್ಯಾಭವನದ ಸಹಯೋಗದಿಂದ ನಡೆಸಲಾಗುವ ಈ ಸಮ್ಮೇಳನದಲ್ಲಿ ವಿಶ್ವದ ಹತ್ತಕ್ಕೂ ಹೆಚ್ಚಿನ ರಾಷ್ಟ್ರಗಳಿಂದ ಸುಮಾರು 40ಕ್ಕೂ ಮಿಕ್ಕಿದ ಪ್ರತಿನಿಧಿಗಳು ಮತ್ತು ದೇಶದ ವಿವಿಧ ಭಾಗಗಳಿಂದ 300 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸುವರು. ಸಮ್ಮೇಳನದ ಆಮಂತ್ರಣ ಪತ್ರಿಕೆಯ ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ.

ಈ ಸಂಬಂಧ ಇಂದು ಸಂಜೆ 4 ಗಂಟೆಗೆ ಸರಿಯಾಗಿ ಭಾರತೀಯ ವಿದ್ಯಾಭವನ, ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಮುಂದುವರೆದು ಅವರು ಮಾತನಾಡುತ್ತಾ ನಾವು ಅನೂಚೂನವಾಗಿ ನಂಬಿಕೊಂಡು ಬಂದಿರುವ ಹಲವಾರು ಶಾಸ್ತ್ರಗಳು ಉದಾಹರಣೆಗೆ ಜ್ಯೋತಿಷ್ಯ, ಹಸ್ತಸಾಮುದ್ರಿಕಾ, ಜನ್ಮಜನ್ಮಾಂತರ ಫಲಗಳು, ಆಣೆ, ಭಾಷೆ, ಪ್ರಮಾಣ ಮುಂತಾದವುಗಳನ್ನು ವಿಮರ್ಶೆಗೊಳಪಡಿಸಿ ಜೊಳ್ಳು ಗಟ್ಟಿಯನ್ನು ಬೇರ್ಪಡಿಸುವ ಅಗತ್ಯವಿದೆಯಿಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ, ಶ್ರೀ ಎಚ್.ಎನ್.ಸುರೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಮತ್ತಿತರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *