success storyWomen Empowerment

‘ಜ್ಞಾನ ದೀವಿಗೆ ಜೀವನಕ್ಕೆ ಬೆಳಕ ತಂದಿತು’

ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಮಸ್ಕಿ ಗ್ರಾಮದ ಶ್ರೀಮತಿ ಸುಮನ ಇವರಿಗೆ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಣ್ಣದಾಗಿ ಹೈನುಗಾರಿಕೆಯೊಂದಿಗೆ ಮನೆಯಲ್ಲಿ ಉಪ್ಪಿನಕಾಯಿ ಚಟ್ನಿ, ಹಪ್ಪಳ ಇತರೆ ಆಹಾರ ಉತ್ಪಾದನೆಯೊಂದಿಗೆ ವ್ಯಾಪಾರವನ್ನು ಮಾಡಿಕೊಂಡು ಹೋದವರು. ಜೊತೆಗೆ ಪತಿಯ ಪಿಗ್ಮಿ ಇತರೆ ಹಣಕಾಸಿನ ಸಣ್ಣ ಆದಾಯದಲ್ಲಿ ಕುಟುಂಬದ ಆರ್ಥಿಕ ಸವಾಲುಗಳನ್ನು ಎದುರಿಸಿ ಕಷ್ಟಪಟ್ಟು ಮಕ್ಕಳನ್ನು ಓದಿಸ ಬೇಕಾಯಿತು.
ಸಂಘಟನೆಯೊಂದಿಗೆ ಆದಾಯದಡೆಗೆ: ಇದೆ ಸಂದರ್ಭದಲ್ಲಿ 2013ರಲ್ಲಿ ಇವರು ಶ್ರೀ ಧರ್ಮಸ್ಥಳದ ಶ್ರೀ ಯಶಸ್ವಿನಿ ಸ್ವ ಸಹಾಯ ಸಂಘದಲ್ಲಿ ಸೇರಿ ಸಂಘಟನೆಯೊಂದಿಗೆ ಹಲವಾರು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಇನ್ನೂ ಹೆಚ್ಚು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಸಹಾಯವಾಯಿತು ಎಂದು ಇವರಿಗೆ ಅನ್ನಿಸಿರುವುದು. ಇವರು ತಮ್ಮ 41 ವರ್ಷದ ಪ್ರಾಯದಲ್ಲಿಯೂ ಉತ್ಸಾಹದಿಂದ ಬೆಂಗಳೂರಿಗೆ ಹೋಗಿ ಸೀರೆಗೆ ಕುಚ್ಛು ಕಟ್ಟುವ ಕಲೆ ಕಲಿತರು. ಮನೆಯ ದಿನ ನಿತ್ಯದ ಎಲ್ಲ ಕೆಲಸ ಮುಗಿಸಿ, ಸೀರೆಗೆ ಗೊಂಡೆ ಕಟ್ಟುವಲ್ಲಿ ಕೇವಲ 3-4 ತಾಸುಗಳ ವರೆಗೆ ತೊಡಗಿಸಿಕೊಂಡು ದಿನಕ್ಕೆ 2 ಸೀರೆ ರೂ. 600/- ರಿಂದ ರೂ.700/-ವರೆಗೂ ಆದಾಯವನ್ನು ಹೊಂದಿದರು. “ಕಲಿಕೆಗೆ ಆಸಕ್ತಿ ಮುಖ್ಯ, ಜೀವನಕ್ಕೆ ಆಶಾದಾಯಕ ಗುರಿ ಸೌಖ್ಯ” ಎನ್ನುವಂತೆ ಮೈಸೂರಿಗೆ ಒಂದು ತಿಂಗಳ ಅವಧಿಯಲ್ಲಿ ಎಮ್ಸೀಲ್ ತರಬೇತಿಯನ್ನು ರೂ.15,000/_ ಶುಲ್ಕದೊಂದಿಗೆ ಪಡೆದು ಬಂದಿರುವರು. ಇದೇ ಅವಧಿಯಲ್ಲಿ ಉಳಿದ ಸಮಯದಲ್ಲಿ ಕಾರು ಚಾಲನೆ ತರಬೇತಿಯನ್ನು ಪೂರೈಸಿಕೊಂಡರು.
ಆರ್ಥಿಕ ಸಹಕಾರ: ಸೀರೆಗೆ ಕಟ್ಟುವ ಕುಚ್ಛು ಇದಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಹೆಚ್ಚಿನ ಬಂಡವಾಳವನ್ನು ಹೊಂದಿ ಹೆಚ್ಚಿನ ಪ್ರೋತ್ಸಾಹವನ್ನು ಯೋಜನೆಯ ಸ್ವ ಸಹಾಯ ಸಂಘದ ಸೌಲಭ್ಯದಿಂದ ಹಂತ ಹಂತವಾಗಿ ರೂ.5000/-, ರೂ.20,000/-, ರೂ,30,000/- ಈಗ ಸಧ್ಯ ರೂ.50000/-ಗಳ ವರೆಗೂ ಹೀಗೆ ಸಾಲದ ರೂಪದಲ್ಲಿ ಪಡೆದು ನಾಲ್ಕು ವರ್ಷದ ಅವಧಿಯಲ್ಲಿ ಒಂದು ಸಾಲದ ಕಂತನ್ನು ಕೂಡಾ ತಪ್ಪಿಸದೆ ಮರು ಪಾವತಿಯನ್ನು ಮಾಡಿರುತ್ತಾರೆ.
ಆರ್ಥಿಕ ಅಭಿವೃದ್ಧಿ: ಸೀರೆಗೆ ಕುಚ್ಛು ಉದ್ಯೋಗಕ್ಕಾಗಿ ರೂ.30000/- ಗಳ ಬಂಡವಾಳವನ್ನು ಕೂಡಾ ವೃದ್ಧಿಸಿಕೊಂಡಿದ್ದು, ಈಗ ಜೊತೆಗೆ ಎಮ್ಸೀಲ್ ಕರಕುಶಲ ಗಿಫ್ಟ್ ತಯಾರಿಗಾಗಿ ಹೆಚ್ಚಿನ ಬಂಡವಾಳವನು ಹಾಕಿರುವರು. ಮಾರುಕಟ್ಟೆಗೆ ದೂರವಿರುವ ಬಾಡಿಗೆ ಮನೆಯಿಂದ ಮಾರುಕಟ್ಟೆಗೆ ಹತ್ತಿರ ಇರುವ ಮನೆಗೆ ಹೋಗಲು ತೀರ್ಮಾನಿಸಿದ್ದಾರೆ. ರೂ.1500/- ಗಳ ಬಾಡಿಗೆಯ ಬದಲಾಗಿ ರೂ.5000/-ಗಳ ಬಾಡಿಗೆ ಕೊಡಲು ಗಟ್ಟಿಯಾಗಿದ್ದಾರೆ. ಎಮ್ಸೀಲ್ ಸಾಮಾಗ್ರಿಗಳ ಗಿಫ್ಟ್ ಸೆಂಟರ್‍ನ್ನು ಪ್ರಾರಂಭಿಸಿರುವ ವಿಚಾರ ಇವರ ವ್ಯವಹಾರ ಪ್ರಜ್ಞೆಯನ್ನು ಎತ್ತಿ ತೋರಿಸುವುದು.
ಜ್ಞಾನವಿಕಾಸ ಕಾರ್ಯಕ್ರಮದ ಪ್ರೇರಣೆಯೊಂದಿಗೆ ಸಾಮಾಜಿಕ ಅಭಿವೃದ್ಧಿ: ಶ್ರೀಮತಿ ಸುಮನ ಇವರು ಸ್ವ ಸಹಾಯ ಸಂಘಕ್ಕೆ ಸೇರಿದ ನಂತರ ಸಂಪಿಗೆ ಜ್ಞಾನವಿಕಾಸ ಕೇಂದ್ರದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿರುತ್ತಾರೆ. ಈ ಕೇಂದ್ರದಲ್ಲಿ ಸೇರಿದ ನಂತರ ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾ ಪ್ರತಿನಿಧಿ ಮುಖೇನ ಆರೋಗ್ಯದ ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಆರೋಗ್ಯದ ಸುಧಾರಣೆ: ಆರೋಗ್ಯದ ಸ್ತನ ಕ್ಯಾನ್ಸ್‍ರ್ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಇವರು ತಮ್ಮ 10 ವರ್ಷದಿಂದಲೂ ಎರಡು ಎದೆಯಲ್ಲಿ ಇದ್ದ ಗಡ್ಡೆಯನ್ನು ಆಪರೇಷನ್ ಮುಖೇನ ತೆಗೆಯಿಸಿ, ಮರಣವನ್ನು ಗೆದ್ದುಬಂದ ಅನುಭವವನ್ನು ಹಂಚಿಕೊಂಡಿರುತ್ತಾರೆ. ಅದು ಕೂಡಾ ಸರಕಾರಿ ಆಸ್ಪತ್ರೆಯಲ್ಲಿ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ತಿಳುವಳಿಕೆಯನ್ನು ಪಡೆದಿರುವುದು ಈ ಕಾರ್ಯಕ್ರಮದಿಂದ ಸಾಧ್ಯವಾಯಿತು ಅಂತ ಹೆಮ್ಮೆಯಿಂದ ಹೇಳುತ್ತಾರೆ.
ಶಿಕ್ಷಣ ಅಭಿವೃದ್ಧಿ : ಇದೇ ಅವಧಿಯಲ್ಲಿ ಇಬ್ಬರು ಮಕ್ಕಳು ಮಗ ಬಿ.ಸಿ.ಎ ವಿದ್ಯಾರ್ಹತೆಯೊಂದಿಗೆ ಒಂದು ಕಂಪನಿಯಲ್ಲಿ ಬೆಂಗಳೂರಿನಲ್ಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವರು. ಮಗಳು ಕೂಡಾ ಇಂಜನಿಯರ್ ವಿದ್ಯಾರ್ಹತೆಯೊಂದಿಗೆ, ಕ್ಯಾಂಪಸ್ ಸೆಲೆಕ್ಷನ್ ಆಗಿ ಒಳ್ಳೆಯ ಹುದ್ದೆಯಲ್ಲಿ ತೊಡಗಿಸಿಕೊಂಡಿರುವರು. ಈಗ ಮಕ್ಕಳ ಉದ್ಯೋಗದೊಂದಿಗೆ ಇನ್ನೂ ಸ್ವಲ್ಪ ಹೆಚ್ಚಿನ ಆದಾಯ ಹೊಂದಿರುವುದು ಇವರಿಗೆ ಹೆಮ್ಮೆ ಇರುವುದು.
ಸಾಮಾಜಿಕ ಚಿಂತನೆ: ಶ್ರೀಮತಿ ಶಾಂತ ಇವರ ಸ್ನೇಹಿತೆಗೆ ಸ್ವ ಉದ್ಯೋಗದ ಪ್ರೇರಣೆಯನ್ನು ತುಂಬಿ ಬಟ್ಟೆ ವ್ಯಾಪಾರಕ್ಕೆ ಹಚ್ಚಿಕೊಟ್ಟಿದ್ದಾರೆ. ಸಾಲ ತೆಗೆದುಕೊಳ್ಳುವಾಗ ಹೇಗಪ್ಪ ತುಂಬುವುದು ಎನ್ನುವ ಚಿಂತೆಯಲ್ಲಿದ್ದವರಿಗೆ ಈಗ ಸರಳವಾಗಿ ಕಂತು ಹಣವನ್ನು ಹೇಗೆ ಆದಾಯಕ್ಕಾಗಿ ಬಳಸಿಕೊಂಡು ಮುನ್ನಡೆಯಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಮಹಿಳೆಯರ ನೋವುಗಳ ಕಣ್ಣೀರನ್ನು ಒರೆಸುವ ಈ ಜ್ಞಾನವಿಕಾಸ ಕೇಂದ್ರದ ಆಶಯವು ಎಲ್ಲೋ ಒಂದು ಕಡೆ ಮಹಿಳೆಯರಲ್ಲಿ ಒಂದು ಆತ್ಮ ಚೈತನ್ಯವನ್ನು ತುಂಬುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಕಾರ್ಯಕ್ರಮಕ್ಕೆ ಉಚಿತವಾಗಿ ತರಬೇತಿ, ಸರ್ಟಿಫಿಕೇಟ್ ನೀಡಿರುವುದು, ಅಧ್ಯಯನ ಪ್ರವಾಸಗಳ ಮೂಲಕ ಮಾಹಿತಿ ಮತ್ತು ಪ್ರೋತ್ಸಾಹಿಸುವ ಜಾಗೃತಿ ಕಾರ್ಯಕ್ರಮಗಳನ್ನು ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿರುವುದು ಮಾತೃಶ್ರೀ ಅಮ್ಮ ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆ ಕಾಳಜಿ ಪೂರ್ವಕ ಕಳಕಳಿಯ ಮಾರ್ಗದರ್ಶನದಿಂದ ಎಂದು ಹೇಳಬಹುದು. ಇಂತಹ ಕಾರ್ಯಕ್ರಮಗಳಿಂದ ಈ ಕೆಲವು ಉದಾಹರಣೆಗಳಂತೆ ಅನೇಕ ಬದಲಾವಣೆಗಳನ್ನು ಕಾರ್ಯಕ್ಷೇತ್ರದಲ್ಲಿ ಕಾಣುತ್ತಿರುವುದ ಹೆಮ್ಮೆಯ ವಿಷಯವೇ ಸರಿ ಎನ್ನಬಹುದಾಗಿದೆ.
ಸಂವಾದ: ಶ್ರೀಮತಿ ಸುಮನ್, ಸದಸ್ಯರು, ಯಶಸ್ವಿನಿ ಸಂಘ, ಸಂಪಿಗೆ ಜ್ಞಾನವಿಕಾಸ ಕೇಂದ್ರ, ಮಸ್ಕಿ (ದೂ:7406420960)

Leave a Reply

Your email address will not be published. Required fields are marked *