Agriculturesuccess story

ತೆಂಗಿನ ತೋಟದಲ್ಲಿ ಸಿರಿಧಾನ್ಯ ಬೆಳೆ

ಹೊಲದಲ್ಲಿ ಬೆಳೆದ ತೃಣಧಾನ್ಯಗಳು ಅಸಂಖ್ಯಾತರ ಊಟದ ಬಟ್ಟಲಿಗೆ ಸೇರಬೇಕೆಂದರೆ ಧಾನ್ಯಗಳು ಪಾಕದ ರೂಪ ಪಡೆದುಕೊಳ್ಳಬೇಕು. ಅಡುಗೆಯ ಘಮಲು, ಅದನ್ನು ಆಸ್ವಾದಿಸುವಾಗ ಸಿಗುವ ವಿಶೇಷ ಅನುಭೂತಿ ಇನ್ನಷ್ಟು, ಮತ್ತಷ್ಟು ಸಿರಿಪಾಕಗಳನ್ನು ಇಷ್ಟಪಡುವಂತೆ ಮಾಡಬೇಕು. ಹೊಸ ಹೊಸ ಅಡುಗೆ ಪ್ರಯೋಗಗಳಿಗೆ ಧಾನ್ಯಗಳು ಒಗ್ಗಿಕೊಂಡರೆ ಸಹಜವಾಗಿಯೇ ಬೇಡಿಕೆ ಕುದುರುತ್ತಿರುತ್ತದೆ. ಬೆಳೆಯುವ ರೈತರ ಪಾಲಿಗೆ ಅದೃಷ್ಟ ಖುಲಾಯಿಸುತ್ತದೆ. ಸಿರಿಧಾನ್ಯಗಳ ಮೌಲ್ಯವನ್ನು ಜಗತ್ತು ಅರಿತುಕೊಳ್ಳುವ ಕಾರ್ಯದ ಹಿಂದೆ ಸಿರಿಧಾನ್ಯ ಪಾಕ ತಜ್ಞರ ಕೌಶಲ್ಯ ಅಡಗಿದೆ.
ಸಿರಿಧಾನ್ಯ ಪಾಕವೈವಿಧ್ಯತೆಗಳನ್ನು ತಯಾರಿಸಿ ಆಸಕ್ತರಿಗೆ ಮಾರಾಟ ಮಾಡಿ ಅದರಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ತಿಳುವಳಿಕೆ ಮೂಡಿಸುತ್ತಿರುವ ಅನೇಕರು ನಮ್ಮ ನಡುವಿದ್ದಾರೆ. ಅಂತವರಲ್ಲಿ ಸರೋಜಾ ನಾಗೇಂದ್ರಪ್ಪ ಪಾಟೀಲ್ ಒಬ್ಬರು. ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವ ಸಹಾಯ ಸಂಘದ ಸದಸ್ಯರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ತಮ್ಮದೇ ಆದ ‘ತದ್ವನಂ’ ಬ್ರಾಂಡ್ ಅಡಿಯಲ್ಲಿ ಸಣ್ಣ ಪ್ರಮಾಣದ ಗ್ರಹ ಉದ್ದಿಮೆಯನ್ನು ಆರಂಭಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. 32 ಕ್ಕೂ ಅಧಿಕ ಬಗೆಯ ಸಿರಿಧಾನ್ಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ. ನವಣೆ, ಕೊರಲೆ, ಸಜ್ಜೆ, ರಾಗಿ, ಊದಲು, ಜೋಳ, ಹಾರಕ, ಸಾಮೆ, ಬರಗು ಮುಂತಾದ ಸಿರಿಧಾನ್ಯಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಇವರು ತಯಾರಿಸುವ ಸಿರಿಧಾನ್ಯದ ಡ್ರೈಫ್ರುಟ್ಸ್, ಎನರ್ಜಿ ಮಿಕ್ಸ್, ರಾಗಿ ಸಿಹಿ ಹುರಿ ಹಿಟ್ಟು, ಚಿಲ್ಡ್ರನ್ ಸ್ಪೆಸಲಿಸ್ಟ್, ಹಪ್ಪಳ, ರೊಟ್ಟಿ ಮುಂತಾದವುಗಳು ಪ್ರಸಿದ್ದಿಯಾಗಿದೆ. ‘ತಧ್ವನಂ’ ಎಂಬ ಹೆಸರಿನ ಗ್ರಹ ಉದ್ದಿಮೆ ತಿನಿಸುಗಳು ದಾವಣಗೆರೆ ಮಾತ್ರವಲ್ಲದೇ ಚಿತ್ರದುರ್ಗ, ಹಾವೇರಿ, ಕರಾವಳಿಯ ಕೆಲವು ಭಾಗಗಳಿಗೂ ರವಾನೆಯಾಗುತ್ತಿದೆ. ಸಿರಿಧಾನ್ಯ ಮೆಳಗಳು, ಸಾವಯವ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ. ಒಮ್ಮೆ ಖರೀದಿಸಿದ ಗ್ರಾಹಕರು ದೂರವಾಣಿ ಕರೆ ಮಾಡಿ ಮತ್ತೆ ಪುನಃ ಕಳುಹಿಸುವಂತೆ ವಿನಂತಿಸಿಕೊಳ್ಳುವುದಿದೆ. ಅವರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಮನೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಜವಾಬ್ದಾರಿ ಸರೋಜಾ ಪಾಟೀಲ್ ಇವರದಾದರೆ ಮಕ್ಕಳಾದ ದರ್ಶನ್ ಪಾಟೀಲ್ ಹಾಗೂ ಪವನ್ ಪಾಟೀಲ್ ಮಾರುಕಟ್ಟೆಯ ಜವಾಬ್ದಾರಿ ನೋಡಿಕೊಳ್ಳುತ್ತಾರೆ. ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು, ಸಿರಿಧಾನ್ಯ ದೊರೆಯುವ ಸ್ಥಳಗಳಲ್ಲಿ ಇವರು ತಯಾರಿಸುವ ಉತ್ಪನ್ನಗಳು ಖರೀದಿಗೆ ಸಿಗುವಂತೆ ನೋಡಿಕೊಂಡಿದ್ದಾರೆ. ಸಜ್ಜೆ ಮತ್ತು ಜೋಳದ ರೊಟ್ಟಿ ತಯಾರಿಸಿ ಮಾರಾಟ ಮಾಡುವುದರಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ತಯಾರಿಸಿದ ವಾರದ ನಂತರವೂ ಗರಿಗರಿಯಾಗಿರುವಂತೆ ಇರುವ ಕಡಕ್ ರೊಟ್ಟಿಗಳ ತಯಾರಿ ಇವರ ವಿಶೇಷತೆ.

ತೆಂಗಿನ ತೋಟದಲ್ಲಿ ಸಿರಿಧಾನ್ಯ:
ತೃಣ ಧಾನ್ಯಗಳ ಬೆಳೆಯ ಬಗ್ಗೆ ತೀರ್ವ ಕುತೂಹಲ ಹೊಂದಿರುವ ಇವರು ತಾವೂ ಸಹ ಸಿರಿಧಾನ್ಯ ಬೆಳೆಯಬೇಕೆಂದು ನಿರ್ಧರಿಸಿದರು. ಇದಕ್ಕಾಗಿ ಇವರು ಆಯ್ದುಕೊಂಡ ಸ್ಥಳ ತೆಂಗಿನ ತೋಟ. ಮೂವತ್ತು ಅಡಿಗಳಿಗೆ ಒಂದರಂತೆ ಇರುವ ತೆಂಗಿನ ಮರಗಳ ನಡುವೆ ಸಿರಿಧಾನ್ಯ ಕೃಷಿಯನ್ನೇಕೆ ಪ್ರಯೋಗಿಸಿ ನೋಡಬಾರದು? ಎನ್ನಿಸಿತು. ಮರಗಳ ಮದ್ಯೆ ಒಂದು ಬಾರಿ ಟ್ರಾಕ್ಟರ್‍ನಿಂದ ಕಲ್ಟಿವೇಟರ್ ಹೊಡೆಯಿಸಿದರು. ಮರದ ಬೇರುಗಳು ಜಮೀನಿನ ತುಂಬ ಹರಡಿರುವುದರಿಂದ ಆಳವಾದ ಉಳುಮೆ ಮಾಡುವ ಹಾಗಿಲ್ಲ. ಕಲ್ಟಿವೇಟರ್ ಭೂಮಿಯಲ್ಲಿ ಎಳೆದ ತಿಳಿ ಆಳದ ಬಿರುಕಿನಲ್ಲಿಯೇ ಸಿರಿಧಾನ್ಯದ ಬೀಜ ಬಿತ್ತಿದ್ದರು. ತಲಾ ಅರ್ಧ ಎಕರೆಯಂತೆ ಕೊರಲೆ, ಹಾರಕ, ಬರಗು, ಊದಲು, ನವಣೆ, ಸಾಮೆ ಬೀಜಗಳನ್ನು ಬಿತ್ತಿದರು. ಇಪ್ಪತ್ತು ದಿನದ ನಂತರ ಸಣ್ಣ ಪವರ್ ಟಿಲ್ಲರ್ ಸಹಾಯದಿಂದ ಸಾಲಿನ ನಡುವಿನ ಕಳೆ ನಿಯಂತ್ರಿಸಿದರು. ಎಕರೆಗೆ ಒಂದು ಟ್ರಾಕ್ಟರ್ ಲೋಡ್ ಕೊಟ್ಟಿಗೆಯ ತಿಪ್ಪೆ ಗೊಬ್ಬರ ಬಳಸಿದರು. ಮೂರು ತಿಂಗಳಲ್ಲಿ ಸಿರಿಧಾನ್ಯ ಕಟಾವಿಗೆ ದೊರೆಯಿತು.
ನೆರಳಿಗೆ ಬೆದರದೇ ತೆಂಗಿನ ಮರಗಳ ಬೇರಿಗೆ ಅಂಜದೇ ಬೆಳೆದ ಸಿರಿಧಾನ್ಯಗಳು ಭಾರಿ ಎನ್ನಿಸುವಷ್ಟು ಅಲ್ಲದಿದ್ದರೂ ಕನಿಷ್ಠ ಇಳುವರಿಯನ್ನಾದರೂ ನೀಡಿದ್ದವು. ಕೊರಲೆ 50 ಕೆಜಿ. ಹಾರಕ ಐವತ್ತು ಕೆಜಿ. ಬರಗು, ಊದಲು, ನವಣೆ ಹಾಗೂ ಸಾಮೆಯಿಂದ ತಲಾ ಮೂವತ್ತು ಕೇಜಿಯಂತೆ ಇಳುವರಿ ದೊರಕಿತ್ತು. ತೋಟದಲ್ಲಿ ಇವರದು ಮೊದಲ ಬಾರಿಯ ಸಿರಿಧಾನ್ಯ ಪ್ರಯೋಗ. ಈ ಬಾರಿ ಬೆಳೆಯುವ ರೀತಿಯ ಬಗ್ಗೆ ಅರಿಕೆ ಮೂಡಿದೆ. ಮುಂದಿನ ಬಾರಿ ಉತ್ತಮ ಇಳುವರಿ ಪಡೆಯುವ ನಿರೀಕ್ಷೆ ಇವರಲ್ಲಿ ಮನೆ ಮಾಡಿದೆ.
ಕನಿಷ್ಟ ಇಳುವರಿ ದೊರಕಿರುವ ಬಗ್ಗೆ ಇವರಲ್ಲಿ ಬೇಸರವಿಲ್ಲ. ಸಿಕ್ಕಿರುವ ಧಾನ್ಯವನ್ನೇ ಮೌಲ್ಯವರ್ಧನೆ ಮಾಡಿ ಲಾಭದಾಯಕವಾಗಿಸಿಕೊಂಡಿದ್ದಾರೆ. ‘ಕನಿಷ್ಟ ಬೆಳೆ ಬಂತೆಂದು ಕೊರಗೇಕೆ? ಲಾಭ ಗಳಿಸಲು ಮೌಲ್ಯವರ್ಧನೆ ಮಾಡಿದರೆ ಸಾಕು’ ಎನ್ನುವ ಅನುಭವದ ಮಾತು ಇವರದು.
ಭತ್ತ ಕೃಷಿಯಲ್ಲಿಯೂ ಕೂಡ ಇವರು ಪ್ರಯೋಗಶೀಲರು. ಶ್ರೀ ಮಾದರಿಯ ಭತ್ತ ಬೇಸಾಯವನ್ನು ಹರಿಹರ ತಾಲೂಕಿನಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಕೃಷಿ ಸಾಧನೆಯನ್ನು ಹಲವು ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಗುರುತಿಸಿದೆ. 2008-09 ರಲ್ಲಿ ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ, 2011-12 ರಲ್ಲಿ ಭಾರತ ಸರ್ಕಾರದಿಂದ ಮಹೇಂದ್ರ ಕೃಷಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಭದ್ರಾ ನಾಲೆಯ ನೀರು ಬಿಡಲಿಲ್ಲವೆಂದು ಭತ್ತ ಕೃಷಿಯನ್ನು ಕೈಗೊಳ್ಳುವ ಹೊಲವನ್ನು ಪಾಳು ಬಿಟ್ಟು ಕೊರಗುತ್ತಿರುವ ಹಲವರ ಮದ್ಯೆ ಸಿರಿಧಾನ್ಯ ಕೃಷಿ ಕೈಗೊಂಡು, ಅದರ ಮೌಲ್ಯವರ್ಧನೆಯಲ್ಲಿ ತೊಡಗಿಕೊಂಡಿರುವ ಇವರ ಸಾಧನೆ ಮಾದರಿಯೆನ್ನಿಸುತ್ತದೆ.

Leave a Reply

Your email address will not be published. Required fields are marked *