NewsTraining

ತರಬೇತಿ ಸಹಾಯಕರಿಗೆ ಮತ್ತು ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನ ಕುರಿತು ತರಬೇತಿ

ದಿನಾಂಕ 17.02.2018ರಂದು ಗದಗ ಜಿಲ್ಲಾ ಕಛೇರಿಯಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು. ತರಬೇತಿಯನ್ನು ಗದಗ ಜಿಲ್ಲೆಯ ನಿರ್ದೇಶಕರಾದ ಶ್ರೀ ಶಿವಾನಂದ ಆಚಾರ್ಯರವರು ಉದ್ಘಾಟಿಸಿದರು. ನಂತರ ತರಬೇತಿಗೆ ಆಗಮಿಸಿದಂತಹ ಅಭ್ಯರ್ಥಿಗಳನ್ನು ಕುರಿತು ಮಾತನಾಡುತ್ತಾ “ನಗದು ರಹಿತ ವ್ಯವಹಾರವು ನಮ್ಮ ಆರ್ಥಿಕ ವ್ಯವಸ್ಥೆಯ ಮಹತ್ವ ಪೂರ್ಣ ಬದಲಾವಣೆಯಾಗಿದ್ದು ಇದರಿಂದ ಹಣದ ಸೋರಿಕೆ ಮತ್ತು ಹಣಕಾಸಿನಿಂದಾಗುವ ದುರ್ಘಟನೆಗಳನ್ನು ತಡೆಗಟ್ಟಬಹುದಾಗಿದೆ. ನಗದು ರಹಿತ ವ್ಯವಹಾರ ಮಾಡಲು ಪ್ರತಿಯೊಬ್ಬರು ವೈಯಕ್ತಿಕ ಖಾತೆಗಳನ್ನು ಹೊಂದಬೇಕು. ಇದರಿಂದ ಆರ್ಥಿಕ ಶಿಸ್ತು ಬೆಳೆಯುತ್ತದೆ. ನಾವು ಮಾಡಿದಂತಹ ಖರ್ಚು ಮತ್ತು ಜಮೆಯ ಕುರಿತು ನಿಖರವಾದ ಮಾಹಿತಿ ದೊರೆಯುತ್ತದೆ. ನಗದು ರಹಿತ ವ್ಯವಹಾರ ಸಂಪೂರ್ಣ ತಂತ್ರಜ್ಞಾನಕ್ಕೆ ಒಳಪಟ್ಟಿದ್ದರಿಂದ ಹಣಕಾಸಿನ ವ್ಯವಹಾರಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತವೆ. ಇದರಿಂದ ಸಮಯದ ಸದುಪಯೋಗ ಮಾಡಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಅಕ್ಕಿ ಬದಲಾಗಿ ಜೋಳ, ಜೋಳದ ಬದಲಾಗಿ ಹುಣಸೆ ಹಣ್ಣು ಎಂದು ವಸ್ತುಗಳ ವಿನಿಮಯ ಮಾಡಿ ವ್ಯವಹಾರ ಮಾಡುತ್ತಿದ್ದು ಪ್ರಸ್ತುತ ದಿನಗಳಲ್ಲಿ ಹಣವಿಲ್ಲದೇ ಯಾವುದೇ ವ್ಯವಹಾರವಿಲ್ಲ ಎಂಬ ಪರಿಸ್ಥಿತಿ ಬಂದಿದೆ. ಇದು ಜನರಲ್ಲಿ ಹಣದ ವ್ಯಾಮೋಹವನ್ನು ಹೆಚ್ಚು ಮಾಡುತ್ತಿದೆ” ಎಂದು ಹೇಳಿದರು.

ನಂತರ “ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ಬೆಳ್ತಂಗಡಿಯಲ್ಲಿ ನಗದು ರಹಿತ ವ್ಯವಹಾರ ಮಾಡುತ್ತಿದ್ದು ಇದಕ್ಕೆ ಮಾನ್ಯ ಪ್ರಧಾನ ಮಂತ್ರಿಯವರಾದ ಮೋದಿಯವರು ಕಳೆದ ವರ್ಷ ರುಪೇ ಕಾರ್ಡ ವಿತರಣೆ ಮಾಡುವ ಮೂಲಕ ಚಾಲನೆ ನೀಡರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಯೋಜನೆಯಲ್ಲಿ ನಗದು ರಹಿತ ವ್ಯವಹಾರ ಮಾಡುವುದರಿಂದ ನಮ್ಮ ಸದಸ್ಯರಿಗೆ ಈ ಕುರಿತಾದ ಮಾಹಿತಿಯನ್ನು ತಲುಪಿಸುವುದು ಮತ್ತು ಅವರನ್ನು ನಗದು ರಹಿತ ವ್ಯವಹಾರ ಮಾಡಲು ತಯಾರಿ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ನಮ್ಮ ಪೂಜ್ಯರ ಕನಸ್ಸು ಪಾಲುದಾರ ಸದಸ್ಯರ ಸರ್ವತೋಮುಖ ಏಳಿಗೆಯಾಗಿದ್ದು ಅದು ನನಸಾಗಬೇಕಿದ್ದರೇ ಅವರಲ್ಲಿ ಆರ್ಥಿಕ ಶಿಸ್ತು ಬೆಳೆಸಬೇಕು. ಅವರಲ್ಲಿ ಉಳಿತಾಯ ಮನೋಭಾವನೆ ಬೆಳೆಸಬೇಕು, ಅವರು ಅಭಿವೃದ್ದಿಗಾಗಿ ಹಣದ ಬಳಕೆ ಹೇಗೆ ಮಾಡಬೇಕು ಎಂಬ ಅರಿವು ಮೂಡಿಸಬೇಕು. ವೈಯಕ್ತಿಕ ಖಾತೆ ತೆರೆಯುವುದರಿಂದ ಅವರಲ್ಲಿ ಉಳಿತಾಯ ಮನೋಭಾವನೆ ಬರುತ್ತದೆ. ಅವರ ಹಣವು ಸುರಕ್ಷಿತವಾಗಿರುತ್ತದೆ. ಅವರ ಖಾತೆಯಲ್ಲಿ ಹಣವಿದ್ದಾಗ ಮಾತ್ರ ಅವರು ಯಾವುದೇ ಆರ್ಥಿಕ ಸವಾಲನ್ನು ಎದುರಿಸಲು ಸಾಧ್ಯ ಎಂದು ಹೇಳಿದರು.

ತರಬೇತಿಯಲ್ಲಿ ಗದಗ ಜಿಲ್ಲೆಯಿಂದ 40ಜನ ತಾಂತ್ರಿಕ ವರ್ಗದ ಸಿಬ್ಬಂದಿಗಳು ಮತ್ತು ತರಬೇತಿ ಸಹಾಯಕರು ಭಾಗವಹಿಸಿದ್ದು ನಗದು ರಹಿತ ವ್ಯವಹಾರದ ವಿಧಾನಗಳು ಮತ್ತು ಬ್ಯಾಂಕಿನ ವೈಯಕ್ತಿಕ ಖಾತೆಯ ನಿರ್ವಹಣೆಯ ಕುರಿತು ಮಾಹಿತಿ ಮತ್ತು ಬಿ.ಸಿ ಏಜೆಂಟ್‍ರ ಮೂಲಕ ನಗದು ರಹಿತ ವ್ಯವಹಾರದ ಪ್ರಾತ್ಯಕ್ಷಿಕೆ ಮಾಹಿತಿ ನೀಡಲಾಯಿತು. ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಬಿ. ಸಿ. ಯೋಜನಾಧಿಕಾರಿಗಳಾದ ಶ್ರೀ ಸುಕ್ರು ಗೌಡ, ಜಿಲ್ಲಾ ಯೋಜನಾಧಿಕಾರಿಗಳಾದ ಶ್ರೀಮತಿ ಶಿಲ್ಪ ಮತ್ತು ಎನ್ ಆರ್ ಎಲ್ ಎಮ್ ಸಮನ್ವಯಾಧಿಕಾರಿಗಳಾದ ಶ್ರೀ ಧಮೇಂದ್ರರವರು ಉಪಸ್ಥಿತರಿದ್ದರು. ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ವಿಜಯಲಕ್ಷ್ಮಿ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *