Agriculturesuccess story

ಬೀಜ ಬಿತ್ತದೆ ಭರ್ಜರಿ ಫಸಲು.

ತಾಳೆ ನಡುವೆ ಕೊರಲೆ:
ಇವರದು ಒಂದು ಕಾಲೆಕರೆ ಜಮೀನು. ಮೂವತ್ತು ಅಡಿಗೊಂದರಂತೆ ತಾಳೆ ಮರಗಳಿವೆ. ಎರಡು ವರ್ಷದ ಮರಗಳು. ಅಲ್ಲಲ್ಲಿ ನಿಂಬೆ ಗಿಡಗಳು, ದಾಲ್ಚಿನಿ ಗಿಡಗಳು ಬೆಳೆದು ನಿಂತಿವೆ. ಕಳೆದ ಮುಂಗಾರಿನಲ್ಲಿ ಕೊರಲೆ ಕೃಷಿ ಮಾಡಿದ್ದ ಅವರಿಗೆ ಆಘಾತವೊಂದು ಎದುರಾಗಿತ್ತು. ತಾಳೆ ತೋಟದ ಮದ್ಯೆ ಒಂದು ಎಕರೆಯಲ್ಲಿ ಕೊರಲೆ ಬಿತ್ತಿದ್ದರು. ಉತ್ತಮ ಇಳುವರಿಯನ್ನೇ ಹೊತ್ತು ನಿಂತಿತ್ತು. ಆದರೆ ಕಟಾವಿನ ವೇಳೆ ಎಡೆಬಿಡದೇ ಸುರಿದ ಮಳೆ ಇವರಿಗೆ ನಷ್ಟ ತಂದೊಡ್ಡಿತ್ತು. ಮೂರು ಅಡಿಗಳಿಗೂ ಎತ್ತರವಾಗಿ ಬೆಳೆದಿದ್ದ ಗಿಡಗಳು ನೆಲ ಕಚ್ಚಿದ್ದವು. ಕಾಳುಗಳು ಭೂಮಿ ಪಾಲಾಗಿದ್ದವು. ಕೊಯ್ಲು ಮಾಡುವಂತಿಲ್ಲ. ಮಳೆ ದಿನ ಬಿಟ್ಟು ದಿನ ಸುರಿಯುತ್ತಿದೆ. ಎಲ್ಲವೂ ಕೆಟ್ಟು ಹೋಯಿತು ಎಂದು ನಿರಾಶರಾಗಿದ್ದರು. ಮಳೆ ನಿಂತು ಹೋದ ಮೇಲೆ ಸಿಕ್ಕಷ್ಟು ಸಿಗಲಿ ಎಂದು ಕೊಯ್ಲಿಗೆ ಆಳುಗಳನ್ನು ಹಚ್ಚಿದರು. ಕೆಸರಿನ ಮದ್ಯೆ ಜಾಗ್ರತೆಯಿಂದ ಕೊಯ್ಲು ಮುಗಿಸಿದಾಗ ಎಂಟು ಕ್ವಿಂಟಾಲ್ ಇಳುವರಿ ಸಿಕ್ಕಿತು. ಒಂದು ವೇಳೆ ಮಳೆಯಾಗದೇ ಇದ್ದರೆ ಹನ್ನೆರಡು ಕ್ವಿಂಟಾಲ್ ಇಳುವರಿ ಸಿಗುತ್ತಿತ್ತು. ಆಸರೆಯಾಗಬೇಕಾದ ಮಳೆ ಅಕಾಲದಲ್ಲಿ ಸುರಿದು ಬೆಳೆ ನಷ್ಟವಾಯಿತಲ್ಲ ಎಂದು ಕೊರಗಿ ಹಲವರಲ್ಲಿ ತಮ್ಮ ನೋವು ಹಂಚಿಕೊಂಡಿದ್ದರು. ಆದರೂ ಎಂಟು ಕ್ವಿಂಟಾಲ್ ಗಳಷ್ಟು ಇಳುವರಿ ಸಿಕ್ಕಿದ್ದು ಅದೃಷ್ಟವೆಂದೇ ಭಾವಿಸಿದ್ದರು.

ಅದರಷ್ಟಕ್ಕೆ ಬೆಳೆದು ನಿಂತ ಕೊರಲೆ:
ಬೆಳೆ ಕೊಯ್ಲು ಮುಗಿದ ನಂತರ ಸಪ್ಟೆಂಬರ್ ಮೊದಲ ವಾರದಲ್ಲಿ ಮುಂದಿನ ಬೆಳೆಗೆ ಅನುಕೂಲವಾಗಲೆಂದು ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿಸಿದ್ದರು. ಹುಲ್ಲುಗಳನ್ನೆಲ್ಲ ಆರಿಸಿ ತೆಗೆದು ಭೂಮಿಯನ್ನು ಸ್ವಚ್ಚಗೊಳಿಸಿದ್ದರು. ಉಳುಮೆ ಕೆಲಸ ಮುಗಿಸಿ ವಾರದ ನಂತರ ಪುನಃ ಆ ಹೊಲಕ್ಕೆ ತೆರಳಿದ ಮಂಜಪ್ಪ ಅವರಿಗೆ ಅಚ್ಚರಿ!. ಮಳೆಯ ಕಾರಣದಿಂದ ಗದ್ದೆ ಪಾಲಾಗಿದ್ದ ಕೊರಲೆ ಬೀಜಗಳು ಮಣ್ಣಿನ ತೇವದಿಂದಲೇ ಮೊಳಕೆಯೊಡೆದು ನಿಂತಿದ್ದವು. ಒಂದು ಇಂಚಿನಷ್ಟು ಎತ್ತರ ಬೆಳೆದ ಗಿಡಗಳು ಅಲ್ಲಲ್ಲಿ ಅಚ್ಚ ಹಸಿರಿನಿಂದ ಚಿತ್ತಾರ ಮೂಡಿಸಿದಂತೆ ಭಾಸವಾಗುತ್ತಿತ್ತು. ತಡಮಾಡದೇ ಗದ್ದೆಗೆ ನೀರು ಹಾಯಿಸಿದರು. ಕೆಲವೇ ದಿನಗಳಲ್ಲಿ ಗಿಡಗಳು ಒತ್ತೊತ್ತಾಗಿ ಬೆಳೆದು ನಿಂತವು. ಅತೀ ಸಮೀಪದಲ್ಲೊಂದಕ್ಕೊಂದು ತಾಗಿಕೊಂಡಂತೆ ಬೆಳೆದು ನಿಂತ ಕೊರಲೆ ಗಿಡಗಳ ಮದ್ಯೆ ಕಳೆಗಳು ಬೆಳೆದು ನಿಲ್ಲಲು ಸೋತಿದ್ದವು. ಕಳೆ ರಹಿತವಾಗಿ ಕೊರಲೆ ಕೃಷಿ ಕಂಗೊಳಿಸುತ್ತಿತ್ತು. ಅಲ್ಲಲ್ಲಿ ತೆಳ್ಳಗೆ ಕಂಡುಬಂದ ಕಳೆಯನ್ನು ಕೈ ಯಲ್ಲಿಯೇ ಕಿತ್ತೊಗೆದರು. ಸಾಲಿನಲ್ಲಿ ನಾಟಿ ಮಾಡಿದಾಗ ಹೊಡೆಯುತ್ತಿದ್ದ ಕುಂಟೆಯನ್ನು ಈ ಬಾರಿ ಹೊಡೆದಿರಲಿಲ್ಲ. ಬೀಜ ಬಿತ್ತದಿದ್ದರೂ, ಗೊಬ್ಬರ ಬಳಸದಿದ್ದರೂ, ನಿರ್ವಹಣೆಯ ಗೋಜಿಗೆ ಹೋಗದ ಅಶಿಸ್ತಿನಿಂದ ಬೆಳೆದ ಕೊರಲೆ ಕೃಷಿಯಿಂದ ಮಂಜಪ್ಪ ಹತ್ತು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಹಿಂಗಾರಿನಲ್ಲಿ ಭೂಮಿಯನ್ನು ಖಾಲಿ ಬಿಡಬೇಕೆಂದು ನಿರ್ಧರಿಸಿದ್ದ ಇವರಿಗೆ ಅಕಾಲಿಕವಾಗಿ ಭೂಮಿಯಲ್ಲಿ ಬಿದ್ದ ಕೊರಲೆ ಬೀಜಗಳು ವರದಾನವಾಗಿ ಪರಿಣಮಿಸಿತ್ತು. ‘ಸಿರಿಧಾನ್ಯದ ತಾಕತ್ತು ಅಂದ್ರೆ ಇದೇ ನೋಡ್ರೀ’ ಎನ್ನುತ್ತಾ ಬಿಗುಮಾನದಿಂದ ನುಡಿದರು ಮಂಜಪ್ಪ.
ಸಂಪರ್ಕಿಸಲು: 9731326558

Leave a Reply

Your email address will not be published. Required fields are marked *