Community HealthDharmasthalaNews

ದುರ್ವ್ಯಸನಕ್ಕೆ ಬಲಿಬಿದ್ದವರನ್ನು ಪರಿವರ್ತಿಸುವುದು ಬಹುದೊಡ್ಡ ಸಾಧನೆ – ಡಾ. ಹೆಗ್ಗಡೆಯವರು

“ಜನಜಾಗೃತಿ ವೇದಿಕೆಯ ಕೆಲಸ ಪವಿತ್ರ ಮತ್ತು ಸವಾಲಿನ ಕಾರ್ಯಕ್ರಮವಾಗಿದೆ.” ಧಾರ್ಮಿಕ ಕಾರ್ಯಕ್ರಮಗಳಿಗೆ ಪಾವಿತ್ರ್ಯತೆಯೊಂದಿಗೆ ಉದ್ದೇಶವೂ ಇರುತ್ತದೆ. ವ್ಯಸನಕ್ಕೆ ಬಲಿ ಬಿದ್ದವರನ್ನು ಪರಿವರ್ತಿಸುವಾಗ ಮಾನಸಿಕ ನೆಮ್ಮದಿ, ಸಂತೃಪ್ತಿಯ ಭಾವನೆ ಬರುವುದು ಸ್ವಾಭಾವಿಕ. ಸತ್ಕಾರ್ಯಗಳಿಗಾಗಿ ನಾವು ನೀಡುವ ಶ್ರಮ ಇಹಲೋಕದಲ್ಲಿ ನಷ್ಟವೆಂದೆನಿಸಿದರೂ ಪರಲೋಕದಲ್ಲಿ ಅದು ನಮಗೆ ಬಹುದೊಡ್ಡ ಲಾಭವಾಗಿತ್ತದೆ. 25 ವರ್ಷಗಳಿಂದ ಜನಜಾಗೃತಿ ವೇದಿಕೆಯೊಂದಿಗೆ ದುರ್ವ್ಯಸನಕ್ಕೆ ಬಲಿ ಬಿದ್ದವರನ್ನು ಪರಿವರ್ತಿಸಿ ದೊಡ್ಡ ಸಾಧನೆಗೈದ ನಿಮ್ಮ ಸೇವೆ ಮಹತ್ತರವಾದುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು. ಅವರು ಮಾರ್ಚ್ 13ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್‍ನಲ್ಲಿ ನಡೆದ ದ.ಕ. ಮತ್ತು ಉಡುಪಿ ಜಿಲ್ಲೆಯ ಜನಜಾಗೃತಿ ವೇದಿಕೆಯ ಮಹಾಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮೂರುವರೆ ವರ್ಷಗಳ ಕಾಲ ವೇದಿಕೆಯ ಮೂಲಕ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿ ಜನಾಂದೋಲನ ಮೂಡಿಸಿದ ಶ್ರೀ ಮಹಮ್ಮದ್ ಇಸ್ಮಾಯಿಲ್ ರವರನ್ನು ಡಾ. ಡಿ. ವೀರೆಂದ್ರ ಹೆಗ್ಗಡೆಯವರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಮಹಮ್ಮದ್ ಇಸ್ಮಾಯಿಲ್ ರವರ ಕಾರ್ಯಸಾಧನೆಯ ವಿವರವುಳ್ಳ “ಸಾಧನೆಯ ಹಾದಿಯಲ್ಲಿ” ಎಂಬ ಕಿರುಹೊತ್ತಿಗೆಯನ್ನು ಡಾ. ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಕಳೆದ 12 ವರ್ಷಗಳಿಂದ ಅಸ್ತಿತ್ವಕ್ಕೆ ಬಂದಿದ್ದು, ಇದರ 4ನೇ ಅಧ್ಯಕ್ಷರಾದ ಶ್ರೀ ಮಹಮ್ಮದ್ ಇಸ್ಮಾಯಿಲ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯವಾಗಿ 2017-18ನೇ ಸಾಲಿನ ಸಾಧನಾ ವರದಿ, 2018-19ನೇ ಸಾಲಿನ ಕ್ರಿಯಾಯೋಜನೆ, ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿಂಗಡನೆ, ನೂತನ ಪದಾಧಿಕಾರಿಗಳ ಆಯ್ಕೆ, ಹೀಗೆ ವಿವಿಧ ಕಾರ್ಯಸೂಚಿಗಳ ಮೂಲಕ ಸಮಗ್ರ ಚರ್ಚೆ ನಡೆಸಲಾಯಿತು. ಸಭೆಯ ಅಭಿಪ್ರಾಯದಂತೆ ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಪ್ರತ್ಯೇಕಿಸಿ ದ.ಕ. ಜಿಲ್ಲೆಗೆ ಶ್ರೀ ಎನ್ ಎ. ರಾಮಚಂದ್ರ ಸುಳ್ಯ, ಮತ್ತು ಉಡುಪಿ ಜಿಲ್ಲೆಗೆ ಶ್ರೀ ನವೀನ್ ಅಮೀನ್ ರವರನ್ನು ಜಿಲ್ಲಾಧ್ಯಕ್ಷರುಗಳನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಯೋಜನೆಯ ನಿರ್ದೇಶಕರಾದ ಶ್ರೀ ಪುರುಷೋತ್ತಮ ಪಿ.ಕೆ. ರವರು ಉಡುಪಿಗೆ, ಶ್ರೀ ಚಂದ್ರಶೇಖರ ಕೆ. ರವರು ದ.ಕ. ಜಿಲ್ಲೆಗೆ ಆಯ್ಕೆಯಾಗಿರುತ್ತಾರೆ. ಉಭಯ ಜಿಲ್ಲೆಗಳಿಂದ ಸುಮಾರು 60 ಮಂದಿ ಪದಾಧಿಕಾರಿಗಳು ಭಾಗವಹಿಸಿದ್ದರು. ರಾಜ್ಯಾಧ್ಯಕ್ಷರಾದ ಶ್ರೀ ಸತೀಶ್ ಹೊನ್ನವಳ್ಳಿ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಹೆಚ್. ಮಂಜುನಾಥ್, ಸಾಜ ರಾಧಾಕೃಷ್ಣ ಆಳ್ವ ಪುತ್ತೂರು, ಕೆ. ವಸಂತ ಸಾಲ್ಯಾನ್, ಕೆ. ಮಹಾವೀರ ಅಜ್ರಿ, ಶ್ರೀ ದೇವ್‍ದಾಸ್ ಹೆಬ್ಬಾರ್ ಉಪಸ್ಥಿತರಿದ್ದರು. ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ವಿವೇಕ್ ವಿ. ಪಾೈಸ್ ರವರು ಸಭೆಯ ಕಲಾಪಗಳಲ್ಲಿ ಭಾಗವಹಿಸಿ ನಿರೂಪಿಸಿದರು. ಯೋಜನಾಧಿಕಾರಿ ಶ್ರೀ ತಿಮ್ಮಯ್ಯ ನಾಯ್ಕ್ ರವರು ವಂದಿಸಿದರು.

Leave a Reply

Your email address will not be published. Required fields are marked *