ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಲಹೆ
-ಶ್ರೀಮತಿ ಶ್ರದ್ಧಾ ಅಮಿತ್ರವರು
ದೇವನಹಳ್ಳಿ : ಮಹಿಳೆಯರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಕಾಲ ಬದಲಾದಂತೆ ಮಹಿಳೆಯರು ಬದಲಾಗಬೇಕು. ಮಹಿಳೆಯರಲ್ಲಿ ನಾಯಕತ್ವ ಗುಣಗಳು ಬೆಳೆಯಬೇಕು ಎಂದು ಶ್ರೀಮತಿ ಶ್ರದ್ಧಾಅಮಿತ್ರವರು ಅಭಿಪ್ರಾಯಪಟ್ಟರು.
ದೇವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ಸಮಾರೋಪದಲ್ಲಿ, ದೇವನಹಳ್ಳಿ ನಗರದಲ್ಲಿ ಸ್ಥಾಪಿಸಲಾದ ನಾಲ್ಕು ಶುದ್ಧ ಕುಡಿಯುವ ನೀರಿನ ಶುದ್ಧಗಂಗಾ ಘಟಕ ಉದ್ಘಾಟಿಸಿ ಮಾತನಾಡಿದರು.
ಸ್ವ-ಉದ್ಯೋಗ ಮಾಡಿ : ಸ್ವ-ಸಹಾಯ ಸಂಘ ನಿರ್ಮಾಣ ಮಾಡಿ ಸಾವಿರಾರು ಮಹಿಳೆಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆರ್ಥಿಕ ಶಕ್ತಿ ನೀಡಿ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಮಾಡಿಕೊಟ್ಟಿದೆ. ಸಾಲ ಸೌಲಭ್ಯಗಳನ್ನು ಪಡೆದು ಗುಡಿ ಕೈಗಾರಿಕೆ, ಇತರೆ ಸ್ವ-ಉದ್ಯೋಗ ಮಾಡುವುದರ ಮೂಲಕ ಮತ್ತೊಬ್ಬರಿಗೆ ಉದ್ಯೋಗ ಸೃಷ್ಠಿಸುವ ಕಾರ್ಯ ಆಗಬೇಕು ಎಂದು ಸಲಹೆ ನೀಡಿದರು.
ಒಂದು ಮನೆಯಲ್ಲಿ ಹೆಣ್ಣು ಆರ್ಥಿಕ ತಜ್ಞೆ, ಶಿಕ್ಷಣ ತಜ್ಞೆ, ಜ್ಞಾನವಂತೆ, ಸಂಸಾರದಲ್ಲಿ ಹಣ ಉಳಿತಾಯ ಹೀಗೆ ಹತ್ತು ಹಲವಾರು ಕಾರ್ಯ ಮನೆಯಲ್ಲಿ ಹೆಣ್ಣು ನಿಭಾಯಿಸುತ್ತಾಳೆ ಎಂದರು.
ಮಾನವ ಧರ್ಮಕ್ಕೆ ಬದ್ಧರಾಗಿರೋಣ
-ಶ್ರೀಮತಿ ವಿನಯಾ ಪ್ರಸಾದ್, ಚಲನಚಿತ್ರ ನಟಿ
ದೇವನಹಳ್ಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಎಲ್ಲಾ ಜಾತಿ, ಮತ, ಪಂಥ, ಧರ್ಮದವರೂ ಇದ್ದು, ಮಾನವ ಧರ್ಮಕ್ಕೆ ಬದ್ಧರಾಗಿರಬೇಕು ಎಂದು ನಟಿ ಶ್ರೀಮತಿ ವಿನಯಾ ಪ್ರಸಾದ್ರವರು ಹೇಳಿದರು.
ದೇವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ 2 ದಿನಗಳ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯಂತೆ ಧರ್ಮಸ್ಥಳ ಧರ್ಮಾಧಿಕಾರಿರವರಾದ ಪೂಜ್ಯ ಡಾ|| ಡಿ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಮಹಿಳೆಯರನ್ನು ಒಗ್ಗೂಡಿಸಿ, ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆ ರೂಪಿಸಿದರು. ಪ್ರಸ್ತುತ ಗ್ರಾಮಾಭಿವೃದ್ಧಿ ಯೋಜನೆ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದೆ ಎಂದರು.